भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous1234567891314Next >

ರಕ್ತ

(ವೈ) ಹೃದಯದ ಸಂಕೋಚನ ವ್ಯಾಕೋಚನಗಳ ಫಲವಾಗಿ ದೇಹದ ನಾಳಗಳ ಮೂಲಕ ಸದಾ ಹರಿಯುತ್ತಿದ್ದು ಊತಕಗಳಿಗೆ ಆಕ್ಸಿಜನ್, ಪೋಷಕ ಹಾಗೂ ಹಾರ್ಮೋನ್‌ಗಳನ್ನು ತಲಪಿಸುವ ಮತ್ತು ಅವುಗಳಿಂದ ತ್ಯಾಜ್ಯ ಪದಾರ್ಥಗಳನ್ನು ವಿಸರ್ಜನಾಂಗಗಳಿಗೆ ಸಾಗಿಸುವ ಸಂಕೀರ್ಣ ರಸ. ಶರೀರದಲ್ಲಿ ಸಮ ಪ್ರಮಾಣದ ಉಷ್ಣತೆ ಇರುವಂತೆ ಮಾಡುವುದರಲ್ಲಿ ಇದರದು ಮುಖ್ಯ ಪಾತ್ರ. ಕೆಂಪು ಕಣಗಳು, ಬಿಳಿ ಕಣಗಳು, ಕಿರುಫಲಕಗಳು, (ಚಪ್ಪಟಕಗಳು) ನೀರು (೭೭.೫-೭೯%), ಪ್ರೋಟೀನ್‌ಗಳು, ಕಿಣ್ವಗಳು, ಲಿಪಿಡ್‌ಗಳು, ಹಾರ್ಮೋನ್‌ಗಳು, ರೋಗರಕ್ಷಣ ಕಾಯಗಳು, ರಕ್ತಸಕ್ಕರೆ, ವೈಟಮಿನ್‌ಗಳು ಹಾಗೂ ಇನಾರ್ಗ್ಯಾನಿಕ್ ವಸ್ತುಗಳು ಇದರ ಪ್ರಧಾನ ಘಟಕಗಳು. ಸಾಮಾನ್ಯವಾಗಿ ವಯಸ್ಕ ಮಾನವ ಶರೀರದಲ್ಲಿ ಸುಮಾರು ೬.೨ ಲೀಟರ್‌ಗಳಷ್ಟು ರಕ್ತ ಇರುತ್ತದೆ. ಇದರ ತೂಕ ಶರೀರತೂಕದ ಸುಮಾರು ಶೇ. ೫ರಷ್ಟಾಗಿರುತ್ತದೆ. ಮೂರನೇ ಒಂದು ಪಾಲಿನಷ್ಟು ರಕ್ತನಷ್ಟವಾದಾಗ, ಮರುಪೂರಣ ಮಾಡದಿದ್ದಲ್ಲಿ, ಸಾವು ಸಂಭವಿಸುತ್ತದೆ. ಆದರೂ ಯುಕ್ತ ಅಂತರಗಳಲ್ಲಿ ಅರೆಲೀಟರ್‌ನಷ್ಟು ರಕ್ತದಾನ ಮಾಡುವ ಸಾಧ್ಯತೆಯೂ ಇದೆ. ರಕ್ತ ಹೆಪ್ಪುಗಟ್ಟುವುದರಲ್ಲಿ ರಕ್ತಸ್ರಾವ ತಡೆಯುವುದರಲ್ಲಿ ಚಪ್ಪಟಕಗಳ ಪಾತ್ರ ಹಿರಿದು. ನೆತ್ತರು, ರುಧಿರ

