भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರೆಗ್ಯುಲೇಟರ್

(ತಂ) ಪೂರ್ವನಿರ್ಧರಿತ ಮಟ್ಟದಲ್ಲಿ ಅಪೇಕ್ಷಿತ ಪ್ರಮಾಣದ ವೋಲ್ಟೇಜ್, ವಿದ್ಯುತ್ ಪ್ರವಾಹ, ಆವೃತ್ತಿ ಅಥವಾ ಯಾಂತ್ರಿಕ ಗುಣವನ್ನು ಉಳಿಸಿಕೊಂಡು ಬರುವ ಸಾಧನ ಅಥವಾ ಮಂಡಲ. ಕ್ರಮಕಾರಕ

ರೆಂಚ್

(ಗ) ಬಲವನ್ನೂ ಅದರ ದಿಶೆಗೆ ಅಕ್ಷವಿರುವ ಬಲಯುಗ್ಮವನ್ನೂ ಒಳಗೊಂಡಿರುವ ವ್ಯವಸ್ಥೆ. ಈ ಬಲಕ್ಕೆ ರೆಂಚಿನ ತೀವ್ರತೆಯೆಂದೂ ಬಲಯುಗ್ಮದ ಮಹತ್ತ್ವ ಮತ್ತು ಬಲ ಇವೆರಡರ ನಿಷ್ಪತ್ತಿಗೆ ಸೂತ್ರಾಂತರವೆಂದೂ ಹೆಸರು. (ತಂ) ತಿರುಪು ಮೊದಲಾದವನ್ನು ಹಿಡಿದು ತಿರುಗಿಸುವ, ತಿರುಪನ್ನು ಸಡಿಲ ಅಥವಾ ಬಿಗಿಮಾಡುವ, ಸಲಕರಣೆ. ಬಿಲ್ಮುಡಿಕೆ, ತಿರುಚುಳಿ

ರೆಟಿಕ್ಯುಲಿನ್

(ರ) ಪ್ರಾಣಿಗಳ ಶರೀರದಲ್ಲಿರುವ ಮೃದ್ವಸ್ಥಿಯಂಥ ವಸ್ತು. ಇದರ ಮೇಲೆ ಶಾಖ ಅಥವಾ ರಾಸಾಯನಿಕ ವಸ್ತುಗಳ ಪರಿಣಾಮ ಕಡಿಮೆ. ಕೆಲವು ವೇಳೆ ಇದೇ ಮೃದ್ವಸ್ಥಿಯಾಗಿ ಪರಿವರ್ತಿತವಾಗುತ್ತದೆ

ರೆಟ್ರೊವೈರಸ್

(ಜೀ) ಆರ್‌ಎನ್‌ಎಯನ್ನು ಆನುವಂಶೀಕ ವಸ್ತುವಾಗುಳ್ಳ ವೈರಸ್. ಇದು ತನ್ನಲ್ಲಿನ ಆರ್‌ಎನ್‌ಎಯನ್ನು ರಿವರ್ಸ್ ಟ್ರಾನ್ಸ್‌ಕ್ರಿಪ್ಟೇಸ್ (ನೋಡಿ) ಮೂಲಕ ಆತಿಥೇಯ ಜೀವಕೋಶದಲ್ಲಿ ಡಿಎನ್‌ಎಯನ್ನಾಗಿ ಪರಿವರ್ತಿಸುತ್ತದೆ. ಇದರಿಂದ ಅದಕ್ಕೆ ಆತಿಥೇಯ ಡಿಎನ್‌ಎಯೊಂದಿಗೆ ಒಂದುಗೂಡಲು ಸಾಧ್ಯವಾಗುತ್ತದೆ. ‘ಏಯ್ಡ್ಸ್’ರೋಗಕ್ಕೆ ಕಾರಣವಾದ ವೈರಸ್ ಒಂದು ರೆಟ್ರೊವೈರಸ್. ಜೈವಿಕ ತಂತ್ರಜ್ಞಾನದಲ್ಲಿ ರೆಟ್ರೊವೈರಸ್ ಗಳನ್ನು ವಾಹಕಗಳಾಗಿ ಬಳಸಲಾಗುತ್ತದೆ

