भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಯುಟೆಕ್ಟಾಯ್ಡ್

(ತಂ) ಯುಟೆಕ್ಟಿಕ್ ಗುಣಗಳೇ ಇರುವ ಮಿಶ್ರಣ. ಆದರೆ ಇದನ್ನು ಘನಸ್ಥಿತಿಯಲ್ಲಿರುವ ಪದಾರ್ಥದಿಂದ, ವಿಶೇಷವಾಗಿ ಕಾರ್ಬನ್‌ಯುಕ್ತ ಉಕ್ಕಿನಿಂದ, ತಯಾರಿಸಲಾಗುತ್ತದೆ

ಯುಟೆಕ್ಟಿಕ್ ಮಿಶ್ರಣ

(ರ) ಕನಿಷ್ಠ ದ್ರವಣ ಬಿಂದು ಅಥವಾ ಕುದಿಬಿಂದು ಇರುವ ದ್ರವ್ಯ ಅಥವಾ ದ್ರವ ಮಿಶ್ರಣ. ಈ ಮಿಶ್ರಣದ ರಾಸಾಯನಿಕ ಸಂಯೋಜನೆ ಎರಡು ಪ್ರಾವಸ್ಥೆಯಲ್ಲಿ ಒಂದೇ ಬಗೆಯದು. ಈ ಮಿಶ್ರಣ ಕೆಲವು ರೀತಿಗಳಲ್ಲಿ ಶುದ್ಧ ಸಂಯುಕ್ತ ವಸ್ತುವಾಗಿ ವರ್ತಿಸುತ್ತದೆ

ಯುಟ್ರಿಕಲ್

(ಸ) ಕೆಲವು ಜಲಸಸ್ಯಗಳ ಎಲೆಗಳಲ್ಲಿ ಕಂಡು ಬರುವ ಉಬ್ಬುಚೀಲದಂಥ ಪೊಳ್ಳು ರಚನೆ. ಚಿಕ್ಕ ಪ್ರಾಣಿಗಳನ್ನು ಸೆರೆಹಿಡಿಯಲು ಉಪಯೋಗ. (ಪಾ) ಕಶೇರುಕಗಳಲ್ಲಿ ಒಳಗಿವಿಯ ಪೊಳ್ಳು. ಅರ್ಧವರ್ತುಲೀಯ ನಾಲೆಗಳು ಇದರಲ್ಲಿ ಆರಂಭ

ಯುತಿ

(ಖ) ಆಕಾಶಕಾಯಗಳ – ಮುಖ್ಯವಾಗಿ ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ ಎಂಬ ಗೋಚರ ಕಾಯಗಳ – ಭೂಕೇಂದ್ರೀಯ ರೇಖಾಂಶ ಒಂದೇ ಆಗಿರುವುದು. ಆಗ ಅವು ಭೂಮಿಯಿಂದ ಕಾಣುವಂತೆ ಒಂದೇ ದಿಶೆಯಲ್ಲಿರುವುವು. ಅಮಾವಾಸ್ಯೆಯಂದು ಚಂದ್ರ, ಸೂರ್ಯ ಯುತಿಯಲ್ಲಿರುವುವು. ಭೂಮಿ ಕುರಿತಂತೆ ಶುಕ್ರ ಮತ್ತು ಬುಧ ಕಕ್ಷೆಗಳು ಸೂರ್ಯನಿಗೆ ಸಮೀಪವಾಗಿರುವುದರಿಂದ ಅವು ಒಳ ಗ್ರಹಗಳು; ಉಳಿದ ಐದು ಗ್ರಹ ಕಕ್ಷೆಗಳು (ಕುಜ, ಗುರು, ಶನಿ, ಯುರೇನಸ್, ನೆಪ್ಚೂನ್) ಸೂರ್ಯನಿಂದ ದೂರವಾಗಿ ಇರುವುದರಿಂದ ಅವು ಹೊರಗ್ರಹಗಳು. ಒಳಗ್ರಹಗಳು ಎರಡು ಬಗೆ ಯುತಿಗಳಲ್ಲಿರುವುದು ಸಾಧ್ಯ; ಭೂಮಿ-ಬುಧ- ಸೂರ್ಯ, ಭೂಮಿ-ಸೂರ್ಯ-ಬುಧ. ಮೊದಲನೆಯದು ನೀಚಯುತಿ, ಎರಡನೆಯದು ಉಚ್ಚಯುತಿ. ಹೊರಗ್ರಹಗಳು ಉಚ್ಚಯುತಿಯಲ್ಲಷ್ಟೆ ಪ್ರಕಟವಾಗಬಲ್ಲವು. ಸಂಯುತಿ

