भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರದ್ದುಗೊಳಿಸು

(ಗ) ಗಣಿತ ನಿಯಮಾನುಸಾರ ಹೊಡೆದು ಹಾಕು. ನಿರ್ಮೂಲಿಸು

ರಂಧ್ರ

(ಭೌ) ಸ್ಫಟಿಕೀಯ ಅರೆವಾಹಕದ ವೇಲೆನ್ಸ್ ರಚನೆಯಲ್ಲಿ ಎಲೆಕ್ಟ್ರಾನ್ ಇಲ್ಲದ ರಂಧ್ರ. ಈ ತೆರಪನ್ನು ಎಲೆಕ್ಟ್ರಾನ್‌ಗಳು ತುಂಬಿದಾಗ ಹೊಸ ತೆರಪುಗಳು ಹುಟ್ಟಿಕೊಂಡು ‘ತೆರಪು ವಹನ’ ಸ್ಥಿತಿ ಉಂಟಾಗುತ್ತದೆ. ಆದ್ದರಿಂದ ರಂಧ್ರವೊಂದು ಧನಾತ್ಮಕ ವಿದ್ಯುದಾವಿಷ್ಟ ಕಣ ಹಾಗೂ ಧನಾತ್ಮಕ ರಾಶಿಯುಳ್ಳ ಚಲನಶೀಲ ತೆರಪು ಎಂದು ಭಾವಿಸಬಹುದು. ಹೀಗೆ ಅದು ಗಣಿತೀಯವಾಗಿ ಪಾಸಿಟ್ರಾನ್‌ಗೆ ಸಮಾನವಾದುದು. ತೆರಪು, ಕುಳಿ, ವಿವರ, ಹೋಲ್

ರಬ್ಬರ್

(ರ) ಹಿವಿಯ ಬ್ರಾಸಿಲಿಯೆನ್‌ಸಿಸ್ ಮರದ (ಈ ಮರ ಮಧ್ಯ ಹಾಗೂ ದಕ್ಷಿಣ ಅಮೆರಿಕ ಮೂಲದ್ದು. ೧೯ನೆಯ ಶತಮಾನದಿಂದೀಚೆಗೆ ಆಗ್ನೇಯ ಏಷ್ಯದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.) ಹಾಲಿನಿಂದ ತಯಾರಿಸುವ ಸ್ಥಿತಿಸ್ಥಾಪಕ ಗುಣವುಳ್ಳ ಒಂದು ಘನವಸ್ತು. ಈ ಕಚ್ಚಾ ನೈಸರ್ಗಿಕ ರಬ್ಬರ್ ಪ್ರಮುಖವಾಗಿ ಪಾಲಿಐಸೊಪ್ರೀನ್‌ನ ಸಿಸ್-ರೂಪದಲ್ಲಿ ಇರುತ್ತದೆ. (CH2:C(CH3):CH.CH2)n. ಇದೊಂದು ಹೈಡ್ರೊಕಾರ್ಬನ್ ಪಾಲಿಮರ್. ಕಚ್ಚಾ ರಬ್ಬರನ್ನು ಇತರ ಘಟಕಗಳೊಂದಿಗೆ ಮಿಶ್ರಿಸಿ ಅನಂತರ ಗಂಧಕ ಹಾಗೂ ಉತ್ಕರ್ಷಕಗಳೊಂದಿಗೆ ಕಾಸಿ ಅಚ್ಚುಗಳಲ್ಲಿ ವಲ್ಕನೀಕರಿಸುವ ಮೂಲಕ ಸಾಮಾನ್ಯವಾಗಿ ಎಲ್ಲ ರಬ್ಬರ್ ಪದಾರ್ಥಗಳನ್ನೂ ತಯಾರಿಸಲಾಗುತ್ತದೆ. ಕಾಸಿದಾಗ ರಬ್ಬರ್ ೧೬೦0ಸೆನಲ್ಲಿ ಮೃದುವಾಗುತ್ತದೆ ಮತ್ತು ೨೨೦0ಸೆನಲ್ಲಿ ಕರಗುತ್ತದೆ. ಸರಳ ಅಣುಗಳ ಪಾಲಿಮರ್ ಇಲ್ಲವೇ ಸಹಪಾಲಿಮರ್‌ಗಳಿಂದ ಬ್ಯುಟಿಲ್ ರಬ್ಬರ್, ನಿಯೊಪ್ರಿನ್, ನೈಟ್ರೇಟ್ ರಬ್ಬರ್, ಸಿಲಿಕಾನ್ ರಬ್ಬರ್ ಇತ್ಯಾದಿ ಸಂಶ್ಲೇಷಿತ ರಬ್ಬರ್ ತಯಾರಿಸಲಾಗುತ್ತದೆ. ಜನ್ಯನಾಮ ಎಲಾಸ್ಟೊಮರ್