ರೆನಿನ್

(ರ) ಸ್ತನಿಗಳ ಉದರದ ಒಳಪದರಲ್ಲಿರುವ ಕೋಶಗಳು ಸ್ರವಿಸಿ ಹಾಲು ಗರಣೆ ಕಟ್ಟುವಂತೆ ಮಾಡುವ ಕಿಣ್ವ. ಹಾಲಿನ ವಿಲೇಯ ಪ್ರೋಟೀನ್ ಮೇಲೆ ಕ್ರಿಯೆ ಜರಗಿಸಿ ಇದು ಅದನ್ನು ಅವಿಲೇಯ ರೂಪಕ್ಕೆ ಪರಿವರ್ತಿಸುತ್ತದೆ. ಪ್ರೋಟೀನ್ ಗಳನ್ನು ಅರಗಿಸುವ ಕಿಣ್ವಗಳು ಕ್ರಿಯೆ ಜರಗಿಸಲು ಸಾಲುವಷ್ಟು ಕಾಲ ಹಾಲು ಉದರದಲ್ಲೇ ಇರುವುದನ್ನು ಇದು ಖಚಿತಪಡಿಸುತ್ತದೆ

ರೆಪ್

(ಭೌ) ಅಯಾನೀಕಾರಕ ವಿಕಿರಣದ ಏಕಮಾನ. ಒಂದು ಗ್ರಾಮ್ ಮೃದುಊತಕ ೯೩ ಎರ್ಗ್‌ಗಳಷ್ಟು ಶಕ್ತಿ ಹೀರಿಕೊಳ್ಳುವಂತೆ ಮಾಡುವ ಪ್ರಮಾಣಕ್ಕೆ ಸಮ. ರಾಂಟ್ಜೆನ್ (r) ಈಕ್ವಿವಲೆಂಟ್ (e), ಫಿಸಿಕಲ್ (p) ಎಂಬುದರ ಸಂಕ್ಷಿಪ್ತರೂಪ

ರೆಪ್ಪೆ

(ಪ್ರಾ) ಹೆಚ್ಚಿನ ಕಶೇರುಗಳಲ್ಲಿ ಕಣ್ಣುಗುಡ್ಡೆಯ ಮೇಲು ಮತ್ತು ಕೆಳ ಭಾಗಗಳಲ್ಲಿರುವ, ಅದನ್ನು ಮುಚ್ಚಲು ಹಾಗೂ ಅದಕ್ಕೆ ರಕ್ಷಣೆ ಒದಗಿಸಲು ಅನುವಾಗುವ, ಚಲನಶೀಲ ಚರ್ಮಾವರಣ

ರೆಪ್ಪೆಯುರಿತ

(ವೈ) ಎವೆ ಅಂಚಿನಲ್ಲಿ ಊತದ ಪರಿಣಾಮ

ರೆಫ್ಯೂಜಿಯಮ್

(ಭೂವಿ) ಇಡೀ ಪ್ರದೇಶವೊಂದರಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸಿದಾಗಲೂ ಸ್ಥಳೀಯ ಅನುಕೂಲಕರ ಸ್ಥಿತಿಗಳಿಂದಾಗಿ ಜೀವಿ ಪ್ರಭೇದಗಳು ಪಾರಾಗಿ ಉಳಿದುಕೊಂಡಿರುವ ಸ್ಥಳ. ಉದಾಹರಣೆಗೆ, ಹಿಮಯುಗದಲ್ಲಿ ಹಿಮಾನೀಕರಣದಿಂದ ಪಾರಾದ ಸ್ಥಳ. ಬೇಲಿಯ ಪೊದೆಸಾಲು

