भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಹಾರಾಡುವ ತಟ್ಟೆ

(ತಂ) ಆಗಾಗ ಅಂತರಿಕ್ಷದಲ್ಲಿ ಕಾಣಿಸಿಕೊಂಡುದಾಗಿ ವರದಿ ಆಗಿರುವ, ಸಾಮಾನ್ಯವಾಗಿ ಹೊರ ಜಗತ್ತುಗಳಿಂದ ಬಂದುದೆಂದು ನಂಬಲಾಗಿರುವ, ಹಾರಾಡುವ ತಟ್ಟೆಯಾಕಾರದ ವಸ್ತು. ನೋಡಿ: ಯುಎಫ್‌ಓ

ಹಾರಿಜ

(ಖ) ನೋಡಿ: ಕ್ಷಿತಿಜ. ದಿಗಂತ

ಹಾರಿಜಾಂಶ

(ಖ) ನೋಡಿ: ಕ್ಷಿತಿಜಾಂಶ

ಹಾರು ಮೀನು

(ಪ್ರಾ) ಎದೆಯ ಮೇಲಿನ ಈಜುರೆಕ್ಕೆಗಳ ನೆರವಿನಿಂದ ನೀರಿನ ಮೇಲೆ ಹಾರಬಲ್ಲ ವಿಶೇಷ ಜಾತಿಯ ಮೀನು

ಹಾರುಬೂದಿ

(ತಂ) ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲನ್ನು ಉರಿಸಿದಾಗ ಉತ್ಪನ್ನವಾಗುವ ದಹನವಾಗದ ಸೂಕ್ಷ್ಮ ಬೂದಿ. ಪರಿಸರಕ್ಕೆ ಹಾನಿಕಾರಕವಾದರೂ ಇದನ್ನು ಪೊಜೊಲಾನಾ ಸಿಮೆಂಟ್ ತಯಾರಿಕೆಯಲ್ಲಿ ಕಚ್ಚಾ ಸಾಮಗ್ರಿಯಾಗಿ ಬಳಸ ಲಾಗುತ್ತದೆ. ಅಗ್ಗದ ಇಟ್ಟಿಗೆ ತಯಾರಿಕೆಯಲ್ಲೂ ಇದು ಉಪಯುಕ್ತ

ಹಾರ್ಟಸ್ ಸಿಕಸ್

(ಸ) ಕ್ರಮವಾಗಿ ವಿಂಗಡಿಸಿಟ್ಟ ಒಣ ಸಸ್ಯಗಳ ಸಂಗ್ರಹ. ಶುಷ್ಕ ಸಸ್ಯ ಸಂಗ್ರಹ

ಹಾರ್ಡ್ ಡಿಸ್ಕ್

(ಕಂ) ದೃಢಫಲಕ. ಕಂಪ್ಯೂಟರ್‌ನಲ್ಲಿ ಮಾಹಿತಿಯನ್ನು ಸಂಗ್ರಹಿಸಿಡುವ ಮುಖ್ಯಭಾಗ. ವಿದ್ಯುತ್ಕಾಂತೀಯ ಲೇಪ ಇರುವ ಈ ಮುದ್ರಿಕೆಯ ತಿರುಗುವ ವೇಗ, ಮಾಹಿತಿ ಹುಡುಕುವ ವೇಗ, ಇವುಗಳಿಂದ ಇದರ ಕಾರ್ಯಕ್ಷಮತೆ ನಿರ್ಧಾರ

ಹಾರ್ನ್ ಸಿಲ್ವರ್

(ರ) ಕ್ಲೋರಾರ್ಜಿರೈಟ್. ನೈಸರ್ಗಿಕ ಬೆಳ್ಳಿ ಕ್ಲೋರೈಡ್ (AgCl). ಬೆಳ್ಳಿಯ ಮುಖ್ಯ ಅದಿರುಗಳ ಪೈಕಿ ಒಂದು. ಬೆಳ್ಳಿ ಕ್ಲೋರೈಡನ್ನು ಕರಗಿಸಿ ತಣಿಸಿದಾಗ ಅದರ ಮೈಮೇಲೆ ಮುಳ್ಳುಗಳು ಏಳುತ್ತವೆ. ಈ ಕಾರಣದಿಂದ ಅದಕ್ಕೆ ಕೋಡುಬಳ್ಳಿ ಎಂಬ ಹೆಸರು ಬಂದಿದೆ

