भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ರೇಖಿತ ಸ್ನಾಯು

(ಪ್ರಾ) ಸಾಲುಗೂಡಿದ ಸಾರ್ಕೊ ಮೆರ್‌ಗಳುಳ್ಳ ಸಂಕೋಚಕ ಊತಕ. ಉದಾ: ಅಸ್ಥಿಪಂಜರದ ಮತ್ತು ಹೃದಯದ ಸ್ನಾಯುಗಳು. ನೋಡಿ: ಐಚ್ಛಿಕ ಸ್ನಾಯು

ರೇಖೀಯ

(ಗ) ೧ ಆಯಾಮದಲ್ಲಿ ಮಾಡುವ ಅಳತೆಗಳನ್ನು ಮಾತ್ರ ಒಳಗೊಂಡಿರುವ. ಸಮೀಕರಣದ ವಿಷಯದಲ್ಲಿ, ಮೊದಲನೇ ವರ್ಗದ; ಘಾತವಿರುವ ಪದಗಳಿಲ್ಲದ. (ಸ) ಸಮಾಂತರ ಪಕ್ಕಗಳಿರುವ ಹಾಗೂ ಉದ್ದ ಕೊನೆಯಪಕ್ಷ ಅಗಲದ ನಾಲ್ಕು- ಐದರಷ್ಟಿರುವ ಎಲೆ. (ಭೌ) ಕಾರಣಕ್ಕೆ ಪರಿಣಾಮ ಅನುಪಾತೀಯ ವಾಗಿರುವಂಥ ಯಾವುದೇ ಸಾಧನ ಅಥವಾ ಚಲನೆ. ಉದಾ: ತಿರುಪಿನ ಮೊಳೆಯ ಆವರ್ತನ ಹಾಗೂ ಪುರೋಗಮನ; ತಂತಿರೋಧಕದಲ್ಲಿ ಸ್ಥಿರ ಉಷ್ಣತೆಯಲ್ಲಿ ವಿದ್ಯುತ್‌ಪ್ರವಾಹ ಹಾಗೂ ವೋಲ್ಟೇಜ್ (ಓಮ್ ನಿಯಮ)

ರೇಖೀಯ ಪ್ರಸರಣ

(ಭೌ) ವಿವರ್ತನೆಯನ್ನು ಗಣನೆಗೆ ತಂದುಕೊಳ್ಳದಿದ್ದಾಗ, ಬೆಳಕು ಸರಳರೇಖೆಯಲ್ಲಿ ಚಲಿಸುತ್ತಿರುವಂತೆ ತೋರುವುದು. ಕಾಯದ ಪ್ರತಿಯೊಂದು ಕಣವೂ ಸರಳರೇಖಾಪಥ ಅನುಸರಿಸುತ್ತಿರುವ ಹಾಗೆ ಕಾಯದ ಸ್ಥಿತಿಯಲ್ಲಾಗುವ ನಿರಂತರ ಬದಲಾವಣೆ

ರೇಖೀಯ ಸಮೀಕರಣ

(ಗ) ಸ್ಥಿರಾಂಕವಲ್ಲದ ಮತ್ತು ಸಮಸ್ತ ಪದಗಳ ಡಿಗ್ರಿಯೂ ೧ ಆಗಿರುವ ಸಮೀಕರಣ. ಉದಾ : 2x+3y+4z = 7. ಇದು ಮೂರು ಚರಗಳಲ್ಲಿ ಒಂದು ರೇಖೀಯ ಸಮೀಕರಣ. ಗ್ರಾಫಿನಲ್ಲಿ ಗುರುತಿಸಿದಾಗ ಒಂದು ಸರಳರೇಖೆಯನ್ನು ನೀಡುವಂಥ ಎರಡು ಚರಗಳ ನಡುವಿನ ಒಂದು ಸಮೀಕರಣ. ಇದರ ಸಾಮಾನ್ಯ ರೂಪ: y = mx+c. ಇಲ್ಲಿ m ರೇಖೆಯ ಪ್ರವಣತೆ, cಯು y-ಅಕ್ಷದ ಮೇಲೆ ರೇಖೆಯ ಅಂತಃ ಛೇದ (ಕಾರ್ಟೀಸಿಯನ್ ನಿರ್ದೇಶಾಂಕಗಳಲ್ಲಿ)

