Navakarnataka Vijnana Tantrajnana Padasampada (2011)
Navakarnataka Publications Private Limited
ಅಗಾಧ ನಿಕ್ಷೇಪಗಳು
(ಭೂವಿ) ಸಾಗರದಲ್ಲಿ ೨೦೦೦ ಮೀ.ಗಿಂತಲೂ ಹೆಚ್ಚಿನ ಆಳಗಳಲ್ಲಿ ಕ್ರಮೇಣ ಮೈದಳೆಯುವ ಅವಸಾದನ ನಿಕ್ಷೇಪಗಳು
ಅಗಾರಿಕ್
(ಸ) ಕೊಡೆಯಂಥ ಅಗ್ರಭಾಗ ಮತ್ತು ಅದರ ಕೆಳ ಮೈಯಲ್ಲಿ ಕಿವಿರುಗಳು ಇರುವ ಶಿಲೀಂಧ್ರಗಳ ಪೈಕಿ ಯಾವುದೇ ಒಂದು. ಉದಾ: ನಾಯಿಕೊಡೆ, ಅಣಬೆ
ಅಗೂಟೀ
(ಪ್ರಾ) ಇದು ರಾಡೆನ್ಷಿಯ ವರ್ಗದ ಕೇವಿಡೀ ಎಂಬ ಮೂಷಿಕ ಕುಟುಂಬಕ್ಕೆ ಸೇರಿದ ಮೊಲ ಗಾತ್ರದ ಸ್ತನಿ. ಟ್ರಿನಿಡಾಡ್ ಮತ್ತು ಗಿನಿ ಪ್ರದೇಶ ವಾಸಿ. ನಿಶಾಚರಿ. ಗಿಡಗಳ ಬೇರು, ಎಲೆ ಕಾಯಿ ಇದರ ಆಹಾರ
ಅಗೇಟ್
(ಭೂವಿ) ಕ್ವಾರ್ಟ್ಸ್ನ ಒಂದು ರೂಪ. ಒಂದು ಅರೆರತ್ನ ಖನಿಜ. ನೋಡಿ : ಓರಿಯಂಟಲ್ ಅಗೇಟ್
ಅಗ್ನಿಮಾಂದ್ಯ
(ವೈ) ಆಹಾರ ಸರಿಯಾಗಿ ಜೀರ್ಣವಾಗದ ಸ್ಥಿತಿ. ಅಜೀರ್ಣ ವ್ಯಾಧಿ
ಅಗ್ನಿಶಾಮಕಗಳು
(ತಂ) ಬೆಂಕಿಯ ಮೂಲಕ್ಕೆ ಅನುಗುಣವಾಗಿ ಶಾಮಕದ ಬಳಕೆ. ‘ಎ’ ವರ್ಗದ ಬೆಂಕಿಯಾದರೆ (ಕಾಗದ ಮರ ಮುಂತಾದ ಘನ ದಹ್ಯಗಳಿಂದ ಆದುದು) ಒತ್ತಡ ದಲ್ಲಿರುವ ನೀರು, ಸೋಡಿಯಮ್ ಬೈ ಕಾರ್ಬೊನೇಟ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ವರ್ತನೆಯಿಂದ ಉತ್ಪಾದಿಸಿದ ಕಾರ್ಬನ್ ಡೈ ಆಕ್ಸೈಡ್ ಅಥವಾ ಬ್ರೋಮೊ ಫ್ಲೂರೋಕ್ಲೋರೈಡ್ ಮೀಥೇನ್ ನಂಥ (ಬಿ.ಸಿ.