ಹಾರ್ನ್‌ಫೆಲ್ಸ್

(ಭೂವಿ) ಸಂಸ್ಪರ್ಶ ರೂಪಾಂತರಣ ದಿಂದಾದ ರೂಪಾಂತರಿತ ಶಿಲೆಗಳ ವರ್ಗದ ಸಾಮಾನ್ಯ ಹೆಸರು

ಹಾರ್ನ್‌ಬಿಲ್

(ಪ್ರಾ) ಕಾರಸೈಯಿಫಾರ್ಮಿಸ್ ಗಣ, ಬ್ಯೂಸರೋಟಿಡೀ ಕುಟುಂಬಕ್ಕೆ ಸೇರಿದ ವನ್ಯಪಕ್ಷಿ. ಕೊಕ್ಕಿನ ಮೇಲ್ಭಾಗದಲ್ಲಿ ಅದಕ್ಕೆ ಅಂಟಿಕೊಂಡಿರುವಂತೆ ಕೊಂಬಿನ ವಾಳ (ಗಂಟು) ಇರುವುದು ಈ ಹಕ್ಕಿಯ ವಿಚಿತ್ರ ಲಕ್ಷಣ. ೪೫ ಪ್ರಭೇದಗಳಿವೆ. ಭಾರತದಲ್ಲಿ ೫ ಪ್ರಭೇದಗಳುಂಟು. ವೃಕ್ಷವಾಸಿ. ಓಂಗಿಲೆ, ಕೊಂಬು ಕೊಕ್ಕಿನ ಹಕ್ಕಿ

ಹಾರ್ನ್‌ಬ್ಲೆಂಡ್

(ಭೂವಿ) ಪ್ರಧಾನವಾಗಿ ಕ್ಯಾಲ್ಸಿಯಮ್, ಮೆಗ್ನೀಸಿಯಮ್ ಹಾಗೂ ಕಬ್ಬಿಣದ ಸಿಲಿಕೇಟ್‌ಗಳನ್ನೊಳಗೊಂಡ, ಗ್ರಾನೈಟಿನ ಒಂದು ಘಟಕವಾದ ದಟ್ಟ ಕಂದು, ಕಪ್ಪು ಅಥವಾ ಹಸಿರು ಬಣ್ಣದ ಶಿಲಾರೂಪಕ ಖನಿಜ

ಹಾರ್ಮೋನ್‌ಗಳು

(ವೈ) ಉನ್ನತ ವರ್ಗದ ಪ್ರಾಣಿಗಳಲ್ಲಿ ಅಂತಃಸ್ರಾವಕ ಗ್ರಂಥಿಗಳು ಉತ್ಪಾದಿಸುವ ವಿಶಿಷ್ಟ ಪದಾರ್ಥಗಳು. ಇವು ರಕ್ತಪ್ರವಾಹದೊಡನೆ ಬೆರೆತು ಶರೀರದ ಎಲ್ಲ ಭಾಗಗಳಿಗೂ ಹೋಗಿ ಜೀವಿಯ ಅನೇಕ ಉಪಾಪಚಯ ಕ್ರಿಯೆಗಳನ್ನು ಪ್ರಚೋದಿಸುತ್ತವೆ, ನಿಯಂತ್ರಿಸುತ್ತವೆ. ಬಲು ಶೀಘ್ರಕ್ರಿಯೆ ಜರಗಿಸುವಂಥವು. ಅತ್ಯಲ್ಪ ಪ್ರಮಾಣವಷ್ಟೇ ಉಪಾಪಚಯದ ಮೇಲೆ ಅಧಿಕ ಪ್ರಭಾವ ಬೀರುತ್ತವೆ. ಹಾರ್ಮೋನ್‌ಗಳು ಒಂದೋ ಪ್ರೋಟೀನ್‌ಗಳು (ಉದಾ : ಇನ್ಸುಲಿನ್) ಇಲ್ಲವೇ ಸ್ಟಿರಾಯ್ಡ್‌ಗಳು (ಉದಾ: ಕಾರ್ಟಿಸೋನ್) ಅಥವಾ ಸಾಪೇಕ್ಷವಾಗಿ ಸರಳ ಜೈವಿಕ ಸಂಯುಕ್ತಗಳು (ಉದಾ : ಅಡ್ರನಲಿನ್)

