भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರೋಟರಿ

(ತಂ) ೧. ಚಕ್ರದಂತೆ ಸುತ್ತು ತಿರುಗುವ ಯಂತ್ರ. ಉರುಳೆ ಯಂತ್ರ. ಉದಾ : ರೋಟರಿ ಮುದ್ರಣ ಯಂತ್ರ ಅಥವಾ ರೋಟರಿ ಬಾವಿ ತೋಡುವ ಯಂತ್ರ ೨. ಸಂಚಾರ ವೃತ್ತ. ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ವಾಹನಗಳು ಹೋಗುವಂತೆ ಅನುಕೂಲಿಸಲು ಎರಡು ಅಥವಾ ಮೂರು ರಸ್ತೆಗಳು ಅಡ್ಡಹಾಯುವ ಕಡೆ ಏರ್ಪಡಿಸಿರುವ ವೃತ್ತ

ರೋಟರ್

(ತಂ) ೧. ತಿರುಬಾನಿ, ವಿದ್ಯುತ್ ಮೋಟರ್ ಅಥವಾ ವಿದ್ಯುಜ್ಜನಕದಲ್ಲಿ ಆವರ್ತಿಸುವ ಭಾಗ. ಆವರ್ತಕ. ೨. ಹೆಲಿಕಾಪ್ಟರ್‌ಗೆ ಮೇಲೇರುವ ಬಲವನ್ನು ಕೊಡುವ, ತಿರುಗುವ ಕೈಗಳುಳ್ಳ ಗುಂಬ. ಹೋಲಿಸಿ : ಸ್ಟ್ಯಾಟರ್

ರೋಟರ್ ಕ್ರಾಫ್ಟ್

(ತಂ) ನೋಡಿ : ಹೆಲಿಕಾಪ್ಟರ್

ರೋಧ

(ಭೌ) ಯಾವುದೇ ವಸ್ತು ಅಥವಾ ಸಾಧನವು ವಿದ್ಯುತ್‌ಪ್ರವಾಹಕ್ಕೆ ತೋರುವ ವಿರೋಧ. ಲೋಹೀಯ ವಾಹಕವೊಂದರ ರೋಧ ತಾಪದೊಂದಿಗೆ ಹೆಚ್ಚುತ್ತದೆ. ಆದರೆ ಅರೆವಾಹಕವೊಂದರ ರೋಧ ತಾಪದೊಂದಿಗೆ ಕಡಿಮೆ ಯಾಗುತ್ತದೆ. ವಾಹಕದ ತುದಿಗಳ ಮಧ್ಯೆ ಇರುವ ವಿಭವಾಂತರಕ್ಕೂ ವಾಹಕದ ಮೂಲಕ ಹರಿಯುವ ವಿದ್ಯುತ್ ಪ್ರವಾಹಕ್ಕೂ ನಡುವಣ ನಿಷ್ಪತ್ತಿ. ಇದನ್ನು ಓಮ್‌ಗಳಲ್ಲಿ ಅಳೆಯಲಾಗುತ್ತದೆ. ಪ್ರತೀಕ R

ರೋಧ ಬೆಸುಗೆ (ವೆಲ್ಡಿಂಗ್)

(ತಂ) ಬೆಸುಗೆ ಹಾಕಬೇಕಾದ ಲೋಹಗಳ ಮೇಲ್ಮೈಗಳ ಸಂಪರ್ಕ ಬಿಂದುವು ಅದರ ಮೂಲಕ ಹರಿಯುವ ವಿದ್ಯುತ್ತಿಗೆ ತೋರುವ ರೋಧತೆಯಿಂದ ಉಂಟಾಗುವ ಶಾಖವನ್ನು ಬಳಸಿಕೊಂಡು ಒತ್ತಡದಲ್ಲಿ ಲೋಹ ಗಳನ್ನು ಬೆಸೆಯುವುದು

ರೋಧತೆ

(ತಂ) ವಸ್ತುವಿನ ಏಕಮಾನ ಘನ ಒಡ್ಡುವ ರೋಧ. ವಿಶಿಷ್ಟ ರೋಧವನ್ನು ಸಾಮಾನ್ಯವಾಗಿ ಓಮ್-ಮೀಟರ್ ಗಳಲ್ಲಿ ವ್ಯಕ್ತಪಡಿಸಲಾಗುವುದು