ಯುತಿ ಅವಧಿ

(ಖ) ನೀಚಗ್ರಹಗಳನ್ನು (ಶುಕ್ರ, ಬುಧ) ಕುರಿತಂತೆ ಎರಡು ಕ್ರಮಾಗತ ಉಚ್ಚ/ನೀಚ ಯುತಿಗಳ ನಡುವಿನ ಕಾಲ; ಉಚ್ಚ ಗ್ರಹಗಳನ್ನು (ಕುಜ, ಗುರು, ಶನಿ) ಕುರಿತಂತೆ ಎರಡು ಕ್ರಮಾಗತ ವಿಯುತಿಗಳ ಅಥವಾ ಉಚ್ಚ ಸಂಯುತಿಗಳ ನಡುವಿನ ಅವಧಿ. ಚಂದ್ರನನ್ನು ಕುರಿತಂತೆ ನೋಡಿ, ಯುತಿಮಾಸ

ಯುತಿ-ವಿಯುತಿ

(ಖ) ಸೂರ್ಯ ಮತ್ತು ಚಂದ್ರರ ರೇಖಾಂಶ ವ್ಯತ್ಯಾಸ ೦0 ಅಥವಾ ೧೮೦0 ಆಗಿರುವ ಬಿಂದು

ಯುತಿಮಾಸ

(ಖ) ಎರಡು ಅನುಕ್ರಮ ಅಮಾವಾಸ್ಯೆಗಳ/ಹುಣ್ಣಿಮೆಗಳ ನಡುವಿನ ಅವಧಿ (=೨೯.೫೩೦೯ ದಿವಸ). ಚಾಂದ್ರಮಾಸ

ಯುದ್ಧಕವಚ

(ತಂ) ವಿಶಿಷ್ಟ ಉಕ್ಕಿನಿಂದ ತಯಾರಿಸಿದ ಫಿರಂಗಿ ಗುಂಡುಗಳಿಗೂ ಅಭೇದ್ಯವಾಗಬಲ್ಲ ರಕ್ಷಾಕವಚ

ಯುರಾನಿನೈಟ್

(ಭೂವಿ) uo2. ಯುರೇನಿಯಮ್ ಆಕ್ಸೈಡ್. ತೀವ್ರ ವಿಕಿರಣಪಟು ಲೋಹಖನಿಜ. ಯುರೇನಿಯಮ್‌ನ ಪ್ರಮುಖ ಅದಿರು

ಯುರೇನಿಯಮ್

(ರ) ಬೂದುಬಣ್ಣದ ಗಡಸಾದ ವಿಕಿರಣಪಟು ಧಾತು. ಯಾವುದೇ ವಿಘಟನ ಕ್ರಿಯೆಗೆ ಒಳಗಾಗದ ಶುದ್ಧ ಯುರೇನಿಯಂ ಆಲ್ಫ ಕಣಗಳನ್ನು ಮಾತ್ರ ವಿಸರ್ಜಿಸುತ್ತದೆ. ಮಾರ್ಟಿನ್ ಹೈನ್ರಿಕ್ ಕ್ಲಾಪ್ರೊತ್ (೧೭೪೩-೧೮೧೭) ಇದನ್ನು ಆವಿಷ್ಕರಿಸಿದರು (೧೭೮೯). ಅನೇಕ ಸಮಸ್ಥಾನಿಗಳಿವೆ. ರಾಸಾಯನಿಕ ಪ್ರತೀಕ u. ಪಸಂ. ೯೨, ಸಾಪರಾ ೨೩೮.೦೩, ಸಾಸಾಂ ೧೮.೯೫, ದ್ರಬಿಂ ೧೧೩೨0 ಸೆ. ನೈಸರ್ಗಿಕವಾಗಿ ಲಭಿಸುವ ಧಾತು (೯೯.೨೮%). (ಅರ್ಧಾಯು ೪.೫ x ೧೦೯ ವರ್ಷಗಳು) ಹಾಗೂ (೦.೭೧%) (ಅರ್ಧಾಯು ೭.೧ x ೧೦೮ ವರ್ಷಗಳು) ಇವನ್ನು ಒಳಗೊಂಡಿದೆ. ಈ ಎರಡನೆಯದು ಬೈಜಿಕ ಶೃಂಖಲಾ ಕ್ರಿಯೆಯನ್ನು ಆಗಗೊಡಬಲ್ಲದು. ಪಿಚ್‌ಬ್ಲೆಂಡ್ ಇದರ ಮುಖ್ಯ ಅದಿರು