ಹಾಲು

(ವೈ) ಸ್ತನಿಗಳ ದುಗ್ಧಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ಬಿಳಿ ಬಣ್ಣದ ಪೋಷಕ ದ್ರವ. ಮರಿಗಳಿಗೆ ಸಮತೋಲಿತ ಹಾಗೂ ಅತ್ಯಂತ ಪೌಷ್ಟಿಕ ಆಹಾರ. ಕಾರ್ಬೊಹೈಡ್ರೇಟ್‌ಗಳು, ಪ್ರೋಟೀನ್ ಗಳು, ಕೊಬ್ಬು, ಖನಿಜ ಲವಣಗಳು, ವೈಟಮಿನ್‌ಗಳು, ಪ್ರತಿಕಾಯಗಳು ಇತ್ಯಾದಿಗಳ ಸಮುಚ್ಚಯ. ಹಸುವಿನ ಹಾಲಿನಲ್ಲಿ ಶೇ. ೮೭ ನೀರು, ಶೇ. ೩.೬ ಲಿಪಿಡ್‌ಗಳು (ಟ್ರೈಗ್ಲಿಸರೈಡ್‌ಗಳು, ಫಾಸ್ಫಾಲಿಪಿಡ್‌ಗಳು, ಕೊಲೆಸ್ಟ್ರಾಲ್ ಇತ್ಯಾದಿ) ಶೇ. ೩.೩ ಪ್ರೋಟೀನ್ (ಹೆಚ್ಚಾಗಿ ಕೇಸೀನು), ಶೇ. ೪.೭ ಲ್ಯಾಕ್ಟೋಸ್ (ಹಾಲು ಸಕ್ಕರೆ) ಮತ್ತು ಕಡಿಮೆ ಪ್ರಮಾಣಗಳಲ್ಲಿ ವೈಟಮಿನ್‌ಗಳು (ವಿಶೇಷವಾಗಿ ವೈಟಮಿನ್ ಎ ಮತ್ತು ಅನೇಕ ಬಿ ವೈಟಮಿನ್‌ಗಳು), ಖನಿಜಗಳು (ಗಮನಾರ್ಹವಾಗಿ ಕ್ಯಾಲ್ಸಿಯಮ್, ಫಾಸ್ಫರಸ್, ಸೋಡಿಯಮ್, ಪೊಟ್ಯಾಸಿಯಮ್, ಮೆಗ್ನಿಸೀಯಮ್ ಹಾಗೂ ಕ್ಲೋರಿನ್) ಇರುತ್ತವೆ. ಇವು ವಿವಿಧ ಪ್ರಭೇದಗಳಲ್ಲಿ ವಿವಿಧ ಪ್ರಮಾಣಗಳಲ್ಲಿರಬಹುದು. ಮಾನವ (ಸ್ತ್ರೀ) ಹಾಲಿನಲ್ಲಿ ಕಡಿಮೆ ಪ್ರೋಟೀನ್ ಹಾಗೂ ಹೆಚ್ಚು ಲ್ಯಾಕ್ಟೋಸ್ ಇರುತ್ತವೆ. (ರ) ಮೆಗ್ನೀಸಿಯ, ಕಬ್ಬಿಣ/ಬಿಸ್ಮತ್ ಹಾಲುಗಳಂಥ ಕೆಲವು ಲೋಹೀಯ ಆಕ್ಸೈಡ್‌ಗಳ ನಿಲಂಬನ