ರಕ್ತ ಒತ್ತಡ

(ವೈ) ಶರೀರದ ಧಮನಿಗಳಲ್ಲಿ ರಕ್ತ ಪರಿಚಲನೆಯ ಕಾರಣವಾಗಿ ನಾಳ ಭಿತ್ತಿಗಳ ಮೇಲೆ ಬೀಳುವ ಒತ್ತಡ. ಹೃದಯದ ಹೃತ್ಕುಕ್ಷಿಗಳು ಸಂಕುಚಿಸಿದಾಗ ಈ ಒತ್ತಡ ಅತ್ಯಧಿಕ (ಸಿಸ್ಟಾಲಿಕ್-ಸಂಕೋಚನ-ಒತ್ತಡ). ಹೃದಯವು ರಕ್ತದಿಂದ ತುಂಬಿಕೊಳ್ಳುತ್ತಿರುವಾಗ ಈ ಒತ್ತಡ ಅತ್ಯಲ್ಪಮಟ್ಟ (ಡಯಸ್ಟಾಲಿಕ್-ವ್ಯಾಕೋಚನ-ಒತ್ತಡ)ದಲ್ಲಿ ಇರುತ್ತದೆ. ಸ್ಫಿಗ್ಮೊ ಮಾನೊಮೀಟರ್ ನಿಂದ ಇವನ್ನು ಅಳೆಯಲಾಗುತ್ತದೆ. ಆರೋಗ್ಯವಂತರಾದ ವಯಸ್ಕರಲ್ಲಿ ಇದು ಸಾಮಾನ್ಯವಾಗಿ ೧೨೦/೮೦ ಮಿಮೀ ಪಾದರಸ ಇರುತ್ತದೆ. ನೆತ್ತರೊತ್ತಡ. ನೋಡಿ: ಸಂಕೋಚನ ಒತ್ತಡ. ವ್ಯಾಕೋಚನ ಒತ್ತಡ

ರಕ್ತ ಕಣ

(ವೈ) ಸಾಮಾನ್ಯವಾಗಿ, ರಕ್ತದಲ್ಲಿ ತೇಲುತ್ತಿರುವ ಒಂದು ಕೋಶ. ಕೆಂಪು/ಬಿಳಿ (ಶ್ವೇತ) ಕಣ

ರಕ್ತ ಕಣ ಎಣಿಕೆ

(ಪ್ರಾ) ನಿರ್ದಿಷ್ಟ ಪ್ರಮಾಣದ ದುರ್ಬಲ ರಕ್ತದಲ್ಲಿರುವ ಕಣಗಳನ್ನು ಎಣಿಸುವ ಮೂಲಕ ೧ ಘನ ಮಿಲಿಮೀಟರ್ ರಕ್ತದಲ್ಲಿಯ ಕೆಂಪು ಅಥವಾ ಬಿಳಿ ಕಣಗಳ ಸಂಖ್ಯೆಯನ್ನು ಲೆಕ್ಕ ಮಾಡುವುದು

ರಕ್ತ ಕಣಕಾರಕ

(ಪ್ರಾ) ಸೈಟೊಪ್ಲಾಸಮ್‌ನಲ್ಲಿ ಕೆಂಪು ರಕ್ತಕಣದ ನ್ಯೂಕ್ಲಿಯಸ್‌ವುಳ್ಳ ಒಳಚರ್ಮದ ಭ್ರೂಣಾವಸ್ಥೆ ಕೋಶ

ರಕ್ತ ಕೊರತೆ

(ವೈ) ದೇಹದ ಒಂದು ಭಾಗಕ್ಕೆ ರಕ್ತ ಸರಬರಾಜಿನ ಕೊರತೆ. ಇದರಿಂದ ಊತಕಗಳಲ್ಲಿ ಆಕ್ಸಿಜನ್ ಪೂರೈಕೆ ಸಾಲದಾಗುತ್ತದೆ