ಯುರೇನಿಯಮ್-ಅತೀತ ಧಾತುಗಳು

(ರ) ಪರಮಾಣು ಸಂಖ್ಯೆ ೯೨ಕ್ಕಿಂತ ಅಧಿಕವಿರುವ ಧಾತುಗಳು. ಯುರೇನಿಯಮ್‌ಗಿಂತ ಹೆಚ್ಚು ಭಾರವಾದ ಹಾಗೂ ಸಂಕೀರ್ಣವಾದ ನ್ಯೂಕ್ಲಿಯಸ್ (ಜೀವಕೋಶ)ಗಳಿಂದ ಕೂಡಿರುತ್ತದೆ. ಯುರೇನಿಯಮ್‌ಅನ್ನು ನ್ಯೂಟ್ರಾನ್ ತಾಡನೆಗೊಳಪಡಿಸಿದಾಗ ಲಭಿಸುತ್ತವೆ. ನೆಪ್ಚೂನಿಯಮ್, ಪ್ಲುಟೋನಿಯಮ್, ಕೂರಿಯಮ್, ಲಾರೆನ್ಷಿಯಮ್‌ಗಳನ್ನೂ ಒಳಗೊಂಡಂತೆ ಇಂಥ ಹನ್ನೆರಡಕ್ಕೂ ಹೆಚ್ಚು ಧಾತುಗಳನ್ನು ಉತ್ಪಾದಿಸಲಾಗಿದೆ. ಆವರ್ತಕೋಷ್ಟಕದಲ್ಲಿ ಇವು ಯುರೇನಿಯಮ್‌ನ ತರುವಾಯ ಬರುತ್ತವೆ. ಇವು ಬಹುಪಾಲು ಅಸ್ಥಿರ ಹಾಗೂ ಆಲ್ಪಾಯು. ಇವೆಲ್ಲವೂ ಮಾನವಕೃತ (ಕೃತಕ) ಧಾತುಗಳು

ಯುರೇಮಿಯ

(ವೈ) ವ್ಯಾಧಿಗ್ರಸ್ಥ ಮೂತ್ರಪಿಂಡ ತನ್ನ ಸಾಧಾರಣ ಕ್ರಿಯೆಗಳಲ್ಲಿ ವಿಫಲವಾದಾಗ ತಲೆದೋರುವ ಸ್ಥಿತಿ. ಈ ಅಸ್ವಸ್ಥತೆಯ ಸ್ಥಿತಿಯಲ್ಲಿ ಮೂತ್ರದಲ್ಲಿರಬೇಕಾದ ರಾಸಾಯನಿಕಗಳು ರಕ್ತದಲ್ಲಿ ಕಾಣಬರತೊಡಗುತ್ತವೆ. ತಲೆನೋವು, ಉಸಿರಿನಲ್ಲಿ ದುರ್ಗಂಧ; ಭೇದಿ, ವಮನ, ದೃಷ್ಟಿದೋಷ, ಆಲಸ್ಯ, ಸೆಡೆತ ಅಥವಾ ಪ್ರಜ್ಞಾಹೀನತೆ ಪ್ರಕಟವಾಗಬಹುದು

ಯೂಗ್ಲಿನ

(ಪ್ರಾ) ಯೂಗ್ಲೆನಾಯ್ಡ್ ವರ್ಗಕ್ಕೆ ಸೇರಿದ ಏಕಕೋಶಕ ಜಲಜೀವಿ ಜಾತಿ

ಯೂಟಾಕ್ಸೈಟಿಕ್

(ಭೂವಿ) ಕೆಲವು ಅಗ್ನಿಪರ್ವತ ಶಿಲೆ ಗಳಲ್ಲಿ ಕಾಣಬರುವ ರೇಖಾವಿನ್ಯಾಸ. ಇದು ಲಾವಾರಸ ಹರಿದಿರುವ ಶಿಲೆಯ ನವುರು ಪದರ ವಿನ್ಯಾಸಕ್ಕಿಂತ ಭಿನ್ನ

ಯೂಟೋಮಸ್

(ಭೂವಿ) ಕೆಲವು ದಿಶೆಗಳಲ್ಲಿ ಸುಲಭವಾಗಿ ಮುರಿಯಬಲ್ಲ (ಖನಿಜ)