ರೋಧಸುರುಳಿ

(ತಂ) ವಿದ್ಯುನ್ಮಂಡಲದಲ್ಲಿ ರೋಧ ಹೆಚ್ಚಿಸಲು ಅಳವಡಿಸುವ ತಂತಿಸುರುಳಿ

ರೋಬಟ್

(ತಂ) ವಸ್ತುಗಳನ್ನು ಗುರುತಿಸಬಲ್ಲ, ಹಿಡಿಯಬಲ್ಲ ಹಾಗೂ ಚಲಿಸ ಬಲ್ಲ ಮತ್ತು ಸಂಪೂರ್ಣವಾಗಿ ಸ್ವಯಂನಿಯಂತ್ರಿತವಾದ ಇಲ್ಲವೇ ಕಂಪ್ಯೂಟರ್‌ನಿಂದ ನಿಯಂತ್ರಿತ ಎಲೆಕ್ಟ್ರಾನಿಕ್, ಎಲೆಕ್ಟ್ರಿಕ್ ಅಥವಾ ಯಾಂತ್ರಿಕ ಸಾಧನ. ಯಂತ್ರಮಾನವ, ರೊಬೊ

ರೋಮಕುಹರ

(ಪ್ರಾ) ಸ್ತನಿಗಳ ಚರ್ಮದಲ್ಲಿ ಕೂದಲಿನ ಬೇರು ಇರುವ ಕಿರಿದಾದ ನಾಳೀಯ ಕುಹರ. ಇದಕ್ಕೆ ಅಧಿಚರ್ಮ ಕೋಶಗಳ ಒಳಪದರವಿರುತ್ತದೆ. ಇದು ಅಧಿಚರ್ಮ ಹಾಗೂ ಚರ್ಮಗಳ ಮೂಲಕ ಉಪಚರ್ಮೀಯ ಊತಕದಲ್ಲಿಯ ಬುಡದವರೆಗೂ ವ್ಯಾಪಿಸಿರುತ್ತದೆ. ಮೇದೋಗ್ರಂಥಿ ನಾಳಗಳು ತಮ್ಮ ದ್ರವ ವಿಶೇಷಗಳನ್ನು ಇದರೊಳಕ್ಕೆ ಸ್ರವಿಸುತ್ತವೆ

ರೋಮಧರ

(ಸ) ಎಳೆಯ ಬೇರೊಂದರ ಬೇರುಕೂದಲುಗಳು ಇರುವ ಅಧಿಚರ್ಮ

ರೋಮನಾಳ ಜಾಲ

(ಪ್ರಾ) ಮೀನು, ತಿಮಿಂಗಿಲಗಳ ಗಾಳಿಕೋಶ ಮತ್ತು ಈಜುಕೋಶಗಳಲ್ಲಿ ಕಂಡು ಬರುವ ಸಣ್ಣ ರಕ್ತನಾಳಗಳ ಜಾಲಬಂಧ. ತಿಮಿಂಗಿಲಗಳಲ್ಲಿ ಇದು ಶಾಖವನ್ನು ಶರೀರದಲ್ಲಿ ಹಿಡಿದಿರಿಸಲೂ ಉಸಿರಾಟಕ್ಕೂ ಸಹಾಯಕ

ರೋಮಾಂಚನ

(ವೈ) ಚಳಿಯಿಂದ ಅಥವಾ ಭಯದಿಂದ ಮೈನವಿರೇಳುವುದು, ಇದರಿಂದ ಚರ್ಮದ ಮೇಲೆ ಬಿರುಮುಳ್ಳುಗಳು ಎದ್ದಂತಾಗುತ್ತದೆ

ರೋಲ್ಸ್

(ತಂ) ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಉರುಳುವಂತೆ ನಿಕಟವಾಗಿ ಜೋಡಿಸಿದ ಮತ್ತು ಮ್ಯಾಂಗನೀಸ್ ಉಕ್ಕಿನ ಮೇಲ್ಪದರವುಳ್ಳ ಎರಡು ಸಮಾಂತರ ಉಕ್ಕಿನ ಸರಳುಗಳು. ಅದಿರು ಅರೆಯಲು ಮತ್ತು ಲೋಹ ತೆಳುವಾಗಿಸಲು ಬಳಕೆ