ಹಾಲುಸಕ್ಕರೆ

(ರ) C12H22O11 ಗಡಸುಘನ, ಹರಳು ರೂಪಿ, ವಿಲೇಯ. ದ್ವಿಶರ್ಕರ, ದ್ರಬಿಂ. ೨೦೩ಂಸೆ. ಕಬ್ಬಿನ ಸಕ್ಕರೆಯಷ್ಟು ಸಿಹಿಯಲ್ಲ. ಎಲ್ಲ ಸ್ತನಿಗಳ ಹಾಲಿನಲ್ಲುಂಟು. ಜಲ ವಿಭಜನೆ ಹೊಂದಿ ಗ್ಲೂಕೋಸ್, ಗ್ಯಾಲಕ್ಟೋಸ್ ಕೊಡುವುದು

ಹಾಲುಹಲ್ಲು

(ವೈ) ಸ್ತನಿಗಳಲ್ಲಿ ಮೊದಲು ಮೂಡುವ ಹಲ್ಲುಗಳಲ್ಲೊಂದು. ಹಾಲು ಹಲ್ಲುಗಳು ಚಿಕ್ಕವಾಗಿದ್ದು ಶಾಶ್ವತ ಹಲ್ಲುಗಳಿಗಿಂತ ಸಂಖ್ಯೆಯಲ್ಲಿ ಕಮ್ಮಿ ಏಕೆಂದರೆ ಅವುಗಳಲ್ಲಿ ಮೋಲಾರ್ (ಅಗಿಯುವ) ಹಲ್ಲುಗಳು ಇರುವುದಿಲ್ಲ. ಅವುಗಳ ಕೆಳಗೆ ಶಾಶ್ವತ ಹಲ್ಲುಗಳು ಬೆಳೆದುಬಂದಂತೆ ಅವು ಸ್ವಾಭಾವಿಕವಾಗಿ ಉದುರಿ ಹೋಗುತ್ತವೆ

ಹಾಲೆ

(ಜೀ) ಯಕೃತ್ತಿನ, ಶ್ವಾಸಕೋಶದ, ಮಿದುಳಿನ ಅಥವಾ ಕಿವಿಯ ದುಂಡಗೆ ಇಲ್ಲವೇ ಚಪ್ಪಟೆಯಾಗಿ ಚಾಚಿಕೊಂಡಿರುವ ಅಥವಾ ಜೋತಾಡುತ್ತಿರುವ ಭಾಗ