ರಕ್ತ ಘನೀಭವನ

(ವೈ) ರಕ್ತನಾಳದಲ್ಲಿ ಅಥವಾ ಯಾವುದೇ ಅಂಗದಲ್ಲಿ ರಕ್ತ ಹೆಪ್ಪುಗಟ್ಟುವ ವ್ಯಾಧಿ

ರಕ್ತ ನಾಶ

(ವೈ) ತೀವ್ರವಾದ ರಕ್ತಹೀನತೆ, ರಕ್ತ ನಷ್ಟ

ರಕ್ತ ಪರಿಚಲನೆ

(ಜೀ) ಹೃದಯದಿಂದ ರೇಚಿಸಲ್ಪಟ್ಟ ರಕ್ತ ದೇಹದ ಅಂಗೋಪಾಂಗಗಳ ಮೂಲಕ ಚಲಿಸಿ ಮತ್ತೆ ಅಲ್ಲಿಗೆ ಫುಪ್ಪುಸ ಮಾರ್ಗವಾಗಿ ಮರಳುವ ಚಲನೆ

ರಕ್ತ ಪರೀಕ್ಷೆ

(ವೈ) ವ್ಯಾಧಿ ನಿದಾನ, ರಕ್ತವರ್ಗ ನಿರ್ಧರಣೆ ಮುಂತಾದವುಗಳ ಸಲುವಾಗಿ ನಡೆಸುವ ತಪಾಸಣೆ

ರಕ್ತ ಪ್ರವಾಹ

(ವೈ) ಪರಿಚಲನೆಯಲ್ಲಿರುವ ರಕ್ತ

ರಕ್ತ ಬ್ಯಾಂಕ್

(ವೈ) ವ್ಯಕ್ತಿಗೆ ಪೂರಣ ಮಾಡುವ ಸಲುವಾಗಿ ರಕ್ತವನ್ನು ಸಂಗ್ರಹಿಸಿ ಸಂಸ್ಕರಿಸಿಟ್ಟಿರುವ ಶೇಖರಣ ಕೇಂದ್ರ. ಬ್ಲಡ್‌ಬ್ಯಾಂಕ್