ರೋಸಿನ್

(ರ) ಟರ್ಪೈಂಟೈನ್‌ನ ಆಸವನದ ಅವಶೇಷ. ಇದರ ಬಣ್ಣದಲ್ಲಿ ನಿರ್ವರ್ಣದಿಂದ ಹಳದಿ, ಕೆಂಪು, ಕಂದು ಮತ್ತು ಕಪ್ಪು ಬಣ್ಣಗಳವರೆಗೆ ವ್ಯತ್ಯಾಸವಿರುತ್ತದೆ. ಸಾಸಾಂ ೧.೦೮, ದ್ರಬಿಂ ೧೦0ಸೆ. ನಿಂದ ೧೪೦0ಸೆ. ಬೆಸುಗೆ ಹಾಕಲು ಲೇಪವಾಗಿ, ವಾರ್ನಿಷ್ ಹಾಗೂ ಸೋಪುಗಳ ತಯಾರಿಕೆಯಲ್ಲಿ ಬಳಕೆ

ರೋಹಿತ

(ಭೌ) ಅಲೆಯುದ್ದಕ್ಕೆ ಅನುಗುಣವಾಗಿರುವ ವರ್ಣರೇಖೆಗಳ/ಪಟ್ಟೆಗಳ ವ್ಯಾಪ್ತಿ. ವಿದ್ಯುತ್ಕಾಂತೀಯ ರೋಹಿತದಲ್ಲಿ ಅತ್ಯಂತ ದೀರ್ಘ ರೇಡಿಯೊ ತರಂಗ ಗಳಿಂದ ಹಿಡಿದು ಅತ್ಯಂತ ಹ್ರಸ್ವ ವಿಶ್ವಕಿರಣಗಳವರೆಗಿನ ಅಲೆಯುದ್ದಗಳ ಒಟ್ಟು ವ್ಯಾಪ್ತಿ. ಬಿಳಿ ಬೆಳಕನ್ನು ಅಶ್ರಗದ ಮೂಲಕ ಹಾಯಿಸಿದಾಗ ತೆರೆಯ ಮೇಲೆ ಬೀಳುವ ಏಳು ಬಣ್ಣಗಳ ತೋರಣ: ನೇರಿಳೆ (V) ಊದಾ (I)

