भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೈಪೊಜೀನ್

(ಭೂವಿ) ನೆಲದೊಳಗೆ ಆಳದಲ್ಲಿ ರೂಪುಗೊಂಡ (ಶಿಲೆ). ಭೂ ಚಿಪ್ಪಿನಡಿ ಜರಗುವ ಭೂವೈಜ್ಞಾನಿಕ ಪ್ರಕ್ರಿಯೆ ಮತ್ತು ಅದರ ಫಲಿತ ಲಕ್ಷಣಗಳಿಗೆ ಸಂಬಂಧಿಸಿದ

ಹೈಪೊಟೆನ್ಷನ್

(ವೈ) ರಕ್ತನಾಳಗಳಲ್ಲಿ ರಕ್ತದ ಒತ್ತಡ ಸಹಜವಾದುದಕ್ಕಿಂತ ಕಡಿಮೆ, ಅಂದರೆ ವ್ಯಾಕೋಚನ ೧೨೦ಕ್ಕಿಂತ ಕಡಿಮೆ. ಸಂಕೋಚನ ೮೦ಕ್ಕಿಂತ ಕಡಿಮೆ ಇರುವುದು. ನೋಡಿ : ರಕ್ತದ ಇಳಿಯೊತ್ತಡ

ಹೈಪೊಟ್ರೊಕಾಯ್ಡ್

(ಗ) ಸ್ಥಾಯೀ ವೃತ್ತವೊಂದರ ಒಳಪರಿಧಿಯ ಮೇಲೆ ಮತ್ತೊಂದು ವೃತ್ತ ನೇರವಾಗಿ ಜಾರದೆ ಉರುಳುತ್ತ ಹೋದಾಗ ಆ ಉರುಳುವ ವೃತ್ತಕ್ಕೆ ದೃಢವಾಗಿ ಬಂಧಿತವಾದ ಬಿಂದುವೊಂದು (ಅದರ ಕೇಂದ್ರ ಬಿಂದು ಅಲ್ಲದುದು) ರಚಿಸುವ ವಕ್ರರೇಖೆ. ನೋಡಿ : ಅಧಿಚಕ್ರಜ

ಹೈಪೊತೈರಾಯ್ಡಿಸಮ್

(ವೈ) ತೈರಾಯ್ಡ್ ಗ್ರಂಥಿಯಲ್ಲಿ ಹಾರ್ಮೋನುಗಳು ಸಾಕಷ್ಟು ಪ್ರಮಾಣದಲ್ಲಿ ಸ್ರಾವವಾಗದಾಗಿನ ಶಾರೀರಿಕ ಸ್ಥಿತಿ

ಹೈಪೊಬ್ಲಾಸ್ಟ್

(ಪ್ರಾ) ಭ್ರೂಣದ ಪ್ರಥಮಾವಸ್ಥೆಯಲ್ಲಿ ಅದನ್ನು ಆವರಿಸಿರುವ ಪೊರೆಯಲ್ಲಿ ಜೀವಕೋಶಗಳ ಒಳಪದರ. ಇದು ಅಂತಶ್ಚರ್ಮಕ್ಕೆ, ಕೆಲವು ವೇಳೆ ಮಧ್ಯ ಚರ್ಮಕ್ಕೂ ಜನ್ಮ ನೀಡುತ್ತದೆ

ಹೈಪೊಸೈಕ್ಲಾಯ್ಡ್

(ಗ) ನೋಡಿ: ಅಂತಃಚಕ್ರಜ

ಹೈಬ್ರಿಡೋಮ

(ಜೀ) ಸಂಕರೀಕರಿಸಿದ ಕೋಶ. ಮಯಲೋಮ ಕೋಶಗಳ ಮತ್ತು ಪ್ರತಿಕಾಯ ಉತ್ಪಾದಿಸುವ ಲಿಂಫೋಸೈಟ್‌ಗಳ ಸಂಕರಣದಿಂದ ಸೃಷ್ಟಿಸಿದ ಕೋಶ

ಹೈಲಮ್

(ಸ) ಬೀಜವು ಫಲಾವರಣಕ್ಕೆ ಅಂಟಿಕೊಂಡಿರುವ ಸ್ಥಳ. ಬೀಜನಾಭಿ. ಕಾಂಡ ಬೀಜಕ್ಕೆ ತಗಲಿಕೊಂಡಿದ್ದ ಸ್ಥಳದಲ್ಲಿ ಗಟ್ಟಿ ಚಿಪ್ಪಿನ ಮೇಲೆ ಆದ ಗಾಯದ ಗುರುತು. ಬೀಜಕಣ್ಣು. (ಪ್ರಾ) ಅಂಗದ ಮೇಲ್ಮೈ ಮೇಲಿನ ಸಣ್ಣ ತಗ್ಗು. ರಕ್ತನಾಳ, ದುಗ್ಧರಸವಾಹಕ ಇಲ್ಲವೆ ಬಹಿರ್ವಾಹಿ ನರಗಳು ಒಳಹೊಕ್ಕ ಅಥವಾ ಹೊರಹೊರಟ ಜಾಗದಲ್ಲಿರುವ ಕಚ್ಚು