ರಕ್ತ ಮೂತ್ರ

(ವೈ) ನೋಡಿ: ಹೀಮಚೂರಿಯ

ರಕ್ತ ವರ್ಗಗಳು

(ವೈ) ವ್ಯಕ್ತಿಗಳ ರಕ್ತದಲ್ಲಿಯ ಗುಣಗಳನ್ನು (ಅದರಲ್ಲೂ ವಿಶಿಷ್ಟ ಪ್ರತಿಜನಕಗಳು ಇರುವುದನ್ನು ಇಲ್ಲದಿರುವುದನ್ನು) ಆಧರಿಸಿ, ಮಾಡಿರುವ ನಾಲ್ಕು ಮುಖ್ಯ ಗುಂಪುಗಳು: A, B, AB ಮತ್ತು O. ವ್ಯಕ್ತಿಗೆ ರಕ್ತಪೂರಣ ಮಾಡುವ ಮುನ್ನ ಆತನ ರಕ್ತವರ್ಗ ಪೂರಕ ರಕ್ತವರ್ಗದ ಜೊತೆ ಹೊಂದುವುದೇ ಎಂಬುದನ್ನು – ಸಾಮಂಜಸ್ಯ ಪರೀಕ್ಷೆ – ಖಾತ್ರಿ ಮಾಡಿಕೊಳ್ಳುವುದು ಅತಿ ಮುಖ್ಯ. A ಗುಂಪಿನ ಕೆಂಪು ಕೋಶಗಳಲ್ಲಿ, A-ಪ್ರತಿಜನಕಗಳೂ, B ಗುಂಪಿನವುಗಳಲ್ಲಿ B-ಪ್ರತಿಜನಕಗಳೂ ಇರುತ್ತವೆ. O ಗುಂಪಿನವುಗಳಲ್ಲಿ ಯಾವ ಪ್ರತಿಜನಕಗಳೂ ಇರುವುದಿಲ್ಲ. ಅದೇ ರೀತಿ A ಗುಂಪಿನ ವ್ಯಕ್ತಿಗಳಲ್ಲಿ B-ವಿರುದ್ಧ ಪ್ರತಿಕಾಯಗಳೂ, B ಗುಂಪಿನವರಲ್ಲಿ A-ವಿರುದ್ಧ ಪ್ರತಿಕಾಯಗಳೂ, O ಗುಂಪಿನವರಲ್ಲಿ A-ವಿರುದ್ಧ ಹಾಗೂ B-ವಿರುದ್ಧ ಪ್ರತಿಕಾಯಗಳೂ ಇರುತ್ತವೆ. AB ಗುಂಪಿನವರಲ್ಲಿ ಈ ಯಾವ ವಿರೋಧಿ ಪ್ರತಿಕಾಯಗಳೂ ಇರುವುದಿಲ್ಲ. ಆದ್ದರಿಂದ ರಕ್ತ ಪೂರಣ ಮಾಡುವ ಮುನ್ನ ಒಂದು ವೃಂದದ ಕೆಂಪುಕೋಶಗಳಿರುವ ರಕ್ತವನ್ನು ಅವುಗಳ ವಿರುದ್ಧದ ಪ್ರತಿಕಾಯಗಳಿರುವ ವ್ಯಕ್ತಿಗೆ ನೀಡದಿರುವಂತೆ ಖಾತರಿಪಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಹೇಳುವುದಾದರೆ, A ಹಾಗೂ B ಗುಂಪಿನವರ ರಕ್ತವನ್ನು ಅದೇ ಗುಂಪಿನ ಅಥವಾ AB ಗುಂಪಿನ ಜನರಿಗೆ ನೀಡಬಹುದು. ಆದರೆ ಈ ಗುಂಪುಗಳ ಜನರೇ ತಮ್ಮ ಗುಂಪಿನ ಅಥವಾ O ಗುಂಪಿನ ರಕ್ತವನ್ನಷ್ಟೆ ಪಡೆಯಬಲ್ಲರು. ಆದರೆ ಅವರ ರಕ್ತವನ್ನು ಅದೇ ಗುಂಪಿನವರಿಗಷ್ಟೆ ನೀಡಬಹುದು. O ಗುಂಪಿನ ಜನರ ರಕ್ತವನ್ನು ಯಾರಿಗೂ ನೀಡಬಹುದು. ಆದರೆ ಅವರೇ ಅವರ ಗುಂಪಿನವರ ರಕ್ತವನ್ನಷ್ಟೆ ಪಡೆಯಬಲ್ಲರು. ಹೀಗೆ O ಗುಂಪಿನ ರಕ್ತವಿರುವವರನ್ನು ‘ಸಾರ್ವತ್ರಿಕ ದಾನಿ’ಗಳೆಂದೂ, AB ಗುಂಪಿನ ರಕ್ತವಿರುವವರನ್ನು ‘ಸಾರ್ವತ್ರಿಕ ಗ್ರಾಹಿ’ಗಳೆಂದೂ ಹೇಳಲಾಗುತ್ತದೆ. ಇಂದಿನ ದಿನಗಳಲ್ಲಿ ಸಾರ್ವತ್ರಿಕ ದಾನಿ ಅಥವಾ ಸಾರ್ವತ್ರಿಕ ಗ್ರಾಹಿ ಎಂದು ಸೈದಾಂತಿಕವಾಗಿ ಮಾತ್ರ ಪರಿಗಣಿಸಲಾಗುತ್ತದೆ. ಪ್ರಾಯೋಗಿಕ ವಾಗಿ ಇವುಗಳಿಗೆ ಬೆಲೆಯಿಲ್ಲ. ಏಕೆಂದರೆ ರಕ್ತವರ್ಗೀಕರಣ ವಿಧಾನಗಳು ಅಸಂಖ್ಯ. ಎಬಿಒ ಹಾಗೂ ಆರ್.ಎಚ್ ವರ್ಗೀಕರಣ ಸರಿಯಿದ್ದ ಮಾತ್ರಕ್ಕೆ ಉಳಿದ ಎಲ್ಲಾ ವರ್ಗೀಕರಣ ಸರಿಯಿರಬೇಕೆಂಬ ನಿಯಮವಿಲ್ಲ. ಹಾಗಾಗಿ ದಾನಿ ಹಾಗೂ ಗ್ರಾಹಿಯ ರಕ್ತವನ್ನು ಬೆರೆಸಿ ಸೂಕ್ಷ್ಮದರ್ಶಕ ದಡಿಯಲ್ಲಿ ಅಧ್ಯಯನ ಮಾಡಲಾಗುತ್ತದೆ. ಆಗ ಎರಡೂ ರಕ್ತಕಣಗಳ ನಡುವೆ ಸಾಮಂಜಸ್ಯ ಇರಬೇಕು. ರಕ್ತಕಣಗಳ ನಡುವೆ ವಿರುದ್ಧ ಕ್ರಿಯೆ ನಡೆದು ರಕ್ತಕಣಗಳು ಉಂಡೆಗಟ್ಟಬಾರದು. ಉಂಡೆಗಟ್ಟದಿದ್ದಾಗ ಮಾತ್ರ ಆ ರಕ್ತವನ್ನು ಪೂರಣದಲ್ಲಿ ಬಳಸಲಾಗುತ್ತದೆ