ರೇಖೆ

(ಗ) ನಿರ್ದಿಷ್ಟ ದಿಶೆಯಲ್ಲಿ ಚಲಿಸುವ ಬಿಂದುವಿನ ಪಥ. ಸಮತಲದಲ್ಲಿ ದತ್ತ ಬಿಂದುಗಳ ನಡುವಿನ ಅಂತರ ಕನಿಷ್ಠವಾಗಿರುವ ಬಿಂದುಪಥ. ಗೋಲದ ಮೇಲೆ ಮಹಾವೃತ್ತದ ಒಂದು ಭಾಗ

ರೇಚಕ

(ಸಾ) ಪ್ರಾಣಾಯಾಮದಲ್ಲಿ ಒಂದು ಪ್ರಕಾರ. (ವೈ) ನೋಡಿ : ವಿರೇಚಕ

ರೇಡಾನ್

(ರ) ಆವರ್ತ ಕೋಷ್ಟಕದಲ್ಲಿ ೦ ಗುಂಪಿಗೆ (ಶ್ರೇಷ್ಠಾನಿಲ ಗಳ ಗುಂಪಿಗೆ) ಸೇರಿದ ಅತ್ಯಂತ ಭಾರವಾದ ನಿರ್ವರ್ಣ ವಿಕಿರಣ ಪಟು ಅನಿಲಧಾತು. ಪ್ರತೀಕ Rn; ಪಸಂ ೮೬; ಸಾಪರಾ ೨೨೨; ದ್ರಬಿಂ -೭೧0ಸೆ ಕುಬಿಂ -೬೧.೮0ಸೆ ಕೊನೆಯ ಪಕ್ಷ ೨೦ ಸಮಸ್ಥಾನಿಗಳು ತಿಳಿದುಬಂದಿವೆ. ಅತ್ಯಂತ ಸ್ಥಿರವಾದ ಸಮಸ್ಥಾನಿ Rn-೨೨೨ (ಅರ್ಧಾಯು ೩.೮ ದಿನಗಳು). ರೇಡಿಯಮ್-೨೨೬ರ ಕ್ಷಯದಿಂದ ರೂಪುಗೊಳ್ಳುತ್ತದೆ ಮತ್ತು ಆಲ್ಫ ಕ್ಷಯಕ್ಕೊಳಗಾಗುತ್ತದೆ. ವಿಕಿರಣ ಚಿಕಿತ್ಸೆಯಲ್ಲಿ ಬಳಕೆ. ನಿಸರ್ಗದಲ್ಲಿ, ವಿಶೇಷವಾಗಿ ಗ್ರಾನೈಟ್ ಪ್ರದೇಶಗಳಲ್ಲಿ ಸಹಜ ರೀತಿಯಲ್ಲಿ ಲಭ್ಯ. ಇದು ಬಲುಮಟ್ಟಿಗೆ ಒಂದು ಜಡಾನಿಲ. ಇದರ ಹಿಂದಿನ ಹೆಸರು ನೈಟಾನ್