ಹೊಂದಾಣಿಕೆ

(ಜೀ) ಜಿನೊಟೈಪಿನ ಮೇಲೆ ನೈಸರ್ಗಿಕ ಆಯ್ಕೆಯ ಪ್ರಕ್ರಿಯೆ ದೀರ್ಘಕಾಲ ವರ್ತಿಸುವುದರ ಪರಿಣಾಮವಾಗಿ ಜೀವಿ ತನ್ನ ಪರಿಸರ ನಿರ್ಬಂಧಗಳಿಗೆ ಹೊಂದಿಕೊಳ್ಳುವುದು. ತಾನು ಬಾಳುತ್ತಿರುವ ನೆಲೆಯಲ್ಲಿಯ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಜೀವಿಗೆ ಅದರ ರಚನೆ, ಬಾಹ್ಯರೂಪ, ವರ್ತನೆಗಳು ನೆರವಾಗುವುವು

ಹೊಂಬಾಳೆ

(ಸ) ತಾಳಗುಚ್ಛವನ್ನು ಆವರಿಸಿರುವ ಸಹಪತ್ರ ಅಥವಾ ಸಹಪತ್ರ ಜೋಡಿ. ಉದಾ : ಅಡಕೆ/ತೆಂಗಿನ ಹೂವು

ಹೊಂಬಾಳೆ ಮಂಜರಿ

(ಸ) ತಿರುಳುಳ್ಳ ಅಕ್ಷಸ್ತಂಭದ ಸುತ್ತಲೂ ಹೂಗಳು ದಟ್ಟವಾಗಿ ಅಣಿಗೊಂಡಿರುವ, ಸಾಮಾನ್ಯವಾಗಿ ಆವರಣ ಪತ್ರದಿಂದ ಸುತ್ತುವರಿದಿರುವ, ಒಂದು ಬಗೆಯ ಪುಷ್ಪಗುಚ್ಛ. ಹೂಗೊನೆ. ಕೋಶಾವೃತ ಪುಷ್ಪಗುಚ್ಛ

ಹೊಂಬೆಣಚು

(ಭೂವಿ) ಚಿನ್ನವನ್ನೊಳ ಗೊಂಡಿರುವ ಬೆಣಚುಕಲ್ಲು; ಸ್ವರ್ಣ ಯುಕ್ತ ಬೆಣಚು

ಹೊಕ್ಕಳು ಚೀಲ

(ಜೀ) ಪಕ್ಷಿಗಳು ಸರೀಸೃಪ ಮತ್ತು ಸ್ತನಿ ಗಳಲ್ಲಿ ಭ್ರೂಣ ಬೆಳವಣಿಗೆಯ ಹಂತದಲ್ಲಿ ಭ್ರೂಣದ ಹೊರಗೆ ಅನ್ನನಾಳದ ಹಿಂಭಾಗದಲ್ಲಿ ರೂಪುಗೊಳ್ಳುವ ಹೊಕ್ಕಳು ಚೀಲ. ನೈಟ್ರೊಜನ್‌ಅನ್ನು ತಾತ್ಕಾಲಿಕವಾಗಿ ಶೇಖರಿಸುವ ಸಂಚಿ. ಭ್ರೂಣದ ಪೊರೆ ರೂಪುಗೊಳ್ಳುವಂತೆ ವಿಕಾಸಗೊಳ್ಳುತ್ತದೆ

