भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಶಿಷ್ಟ ವಾಯುಮಂಡಲ

(ಪವಿ) ನೈಜ ವಾತಾವರಣದ ಸರಾಸರಿ ಸ್ಥಿತಿಗೆ ಸರಿಸುಮಾರಾದಂಥ ಊಹಾತ್ಮಕ ವಾತಾವರಣ. ಇದರಲ್ಲಿ ವಿವಿಧ ಔನ್ನತ್ಯಗಳಿಗೆ ಅನುಗುಣವಾಗಿ ಒತ್ತಡ ಉಷ್ಣತೆಗಳನ್ನು ನಿರೂಪಿಸಲಾಗಿರುತ್ತದೆ. (ಭೌ) ೧೦೧.೩೨೫N/m2 ಎಂದು ನಿರೂಪಿಸಲಾದ ಒತ್ತಡದ ಏಕಮಾನ: ಇದು ೦0ಸೆ.ನಲ್ಲಿ ಪಾದರಸ ಸ್ತಂಭದ ೭೬೦mm ಎತ್ತರಕ್ಕೆ ಸಮ. ಸಂಕ್ಷಿಪ್ತ : atm

ಶಿಷ್ಟ ವಿಚಲನೆ

(ಗ) ಮಾಧ್ಯ ಮೌಲ್ಯದ ಸುತ್ತ ಸಂಖ್ಯೆಗಳ ಅಥವಾ ಅಳತೆಗಳ ಒಂದು ಶ್ರೇಣಿಯ ಚದರಿಕೆಯನ್ನು ಅಳೆಯುವ ಒಂದು ಮಾಪಕ. ಮಾಧ್ಯ ಮೌಲ್ಯದಿಂದ ಅವುಗಳ ವಿಚಲನೆಗಳ ವರ್ಗಗಳ ಸರಾಸರಿ ಮೌಲ್ಯದ ವರ್ಗಮೂಲಕ್ಕೆ ಸಮ

ಶಿಷ್ಟಕಾಲ

(ಖ) ನಾಗರಿಕ ಚಟುವಟಿಕೆಗಳಲ್ಲಿ ಕ್ರಮ ತರುವ ಸಲುವಾಗಿ, ಸಾಧಾರಣವಾಗಿ, ಒಂದು ಆಡಳಿತೆಯ ಅಥವಾ ಒಂದು ಭೌಗೋಲಿಕ ನೆಲೆಯ ಪ್ರದೇಶದೊಳಗೆ, ಅಂತರರಾಷ್ಟ್ರೀಯ ಒಡಂಬಡಿಕೆ ಅನುಸಾರ, ಚಲಾವಣೆಯಲ್ಲಿ ಇರುವ ಕಾಲ. ಭೂಮಿಯನ್ನು ೨೪ ಕಾಲವಲಯಗಳಾಗಿ ವಿಭಾಗಿಸಿದೆ. ಸ್ಥೂಲವಾಗಿ, ಒಂದೊಂದು ಕಾಲವಲಯದ ವ್ಯಾಪ್ತಿಯೊಳಗೆ ಶಿಷ್ಟಕಾಲ ಇಂಗ್ಲೆಂಡಿನ ಗ್ರೆನಿಚ್ ಮಾಧ್ಯಕಾಲದಿಂದ ನಿಗದಿಯಾದಷ್ಟು ಮುಂದೆ ಅಥವಾ ಹಿಂದೆ ಇರುತ್ತದೆ. ಗ್ರೆನಿಚ್‌ನಿಂದ ಪೂರ್ವಕ್ಕೆ ೧೫0 ರೇಖಾಂಶ ಹೋದಂತೆ ಒಂದೊಂದು ಗಂಟೆಯಷ್ಟು ಹೆಚ್ಚಾಗುತ್ತಲೂ, ಪಶ್ಚಿಮಕ್ಕೆ ೧೫0 ರೇಖಾಂಶ ಹೋದಂತೆ ಒಂದೊಂದು ಗಂಟೆಯಷ್ಟು ಕಡಿಮೆ ಯಾಗುತ್ತಲೂ ಹೋಗುತ್ತದೆ. ಭಾರತ ಶಿಷ್ಟಕಾಲ ಗ್ರೆನಿಚ್ ಮಾಧ್ಯಕಾಲಕ್ಕಿಂತ ೫ ಗಂ ೩೦ ಮಿ ಮುಂದೆ ಇದೆ. ಆದ್ದರಿಂದ ಭಾರತದಲ್ಲಿ ಮಧ್ಯಾಹ್ನ ೧೨ ಆಗಿರುವಾಗ ಗ್ರೆನಿಚ್‌ನಲ್ಲಿ ಅಂದು ಪೂರ್ವಾಹ್ನ ೬ ಗಂ ೩೦ ಮಿ, ಗ್ರೆನಿಚ್‌ನಲ್ಲಿ ಮಧ್ಯಾಹ್ನ ೧೨ ಗಂಟೆ ಆಗಿರುವಾಗ ಭಾರತದಲ್ಲಿ ಅಪರಾಹ್ನ ೫ ಗಂ ೩೦ ಮಿ ಆಗಿರುತ್ತವೆ