ರೇಡಾರ್

(ಭೌ) ಸೆಂಟಿಮೀಟರ್‌ಗಳಲ್ಲಿ ಅಳೆಯಬಹುದಾದ ಅಲೆಯುದ್ದಗಳ ವಿದ್ಯುತ್ಕಾಂತೀಯ ವಿಕಿರಣ ದಂಡವನ್ನು ಪ್ರತಿಫಲಿಸುವ, ಉದಾ: ಹಡಗು, ವಿಮಾನ ಅಥವಾ ದೂರದಲ್ಲಿರುವ ವಸ್ತುಗಳ ಪ್ರತಿಫಲನ ಸಾಮರ್ಥ್ಯ ಬಳಸಿಕೊಂಡು ಅವು ಇರುವ ಸ್ಥಾನ, ದೂರ, ಚಲನ ದಿಶೆ ಮುಂತಾದವನ್ನು ಪತ್ತೆಹಚ್ಚುವ ವ್ಯವಸ್ಥೆ. ‘ರೇಡಿಯೊ ಡಿಟೆಕ್ಷನ್ ಆಂಡ್ ರೇಂಜಿಂಗ್’ ಎನ್ನುವುದರ ಹ್ರಸ್ವರೂಪ. ಇದರಲ್ಲಿಯ ಪ್ರೇಷಕವು ಉತ್ಪಾದಿಸುವ ರೇಡಿಯೊ ಆವೃತ್ತಿ ವಿಕಿರಣವನ್ನು ತಿರುಗು ತ್ತಿರುವ ಏರಿಯಲ್‌ಗೆ ಊಡಿದಾಗ ವಿಕಿರಣ ಅದರಿಂದ ಒಂದು ದಂಡವಾಗಿ ಪ್ರೇಷಣೆಗೊಳ್ಳುತ್ತದೆ. ಈ ದಂಡಕ್ಕೆ ಯಾವುದೇ ಘನಕಾಯ ಅಡ್ಡಬಂದಾಗ ವಿಕಿರಣ ಶಕ್ತಿಯ ಒಂದು ಭಾಗ ಪ್ರತಿಫಲಿತ ವಾಗಿ ಏರಿಯಲ್‌ಗೆ ಮರಳುತ್ತದೆ. ಪ್ರೇಷಕ ಕಾಲ ಹಾಗೂ ಮರಳಿದ ಕಾಲಗಳನ್ನು ಗುರುತಿಸಿ ಅವುಗಳ ಸಹಾಯದಿಂದ ಆ ಘನಕಾಯ ಇರುವ ದೂರ, ಅದು ಚಲಿಸುತ್ತಿರುವ ದಿಶೆ ಇತ್ಯಾದಿಗಳನ್ನು ಲೆಕ್ಕ ಹಾಕಬಹುದು. ವಿಮಾನಗಳು ನಿಲ್ದಾಣದಲ್ಲಿಳಿಯುವಾಗ ಮಾರ್ಗ ದರ್ಶನ ನೀಡಲೂ, ಹಡಗುಗಳಲ್ಲೂ, ರೇಡಾರ್‌ಗಳ ಬಳಕೆವುಂಟು

ರೇಡಿಯಂಟ್ ಪಾಯಿಂಟ್

(ಖ) ಉಲ್ಕಾವೃಷ್ಟಿಯ ವೇಳೆ ಬಿಡಿ ಉಲ್ಕಾಪಥಗಳು ಉಗಮಿಸುವಂತೆ ಭಾಸವಾಗುವ ಬಿಂದು. ವಿಕಿರಣ ಪ್ರಸರಣ ಬಿಂದು. ಇದು ಸಿಂಹ ರಾಶಿಯಲ್ಲಿದೆ. ನೋಡಿ : ಲಿಯೊನಿಡ್‌ಗಳು

ರೇಡಿಯಮ್

(ರ) ಆವರ್ತಕೋಷ್ಟಕದ ೨ನೇ ಗುಂಪಿಗೆ ಸೇರಿದ, ಬೇರಿಯಮ್‌ಅನ್ನು ಹೋಲುವ, ಬಿಳಿ ಬಣ್ಣದ ಲೋಹಧಾತು. ಸಂಕೇತ ra. ಪಸಂ. ೮೮, ಸಾಪರಾ ೨೨೬.

ರೇಡಿಯಸ್

(ಪ್ರಾ) ಚತುಷ್ಪಾದಿಯಲ್ಲಿ ಮುಂದೋಳಿನ

ರೇಡಿಯಾಲಜಿ

(ವೈ) ಎಕ್ಸ್-ಕಿರಣ, ಗ್ಯಾಮಕಿರಣ, ವಿಕಿರಣಪಟು ವಸ್ತು ಮತ್ತಿತರ ಅಯಾನೀಕಾರಕ ವಿಕಿರಣಗಳನ್ನು ವೈದ್ಯಕೀಯ ಉದ್ದೇಶಗಳಿಗೆ, ವಿಶೇಷವಾಗಿ ರೋಗನಿದಾನಕ್ಕೆ ಹಾಗೂ ಕ್ಯಾನ್ಸರ್, ತತ್ಸಂಬಂಧಿತ ರೋಗಗಳ ಚಿಕಿತ್ಸೆಗೆ ಬಳಸು ವುದನ್ನು ಅಭ್ಯಸಿಸುವ ವೈದ್ಯವಿಜ್ಞಾನ ವಿಭಾಗ. ವಿಕಿರಣ ವಿಜ್ಞಾನ