ಹಾಲೊಗ್ರಫಿ

(ತಂ) ಕ್ಯಾಮೆರಾ ಉಪಯೋಗಿಸದೆ ವಸ್ತುವೊಂದರ ಮೂರು ಆಯಾಮಗಳ ಬಿಂಬವನ್ನು ದಾಖಲಿಸುವ ಹಾಗೂ ಪ್ರದರ್ಶಿಸುವ ವಿಧಾನ. ಇದರಲ್ಲಿ ಸಾಮಾನ್ಯವಾಗಿ ಲೇಸರ್‌ನ ಸಂಸಕ್ತ ವಿಕಿರಣ (ಬೆಳಕು)ವನ್ನೂ ಛಾಯಾಚಿತ್ರ ಫಲಕಗಳನ್ನೂ ಬಳಸಲಾಗುತ್ತದೆ. ಲೇಸರ್‌ನಿಂದ ಬರುವ ಬೆಳಕು ವಿಭಜನೆಗೊಂಡು ಅದರ ಸ್ವಲ್ಪಭಾಗ (ಮೂಲ ಕಿರಣ ಪುಂಜ) ನೇರವಾಗಿ ಛಾಯಾಚಿತ್ರ ಫಲಕದ ಮೇಲೆ ಬೀಳುತ್ತದೆ. ಇನ್ನೊಂದು ಭಾಗ ವಸ್ತುವಿನ ಮೇಲೆ ಬೀಳುತ್ತದೆ. ಆ ವಸ್ತುವಿನಿಂದ ಪ್ರತಿಫಲನಗೊಂಡ ಕಿರಣಗಳು ಅದೇ ಛಾಯಾಚಿತ್ರ ಫಲಕದ ಮೇಲೆ ಹಿಂದಿರುಗಿ ಬೀಳುತ್ತವೆ. ಈ ಎರಡು ಕಿರಣ ಪುಂಜಗಳೂ ಫಲಕದ ಮೇಲೆ ವ್ಯತಿಕರಣ ವಿನ್ಯಾಸಗಳನ್ನು ರೂಪಿಸುತ್ತವೆ. ಈ ಫಲಕವನ್ನು ಸಂಸ್ಕರಿಸಲಾಗುತ್ತದೆ. ಅದೇ ಹಾಲೊಗ್ರಾಮ್. ಇದರಲ್ಲಿ ದಾಖಲಾದ ಬಿಂಬವನ್ನು ಪುನರುತ್ಪಾದಿಸಲು ಹಾಲೊಗ್ರಮ್ ಮೇಲೆ ಸಂಸಕ್ತ ಬೆಳಕನ್ನು (ಮೂಲ ಕಿರಣ ಪುಂಜವಾದರೆ ಅತ್ಯುತ್ತಮ) ಹರಿಸಲಾಗುತ್ತದೆ. ಹಾಲೊಗ್ರಾಮ್ ಎರಡು ಸೆಟ್ ವಿವರ್ತನ ತರಂಗ ಗಳನ್ನು ಉಂಟುಮಾಡುತ್ತದೆ. ಒಂದು ಸೆಟ್ ಮೂಲ ವಸ್ತುವಿನ ಸ್ಥಾನದೊಂದಿಗೆ ಕೂಡಿಕೆಯಾಗುವಂಥ ಮಿಥ್ಯಾಬಿಂಬ ರೂಪಿಸುತ್ತದೆ; ಇನ್ನೊಂದು ಸೆಟ್ ಫಲಕದ ಅತ್ತಬದಿಯಲ್ಲಿ ನೈಜಬಿಂಬ ರೂಪಿಸುತ್ತದೆ. ಎರಡೂ ಮೂರು-ಆಯಾಮದವು. ಈ ವಿಧಾನವನ್ನು ಮೊದಲು ೧೯೪೮ರಲ್ಲಿ ಡೆನ್ನಿಸ್ ಗೇಬರ್ (೧೯೦೦-೭೯) ಆವಿಷ್ಕರಿಸಿದರು. ಇತ್ತೀಚೆಗಿನ ತಾಂತ್ರಿಕ ಬೆಳವಣಿಗೆಗಳ ಫಲವಾಗಿ ಬಿಳಿ ಬೆಳಕಿನಲ್ಲೇ ಕಾಣುವಂಥ ಹಾಲೊಗ್ರಾಮ್‌ಗಳನ್ನು ಉಂಟುಮಾಡಬಹುದಾಗಿದೆ

ಹಾವರ್‌ಕ್ರಾಫ್ಟ್

(ತಂ) ಕೆಳಮುಖ ಪಂಖಗಳ ಮೂಲಕ ನೆಲದ ಅಥವಾ ನೀರಿನ ಮೇಲ್ಮೈ ಮೇಲೆ ಬಲವಾಗಿ ಗಾಳಿ ದೂಡಿ ವಾಯುವಿನ ಮೆತ್ತೆ ಉಂಟುಮಾಡಿ ಅದರ ಮೇಲೆ ಮೇಲ್ಮೈಗಳಿಗೆ ತಗಲದಂತೆ ಚಲಿಸಿಕೊಂಡು ಹೋಗುವ ಸಾರಿಗೆ ಸಾಧನ. ಹ್ರಸ್ವ ದೂರದ ಪ್ರಯಾಣಗಳಲ್ಲಷ್ಟೆ ಬಳಕೆ. ಹೊವರ್‌ಕ್ರಾಫ್ಟ್

