भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹಿಪ್ಪುನೇರಿಳೆ

(ಸ) ಮೊರೇಸಿ ಕುಟುಂಬದ ಒಂದು ಜಾತಿ. ಮೊರಸ್ ಇಂಡಿಕ ವೈಜ್ಞಾನಿಕ ನಾಮ. ಮರ ಅಥವಾ ಪೊದೆ ಸಸ್ಯ. ಉಷ್ಣವಲಯ ಅಥವಾ ಸಮಶೀತೋಷ್ಣ ವಲಯದ ಅನೇಕ ಭಾಗಗಳಲ್ಲಿ ಬೆಳೆಯುತ್ತದೆ. ಬಹುವಾಗಿ ಹೊಲದ ಬೆಳೆ. ವರ್ಷಕ್ಕೆ ೨-೩ ಬಾರಿ ಸೊಪ್ಪನ್ನು ಕೊಯ್ದು ರೇಷ್ಮೆ ಹುಳುಗಳಿಗೆ ಆಹಾರವಾಗಿ ನೀಡುತ್ತಾರೆ. ಮರವನ್ನು ಕ್ರಿಕೆಟ್, ಟೆನ್ನಿಸ್, ಹಾಕಿ ಮುಂತಾದ ಆಟಗಳ ಬ್ಯಾಟ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಉಪ್ಪು ನೇರಿಳೆ

ಹಿಪ್ಪೂರಿಕ್ ಆಮ್ಲ

(ರ) C6H5CO.NH. CH2COOH. ಅನೇಕ ಪ್ರಾಣಿಗಳ, ವಿಶೇಷವಾಗಿ ಸಸ್ಯಾಹಾರಿಗಳ, ಮೂತ್ರದಲ್ಲಿ ಕಂಡುಬರುತ್ತದೆ. ವರ್ಣರಹಿತ ಸ್ಫಟಿಕ. ದ್ರಬಿಂ ೧೮೮ಂಸೆ. ಬಿಸಿ ನೀರು, ಆಲ್ಕಹಾಲ್ ಹಾಗೂ ಈಥರ್‌ಗಳಲ್ಲಿ ವಿಲೇಯ. ಔಷಧಿಗಳಲ್ಲೂ ರಾಸಾಯನಿಕ ಮಧ್ಯವರ್ತಿಯಾಗಿಯೂ ಬಳಕೆ

ಹಿಪ್ಪೂರಿಯ

(ವೈ) ಮೂತ್ರದಲ್ಲಿ ಅಧಿಕ ಪ್ರಮಾಣದಲ್ಲಿ ಹಿಪ್ಪೂರಿಕ್ ಆಮ್ಲ ವಿಸರ್ಜನೆಯಾಗುವ ರೋಗ ಸ್ಥಿತಿ

ಹಿಪ್ಸೊಮೀಟರ್

(ತಂ) ನೀರಿನ ಕುದಿಬಿಂದು ನಿರ್ಧರಿಸಲು ಬಳಸುವ ಸಾಧನ. ಕುದಿಬಿಂದುವು ವಾತಾವರಣದ ಒತ್ತಡವನ್ನು ಅವಲಂಬಿಸಿರುವುದರಿಂದ ಮತ್ತು ವಾತಾವರಣದ ಒತ್ತಡವು ಪ್ರದೇಶದ ಎತ್ತರದೊಂದಿಗೆ ವ್ಯತ್ಯಯವಾಗುವುದರಿಂದ, ಈ ಸಾಧನವನ್ನು ಯಾವುದೇ ಪ್ರದೇಶವು ಸಮುದ್ರಮಟ್ಟದಿಂದ ಎಷ್ಟು ಎತ್ತರ ಎಂಬುದನ್ನು ಅಳೆಯಲೂ ಅದಕ್ಕಾಗಿ ಬಳಸಿದ ಉಷ್ಣತಾಮಾಪಕದ ಊರ್ಧ್ವ ಸ್ಥಿರಬಿಂದುವನ್ನು ಸರಿಪಡಿಸಲೂ ಬಳಸಬಹುದು

ಹಿಂಭಾಗ

(ಪ್ರಾ) ದ್ವಿಪಾರ್ಶ್ವೀಯ ಸಮ್ಮಿತಿಯುಳ್ಳ ಪ್ರಾಣಿಯಲ್ಲಿ ತಲೆಯಿಂದ ದೂರದಲ್ಲಿರುವ ಭಾಗ. ಪ್ರಾಣಿಯ ಒಡಲಿನ ಹಿಂತುದಿ

ಹಿಮ

(ಭೂವಿ) ವಾಯುಮಂಡಲದಲ್ಲಿ ಉಷ್ಣತೆ ೦0ಸೆಗಿಂತ ಕಡಿಮೆಯಾದಾಗ ಗಾಳಿಯಲ್ಲಿರುವ ನೀರಿನ ಆವಿಯು ಘನೀಭೂತವಾಗಿ, ನೆಲದ ಮೇಲೆ ಬಿಳಿಯ ಹಲ್ಲೆಗಳಾಗಿ ಬೀಳುವ ಅಥವಾ ಪದರ ಪದರವಾಗಿ ಹರಡಿಕೊಳ್ಳುವ ನೀರ್ಗಲ್ಲ ಹಳುಕು

