भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹೂಬಿಡುವ ಸಸ್ಯ

(ಸ) ಏಕದಳಿಗಳನ್ನೂ ದ್ವಿದಳಿಗಳನ್ನೂ ಒಳಗೊಂಡಂತೆ ಆವೃತಬೀಜ ಸಸ್ಯಗಳು

ಹೂಳು

(ಭೂವಿ) ಮರಳು ಮತ್ತು ಜೇಡು ಮಣ್ಣಿನ ನಡುವೆ ಕಣಗಾತ್ರದಲ್ಲಿ ಮಧ್ಯಸ್ಥವಾಗಿರುವ ಮಣ್ಣಿನ ಗುಣ. ಹರಿಯುವ ನೀರು ಸಂಚಯಿಸಿದ ಮೆಕ್ಕಲು ಮಣ್ಣು. ಮೆಕ್ಕಲು

ಹೂಳೆತ್ತುವುದು

(ತಂ) ನದಿ, ತಳ, ಕೊಳ, ಬಂದರು ಮತ್ತಿತರ ಜಲರಾಶಿಗಳಲ್ಲಿ ತಳದಲ್ಲಿ ಸಂಚಯವಾದ ಬಗ್ಗಡವನ್ನು ಎತ್ತಿ ಹೊರಹಾಕಿ, ನೀರಿನ ಆಳ ಹೆಚ್ಚಿಸುವ ಕ್ರಿಯೆ. ಯಂತ್ರಗಳ ಸಹಾಯದಿಂದ ನಿರ್ವಹಿಸಲಾಗುತ್ತದೆ

ಹೃತ್‌ಕುಕ್ಷಿ

(ವೈ) ೧. ಹೃದಯದ ಎಡ ಮತ್ತು ಬಲ ಕೆಳ ಭಾಗದಲ್ಲಿರುವ ಎರಡು ಪೊಳ್ಳು ರಚನೆಗಳು. ಬಲ ಹೃತ್ಕುಕ್ಷಿಯು ಆಕ್ಸಿಜನ್ ಕೊರತೆಯಿರುವ ರಕ್ತವನ್ನು ಬಲ ಹೃತ್ಕರ್ಣದಿಂದ ಸ್ವೀಕರಿಸಿ, ಅದನ್ನು ಶ್ವಾಸಕಧಮನಿಯ ಮೂಲಕ ಶ್ವಾಸಕೋಶಕ್ಕೆ ರವಾನಿಸುತ್ತದೆ. ಎಡ ಹೃತ್ಕುಕ್ಷಿಯು ಆಕ್ಸಿಜನ್‌ಭರಿತ ರಕ್ತವನ್ನು ಮಹಾಧಮನಿಯ ಮೂಲಕ ದೇಹದ ಎಲ್ಲ ಭಾಗಗಳಿಗೆ ಸರಬರಾಜು ಮಾಡುತ್ತದೆ. ಈ ಎರಡು ಕಾರ್ಯಗಳು ಹೃದಯ ಸಂಕುಚಿಸಿದಾಗ ನಡೆಯುತ್ತವೆ. ೨. ಮಿದುಳ ಕುಕ್ಷಿಗಳು: ಮಿದುಳಿನಲ್ಲಿ ಪರಸ್ಪರ ಸಂಪರ್ಕವಿರುವ ನಾಲ್ಕು ಪೊಳ್ಳು ರಚನೆಗಳು

ಹೃತ್‌ಶ್ವಾಸ ಉಪಮಾರ್ಗ

(ವೈ) ಹೃದಯ ಮತ್ತು ಶ್ವಾಸಕೋಶಗಳ ಮೇಲೆ ಗಂಭೀರ ಸ್ವರೂಪದ ಶಸ್ತ್ರಚಿಕಿತ್ಸೆಗಳನ್ನು ನಡೆಸುವಾಗ, ಅವುಗಳ ಸಹಜ ಕಾರ್ಯವನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳುವ ಉಪಕರಣ. ಇದರಲ್ಲಿ ಹೃದಯದ ಕಾರ್ಯನಿರ್ವಹಿಸುವಂಥ ಒಂದು ಪಂಪ್ ಹಾಗೂ ಶ್ವಾಸಕೋಶಗಳ ಕಾರ್ಯ ನಿರ್ವಹಿಸುವಂಥ ಒಂದು ಆಕ್ಸಿಜನೇಟರ್ ಇರುತ್ತವೆ

