भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹುಡ್

(ತಂ) ಹೊಗೆ ಕೊಳವಿಯಂಥ ಯಾವುದೇ ವಸ್ತುವಿನ ಮೇಲೆ ಮಳೆ ನೀರು ಒಳಹೋಗದಂತೆ ತಡೆಯಲು ಅಥವಾ ಗಾಳಿ ಇತ್ಯಾದಿಗಳ ಪ್ರವಾಹ ಅಪೇಕ್ಷಿತ ದಿಶೆಯಲ್ಲೇ ಹೋಗುವಂತೆ ಮಾಡಲು ಸ್ವಲ್ಪ ಎತ್ತರದಲ್ಲಿ ಅಳವಡಿಸಿದ ಛತ್ರಿ ಅಥವಾ ಚಾವಣಿ ಆಕೃತಿಯ ಕಟ್ಟಣೆ

ಹುಣಿಸೆ

(ಸ) ಫ್ಯಾಬೇಸೀ ಕುಟುಂಬದ ಸೀಸಾಲ್ ಪಿನಾಯ್ಡೀ ಉಪಕುಟುಂಬಕ್ಕೆ ಸೇರಿದ ಮರ. ಟ್ಯಾಮರಿಂಡಸ್ ಇಂಡಿಕ ವೈಜ್ಞಾನಿಕ ನಾಮ. ಅಡುಗೆಗೆ ಬಳಸುವ ಹುಳಿ ಹಣ್ಣು

ಹುಣ್ಣಿಮೆ

(ಖ) ಸೂರ್ಯ ಚಂದ್ರರ ಭೂಕೇಂದ್ರೀಯ ರೇಖಾಂಶ ವ್ಯತ್ಯಾಸ ೧೮೦ಂ ಆಗಿರುವಾಗ ಭೂಮಿಯಿಂದ ಕಾಣುವಂತೆ ಪೂರ್ಣ ಚಂದ್ರ ಬಿಂಬ, ಅದು ಕಾಣುವ ದಿನ ಯಾ ಕಾಲ. ನೋಡಿ : ಅಮಾವಾಸ್ಯೆ

ಹುರಿಯುವಿಕೆ

(ರ) ಸಲ್ಫೈಡ್ ಅದಿರುಗಳನ್ನು ಕಾಸಿ ಆಕ್ಸೈಡ್ ಆಗಿ ಪರಿವರ್ತಿಸುವ ಕ್ರಿಯೆ. ಉತ್ಪಾದನೆಯಾಗುವ ಗಂಧಕದಿಂದ ಕೂಡಿದ ಅನಿಲಗಳನ್ನು ಸಲ್ಫ್ಯೂರಿಕ್ ಆಮ್ಲ ತಯಾರಿಸಲು ಕೆಲವೊಮ್ಮೆ ಬಳಸಲಾಗುತ್ತದೆ

ಹುಲಿ

(ಪ್ರಾ) ಫೀಲಿಡೀ ಕುಟುಂಬಕ್ಕೆ ಸೇರಿದ ಮತ್ತು ಏಷ್ಯ ನಿವಾಸಿ ಮಾಂಸಾಹಾರಿ ಸ್ತನಿ. ಫಿಲಿಸ್ ಟೈಗ್ರಿಸ್ (ಪ್ಯಾಂತರ ಟೈಗ್ರಿಸ್) ವೈಜ್ಞಾನಿಕ ನಾಮ. ಮೈಮೇಲೆ ಕಪ್ಪು ಅಡ್ಡ ಪಟ್ಟಿಗಳು, ಹಳದಿ ಕಂದು ಬಣ್ಣದ ಚರ್ಮ ಹಾಗೂ ಬಿಳಿ ಉದರ ಭಾಗ ಇದರ ಲಕ್ಷಣ. ಉದ್ದ ೩ಮೀ. ತೂಕ ಸುಮಾರು ೨೦೦ ಕಿ.ಗ್ರಾಂ