ಎಫ್.) ಹ್ಯಾಲೊಜನೀಕೃತ ಹೈಡ್ರೊಕಾರ್ಬನ್ ಗಳನ್ನು ಸಿಂಪಡಿಸುವುದು ವಾಡಿಕೆ. ‘ಬಿ’ ವರ್ಗದ ಬೆಂಕಿಯಾದರೆ (ಪೆಟ್ರೋಲ್ನಂಥ ದಹನಶೀಲ ದ್ರವಗಳಿಂದಾದುದು) ಅದನ್ನು ಆರಿಸಲು ಅಲ್ಯೂಮಿನಿಯಮ್ ಸಲ್ಫೇಟ್ ಮತ್ತು ಸೋಡಿಯಮ್ ಬೈ ಕಾರ್ಬೊನೇಟ್ ದ್ರಾವಣಗಳ ವರ್ತನೆಯಿಂದ ಹುಟ್ಟಿದ ಕಾರ್ಬನ್ ಡೈ ಆಕ್ಸೈಡ್ನ ನೊರೆ ಪ್ರಶಸ್ತ
ಅಗ್ನಿಶಿಲೆ
(ಭೂವಿ) ಮ್ಯಾಗ್ಮದ, ಅಂದರೆ ಘನೀಭವಿಸುವ ಮುನ್ನಿನ ಶಿಲಾದ್ರವದ, ಉಷ್ಣವು ನಷ್ಟವಾದಂತೆ ಅದು ಹೆಪ್ಪುಗಟ್ಟಿ ಅಕ್ಕಪಕ್ಕದ ಸಂಸ್ತರಗಳ ಒತ್ತಡ ದಿಂದ ಮೈದಳೆದ ಶಿಲೆ. ಭೂಮಿಯಲ್ಲಿರುವ ಇತರ ಎರಡು ವಿಧದ ಶಿಲೆಗಳೆಂದರೆ ಜಲಜ ಅಥವಾ ಅವಸಾದನ ಶಿಲೆ, ರೂಪಾಂತರಿತ ಶಿಲೆ. ನೋಡಿ : ರೂಪಾಂತರಿತ ಶಿಲೆ, ಜಲಜ ಅಥವಾ ಅವಸಾದನ ಶಿಲೆ
ಅಗ್ರ
(ಜೀ) ಸಹಪತ್ರದ ಮುಂದಿನ ಪುಷ್ಪ ಪಾರ್ಶ್ವ. ಚರಜೀವಿ ಚಲಿಸುವಾಗ ಅದರ ದೇಹದ ಮೊದಲ ಭಾಗ. ಕಪಾಲೀಕರಣವಾಗುವ ಪ್ರಾಣಿಗಳಲ್ಲಿ ಮುಂಭಾಗದ ಹತ್ತಿರವಿರುವ ಅಥವಾ ಅನುದೀರ್ಘಾಕ್ಷದ ಕಪಾಲ ಕೊನೆಯಲ್ಲಿರುವ ಭಾಗ. ಮಾನವನಲ್ಲಿ ಉದರ ಪಾರ್ಶ್ವ
ಅಗ್ರ ಉರೋಸ್ಥಿ
(ಪ್ರಾ) ಆಂಫೀಬಿಯಗಳಲ್ಲಿ (ಸರೀಸೃಪಗಳಿಗೂ ಮೀನುಗಳಿಗೂ ನಡುವಣ ಕಶೇರುಕಗಳು) ಎದೆ ಮೂಳೆಯ ಅಗ್ರ ಭಾಗ. ಕೆಲವು ಉನ್ನತ ವರ್ಗ ಪ್ರಾಣಿಗಳಲ್ಲಿ ಎದೆ ಮೂಳೆಯನ್ನೂ ಗ್ರೀವಾಸ್ಥಿಯನ್ನೂ (ಕತ್ತಿನ ಮೂಳೆ) ಕೂಡಿಸುವ ಮೃದ್ವಸ್ಥಿ ಅಥವಾ ಮೂಳೆ
ಅಗ್ರಗಾಮಿ
(ಸ) ಕೆಳಗಿನಿಂದ ಮೇಲಕ್ಕೆ ಬೆಳೆಯುವ. ಊರ್ಧ್ವಗಾಮಿ; ಅಗ್ರಾಭಿಸಾರಿ
ಅಗ್ರದಂತಿ
(ಪ್ರಾ) ಹಲ್ಲುಗಳು ವಸಡಿನ ಗೂಡುಗಳೊಳಕ್ಕೆ ಸೇರಿಕೊಂಡಿರದೆ ಹಲ್ಲಿಗಳಲ್ಲಿರುವಂತೆ ನೇರವಾಗಿ ದಿಂಡಿಗೆ ಸೇರಿಕೊಂಡಿರುವ ಪ್ರಾಣಿ
ಅಗ್ರದೀಪ