ಹಿಮನರಿ

(ಪ್ರಾ) ಉತ್ತರಗೋಳಾರ್ಧದ ಮೇರು ವಲಯದಲ್ಲಿ ವಾಸಿಸುವ ಮಾಂಸಾಹಾರಿ ಪ್ರಾಣಿ

ಹಿಮಪಾತ

(ಸಾ) ವಾತಾವರಣದಲ್ಲಿ ವಾಯುವಿನ ಉಷ್ಣತೆ ನೀರಿನ ಘನೀಕರಣ ಬಿಂದು ೦0 ಸೆ.ಗಿಂತ ಕಡಿಮೆಯಾದಾಗ ಸಂಭವಿಸುವ ಸ್ಥಿತಿ

ಹಿಮಮಕುಟ

(ಪವಿ) ಪರ್ವತ ಶಿಖರಗಳಲ್ಲಿ ಕಂಡುಬರುವ ಹಿಮರಾಶಿ. ಸುಮಾರು ೫೦,೦೦೦ ಚ.ಕಿಮೀಗಿಂತ ಕಡಿಮೆ ವಿಸ್ತೀರ್ಣ. ಕೆಳಗಿನ ಭೂಮಿ ಕಾಣದ ಹಾಗೆ ಮಾಡುವಷ್ಟು ವಿಶಾಲವಾಗಿ ಇರಬಹುದು. ಮಧ್ಯೆ ಇರುವ ಹಿಮರಾಶಿ ಗುಮ್ಮಟ ಆಕಾರದಲ್ಲಿ ಇರುತ್ತದೆ. ಸುತ್ತಲೂ ಹಿಮನದಿಗಳಿರುತ್ತವೆ. ಧ್ರುವ ಪ್ರದೇಶಗಳಲ್ಲಿ ಸರ್ವಸಾಮಾನ್ಯ

ಹಿಮಮಾರುತ

(ಪವಿ) ಹಿಮಸಹಿತವಾಗಿ ಅತಿ ರಭಸದಿಂದ ಬೀಸುವ ಗಾಳಿ. ಹಿಮವಾತ

ಹಿಮರೇಖೆ

(ಭೂವಿ) ಯಾವುದೇ ಪ್ರದೇಶ ಕುರಿತಂತೆ ಸದಾಕಾಲ ಹಿಮಾಚ್ಛಾದಿತವಾಗಿರುವ ಮಟ್ಟ. ಈ ಹಿಮರೇಖೆ ಮಟ್ಟವು ಅಕ್ಷಾಂಶ, ಹಿಮಪಾತ, ಉಷ್ಣತೆ, ಗಾಳಿಯ ದಿಕ್ಕು ಮತ್ತು ಮೇಲ್ಮೈಲಕ್ಷಣಗಳನ್ನನುಸರಿಸಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಾಗುತ್ತದೆ

ಹಿಮಾನಿ

(ಭೂವಿ) ಜಾರಿಬರುತ್ತಿರುವ ನೀರ್ಗಲ್ಲಿನ ದೊಡ್ಡ ರಾಶಿ. ಇದರಲ್ಲಿ ಮೂರು ಬಗೆಗಳನ್ನು ಕಾಣಬಹುದು. ೧. ಕಣಿವೆಯ ಹಿಮಾನಿ, ೨. ಕಣಿವೆಗಳಲ್ಲಿ ತುಂಬಿ ಅಲ್ಲಿಂದ ಹೊರ ಹರಿದುಬರುವ ಹಿಮಾನಿ. ೩. ನೀರ್ಗಲ್ಲಿನಿಂದ ಕೂಡಿರುವ ದೊಡ್ಡ ಪ್ರದೇಶ. (ಉದಾ: ಗ್ರೀನ್ಲೆಂಡ್) ಮತ್ತು ಸಣ್ಣ ಪ್ರದೇಶ (ಉದಾ: ಐಸ್ಲೆಂಡ್). ಹಿಮಾನಿಗಳ ಸರಿತ ಅತ್ಯಂತ ನಿಧಾನ. ಹಿಮನದಿ

ಹಿಮಾನಿಪಾತ

(ಭೂವಿ) ಪರ್ವತದಿಂದ ರಭಸವಾಗಿ ಉರುಳಿ ಬರುವ ಮಂಜು, ನೀರ್ಗಲ್ಲು ಮತ್ತು ಕಲ್ಲು ಮಣ್ಣುಗಳ ಸಮುದಾಯ. ಹಿಮಾಶ್ಮ ಪ್ರವಾಹ. ಉರುಳು ನೀರ್ಗಲ್ಲು