ಹುಲಿಪಟ್ಟೆ ಚಿಟ್ಟೆ

(ಪ್ರಾ) ಸಿಸಿಂಡೆಲಿಡೀ ಕುಟುಂಬಕ್ಕೆ ಸೇರಿದ ಉಜ್ಜ್ವಲ ವರ್ಣದ ರೆಕ್ಕೆಗಳಿರುವ ಜೀರುಂಡೆ

ಹುಲ್ಲು

(ಸ) ಪೋಯೀಸೀ ಕುಟುಂಬಕ್ಕೆ ಸೇರಿದ ಏಕದಳೀಯ ಸಸ್ಯ. ಜೊಂಡು ಮತ್ತು ಬಿದಿರಿನ ಹತ್ತಿರ ಸಂಬಂಧಿ. ೯೦೦೦ ಪ್ರಭೇದಗಳಿವೆ. ಎಲೆಗಳು ಉದ್ದ. ಕಿರಿದಗಲ. ಆಹಾರವಾಗಿ (ಅಕ್ಕಿ, ಗೋದಿ, ಓಟ್ಸ್, ಜೋಳ, ಕಬ್ಬು ಇತ್ಯಾದಿ) ಮೇವಾಗಿ, ಪೀಠೋಪಕರಣ ನಿರ್ಮಾಣ ಸಾಮಗ್ರಿಯಾಗಿ, ಉಪಯೋಗ

ಹುಲ್ಲುಗಾವಲು

(ಪವಿ) ಏಕಪ್ರಕಾರವಾಗಿ, ದಟ್ಟವಾಗಿ, ಹುಲ್ಲು ಬೆಳೆದಿರುವ, ನದಿ ಬದಿಯ ಜಲಸಮೃದ್ಧಿಯುಳ್ಳ ತಗ್ಗು ನೆಲ. ಮಧ್ಯೆ ಮಧ್ಯೆ ಮೇವು ಕ್ಷೇತ್ರಗಳಿರಬಹುದು, ಆದರೆ ಕುರುಚಲು ಗಿಡಗಂಟಿಗಳಿರುವುದು ತೀರ ಅಪರೂಪ

ಹುಲ್ಲು ನೆಲ

(ಸ) ಹುಲ್ಲು ಮೊದಲಾದವು ಬೆಳೆದಿರುವ ನೆಲದ ಮೇಲುವರಿಸೆಯ ಮಣ್ಣು. ಹಸಿರು ಹಾಸು

ಹುಲ್ಲುಮೆದೆ

(ಸಾ) ಬಣಬೆ; ಧಾನ್ಯದ ರಾಸಿ, ಒಟ್ಟಿಲು; ಇವನ್ನು ಇಡುವ ಚಾವಣಿಯುಳ್ಳ ಸ್ಥಳ

ಹುಸಿ ಪಾದ

(ಪ್ರಾ) ಕೋಶದ ಮೇಲ್ಮೈಯ ಅಗಲವಾದ ಬೆರಳುಸದೃಶ ಚಾಚು. ಅಮೀಬಗಳು ಈ ಅಂಗವನ್ನೇ ಪಾದವಾಗಿ ಉಪಯೋಗಿಸುತ್ತವೆ

ಹುಸಿ ಫಲ

(ಸ) ಹೂವಿನ ಶಲಾಕಾ ಕೋಶಗಳಿಂದಲ್ಲದೆ ಇತರ ಭಾಗಗಳಿಂದಲೂ ರೂಪುಗೊಳ್ಳುವ ಹಣ್ಣು. ಉದಾ : ಸ್ಟ್ರಾಬೆರಿ. ಇದರಲ್ಲಿ ಪುಷ್ಪಪಾತ್ರವೆ ತಿರುಳಿನಿಂದ ತುಂಬಿಕೊಂಡು ಹಣ್ಣಾಗುತ್ತದೆ