ಹೊಕ್ಕಳು ಬಳ್ಳಿ

(ಪ್ರಾ) ಭ್ರೂಣದ ಉದರ ತಲದಿಂದ ಹೊರಟು ತಾಯಿಯ ಮಾಸನ್ನು ಸೇರುವ ಬಳ್ಳಿ. ಇದರೊಳಗಿರುವ ರಕ್ತನಾಳಗಳ ಮೂಲಕ ಭ್ರೂಣಕ್ಕೂ ತಾಯಿಗೂ ಸಾವಯವ ಮತ್ತು ಶಾರೀರಿಕ ಸಂಪರ್ಕ ಏರ್ಪಡುತ್ತದೆ. ಶಿಶು ಜನನಾನಂತರ ಶಿಶುವನ್ನು ಮಾಸಿನಿಂದ ಬೇರ್ಪಡಿಸಲೋಸುಗ ಹೊಕ್ಕಳು ಬಳ್ಳಿಯನ್ನು ಕತ್ತರಿಸಿ ಎಸೆಯಲಾಗುತ್ತಿತ್ತು. ಆದರೆ ಈಚಿಗಿನ ಸಂಶೋಧನೆಗಳ ಪ್ರಕಾರ, ಇದು ಮೂಲ ಜೀನ್‌ಗಳ ಸಂಗ್ರಹ ಕೋಶವಾದ್ದರಿಂದ ಮುಂದೆ ಅವಶ್ಯ ಬಂದಾಗ ರೋಗ ಚಿಕಿತ್ಸೆಯಲ್ಲಿ ಬಳಸಲೆಂದು ಇದನ್ನು ಕಣ್ಣು ಗುಡ್ಡೆ, ರಕ್ತ ಮೊದಲಾದವನ್ನು ಶೇಖರಿಸಿಡುವಂತೆ, ಶೇಖರಿಸಿ ಇಡುವ ಬ್ಯಾಂಕುಗಳು ತೆರೆಯತೊಡಗಿವೆ

ಹೊಕ್ಕು

(weft) (ತಂ) ನೇಯ್ಗೆಯಲ್ಲಿ ಅಡ್ಡ ಎಳೆ. ನೋಡಿ : ಹಾಸುಹೊಕ್ಕು

ಹೊಗೆ

(ರ) ಅನಿಲದಲ್ಲಿ ಉರಿಯುತ್ತಿರುವ ಘನ ಪದಾರ್ಥದ ಸೂಕ್ಷ್ಮಕಣ ನಿಲಂಬನ; ಕಲ್ಲಿದ್ದಲಿನ ಹೊಗೆಯಲ್ಲಿ ಕಾರ್ಬನ್‌ನ ಸೂಕ್ಷ್ಮಕಣಗಳು ನಿಲಂಬಿತವಾಗಿರುತ್ತವೆ. ಧೂಮ

ಹೊಗೆಗೆ ಒಡ್ಡು

(ವೈ) ಅನಿಲರೂಪದ ರಾಸಾಯನಿಕ ಸಂಯಕ್ತವನ್ನು ಬಳಸಿ ಕ್ರಿಮಿಗಳನ್ನು ನಾಶಪಡಿಸು

ಹೊಗೆನಳಿಗೆ

(ತಂ) ಕುಲುಮೆ, ಆವಿಗೆ, ಸುಡುಯಂತ್ರ ಮುಂತಾದವುಗಳಲ್ಲಿ ಹೊಗೆ ಹೊರ ಹೋಗಲು ಒದಗಿಸಿರುವ ಎತ್ತರದ ಇಕ್ಕಟ್ಟು ಕೊಳವೆ. ಚಿಮಣಿ

ಹೊಗೆಯಾಡುವ ನೈಟ್ರಿಕ್ ಆಮ್ಲ

(ರ) ಕಂದು ಬಣ್ಣದ ದಾಹಕ ದ್ರವ. ನೈಟ್ರೊಜನ್ ಡೈಆಕ್ಸೈಡ್‌ಅನ್ನು ವಿಲೀನ ಮಾಡಿಕೊಂಡಿರುತ್ತದೆ. ರಾಕೆಟ್‌ಗಳಲ್ಲಿ ಉತ್ಕರ್ಷಣಕಾರಿಯಾಗಿ ಬಳಕೆ. ಆರ್ಗ್ಯಾನಿಕ್ ಸಂಯುಕ್ತಗಳಿಗೆ ನೈಟ್ರೊ ಗುಂಪನ್ನು ಆದೇಶಿಸಲು ಸಹಾಯಕ

ಹೊಗೆಸೂಸುವ ಗಂಧಕಾಮ್ಲ

(ರ) ಸಾರವರ್ಧಿತ ಗಂಧಕಾಮ್ಲದಲ್ಲಿ ಗಂಧಕದ ಟ್ರೈಆಕ್ಸೈಡ್‌ನ ದ್ರಾವಣ. H2SO4 + SO3. ತೀವ್ರ ಸಂಕ್ಷಾರಕವಾದುದರಿಂದ ನೈಟ್ರೇಷನ್‌ನಲ್ಲಿ ಬಳಕೆ. ನೋಡಿ : ಓಲಿಯಮ್

Search Dictionaries

Loading Results

Follow Us :   
  Download Bharatavani App
  Bharatavani Windows App