ಹಾವು

(ಪ್ರಾ) ಸ್ಕ್ವಮೇಟ ಗಣಕ್ಕೆ ಸೇರಿದ ಇನ್ನೂ ಜೀವಂತ ವಾಗಿರುವ ೧೩ ಕುಟುಂಬಗಳ ಸರೀಸೃಪಗಳಲ್ಲೊಂದು. ಟ್ರಯಾಸಿಕ್ ಯುಗದ (೨೨೫ ಮಿ.ವರ್ಷ ಪ್ರಾಚೀನ) ಅಂತ್ಯದಲ್ಲಿ ಮೊದಲು ಕಾಣಿಸಿಕೊಂಡವು. ಇವು ಕಶೇರುಕಗಳು. ಚರ್ಮ ಹುರುಪೆ ಆವೃತ. ದೇಹ ಹಗ್ಗದಂತೆ ಉದ್ದ. ರುಂಡ ಮುಂಡ ಬಾಲಗಳಿಗೆ ನಿರ್ದಿಷ್ಟ ಎಲ್ಲೆಗಳಿಲ್ಲ. ಬೆನ್ನೆಲುಬಿನಲ್ಲಿ ಕಶೇರುಮಣಿಗಳೂ ಪಕ್ಕೆಲುಬುಗಳೂ ಬಲು ಹೆಚ್ಚು. ಪಕ್ಕೆಲುಬುಗಳ ನಡುವಿನ ಸ್ನಾಯುಗಳ ಸಂಕೋಚನ ವ್ಯಾಕೋಚನಗಳಿಂದ ಚಲಿಸುತ್ತದೆ. ವಿಶಿಷ್ಟ ರೀತಿಯ ಅಸ್ಥಿಪಂಜರ ರಚನೆಯಿಂದಾಗಿ ತನ್ನ ದೇಹದ ಗಾತ್ರಕ್ಕಿಂತಲೂ ದೊಡ್ಡ ಗಾತ್ರದ ಪ್ರಾಣಿಗಳನ್ನು ನುಂಗಬಲ್ಲದು. ದೀರ್ಘಕಾಲ ಆಹಾರವಿಲ್ಲದೆ ಜೀವಿಸಬಲ್ಲದು. ವಿಷದ ಹಾವುಗಳಲ್ಲಿ ಮೇಲ್ದವಡೆಯ ಎರಡು ಪಕ್ಕಗಳಲ್ಲೂ ಚೀಲಗಳಂತೆ ಕಾಣುವ ವಿಷಗ್ರಂಥಿಗಳಿವೆ. ಇವುಗಳಿಗೆ ಸೇರಿರುವಂತೆ ಬಾಗಿದ ವಿಷದ ಹಲ್ಲುಗಳಿವೆ. ಚರ್ಮವೇ ಹಾವುಗಳ ಗ್ರಹಣೇಂದ್ರಿಯ

ಹಾವುಮೀನು

(ಪ್ರಾ) ಆಂಗ್ವಿಲಿ ಫಾರ್ಮೀಸ್ ಗಣದ ಆಂಗ್ವಿಲಿಡೀ ಮ್ಯೂರಾನಿಡೀ ಅಥವಾ ಇತರ ಯಾವುದೇ ಕುಟುಂಬಕ್ಕೆ ಸೇರಿದ ಮೀನು. ಹಾವಿನ ಆಕಾರದಲ್ಲಿ ಇರುವುದರಿಂದ ಈ ಹೆಸರು

Search Dictionaries

Loading Results

Follow Us :   
  Download Bharatavani App
  Bharatavani Windows App