ರೆಫ್ರಿಜರೇಟರ್

(ತಂ) ಯಾಂತ್ರಿಕ ಅಥವಾ ಶಾಖ ಶಕ್ತಿಯನ್ನು ಉಪಯೋಗಿಸಿಕೊಂಡು ಉಷ್ಣತೆಯನ್ನು ತಗ್ಗಿಸಿ, ಕಡಿಮೆ ಉಷ್ಣತೆಯನ್ನು ಉಳಿಸಿಕೊಂಡು ಬರುವ ಶಾಖ ನಿರೋಧಕ ಆವರಣವುಳ್ಳ ಯಂತ್ರ. ಆಹಾರ ಪದಾರ್ಥಗಳು ಹೆಚ್ಚುಕಾಲ ಕೆಡದಂತೆ ಇರಿಸಲು ಉಪಯುಕ್ತ. ಶೀತಕಯಂತ್ರ

ರೆಮ್

(ಭೌ) ರಾಂಟ್ಜೆನ್ (r), ಈಕ್ವಿವಲೆಂಟ್ (e), ಮ್ಯಾನ್ (m) ಎಂಬುದರ ಹ್ರಸ್ವರೂಪ. ಅಯಾನೀಕಾರಕ ವಿಕಿರಣದ ಏಕಮಾನ. ಉನ್ನತ ವೋಲ್ಟೇಜ್‌ನ ಎಕ್ಸ್-ಕಿರಣಗಳ ಒಂದು ರಾಂಟ್ಜೆನ್ ಪ್ರಮಾಣವು ಮನುಷ್ಯರಲ್ಲಿ ಉಂಟುಮಾಡುವ ಹಾನಿಗೆ ಸಮವಾದಷ್ಟು ಹಾನಿಯನ್ನು ಉಂಟುಮಾಡುವ ಅಯಾನೀಕಾರಕ ವಿಕಿರಣ ಪ್ರಮಾಣಕ್ಕೆ ಸಮ

ರೆಸಿಲಿಯೆನ್ಸ್

(ತಂ) ತುಯ್ತಕ್ಕೊಳಗಾದ ಸ್ಥಿತಿಸ್ಥಾಪಕ ವಸ್ತುವಿನಲ್ಲಿ ನಿಹಿತವಾಗಿರುವ ಶಕ್ತಿ. (ವೈ) ಕಾಯಿಲೆ, ದುಗುಡ, ದುರ್ಗತಿ ಮೊದಲಾದವುಗಳಿಂದ ಚೇತರಿಸಿಕೊಳ್ಳುವಿಕೆ

ರೇ

(ಪ್ರಾ) ಷಾರ್ಕ್ ಜಾತಿಗೆ ಸೇರಿದ ಅಗಲವಾದ ಚಪ್ಪಟೆಯ ಒಡಲುಳ್ಳ ಎದೆಭಾಗದಲ್ಲಿ ಈಜುರೆಕ್ಕೆಗಳು, ಉದ್ದವೂ ಮೃದುವೂ ಆದ ಬಾಲ, ಇರುವ ಮೃದ್ವಸ್ಥಿಭರಿತ ದೊಡ್ಡ ಸಮುದ್ರಮೀನು ಜಾತಿ. (ಸ) ಸೇವಂತಿಗೆ ಮೊದಲಾದ ಸಂಕೀರ್ಣ ಪುಷ್ಪದ ಹೊರಸುತ್ತು

ರೇಕಿಸ್

(ವೈ) ಬೆನ್ನು ಮೂಳೆ, ಬೆನ್ನುಹುರಿ, ಬೆನ್ನುಕಂಬ. ಪಿಚ್ಛಾಕ್ಷ. (ಸ) ಗರಿಯ ಕಾಂಡ. ಅಡ್ಡ ಎಳೆ ಇರುವ ಭಾಗ