ಹಿಮಾಶ್ಮ ನಿಕ್ಷೇಪ

(ಭೂವಿ) ಹಿಮನದಿಯಿಂದ ಸಾಗಣೆಯಾಗಿ ಮೂಲಸ್ಥಳದಿಂದ ದೂರ ಸರಿದ ಸಂಚಯಗಳು

ಹಿಮೊಸೊಯೆಲ್

(ಪ್ರಾ) ಸಂಧಿಪದಿಗಳಲ್ಲೂ ಮೃದ್ವಂಗಿ ಗಳಲ್ಲೂ ರಕ್ತನಾಳವ್ಯೂಹದ ಕೆಲವು ಭಾಗಗಳು ಹಿಗ್ಗುವುದರಿಂದಾಗಿ ಶರೀರದಲ್ಲಿ ಗೌಣವಾಗಿ ರೂಪುಗೊಂಡ ಕುಳಿ. ಇದು ಸೊಯೆಲ್‌ನ (ಕುಹರದ) ಸ್ಥಾನದಲ್ಲಿ ರೂಪುಗೊಳ್ಳುತ್ತದೆ. ರಕ್ತಗುಹ

ಹಿಮ್ಮಡಿ

(ಜೀ) ಮನುಷ್ಯನಲ್ಲಿ ಪಾದದ ಹಿಂಭಾಗ. ಚತುಷ್ಪಾದಿ ಗಳಲ್ಲಿ ಅಥವಾ ಕಶೇರುಕಗಳಲ್ಲಿ (ಅನೇಕ ವೇಳೆ ನೆಲದಿಂದ ಮೇಲಕ್ಕೆತ್ತಿದ) ಹಿಂಗಾಲ ಹಿಮ್ಮಡಿ

ಹಿಮ್ಮಡಿಚಿದ

(ಸ) ತನ್ನ ಮೇಲೆ ತಾನೇ ಮಡಚಿ ಕೊಂಡಿರುವ. ಉದಾ: ಎಲೆಗಳು

ಹಿಮ್ಮಿದುಳು

(ವೈ) ಕಶೇರುಕಗಳಲ್ಲಿ ಭ್ರೂಣದ ತೃತೀಯ ಅಥವಾ ಹಿಂಬದಿ ಮಿದುಳು-ಕೋಶಕದಿಂದ ನಿಷ್ಪನ್ನಿಸಿದ ಮಿದುಳಿನ ಭಾಗ. ಇದು ಅನುಮಸ್ತಿಷ್ಕ ಹಾಗೂ ಮಿದುಳಿನ ಅತ್ಯಂತ ಹಿಂದಿನ ಚಾಚುಭಾಗಗಳನ್ನು ಒಳಗೊಂಡಿರುತ್ತದೆ

ಹಿಂಸಿತ ಶಿಶು ಲಕ್ಷಣಾವಳಿ

(ಮವಿ) ತಂದೆ ತಾಯಿ ಇಲ್ಲವೇ ರಕ್ಷಕ ಪೋಷಕರಿಂದ ನಿರಂತರವಾಗಿ ದೈಹಿಕ ಮತ್ತು/ಇಲ್ಲವೇ ಮಾನಸಿಕ ಹಿಂಸೆಗಳಿಗೆ ಬಲಿಯಾದ ಮಗುವಿನ ವರ್ತನೆಯಲ್ಲಿ ಪ್ರಕಟವಾಗುವ ಲಕ್ಷಣಗಳು

ಹಿಸ್ಟಮೀನ್

(ರ) C5H9N3. ಬಿಳಿ ಸ್ಫಟಿಕೀಯ ವಸ್ತು. ದ್ರಬಿಂ ೮೬0 ಸೆ. ಗಾಯಗೊಂಡಾಗಲೂ ಕರಡ ಜ್ವರದಂಥ ಅಲರ್ಜಿ ಕ್ರಿಯೆಗಳ ಪರಿಣಾಮವಾಗಿಯೂ ಪ್ರಾಣಿಗಳ ಊತಕಗಳಲ್ಲಿ ಕಾಣಿಸಿಕೊಳ್ಳುತ್ತದೆ. ರಕ್ತನಾಳಗಳು ಹಿಗ್ಗುವಂತೆ ಮಾಡುತ್ತದೆ. ನಯ ಸ್ನಾಯುಗಳು ಸಂಕುಚಿಸಿ ರಕ್ತದ ಒತ್ತಡದಲ್ಲಿ ಇಳಿತಾಯವಾಗ ಬಹುದು. ಮೈಮೇಲೆ ಗಂಧೆಗಳು ಏಳುತ್ತವೆ. ಕಡಿತ, ಶೀನು, ಮೂಗು ಕಣ್ಣುಗಳಲ್ಲಿ ನೀರು ಸುರಿಯುವಿಕೆ ಉಂಟಾಗುತ್ತವೆ. ಹೊಟ್ಟೆಯಲ್ಲಿ ಹೈಡ್ರೊಕ್ಲೋರಿಕ್ ಆಮ್ಲ ಸ್ರಾವವನ್ನು ಉತ್ತೇಜಿಸುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App