ಹುಸಿಬಸುರು

(ವೈ) ಅನಿಷೇಚಿತ ಸಂಯೋಗಾ ನಂತರ ಸ್ತನಿಗಳಲ್ಲಿ ತೋರುವ ಬಸುರನ್ನು ಹೋಲುವ ಒಂದು ಮಿಥ್ಯಾ ಸ್ಥಿತಿ

ಹುಸಿರೂಪ

(ಭೂವಿ) ನೋಡಿ: ಪ್ಯಾರಮಾರ್ಫಿಸಮ್. ಅಲೊಮಾರ್ಫ್

ಹುಸಿವಿಜ್ಞಾನ

(ಸಾ) ವೈಜ್ಞಾನಿಕವೆಂದು ತಪ್ಪಾಗಿ ಪರಿಗಣಿಸುವ ಸಿದ್ಧಾಂತಗಳು, ಊಹೆಗಳು ಮತ್ತು ವಿಧಾನಗಳ ವ್ಯವಸ್ಥೆ. ಉದಾ : ಫಲಜ್ಯೋತಿಷ (ಅಸ್ಟ್ರಾಲಜಿ)

ಹುಳುಕಡ್ಡಿ

(ವೈ) ಕೆಲವು ಬಗೆಯ ಶಿಲೀಂಧ್ರಗಳು ಉಂಟುಮಾಡುವ, ಸ್ಪರ್ಶದಿಂದ ಒಬ್ಬರಿಂದೊಬ್ಬರಿಗೆ ಹರಡುವ ಚರ್ಮ ವ್ಯಾಧಿ. ಮಕ್ಕಳಿಗೆ ಹೆಚ್ಚಾಗಿ ತಗಲುತ್ತದೆ. ರೋಗಕ್ಕೆ ಒಳಗಾದ ಚರ್ಮಭಾಗದಲ್ಲಿ ಉಂಗುರ ಆಕಾರದ ಬೊಕ್ಕೆಗಳಿರುತ್ತವೆ. ಗಜಕರ್ಣ

ಹೂ

(ಸ) ಒಂದು ಅಥವಾ ಹೆಚ್ಚು ಜಾಯಾಂಗಗಳು ಅಥವಾ ಪುಮಂಗಗಳು ಅಥವಾ ಎರಡೂ ಉಳ್ಳ ಮತ್ತು ಸಾಮಾನ್ಯವಾಗಿ ದಳವಲಯ ಪುಷ್ಪ ಪಾತ್ರೆಗಳೊಡನೆ ಕೂಡಿರುವ, ಸಸ್ಯದ ಜನನಾಂಗ. ಹಸಿರಲ್ಲದ ಬಣ್ಣದಿಂದ ಕೂಡಿ ಮುಂದೆ ಬೀಜೋತ್ಪತ್ತಿಯಾಗುವ ಸಸ್ಯಭಾಗ. ಪುಷ್ಪ, ಕುಸುಮ, ಹೂವು

ಹೂಕೋಸು

(ಸ) ಬ್ರಾಸಿಕೇಸೀ ಕುಟುಂಬಕ್ಕೆ ಸೇರಿದ ತರಕಾರಿ ಸಸ್ಯ. ಬ್ರಾಸಿಕ ಓಲರೇಸಿಯ ಬಾಟ್ರೈಟಿಸ್ ವೈಜ್ಞಾನಿಕ ನಾಮ. ಎಲೆಕೋಸು ಗಡ್ಡೆಕೋಸುಗಳ ಹತ್ತಿರ ಸಂಬಂಧಿ. ಗೋಬಿ

ಹೂಗೊನೆ

(ಸ) ಒಂದೇ ತಾಳಿನ ಮೇಲೆ ಒತ್ತಾಗಿ ಬಿಟ್ಟಿರುವ ತೊಟ್ಟಿಲ್ಲದ ಪುಷ್ಪಗಳ ಗುಚ್ಛ. ಕದಿರುಗೊಂಚಲು

ಹೂಜಿ

(ತಂ) ಹಿಡಿ ಅಥವಾ ಎರಡು ಕಿವಿಗಳಿಂದ ಕೂಡಿದ, ಮೂತಿಯುಳ್ಳ, ದೊಡ್ಡ ಮಣ್ಣಿನ ಮರಿಗೆ. ನೀರು ಮೊದಲಾದ ದ್ರವಗಳನ್ನು ತುಂಬಿಡಲು ಬಳಕೆ

Search Dictionaries

Loading Results

Follow Us :   
  Download Bharatavani App
  Bharatavani Windows App