ಶಿಸ್ಟ್

(ಭೂವಿ) ರೂಪಾಂತರಿತ ಶಿಲೆಯ ಒಂದು ಬಗೆ. ಇದರಲ್ಲಿ ಪದರಗಳಿದ್ದು ಅವನ್ನು ಸುಲಭವಾಗಿ ಪ್ರತ್ಯೇಕಿಸಬಹುದು. ಲಂಬಿತ ಖನಿಜಗಳ ಸಮಾಂತರ ಜೋಡಣೆಯಿಂದ ಇಂಥ ರಚನೆಗಳು ಮೈದಳೆಯುತ್ತವೆ. ಉದಾ : ಟಾಲ್ಕ್ ಶಿಸ್ಟ್. ಪತ್ರಶಿಲೆ

ಶೀತ

(ವೈ) ಮನುಷ್ಯರಿಗೆ ತಗಲುವ ಒಂದು ಸಾಂಕ್ರಾಮಿಕ ರೋಗ. ನಾಸಿಕ ಬ್ಯಾಕ್ಟೀರಿಯದಿಂದ ತಗಲಿ ಈ ರೋಗ ವೈರಸ್ ಗಳಿಂದ ಹರಡುತ್ತದೆ. ಮೂಗಿನ, ಗಂಟಲಿನ ಹಾಗೂ ಕಣ್ಣಿನ ಲೋಳೆಪೊರೆ ಉರಿಯೂತಕ್ಕೊಳಗಾಗುತ್ತದೆ. ಶೈತ್ಯ. ಥಂಡಿ. ತಂಪು

ಶೀತಕ ಯಂತ್ರ

(ತಂ) ನೋಡಿ : ರೆಫ್ರಿಜರೇಟರ್

ಶೀತಕಂಪ

(ವೈ) ಜ್ವರಕ್ಕೆ ಪೂರ್ವಭಾವಿ ಬರುವ ನಡುಕ, ಚಳಿ

ಶೀತಮುಖ

(ಪವಿ) ಮುಂದಕ್ಕೆ ಸರಿಯುತ್ತಿರುವ ತಂಗಾಳಿಯ ಮುಂಭಾಗ. ಮಳೆಯೂ ಸುರಿಯುವುದುಂಟು. ನೋಡಿ : ಶಾಖಮುಖ

ಶೀತಲ

(ಸಾ) ಕಾಸಿದ ಬಳಿಕ ಕ್ರಮೇಣ ಉಷ್ಣ ಅಳಿದ (ಪದಾರ್ಥ). ತಂಪಾದ. ತಣ್ಣಗಿರುವ ಪದಾರ್ಥ, ವಸ್ತು

ಶೀತಲ ಸಮರ

(ಸಾ) ರಾಷ್ಟ್ರ ರಾಷ್ಟ್ರಗಳ ನಡುವೆ ಪರಸ್ಪರ ಅಪಪ್ರಚಾರ, ಆರ್ಥಿಕ ಹಾನಿಯುಂಟುಮಾಡುವುದು ಮೊದಲಾದ ವನ್ನೊಳಗೊಂಡ ವೈಷಮ್ಯ. ಪ್ರಚ್ಛನ್ನ ಯುದ್ಧ. ಒಳಗುದಿ ಯುದ್ಧ