ರೇಡಿಯೇಟರ್

(ತಂ) ೧. (ಮೋಟಾರು ವಾಹನದ) ಜಲಶೀತಲಿತ ಎಂಜಿನ್‌ನಲ್ಲಿ ಶಾಖವನ್ನು ವಿಸರಿಸಿ ತಂಪಾಗಿಸುವ ಸಾಧನ. ೨. ಕಾಸಿದ ಗಾಳಿ, ನೀರು ಮೊದಲಾದವುಗಳಿಂದ ಕಾವು ಪಡೆದು ಕೊಠಡಿ ಮೊದಲಾದವಕ್ಕೆ ಶಾಖ ಪ್ರಸಾರ ಮಾಡುವ ಸಣ್ಣ ಕೋಷ್ಠ. ಶಾಖಪ್ರಸಾರಕ. ೩. ವಿದ್ಯುತ್ಕಾಂತ ತರಂಗಗಳನ್ನು ಅಂತರಿಕ್ಷಕ್ಕೆ ಪ್ರೇಷಿಸುವ ಆಂಟೆನಾ ಭಾಗ

ರೇಡಿಯೊ

(ತಂ) ಉನ್ನತಾವೃತ್ತಿಯ ಪರ್ಯಾಯ ವಿದ್ಯುತ್ ಪ್ರವಾಹ ಉತ್ಪಾದಿಸುವ ವಿದ್ಯುತ್ಕಾಂತ ಅಲೆಗಳನ್ನು ಬಳಸಿಕೊಂಡು ವಿದ್ಯುತ್ ಸಂಜ್ಞಾಗಳನ್ನೂ ಶಬ್ದಗಳನ್ನೂ ಅಂತರಿಕ್ಷದ ಮೂಲಕ ಸಾಗುತಂತಿಗಳ ಸಹಾಯವಿಲ್ಲದೆ ಪ್ರೇಷಿಸುವ ಮತ್ತು ಸ್ವೀಕರಿಸುವ ವಿಧಾನಗಳಿಗೆ ನೀಡಿರುವ ಸಾಮಾನ್ಯನಾಮ. ಇದಕ್ಕಾಗಿ ಬಳಸುವ ಉಪಕರಣಕ್ಕೂ ಇದೇ ಹೆಸರಿದೆ

ರೇಡಿಯೊ ಆಕರ

(ಭೌ) ರೇಡಿಯೊ-ಆವೃತ್ತಿಗಳ ವಿದ್ಯುತ್ಕಾಂತ ವಿಕಿರಣವನ್ನು ಉತ್ಸರ್ಜಿಸುವ ಯಾವುದೇ ಆಕಾಶಕಾಯ. ಇದನ್ನು ರೇಡಿಯೊ ದೂರದರ್ಶಕದ ಮೂಲಕ ವೀಕ್ಷಿಸಲಾಗುತ್ತದೆ. ಗುರು, ಸೂರ್ಯ, ಪಲ್ಸಾರ್‌ಗಳು ಮತ್ತು ಸಿಂಕ್ರೊಟ್ರಾನ್ ವಿಕಿರಣದಿಂದ ಉದ್ಭವಿಸುವ ಹಿನ್ನೆಲೆ ವಿಕಿರಣ – ಇವು ಸೌರ ಕ್ಷೀರಪಥದೊಳಗಿನ ರೇಡಿಯೊ ಆಕರಗಳು. ಸುರುಳಿ ಕ್ಷೀರಪಥಗಳು, ರೇಡಿಯೊ ಕ್ಷೀರಪಥಗಳು ಮತ್ತು ಕ್ವೇಸಾರ್‌ಗಳು – ಇವು ಸೌರಕ್ಷೀರ ಪಥದಾಚೆಗಿನ ರೇಡಿಯೊ ಆಕರಗಳು.