ಯೂಫೋಟೊಮೆಟ್ರಿಕ್

(ಸ) ಗರಿಷ್ಠ ಮೊತ್ತದಲ್ಲಿ ಸೂರ್ಯನ ಬೆಳಕು ಪಡೆಯುವಂತೆ ಎಲೆಗಳ ವಿನ್ಯಾಸ

ಯೂಫೋರಿಯ

(ವೈ) ಸುಕ್ಷೇಮದಿಂದಿರುವ ಭ್ರಾಂತಸ್ಥಿತಿ. ಇದು ಅವಶ್ಯವಾಗಿಯೇ ಆರೋಗ್ಯದ ಸೂಚನೆಯನ್ನೇನೂ ನೀಡದು. ಆಧಾರ ರಹಿತ ಕಲ್ಪನೆ

ಯೂರಸಿಲ್

(ರ) ನಿರ್ವರ್ಣ ಸ್ಫಟಿಕೀಯ ಚೂರ್ಣ. ದ್ರಬಿಂ ೩೩೮0 ಸೆ. ಆರ್‌ಎನ್‌ಎಯ (ರೈಬೊನೂಕ್ಲಿಯಿಕ್ ಆಸಿಡ್‌ನ) ನಾಲ್ಕು ಪ್ರತ್ಯಾಮ್ಲಗಳ ಪೈಕಿ ಒಂದು. ಇದು ಮಾತ್ರ ಡಿಎನ್‌ಎಯಲ್ಲಿ (ಡಿಆಕ್ಸಿರೈಬೊ ನೂಕ್ಲಿಯಿಕ್ ಆಸಿಡ್‌ನಲ್ಲಿ) ಇರುವುದಿಲ್ಲ. C4H4N2O2

ಯೂರಿಕ್ ಆಮ್ಲ

(ರ) C5H4N4O3 ಹೆಚ್ಚಿನ ಸ್ತನಿ, ಪಕ್ಷಿ, ನೆಲ ಸರೀಸೃಪ ಮತ್ತು ಕೀಟಗಳಲ್ಲಿ ಪ್ಯುರೀನ್ ವಿಘಟನೆಯ ಅಂತಿಮ ಉತ್ಪನ್ನ. ಸ್ತನಿಗಳ ಮೂತ್ರದಲ್ಲಿ ಅಲ್ಪ ಪ್ರಮಾಣದಲ್ಲಿ ಇರುವ, ಬಹುಪಾಲು ಸ್ತನಿಗಳ ಮಲದಲ್ಲಿ ಲವಣ ರೂಪದಲ್ಲಿ ಇರುವ ಸ್ಫಟಕೀಯ ಬಿಳಿ ಅದ್ರಾವ್ಯ ಘನ ಪದಾರ್ಥ. ಅಲ್ಲದೆ ಸ್ತನಿಗಳ ಹೊರತಾಗಿ ಇತರ ಪ್ರಾಣಿಗಳಲ್ಲಿ ಉಪಾಪಚಯಕ ನೈಟ್ರೊಜನ್ ವಿಸರ್ಜನೆಗೊಳ್ಳುವ ಪ್ರಧಾನ ರೂಪ. ಯೂರಿಕ್ ಆಮ್ಲದ ಸ್ಫಟಿಕೀಯ ಬಿಳಿಪುಡಿ. ತಣ್ಣೀರಿನಲ್ಲಿ ಅವಿಲೇಯ. ಬಿಸಿ ನೀರಿನಲ್ಲಿ ಅಲ್ಪಸ್ವಲ್ಪ ವಿಲೇಯ. ಯೂರಿಕ್ ಆಮ್ಲದ ವಿಸರ್ಜನೆಯಲ್ಲಿ ತಡೆ ಉಂಟಾದಾಗ ಅದರ ಲವಣಗಳು ಕೀಲುಗಳಲ್ಲಿ ಶೇಖರಣೆಗೊಂಡು ಸಂಧಿವಾತಕ್ಕೆ ಕಾರಣವಾಗುತ್ತವೆ

ಯೂರಿಡಿನೇಲಿಸ್

(ಸ) ಹೆಟರೊಬ್ಯಾಸಿಡಿಯೋ ಮೈಸಿಟಿಡೀ ಉಪವರ್ಗಕ್ಕೆ ಸೇರಿದ ಸಸ್ಯ ಕಾಂಡಗಳ ಹೊರ ಆವರಣದಲ್ಲಿರುವ ಪರೋಪಜೀವಿ ಶಿಲೀಂಧ್ರ. ರೋಗಕಾರಕ. ಬೆಳೆಗೆ ಹಾನಿಕರ

Search Dictionaries

Loading Results

Follow Us :   
  Download Bharatavani App
  Bharatavani Windows App