ರಕ್ತ ಸಾರ

(ವೈ) ನೋಡಿ: ವಸೆ

ರಕ್ತ ಸ್ತಂಭನ

(ವೈ) ನೋಡಿ: ಹೀಮೊಸ್ಟ್ಯಾಸಿಸ್

ರಕ್ತ ಸ್ರಾವ

(ವೈ) ರಕ್ತನಾಳ ಒಡೆದು ರಕ್ತ ಬಹಳವಾಗಿ ಹೊರ ಸುರಿಯುವುದು

ರಕ್ತಗತ

(ಪ್ರಾ) ಜಠರದಲ್ಲಿ ಪಚನವಾದ ಆಹಾರದಿಂದ ಆಹಾರ ಸಾರವನ್ನು ಅಥವಾ ಅನ್ನಕ್ಷೀರವನ್ನು ಚಿಕ್ಕ ಕರುಳಿನಲ್ಲಿರುವ ಲೋಮಗಳು ಹೀರಿ ರಕ್ತಕ್ಕೆ ಊಡುವುದು

ರಕ್ತದ ಇಳಿಯೊತ್ತಡ

(ವೈ) ರಕ್ತದ ಒತ್ತಡ ಸಾಮಾನ್ಯವಾಗಿರುವುದಕ್ಕಿಂತ (೧೨೦/೮೦ ಮಿಮೀ. ಪಾದರಸ ಕ್ಕಿಂತ) ಕಡಿಮೆ ಇರುವ ಸ್ಥಿತಿ. ಈ ಸ್ಥಿತಿ ಜೀವಕ್ಕೇ ಅಪಾಯಕಾರಿ

ರಕ್ತದಲ್ಲಿ ಸಕ್ಕರೆ

(ವೈ) ರಕ್ತದಲ್ಲಿ ಕಾರ್ಬೊಹೈಡ್ರೇಟ್‌ನ, ಪ್ರಧಾನವಾಗಿ ಗ್ಲೂಕೋಸ್‌ನ ಮಟ್ಟ. ಉಪವಾಸ ಸ್ಥಿತಿಯಲ್ಲಿ (ಬರಿ ಹೊಟ್ಟೆಯಲ್ಲಿ) ಇದು ಸಾಮಾನ್ಯವಾಗಿ ೩.೨ mmol / lರಿಂದ ೫.೨ mmol / lರ ನಡುವೆ ಇರುತ್ತದೆ
< previous1234567891314Next >

Search Dictionaries

Loading Results

Follow Us :   
  Download Bharatavani App
  Bharatavani Windows App