ರೇಕು

(ತಂ) ೧. ಬಡಿದು ಅಥವಾ ಉರುಳೆಯಾಡಿಸಿ ಮಾಡಿದ ಲೋಹದ (ಸಾಮಾನ್ಯವಾಗಿ ತಾಮ್ರ, ಚಿನ್ನ, ತವರ ಮೊದಲಾದವು ಗಳ) ತೆಳುಹಾಳೆ. ೨. ಕನ್ನಡಿಯ ಹಿಂಭಾಗದಲ್ಲಿ ಹಚ್ಚಿದ ತವರ ಮತ್ತು ಪಾದರಸ ಮಿಶ್ರಣದ ಲೇಪ. ೩. ರತ್ನಗಳ ಹೊಳಪನ್ನು ವೈದೃಶ್ಯದಿಂದ ಹೆಚ್ಚಿಸುವುದಕ್ಕಾಗಿ ಅಥವಾ ಅದಕ್ಕೆ ಬಣ್ಣ ಕೊಡುವುದಕ್ಕಾಗಿ ಅವುಗಳ ಹಿಂದೆ ಇಡುವ ವರ್ತಿರೇಕು

ರೇಖಾಖಂಡ

(ಗ) ವಕ್ರರೇಖೆಯ ನಿರ್ದಿಷ್ಟ ಭಾಗ

ರೇಖಾಚಿತ್ರ

(ಸಂ) ದತ್ತಾಂಶದಲ್ಲಿ ಮೌಲ್ಯಗಳ ಪರಿಮಾಣಗಳನ್ನು ಅವುಗಳ ಎತ್ತರಕ್ಕೆ ಅನುಪಾತೀಯವಾಗಿರುವಂಥ ರೇಖೆಗಳ ಮೂಲಕ ನಿರೂಪಿಸುವುದು. ಲಂಬಗೆರೆಗಳು ಇವಕ್ಕೆ ಪರ್ಯಾಯ ವಿಧಾನ

ರೇಖಾರೋಹಿತ

(ಭೌ) ಸಾಪೇಕ್ಷವಾಗಿ ಅತ್ಯಂತ ಸ್ಫುಟವಾದ ರೇಖೆಗಳಿಂದ ಕೂಡಿದ ರೋಹಿತ. ಈ ಗುಣದಿಂದಾಗಿ ಇದು ಪಟ್ಟೆ ರೋಹಿತ ಹಾಗೂ ಸಂತತ ರೋಹಿತಗಳಿಂದ ಭಿನ್ನ. ಅತ್ಯುಜ್ವಲ ಅನಿಲಗಳ ಅಥವಾ ಬಾಷ್ಪಗಳ ಪರಮಾಣುಗಳಲ್ಲಿ ರೇಖಾರೋಹಿತ ಕಾಣಿಸಿಕೊಳ್ಳುತ್ತದೆ

ರೇಖಾಂಶವೃತ್ತ

(ಗ) ಗೋಳಾಕ್ಷದ ಮೂಲಕ ಸಾಗುವಂತೆ ರಚಿಸಿದ ಸಮತಲವು ಗೋಳದ ಮೇಲ್ಮೈ ಛೇದಿಸುವ ವೃತ್ತ. ನೋಡಿ: ಅಕ್ಷಾಂಶ ಮತ್ತು ರೇಖಾಂಶ

ರೇಖಿತ ತಲ

(ಗ) ಚಲಿಸುವ ಸರಳರೇಖೆ ಉತ್ಪಾದಿಸ ಬಹುದಾದ ಮೇಲ್ಮೆ. ಉತ್ಪಾದಕ ಸರಳರೇಖೆಗೆ ಜನಕರೇಖೆ ಎಂದು ಹೆಸರು. ಉದಾ: ಲಂಬವೃತ್ತೀಯ ಶಂಕು. ಊರ್ಧ್ವರೇಖೆ VO ಜೊತೆ ನಿಯತಕೋನವಿರುವಂತೆ ಸ್ಥಿರಬಿಂದು V ಕುರಿತು ಚಲಿಸುವ ಸರಳರೇಖೆ ಶಂಕುವಿನ ಮೇಲ್ಮೈಯನ್ನು ರೇಖಿಸುವುದು

Search Dictionaries

Loading Results

Follow Us :   
  Download Bharatavani App
  Bharatavani Windows App