ರವೆಗಣ್ಣು

(ವೈ) ಕಂಜಂಕ್ಟೈವವನ್ನೂ ಕಣ್ಣಿನ ಎವೆಗಳನ್ನೂ ಬಾಧಿಸುವ ತೀವ್ರ ಸೋಂಕು ಬೇನೆ. ಗುಂಗುರುಗಳಿಂದ ಸೋಂಕು ಹಬ್ಬುತ್ತದೆ. ಎವೆಗಳ ಒಳಭಾಗದಲ್ಲಿ ಪುಟ್ಟ ಗುಬುಟುಗಳೆದ್ದು ದೃಷ್ಟಿಮಾಂದ್ಯಕ್ಕೂ ಕಾರಣವಾಗಬಹುದು. ಸೋಂಕುಕಾರಕ ಜೀವಿ ಕ್ಲಾಮೀಡಿಯಲ್ ಟ್ರ್ಯಾಕೊಮೈಟಿಸ್. ಕಣ್ಣು ರವೆ ರೋಗ

ರಸ

(ಸ) ಸಸ್ಯದ ದಾರು, ಫ್ರೊಲೋಯೆಮ್, ಕೋಶ ಅಥವಾ ಕುಹರದಲ್ಲಿರುವ ಜಲೀಯ ದ್ರಾವಣ. ಸಸ್ಯಕ್ಕೆ ಗಾಸಿ ಮಾಡಿದಾಗ ಹೊರಸೂಸುತ್ತದೆ. ಹಾಲು, ಅಂಟು. ಉದಾ : ರಬ್ಬರ್

ರಸಗಳು

(ಸ) ಸಸ್ಯಕೋಶಗಳ ಅಥವಾ ರಚನೆಗಳ ದ್ರವ ಭಾಗ. (ಪ್ರಾ) ಪ್ರಾಣಿಯ ದೇಹದ ಅಥವಾ ವಸ್ತುವಿನ ರಸ ಭಾಗ. (ವೈ) ಮನುಷ್ಯನ ಭೌತ ಮತ್ತು ಮಾನಸಿಕ ಗುಣಗಳನ್ನು ನಿರ್ಧರಿಸು ವುವೆಂದು ನಂಬಲಾಗಿದ್ದ ರಕ್ತ, ಶ್ಲೇಷ್ಮ, ಹರಿತ ಪಿತ್ತ ಮತ್ತು ಕೃಷ್ಣ ಪಿತ್ತಗಳೆಂಬ ನಾಲ್ಕು ಧಾತುಗಳು. (ತಂ) ಎಂಜಿನ್, ವಿದ್ಯುತ್ ತಂತಿ ಮುಂತಾದವುಗಳಲ್ಲಿ ಬಳಸುವ ಪೆಟ್ರೋಲ್ ಅಥವಾ ವಿದ್ಯುತ್ತು

ರಸಗೊಬ್ಬರ

(ಸಾ) ಮಣ್ಣನ್ನು ಫಲವತ್ತುಗೊಳಿಸಲು ಅದಕ್ಕೆ ಸೇರಿಸುವ ನೈಸರ್ಗಿಕ ಅಥವಾ ಸಂಶ್ಲೇಷಿತ ಪದಾರ್ಥ. ಸಸ್ಯಗಳನ್ನು ಫಲವತ್ತುಗೊಳಿಸಲು ಸಹಕಾರಿಯಾದ ಕೀಟಗಳಿರುವ ಗೊಬ್ಬರ