ಹೃತ್‌ಸಂಬಂಧಿತ

(ವೈ) ಹೃದಯಕ್ಕೆ ಮತ್ತು ಜಠರದ ಮೇಲು ಪಾರ್ಶ್ವಕ್ಕೆ ಸಂಬಂಧಿಸಿದ

ಹೃತ್ಕರ್ಣ

(ವೈ) ೧. ಹೃದಯದ ಮೇಲು ಭಾಗದಲ್ಲಿರುವ ಕುಹರ; ಅಭಿಗಾಮಿ ರಕ್ತನಾಳಗಳ ಮೂಲಕ ಹರಿದುಬರುವ ರಕ್ತವನ್ನು ಕೆಳಭಾಗಕ್ಕೆ ರೇಚಿ ಸುತ್ತದೆ. ೨. ಆರಿಕಲ್: ಕಿವಿ ಹಾಲೆ, ಹೊರಗಿವಿ

ಹೃತ್ಕರ್ಣ ಭಿತ್ತಿ ನ್ಯೂನತೆ

(ASD) (ವೈ) ಹೃದಯದ ಎರಡು ಹೃತ್ಕರ್ಣಗಳ ನಡುವೆ ಒಂದು ಭಿತ್ತಿ ಇರುತ್ತದೆ. ಕೆಲವು ಸಲ ಈ ಭಿತ್ತಿಯಲ್ಲಿ ರಂಧ್ರ ಮೂಡುವುದುಂಟು. ಹೀಗಾದಾಗ ಬಲ ಹೃತ್ಕರ್ಣದಲ್ಲಿರುವ ಆಕ್ಸಿಜನ್ ಕೊರತೆಯ ರಕ್ತ ಹಾಗೂ ಎಡ ಹೃತ್ಕರ್ಣದಲ್ಲಿರುವ ಆಕ್ಸಿಜನ್‌ಯುಕ್ತ ರಕ್ತಗಳೆರಡೂ ಬೆರೆಯುತ್ತವೆ. ಈ ಕಲಬೆರಕೆ ರಕ್ತವೇ ದೇಹದ ತುಂಬಾ ಹರಿದು ಜೀವಕೋಶಗಳಿಗೆ ಬೇಕಾದ ಪ್ರಮಾಣದಲ್ಲಿ ಆಮ್ಲಜನಕ ಸರಬರಾಜು ಆಗದಂತಾಗುತ್ತದೆ. ಆಗ ದೇಹದ ಜೈವಿಕ ಕಾರ್ಯಗಳು ಸಮಗ್ರ ವಾಗಿ ನಡೆಯುವುದಿಲ್ಲ. ಈ ದೋಷ ಸಾಮಾನ್ಯವಾಗಿ ಹುಟ್ಟಿದಾಗಲೇ ಉಂಟಾಗುತ್ತದೆ. ಶಸ್ತ್ರಕ್ರಿಯೆಯಿಂದ ಇದನ್ನು ಸರಿಪಡಿಸಬಹುದು

ಹೃತ್ಸಂಬಂಧಿ ಗೂರಲು

(ವೈ) ಹೃದಯದ ಎಡಭಾಗ ವಿಫಲಗೊಂಡಾಗ ಫುಪ್ಪುಸಗಳಲ್ಲಿ ಒತ್ತಡ ಅಥವಾ ನಿಬಿಡತೆ ಉಂಟಾಗಿ ವ್ಯಕ್ತಿ ಉಸಿರಾಡಲು ಕಷ್ಟಪಡುವಂಥ ಉತ್ಕಟ ಪರಿಸ್ಥಿತಿ. ಗೊರಗೊರ ಸದ್ದೂ ಕೇಳಿಬರುವುದುಂಟು