ರೇಡಿಯೊ ಆವೃತ್ತಿ

(ಭೌ) ಸಂಪರ್ಕ ಉದ್ದೇಶ ಗಳಿಗಾಗಿ ವಿದ್ಯುತ್ಕಾಂತ ವಿಕಿರಣವನ್ನು ಉಪಯೋಗಿಸಲು ಅನುಮಾಡಿಕೊಡುವ ಆವೃತ್ತಿ. ಇದು ಸಾಮಾನ್ಯವಾಗಿ ೩ ಕಿಲೊ ಹರ್ಟ್ಸ್‌ನಿಂದ ೩೦೦ ಗಿಗಾಹರ್ಟ್ಸ್‌ವರೆಗಿನ ವ್ಯಾಪ್ತಿಯದು. ಇದನ್ನು ಅತ್ಯಂತ ಕಡಿಮೆ ಆವೃತ್ತಿ, ಕಡಿಮೆ ಆವೃತ್ತಿ, ಮಧ್ಯಮ ಆವೃತ್ತಿ, ಉನ್ನತ ಆವೃತ್ತಿ, ಅತ್ಯುನ್ನತ ಆವೃತ್ತಿ ಮತ್ತು ತೀವ್ರ ಅತ್ಯುನ್ನತ ಆವೃತ್ತಿ (ಪರಮ ಉನ್ನತ) ಎಂದು ಮುಂತಾಗಿ ಎಂಟು ಸಮಾನ ಪಟ್ಟಿ (ಆವೃತ್ತಿ ಶ್ರೇಣಿ)ಗಳನ್ನಾಗಿ ಉಪವಿಭಾಗಿಸಲಾಗಿದೆ. ಸಂಕ್ಷಿಪ್ತ RF

ರೇಡಿಯೊ ಐಸೊಟೋಪ್

(ಭೌ) ವಿಕಿರಣ ಪಟುತ್ವವನ್ನು ಪ್ರದರ್ಶಿಸುವ ಸಹಜವಾಗಿ ಲಭಿಸುವ ಅಥವಾ ಕೃತಕವಾಗಿ ತಯಾರಿಸಿದ ಧಾತು ಸಮಸ್ಥಾನಿ. ಅಸ್ಥಿರವಾದುದು. ವೈದ್ಯಕೀಯ/ಕೈಗಾರಿಕಾ ಉದ್ದೇಶಗಳಿಗೆ ಆಕರವಾಗಿ ಬಳಕೆ