ರೋಹಿತ ವರ್ಗೀಕರಣ

(ಖ) ನಕ್ಷತ್ರದ ಬೆರಳಚ್ಚಾದ ರೋಹಿತದ ಗುಣಲಕ್ಷಣಗಳನ್ನು ಆಧರಿಸಿ ಅದನ್ನು ವ್ಯವಸ್ಥಿತವಾಗಿ ನಿರ್ದಿಷ್ಟ ಗುಂಪಿನಲ್ಲಿ ಅಳವಡಿಸುವುದು. ರೋಹಿತದಿಂದ ತಿಳಿದುಬರುವ ಕೆಲವು ಮುಖ್ಯ ಸಂಗತಿಗಳಿವು: ನಕ್ಷತ್ರದ ದೂರ. ಚಲನವೇಗ, ದಿಶೆ, ಮೇಲ್ಮೈ ಉಷ್ಣತೆ, ಬಣ್ಣ, ರಾಸಾಯನಿಕ ಸಂಯೋಜನೆ. ಉಜ್ಜ್ವಲತಾಂಕದಿಂದ ಕಾಂತಿಯನ್ನೂ ಇದರಿಂದ ಕಾಂತಿಮಾನವನ್ನೂ ನಿಗಮಿಸಲು ಗಣಿತ ಸೂತ್ರಗಳಿವೆ; ರಾಶಿ-ಕಾಂತಿಮಾನ ನಿಯಮದಿಂದ ನಕ್ಷತ್ರದ ರಾಶಿಯನ್ನು ಲೆಕ್ಕಹಾಕಬಹುದು. ಇವೆಲ್ಲ ವಿವರಗಳನ್ನು ಆಧರಿಸಿ ರೋಹಿತವನ್ನು ನಿರ್ದಿಷ್ಟ ಪ್ರರೂಪದಲ್ಲಿ ನೆಲೆಗೊಳಿಸಬಹುದು. ಹಾರ್ವರ್ಡ್ ವಿಶ್ವವಿದ್ಯಾಲಯವು ಸಾವಿರಾರು ನಕ್ಷತ್ರಗಳ ರೋಹಿತಗಳನ್ನು ಹೀಗೆ ಸಂಗ್ರಹಿಸಿ ವಿಶ್ಲೇಷಿಸಿ ಪ್ರರೂಪಗಳಿಗೆ ಅಳವಡಿಸಿ ವಿವರಗಳನ್ನು ನೀಡುವ ಸಂಪುಗಳನ್ನೇ ಪ್ರಕಟಿಸಿತು (೧೯೨೪). ಇವುಗಳಲ್ಲಿ ೨,೩೫,೩೦೦ ನಕ್ಷತ್ರಗಳ ದೂರ, ಕಾಂತಿ ಮತ್ತು ರೋಹಿತ ಪ್ರರೂಪ ಗಳನ್ನು ಪಟ್ಟಿ ಮಾಡಲಾಗಿದೆ. ಈ ಪ್ರರೂಪಗಳಿಗೆ W, O, B, A, F, G, K, M, R, N, S ಎಂಬ ಕ್ರಮಾನುಗತ ಪ್ರತೀಕಗಳನ್ನು ನಿಗದಿ ಮಾಡಲಾಗಿದೆ. W ವರ್ಗದ ತಾರೆಗಳ ಮೇಲ್ಮೈ ಉಷ್ಣತೆ ೫೦,೦೦೦0ಸೆ.ಗಿಂತಲೂ ಅಧಿಕ. (ಸೂರ್ಯನದು ೬,೦೦೦0ಸೆ – ಇದು G ವರ್ಗದ ಸದಸ್ಯ). M ವರ್ಗದ ತಾರೆಗಳ ಮೇಲ್ಮೈ ಉಷ್ಣತೆ ೪,೦೦೦0 ಸೆ-೩,೦೦೦0ಸೆ ವ್ಯಾಪ್ತಿಯಲ್ಲಿದೆ. R,N,S ವರ್ಗದವುಗಳದು ತೀರ ನಿಮ್ನಮಟ್ಟದಲ್ಲಿರುವುದು. ಇವು ನವಜಾತ ನಕ್ಷತ್ರಗಳು

ರೋಹಿತಮಾಪಕ

(ಭೌ) ಭಿನ್ನಜಾತೀಯ ವಿಕಿರಣ ದಂಡದಲ್ಲಿ ಅಲೆಯುದ್ದವನ್ನು ಅಥವಾ ಶಕ್ತಿ ವಿತರಣೆಯನ್ನು ಅಳೆಯಲು ಬಳಸುವ ಉಪಕರಣ

ರೌಲೆಟ್

(ಗ) ನೋಡಿ: ಎಪಿಟ್ರೋಕಾಯ್ಡ್

ರ‍್ಯಾಕ್

(ತಂ) ಮೇವು ಇಡುವುದಕ್ಕೆ ಮಾಡಿದ ಮರದ ಅಥವಾ ಲೋಹದ ಕಂಬಿಗಳ ಚೌಕಟ್ಟು. ಸಾಮಾನುಗಳನ್ನು ಇಡುವ ಅಡ್ಡಪಟ್ಟಿಗಳ ಬಡು

ರ‍್ಯಾಚೆಟ್

(ತಂ) ತಡೆಕೊಕ್ಕೆ ಸಹಾಯದಿಂದ ಒಂದು ದಿಕ್ಕಿನಲ್ಲಿ (ಅಂದರೆ ಹಿಂದಕ್ಕೆ ಹೋಗದಂತೆ) ಚಲನೆಯನ್ನು ತಡೆದು ಮತ್ತೊಂದು ದಿಕ್ಕಿನಲ್ಲಿ (ಅಂದರೆ ಮುಂದಕ್ಕೆ ಹೋಗುವಂತೆ) ಚಲಿಸಲು ಬಿಡುವಂತಿರುವ, ಕಂಬಿಯ ಅಥವಾ ಚಕ್ರದ ಅಂಚಿನಲ್ಲಿ ಕೊರೆದಿರುವ ಹಲ್ಲುಸಾಲು. ತಡೆ ಹಲ್ಲುಸಾಲು

Search Dictionaries

Loading Results

Follow Us :   
  Download Bharatavani App
  Bharatavani Windows App