ರಸಚಿಕಿತ್ಸೆ

(ವೈ) ನೋಡಿ: ರಾಸಾಯನಿಕ ಚಿಕಿತ್ಸೆ

ರಸಚಿತ್ರಣ

(ತಂ) ನೋಡಿ: ರಾಸಾಯನಿಕ ಚಿತ್ರಣ

ರಸದಾರು

(ಸ) ಮರ ಅಥವಾ ಕುರುಚಲು ಗಿಡಗಳ ಹೊರ ಭಾಗದ ಎಳೆಯ ದಾರು. ನಸುಕು ಬಣ್ಣ. ಜೀವರಸ ಒಯ್ಯುತ್ತಿರುವ ಜೀವಂತ ಪ್ಯಾರೆಂಕೈಮ ಕೋಶಗಳನ್ನು ಒಳಗೊಂಡಿರುವುದು

ರಸದೀಪ್ತಿ

(ರ) ರಾಸಾಯನಿಕ ಕ್ರಿಯೆ ಜರಗುತ್ತಿರುವಾಗ ಹೊಮ್ಮುವ ಉಷ್ಣರಹಿತ ಮಂದ ಬೆಳಕು. ಉದಾ: ಬಿಳಿರಂಜಕ ಕತ್ತಲಲ್ಲಿ ಹೊಳೆಯುವುದು

ರಸವಿದ್ಯೆ

(ತಂ) ಪ್ರಾಚೀನ ಕಾಲದ ರಸಾಯನ ವಿಜ್ಞಾನ; ಸಾಮಾನ್ಯ ಲೋಹಗಳನ್ನು ಚಿನ್ನವಾಗಿ ಪರಿವರ್ತಿಸುವುದು, ಸಕಲ ರೋಗಗಳಿಗೂ ಸಂಜೀವಿನಿಯನ್ನು ಕಂಡುಹಿಡಿಯುವುದು, ಮನುಷ್ಯನ ಆಯುಸ್ಸನ್ನು ಹೆಚ್ಚಿಸುವುದು – ಇದು ಈ ವಿದ್ಯೆಯ ಉದ್ದೇಶವಾಗಿದ್ದಿತು. ಇದು ಈಡೇರದಿದ್ದರೂ ಈ ಪ್ರಯೋಗಗಳು ಆಧುನಿಕ ರಸಾಯನ ವಿಜ್ಞಾನದ ಆಗಮನಕ್ಕೆ ಸಹಕಾರಿಗಳಾದವು

ರಸವಿಭಜನೆ

(ರ) ರಾಸಾಯನಿಕಗಳಿಂದ ಪ್ರಾಣಿ ಮತ್ತು ಸಸ್ಯ ಪದಾರ್ಥಗಳ ವಿಘಟನೆ, ಕೊಳೆಯುವಿಕೆ ನಶಿಸುವಿಕೆ. ಜೀವಂತ ಕೋಶಗಳ ನಾಶಕ್ಕೂ ಇದು ಅನ್ವಯ. ಉದಾ : ಕ್ಲೋರಿನ್ ರಾಸಾಯನಿಕದಿಂದ ಬ್ಯಾಕ್ಟೀರಿಯ ಜೀವಕೋಶ ನಾಶ. ರಸಲಯನ

ರಸವಿರೇಚಕ

(ರ) ನೋಡಿ: ಕ್ಯಾಲೊಮೆಲ್

ರಸಶೋಷಣೆ

(ರ) ಇದೊಂದು ಅವಿಪರ್ಯಯ ಶೀಲ ಅಧಿಶೋಷಣೆ. ಅವಶೋಷಿತ ತಲವನ್ನು ರಾಸಾಯನಿಕ ಬಲಗಳು ವಸ್ತುವಿನ ಮೇಲೆ ಬಿಗಿಯಾಗಿ ಹಿಡಿದಿಡುತ್ತವೆ. ರಾಸಾಯನಿಕ ಲೇಪನ. ರಸಚೋಷಣೆ