ಶೀತಲ ಸಂಲಯನ

(ಭೌ) ಪ್ರಯೋಗಾಲಯದ ಸಾಮಾನ್ಯ ಉಷ್ಣತೆಯಲ್ಲಿ ಪರಮಾಣು ಬೆಸೆತ

ಶೀತಲನ

(ತಂ) ಸಂಸ್ಕರಿಸುವುದಕ್ಕೆ ಅಥವಾ ಹೊರಹಾಕು ವುದಕ್ಕೆ ಮುನ್ನ ವಿಕಿರಣಿಸಿದ ನ್ಯೂಕ್ಲಿಯರ್ ಇಂಧನದ ಅಥವಾ ಉನ್ನತ ವಿಕಿರಣಪಟು ತ್ಯಾಜ್ಯವಸ್ತುವಿನ ಕ್ರಿಯೆಯು ಕ್ಷಯಗೊಳ್ಳುವುದು

ಶೀತವಲಯಗಳು

(ಖ) ಆರ್ಕ್ಟಿಕ್ ವೃತ್ತ ಹಾಗೂ ಉತ್ತರ ಧ್ರುವ ಇವುಗಳ ನಡುವಿನ, ಅಂತೆಯೇ ಅಂಟಾರ್ಕ್ಟಿಕ್ ವೃತ್ತ ಹಾಗೂ ದಕ್ಷಿಣ ಧ್ರುವ ಇವುಗಳ ನಡುವಿನ ಪ್ರದೇಶಗಳು. ನೋಡಿ : ವಲಯಗಳು

ಶೀರ್ಷ

(ಖ) ದೈನಂದಿನ ಚಲನೆಯಲ್ಲಿ ಆಕಾಶಕಾಯ ತಲಪುವ ಅತ್ಯುನ್ನತ ಬಿಂದು. ಶಂಕುವಿನಲ್ಲಿ ತಲದಿಂದ ಅತ್ಯಂತ ದೂರದಲ್ಲಿರುವ ಬಿಂದು

ಶೀರ್ಷ

(ಭೂವಿ) ಶಿಲಾಪದರಗಳಲ್ಲಿ ಸಂಚಯವಾದ ನೀರು ಪರ್ಯಾಯವಾಗಿ ಘನೀಕರಿಸಿ ಹಾಗೂ ದ್ರವೀಕರಿಸಿ ಶಿಲೆ ಭಂಗಗೊಂಡು, ಇಳಿಜಾರಿನಲ್ಲಿ ಜಾರಿ ಕಣಿವೆಗಳಲ್ಲಿ ಸಂಗ್ರಹ ವಾಗುವ ಶಿಲೆಯ ಚೂರುಗಳು

ಶೀರ್ಷಧಮನಿ

(ವೈ) ನೋಡಿ : ಕ್ಯರೋಟಿಡ್

ಶೀರ್ಷಮಾಪನ

(ವೈ) ಗರ್ಭಸ್ಥ ಶಿಶುವಿನ ತಲೆಯ ಗಾತ್ರವನ್ನು ವಿಕಿರಣದ ಅಥವಾ ಅತೀತ ಧ್ವನಿಯ ನೆರವಿನಿಂದ ಅಳೆಯುವುದು. ಮಾನವನ ತಲೆಬುರುಡೆಯ ಅಳತೆಗೆ ಸಂಬಂಧಿಸಿದ ವಿಜ್ಞಾನ ವಿಭಾಗ

ಶುಕ್ರಾಣುಶೂನ್ಯತೆ

(ವೈ) ವೀರ್ಯದಲ್ಲಿ ಶುಕ್ರಾಣು ಇಲ್ಲದಿರುವುದು

ಶುಕ್ಲ ಪಕ್ಷ

(ಖ) ಅಮಾವಾಸ್ಯೆಯಿಂದ ಮುಂದಿನ ಹುಣ್ಣಿಮೆ ತನಕದ ಅವಧಿ

ಶುಂಡ

(ಪ್ರಾ) ಕೀಟ, ವಲಯದೇಹಿ, ಲಾಡಿಹುಳುಗಳು ಮುಂತಾದ ಅನೇಕ ಅಕಶೇರುಕಗಳಲ್ಲಿ ನಾನಾರೂಪಗಳಲ್ಲಿರುವ ನಳಿಕೆ ಅಂಗ. ಹೀರುಕೊಳವೆ. ಸೊಂಡಿಲು

Search Dictionaries

Loading Results

Follow Us :   
  Download Bharatavani App
  Bharatavani Windows App