ರೇಡಿಯೊ ಕ್ಷೋಭೆ

(ತಂ) ರೇಡಿಯೊ ಆವೃತ್ತಿ ಸಹಿತವಾಗಿರುವ ವಿದ್ಯುತ್ಕಾಂತೀಯ ಗದ್ದಲ

ರೇಡಿಯೊ ಖಗೋಳವಿಜ್ಞಾನ

(ಖ) ಆಕಾಶ ಕಾಯಗಳು ಉತ್ಸರ್ಜಿಸುವ ೧೦೦೦ದಿಂದ ೩೦,೦೦೦ ಮೈಕ್ರೊ ಮೀಟರ್ ವ್ಯಾಪ್ತಿ ಅಲೆಯುದ್ದದಲ್ಲಿ ವಿಶ್ವದ ವಿವಿಧ ಭಾಗಗಳಿಂದ ಬರುವ ರೇಡಿಯೊ ವಿಕಿರಣದ ಅಧ್ಯಯನ. ಅಮೆರಿಕದ ಎಂಜಿನಿಯರ್ ಕಾರ್ಲ್ ಜಾನ್‌ಸ್ಕಿ (೧೯೦೫-೪೦) ಸ್ಥಳೀಯ ರೇಡಿಯೊ ಗಲಭೆಗಳ ಮೂಲವನ್ನು ಶೋಧಿಸುತ್ತಿದ್ದಾಗ, ಆಕಸ್ಮಿಕವಾಗಿ ಆಕಾಶದಿಂದ ಬರುವ ರೇಡಿಯೊ ತರಂಗಗಳ ಅಸ್ತಿತ್ವ ಗುರುತಿಸಿದರು (೧೯೩೨). ಎಂದೇ ಆಕಾಶಕಾಯವೊಂದು ಕೇವಲ ಬೆಳಕಿನ ಉತ್ಸರ್ಜನಕೇಂದ್ರವಲ್ಲ, ವಿದ್ಯುತ್ಕಾಂತ ವಿಕಿರಣದ ಅವಕೆಂಪು ವಿಕಿರಣದ ಉತ್ಸರ್ಜನ ಕೇಂದ್ರವೂ ಹೌದೆಂದು ತಿಳಿದುಬಂದಿತು. ರೇಡಿಯೊ ತರಂಗಗಳನ್ನು ಮಾತ್ರ ಬೀರುವ ಆಕಾಶಕಾಯಗಳಿಗೆ ರೇಡಿಯೊ ನಕ್ಷತ್ರಗಳೆಂದು ಹೆಸರು. ಈ ಅಧ್ಯಯನದಲ್ಲಿ ಒಂಟಿ ಡಿಷ್ (ಬಟ್ಟಲು ಏರಿಯಲ್)ಗಳಿಂದ ಹಿಡಿದು ದೂರದರ್ಶಕಗಳ ವಿಸ್ತೃತ ಜಾಲ ಬಂಧಗಳವರೆಗೆ ನಾನಾ ಮಾದರಿಯ ಆಂಟೆನಾಗಳನ್ನು ಬಳಸಲಾಗುತ್ತದೆ. ವಿಕಿರಣ ಉತ್ಸರ್ಜನೆಯ ಪ್ರಧಾನ ಆಕರಗಳೆಂದರೆ – ಸೂರ್ಯ, ಗುರುಗ್ರಹ, ನಕ್ಷತ್ರಾಂತರ ಹೈಡ್ರೊಜನ್, ಉತ್ಸರ್ಜನ ನೀಹಾರಿಕೆಗಳು, ಪಲ್ಸಾರ್‌ಗಳು, ಸೋಪರ್‌ನೋವಾ ಅವಶೇಷಗಳು, ರೇಡಿಯೊ ಗೆಲಾಕ್ಸಿಗಳು, ಕ್ವೇಸಾರ್‌ಗಳು

ರೇಡಿಯೊ ಗವಾಕ್ಷಿ

(ಭೌ) ವಾತಾವರಣದಲ್ಲಿ ಸುಮಾರು ೧೦ ಮೆಗಾಹರ್ಟ್ಸ್‌ನಿಂದ ೧೦೦ ಗಿಗಾಹರ್ಟ್ಸ್‌ವರೆಗೆ ವಿಸ್ತರಿಸಿರುವ ಆವೃತ್ತಿಗಳ ಪಟ್ಟಿ. ಬಾಹ್ಯಾಕಾಶದಿಂದ ಬರುವ ವಿಕಿರಣ ಈ ಪಟ್ಟಿಯ ಮೂಲಕ ಭೂಮಿಯ ವಾತಾವರಣವನ್ನು ಪ್ರವೇಶಿಸಿ ಪ್ರವಹಿಸಬಲ್ಲದು. ಅದನ್ನು ಭೂಮಿ ಮೇಲಿನ ರೇಡಿಯೊ ದೂರದರ್ಶಕಗಳ ಮೂಲಕ ಪತ್ತೆ ಹಚ್ಚಬಹುದು. ೧೦೦ ಮೆಗಾಹರ್ಟ್ಸ್‌ಗೂ ಕಡಿಮೆಯ ರೇಡಿಯೊ ಅಲೆಗಳು ಅಯಾನ್ ಗೋಲದಿಂದ ಪ್ರತಿಫಲಿತವಾಗುತ್ತವೆ; ೧೦೦ ಗಿಗಾಹರ್ಟ್ಸ್‌ಗೂ ಮೇಲಿನ ರೇಡಿಯೊ ಅಲೆಗಳು ಹೆಚ್ಚು ಹೆಚ್ಚಾಗಿ ಆಣವಿಕ ಹೀರಿಕೆಗೊಳಗಾಗುತ್ತವೆ

Search Dictionaries

Loading Results

Follow Us :   
  Download Bharatavani App
  Bharatavani Windows App