(ತಂ) ಹಡಗಿನ ಕೂವೆ ಕಂಬದ ಮೇಲುಗಡೆ ಇಲ್ಲವೇ ರೈಲ್ವೇ ಎಂಜಿನ್, ಮೋಟಾರ್ ಮೊದಲಾದ ವುಗಳ ಮುಂಭಾಗದಲ್ಲಿ ಅಳವಡಿಸಿರುವ ಅತ್ಯಂತ ಪ್ರಕಾಶಮಾನ ದೀಪ. ತಲೆದೀಪ
ಅಗ್ರಮಹಾಸಿರೆ
(ಪ್ರಾ) ತಲೆ ಮತ್ತು ಕತ್ತಿನಿಂದ ಬಲಹೃತ್ಕರ್ಣಕ್ಕೆ ರಕ್ತ ಒಯ್ಯುವ ಪ್ರಧಾನ ನಾಳ
ಅಗ್ರವರ್ಧಿ
(ಸ) ಬೆಳೆಯುವ ಭಾಗ ಮೇಲುಗಡೆ ಇರುವ ಸಸ್ಯವರ್ಗ (ಪಾಚಿ, ಜರೀಗಿಡ ಇತ್ಯಾದಿ). ಶೀರ್ಷವರ್ಧಿ
ಅಗ್ಲಾಮರೇಟ್
(ಭೂವಿ) ಜ್ವಾಲಾಮುಖಿಯಿಂದ ಸಿಡಿದ ವಿಭಿನ್ನ ಗಾತ್ರಗಳ ಅಸಂಖ್ಯ ಮೊನಚು ಕಲ್ಲು ಚೂರುಗಳು ಅಲ್ಲಿಯ ಅತ್ಯುಷ್ಣದ ಕಾರಣವಾಗಿ ಒಗ್ಗೂಡಿ ಮೈದಳೆದ ರಾಶಿ. ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ
ಅಚಕ್ರೀಯ
(ಗ) ವೃತ್ತ ಪರಿಧಿಯ ಮೇಲಿರದ; (ಭೌ) ಏಕಮೌಲಿಕ. ಅವಧಿಯುತವಲ್ಲದ (ರ) ಆಲಿಫ್ಯಾಟಿಕ್ ಸಂಯುಕ್ತಗಳಲ್ಲಿ ಕಾರ್ಬನ್ ಪರಮಾಣುಗಳು ಒಂದಕ್ಕೊಂದು ಲಗತ್ತಾಗಿ ತೆರೆದ ಸರಣಿಯಲ್ಲಿರುವಿಕೆ (ಸ) ಪುಷ್ಪ ಭಾಗಗಳು ಸುರುಳಿಯಲ್ಲಿ ಗುಂಪುಗೂಡಿರುವ
ಅಚರ
(ಗ) ದತ್ತ ಪರಿವರ್ತನೆಯಲ್ಲಿ ವ್ಯತ್ಯಸ್ತಗೊಳ್ಳದ ಒಂದು ಗಣ ಅಥವಾ ರಾಶಿ. ಉದಾ: ಅಕ್ಷಗಳ ಸರಳ ರೇಖೀಯ ಇಲ್ಲವೇ ಆವರ್ತನ ಚಲನೆಗಳಲ್ಲಿ ಶಂಕುಜದ ನಿರ್ಧಾರಕವು ಒಂದು ಅಚರ. ಅವ್ಯತ್ಯಸ್ತ. ನಿಶ್ಚರ
ಅಚ್ಚು
(ತಂ) ವಾಹನದ ಅಥವಾ ಯಂತ್ರದ ಗಾಲಿಗಳನ್ನು ಹೊತ್ತಿರುವ ಅಡ್ಡ ಜಂತಿ ಅಥವಾ ಸಲಾಕಿ; ಗಾಲಿಗಳು ಇದರ ಸುತ್ತ ತಿರುಗುತ್ತಿರುತ್ತವೆ. ಇರಸು. ಇರಚು
ಅಚ್ಚು
(ತಂ) ಮುದ್ರಣಗೊಳ್ಳಬೇಕಾದ ಪಾಠದ, ಚಿತ್ರದ, ಪಡಿಯಚ್ಚು . ಬ್ಲಾಕು
ಅಚ್ಚು