ಹೃದಯ

(ವೈ) ಹೃದಯ ಎನ್ನುವುದು ಶಂಕುವಿನಾಕಾರದ, ಸ್ನಾಯುಗಳಿಂದ ರಚಿತವಾದ ಪೊಳ್ಳು ಅಂಗ. ಇದು ಸುಮಾರು ೩೦೦ ಗ್ರಾಂ ತೂಗುತ್ತದೆ. ಎದೆಗೂಡಿನಲ್ಲಿ ಎರಡು ಶ್ವಾಸಕೋಶಗಳ ನಡುವೆ ಇರುತ್ತದೆ. ತುದಿ ಮಾತ್ರ ಎಡಗಡೆಗೆ ಚಾಚಿರುತ್ತದೆ. ಹೃದಯದಲ್ಲಿ ನಾಲ್ಕು ಕೋಣೆ (ಕೋಷ್ಠ)ಗಳಿದ್ದು, ಮೇಲಿನ ಎರಡು ಕೋಣೆಗಳನ್ನು ಹೃತ್ಕರ್ಣಗಳೆಂದು ಹಾಗೂ ಕೆಳಗಿನ ಎರಡು ಕೋಣೆಗಳನ್ನು ಹೃತ್ಕುಕ್ಷಿಗಳೆಂದು ಕರೆಯುವರು. ಎಡಹೃತ್ಕರ್ಣ ಹಾಗೂ ಹೃತ್ಕುಕ್ಷಿಗಳ ನಡುವೆ ಹೃತ್ಕುಕ್ಷಿಯೊಳಕ್ಕೆ ಮಾತ್ರ ತೆರೆದುಕೊಳ್ಳಬಲ್ಲ ಕವಾಟ – ದ್ವಿದಳ ಕವಾಟ – ಇರುತ್ತದೆ. ಹಾಗೆಯೇ ಬಲ ಹೃತ್ಕರ್ಣ ಹಾಗೂ ಹೃತ್ಕುಕ್ಷಿಯ ನಡುವೆ, ಹೃತ್ಕುಕ್ಷಿ ಯೊಳಕ್ಕೆ ಮಾತ್ರ ತೆರೆದುಕೊಳ್ಳುವ ಒಂದು ಕವಾಟ – ತ್ರಿದಳ ಕವಾಟ – ಇರುತ್ತದೆ. ಎಡ ಹೃತ್ಕುಕ್ಷಿಯಿಂದ ಮಹಾಧಮನಿ ಹುಟ್ಟಿದರೆ, ಬಲ ಹೃತ್ಕುಕ್ಷಿಯಿಂದ ಶ್ವಾಸಕ ಧಮನಿ ಹುಟ್ಟುತ್ತದೆ. ಹೃದಯವು ನಿಮಿಷಕ್ಕೆ ಸರಾಸರಿ ೭೨ ಸಲ ಮಿಡಿಯುತ್ತದೆ. ಒಬ್ಬ ಮನುಷ್ಯನ ಸಾಮಾನ್ಯ ಜೀವಿತಾವಧಿಯಲ್ಲಿ ಹೃದಯ ಸುಮಾರು ೨೦೦೦ ದಶಲಕ್ಷಕ್ಕೂ ಹೆಚ್ಚು ಸಲ ಮಿಡಿಯುತ್ತದೆ. ಈ ಅವಧಿಯಲ್ಲಿ ಇದು ಸುಮಾರು ೫೦೦ ದಶಲಕ್ಷ ಲೀಟರ್ ರಕ್ತವನ್ನು ಪಂಪ್ ಮಾಡಿರುತ್ತದೆ. ಗುಂಡಿಗೆ

ಹೃದಯ ನಾಟಿ

(ವೈ) ಹೃದಯಕ್ಕೆ ತಗುಲಿದ ಹಾನಿಯನ್ನು ಬೇರಾವ ರೀತಿಯಲ್ಲೂ ಗುಣಪಡಿಸಲು ಆಗದಿದ್ದಾಗ, ಮಾನವ ದಾನಿ-ಹೃದಯವನ್ನು ರೋಗಿಯ ದೇಹದೊಳಗಿನ ನಾಟಿ ಮಾಡುವ ಕ್ರಿಯೆ. ಹೀಗೆ ನಾಟಿ ಮಾಡಿದ ದಾನಿ-ಹೃದಯವು ಅದನ್ನು ಸ್ವೀಕರಿಸಿದ ರೋಗಿಯ ಶರೀರದಾದ್ಯಂತ ರಕ್ತವನ್ನು ಪಂಪ್ ಮಾಡುವ ಕಾರ್ಯವನ್ನು ವಹಿಸಿಕೊಳ್ಳುತ್ತದೆ