ರಸಸಂಶ್ಲೇಷಣೆ

(ರ) ನೋಡಿ : ರಾಸಾಯನಿಕ ಸಂಶ್ಲೇಷಣೆ

ರಸಸಿಂಧೂರ

(ರ) ಮರ್ಕ್ಯೂರಿಕ್ ಸಲ್ಫೈಡನ್ನು (HgS) ಒಳಗೊಂಡಿರುವ ಕೆಂಪು ಅಥವಾ ಕಂದು ಬಣ್ಣದ ಸ್ಫಟಿಕಾಕೃತಿಯ ನೈಸರ್ಗಿಕ ಅದಿರು. ಹೆಚ್ಚಿನ ಪಾದರಸ ಇದರಿಂದಲೇ ಲಭ್ಯ

ರಸಾಯನವಿಜ್ಞಾನ

(ರ) ಪದಾರ್ಥಗಳ ಸಂಯೋಜನೆ, ರಚನೆ, ಪರಿವರ್ತನೆಗಳನ್ನು ಅಭ್ಯಸಿಸುವ ವಿಜ್ಞಾನ ವಿಭಾಗ. ಧಾತುಗಳ ಮತ್ತು ಅವು ರೂಪಿಸುವ ಸಂಯುಕ್ತಗಳ ಅಧ್ಯಯನ. ಪರಮಾಣುಗಳ ಬಾಹ್ಯ ಎಲೆಕ್ಟ್ರಾನುಗಳು ಉಂಟುಮಾಡುವ ಪರಿಣಾಮಗಳ ಅಧ್ಯಯನ ಇದರ ಮುಖ್ಯ ಕಾಳಜಿ. ಇದರ ಮುಖ್ಯ ವಿಭಾಗಗಳು: ಭೌತ, ಆರ್ಗ್ಯಾನಿಕ್, ಇನಾರ್ಗ್ಯಾನಿಕ್, ಜೀವರಾಸಾಯನಿಕ, ಭೂರಾಸಾಯನಿಕ ವಿಜ್ಞಾನಗಳು

ರಾಕೆಟ್

(ಅಂವಿ) ಜೆಟ್ ನೋದನದಿಂದ ಅಂತರಿಕ್ಷದಲ್ಲಿ ಅಥವಾ ವಾತಾವರಣದಲ್ಲಿ ಧಾವಿಸಬಲ್ಲ ಅಂತರಿಕ್ಷವಾಹನ ಅಥವಾ ಪ್ರಕ್ಷೇಪ್ಯ. ಇದರಲ್ಲಿ ನೋದನಕಾರಿಗಳೂ ಆಕ್ಸಿಡೀಕಾರಕಗಳೂ ಇದ್ದು ಉಡ್ಡಯನಕ್ಕಾಗಿ, ಮುಂಚಲನೆ ಗಾಗಿ ಅಥವಾ ಆಕ್ಸಿಜನ್‌ಗಾಗಿ ಇದು ವಾತಾವರಣವನ್ನು ಅವ ಲಂಬಿಸಬೇಕಾಗಿಲ್ಲ. ಭೂಮಿಯ ವಾತಾವರಣದಾಚೆಯೂ ಯಾನ ಮಾಡಬಲ್ಲ ಏಕೈಕ ವಾಹನ. ರಾಕೆಟ್ ಮೋಟರ್‌ಗಳು ಅಥವಾ (ರಾಕೆಟ್ ಎಂಜಿನ್‌ಗಳು) ಪ್ರಸ್ತುತ ದಲ್ಲಿ ಘನ/ದ್ರವರೂಪದ ರಾಸಾಯನಿಕ ನೋದನಕಾರಿ ಗಳಿಂದ ಚಾಲನವಾಗುತ್ತವೆ. ಇವು ರಾಕೆಟ್‌ಗಳ ಒಳಗಿರುವ ಆಕ್ಸಿಡೈಜರ್‌ಗಳಲ್ಲಿ ಹೊತ್ತಿ ಉರಿ ಯುತ್ತ ರಾಕೆಟ್‌ಗೆ ಚಾಲನೆ ಒದಗಿಸುತ್ತವೆ. ‘ನ್ಯೂಕ್ಲಿಯರ್ ರಾಕೆಟ್’ಗಳು ನೋದನ ಕ್ರಿಯಾಕಾರಿಗಳಿಂದ ಚಾಲನಶಕ್ತಿ ಪಡೆದುಕೊಳ್ಳುತ್ತವೆ. ‘ಬಹುಘಟ್ಟ’ದ ರಾಕೆಟ್‌ಗಳು ಹಲವು ಪ್ರತ್ಯೇಕ ವಿಭಾಗಗಳಿಂದ ಕೂಡಿದ್ದು ಒಂದೊಂದು ಘಟ್ಟವೂ ಉರಿದು ಹೋದ ನಂತರ ತೊರೆಯಲ್ಪಡುತ್ತದೆ. ಅಂತರಿಕ್ಷ ರಾಕೆಟ್‌ನ ‘ಬೂಸ್ಟರ್’ (ಉತ್ಪ್ರೇರಕ)/ಮೊದಲ ಘಟ್ಟ ಪ್ರಕ್ಷೇಪ್ಯಕ್ಕೆ ವಾತಾವರಣದ ತೆಳು ಪ್ರದೇಶಗಳನ್ನು ತಲಪುವಷ್ಟು ವೇಗೋತ್ಕರ್ಷ ಒದಗಿಸುತ್ತದೆ. ತದನಂತರ ಇತರ ಘಟ್ಟಗಳು ಕಾರ್ಯಶೀಲವಾಗುತ್ತವೆ. ಹೊತ್ತಿ ಉರಿದ ಒಂದೊಂದು ಘಟ್ಟವನ್ನು ತ್ಯಜಿಸಲಾಗುವುದರಿಂದ ಪ್ರಕ್ಷೇಪ್ಯ ಹೆಚ್ಚು ಹಗುರವಾಗಿ ಉನ್ನತ ವೇಗ ಪಡೆಯುವುದು ಸಾಧ್ಯವಾಗುತ್ತದೆ. ರೆಟ್ರೊರಾಕೆಟ್‌ಗಳ ಬಳಕೆಯಿಂದ ರಾಕೆಟ್‌ಗಳ ವೇಗಾಪಕರ್ಷಣ ಸಾಧಿಸಬಹುದು. ರಾಕೆಟ್‌ಗಳನ್ನು ಬಾಣ ಬಿರುಸುಗಳ ಪ್ರದರ್ಶನ ನೀಡಲು, ಸಂಕೇತ ತಲಪಿಸಲು, ಅಥವಾ ಏನಾದರೂ ವಸ್ತುಗಳನ್ನು ದೂರ ಒಯ್ಯಲು (ಉದಾಹರಣೆಗೆ ಸಂಕಷ್ಟದಲ್ಲಿರುವ ಹಡಗಿಗೆ ಸಹಾಯಕ ಸಾಧನ ಒದಗಿಸಲು, ಯುದ್ಧದಲ್ಲಿ ನಾಶ ಮಾಡಬೇಕಾದ ಸ್ಥಳಕ್ಕೆ ಬಾಂಬನ್ನು ಒಯ್ಯಲು ಅಥವಾ ಖಗೋಳಯಾನದಲ್ಲಿ ಕ್ಯಾಪ್ಸೂಲನ್ನು ಅಂತರಿಕ್ಷಕ್ಕೆ ಒಯ್ಯಲು) ಬಳಸಲಾಗುತ್ತದೆ

ರಾಕೆಟ್ ಹಂತಗಳು

(ಅಂವಿ) ದೈತ್ಯಗಾತ್ರದ ಉಡಾವಣಾ ವಾಹನದಲ್ಲಿನ ಬಹುಘಟ್ಟಗಳ ರಾಕೆಟ್ ವ್ಯವಸ್ಥೆ. ಸಾಮಾನ್ಯವಾಗಿ ಇದರಲ್ಲಿ ೩ರಿಂದ ೪ ಹಂತಗಳಿರುತ್ತವೆ

Search Dictionaries

Loading Results

Follow Us :   
  Download Bharatavani App
  Bharatavani Windows App