ಹೃದಯ ಮಿಡಿತ

(ವೈ) ಹೃದಯದ ಕ್ರಮಬದ್ಧ ಸಂಕೋಚನ-ವ್ಯಾಕೋಚನ ಕ್ರಿಯೆ. ಇದು ಒಂದು ನಿಮಿಷದಲ್ಲಿ ಸರಾಸರಿ ೭೨ ಸಲ ಜರಗುತ್ತದೆ. ಸ್ಟೆತೊಸ್ಕೋಪ್ ಮೂಲಕ ಈ ಮಿಡಿತವನ್ನು ಕೇಳಿಸಿಕೊಳ್ಳಬಹುದು. ಆರೋಗ್ಯವಂತ ವ್ಯಕ್ತಿಯಲ್ಲಿ ಒಂದೊಂದು ಮಿಡಿತದಲ್ಲೂ ಸುಮಾರು ಐದು ಔನ್ಸ್‌ಗಳಷ್ಟು, ಅಂದರೆ ಒಂದು ದಿನದಲ್ಲಿ ಸುಮಾರು ೪೦೦೦ ಗ್ಯಾಲನ್‌ಗಳಷ್ಟು ರಕ್ತ ಶರೀರದಾದ್ಯಂತ ಎಲ್ಲ ಭಾಗಗಳಲ್ಲೂ ಪ್ರವಹಿಸುತ್ತದೆ

ಹೃದಯರೋಧ

(ವೈ) ಹೃತ್ಕರ್ಣದಿಂದ ಹೃತ್ಕುಕ್ಷಿಗೆ ಸಂಕೋಚನ ಆವೇಗವನ್ನು ಸಾಗಿಸುವ ವಿಶೇಷ ಊತಕಕ್ಕೆ ಗಾಯವಾದಾಗ ಸಂಕೋಚನ ಅಲೆ ವ್ಯಾಪಿಸುವುದು ತಪ್ಪಿ ಹೃತ್ಕರ್ಣ ಹೃತ್ಕುಕ್ಷಿಗಳ ನಡುವೆ ಪರಸ್ಪರ ಹೊಂದಾಣಿಕೆ ತಪ್ಪಿಹೋಗುವಂಥ ಸ್ಥಿತಿ. ಇದರಿಂದ ನಾಡಿಮಿಡಿತ ನಿಧಾನಗೊಳ್ಳುವುದಲ್ಲದೆ ಅನೇಕ ವೇಳೆ ಮಿದುಳಿನಲ್ಲಿ ರಕ್ತಹೀನತೆಯೂ ಉಂಟಾಗುತ್ತದೆ

ಹೃದಯ ವಿಜ್ಞಾನ

(ವೈ) ಹೃದಯದ ಕ್ರಿಯೆ ಮತ್ತು ವ್ಯಾಧಿಗಳನ್ನು ಅಭ್ಯಸಿಸುವ ವೈದ್ಯಕೀಯ ವಿಭಾಗ

ಹೃದಯ ವೈಫಲ್ಯ

(ವೈ) ಯಾವುದೇ ಕಾರಣಕ್ಕೆ ಹೃದಯವು ಶರೀರದ ಎಲ್ಲ ಅಂಗಗಳಿಗೂ ಸಾಕಷ್ಟು ರಕ್ತ ಒದಗಿಸಲು ವಿಫಲವಾಗಿ ರೋಗಿಯಲ್ಲಿ ಏದುಸಿರು ಮುಂತಾದ ಲಕ್ಷಣಗಳು ತಲೆದೋರುವುದು

ಹೃದಯ ಸಂಕೋಚನ

(ಭೌ) ಹೃದಯದ ಕ್ರಿಯಾಚಕ್ರದಲ್ಲಿ ಸಂಕೋಚಿಸುವ ಘಟ್ಟ

ಹೃದಯಸ್ತಂಭನ

(ವೈ) ನಿರಂತರ ರಕ್ತರೇಚನ ಕ್ರಿಯೆ ಯಲ್ಲಿ ನಿರತವಾಗಿರುವ ಹೃದಯವು ಹಠಾತ್ತನೆ ನಿಂತುಹೋಗುವುದು

ಹೃದಯಾಕಾರದ

(ಸ) ಕೆಲವು ಬಗೆಯ ಎಲೆಗಳ ತೊಟ್ಟಿನ ಭಾಗವು ಸಾಂಪ್ರದಾಯಿಕ ಹೃದಯದ ಆಕಾರದಲ್ಲಿರುವುದು

ಹೃದಯಾತಿಸ್ಪಂದನ

(ವೈ) ಆಯಾಸ, ಚಿತ್ತಕ್ಷೋಭೆ ಅಥವಾ ಮತ್ತಾವುದೇ ವ್ಯಾಧಿಯ ಕಾರಣವಾಗಿ ಹೃದಯದ ಅತಿವೇಗ ಇಲ್ಲವೇ ಅಕ್ರಮ ಬಡಿತದ ಅನುಭವ

ಹೃದಯಾವರಣ

(ಪ್ರಾ) ಹೃದಯಾವೃತ ಪೊರೆ

Search Dictionaries

Loading Results

Follow Us :   
  Download Bharatavani App
  Bharatavani Windows App