Navakarnataka Vijnana Tantrajnana Padasampada (2011)
Navakarnataka Publications Private Limited
ಮಕಮಲ್ಲು ಹೆಗ್ಗಣ
(ಪ್ರಾ) ಟಾಲ್ಪಿಡೀ ಕುಟುಂಬಕ್ಕೆ ಸೇರಿದ ಕೀಟಾಹಾರಿ ಸ್ತನಿಗಳ ೧೯ ಪ್ರಭೇದಗಳಲ್ಲೊಂದು. ನಸುಕಪ್ಪಿನ ಮಕಮಲ್ಲಿನಂಥ ತುಪ್ಪುಳು ಚರ್ಮ, ಬಲು ಸಣ್ಣ ಕಣ್ಣು ಹಾಗೂ ಕಿವಿಗಳು, ಬಿಲ ತೋಡಲು ಸಹಕಾರಿಯಾದಂಥ ಮುಂಗಾಲುಗಳು ಇದರ ವಿಶಿಷ್ಟ ಲಕ್ಷಣ. ಬಿಲವಾಸಿ
ಮಕರಂದ
(ಸ) ಹೂವಿನ ಯಾವುದಾದರೂ ಭಾಗದಿಂದ ಅಥವಾ ಕೆಲವು ವೇಳೆ ಸಸ್ಯದ ಇತರ ಭಾಗಗಳಿಂದ, ಒಸರುವ ಶರ್ಕರ, ಅಮೀನೊಆಮ್ಲ ಮತ್ತಿತರ ಪೋಷಕಗಳಿರುವ ಸಿಹಿ ದ್ರವ ಪದಾರ್ಥ. ಕೀಟಗಳನ್ನು ಆಕರ್ಷಿಸಿ ಅವುಗಳಿಂದ ಪರಾಗಣ ಕ್ರಿಯೆ ಜರಗುವುದಕ್ಕೆ ನೆರವಾಗುತ್ತದೆ
ಮಕರಾಯನ
(ಖ) ಭೂಮಿಯ ಸುತ್ತ ಸೂರ್ಯನ ಉತ್ತರ-ದಕ್ಷಿಣ ದಿಶಾಚಲನೆ ಸ್ಥಗಿತಗೊಂಡು ದಕ್ಷಿಣ-ಉತ್ತರ ದಿಶಾಚಲನೆ ಆರಂಭವಾಗುತ್ತ ಮಕರ ಸಂಕ್ರಾಂತಿಗೆ ತಾಳೆಯಾಗುತ್ತಿದ್ದ ಬಿಂದು. ಈಗ ಡಿಸೆಂಬರ್ ೨೨ ಉತ್ತರಾಯಣಾರಂಭ ದಿನ. ಸೂರ್ಯ ವಿಷುವದ್ ವೃತ್ತದಿಂದ ಅತಿ ದಕ್ಷಿಣಕ್ಕೆ ಸರಿದಿರುವ ನೆಲೆ. ಶಿಶಿರ ಅಯನ ಸಂಧಿ
ಮಕಾಕ್ ಕೋತಿ
(ಪ್ರಾ) ಸ್ತನಿವರ್ಗ, ಪ್ರೈಮೇಟ್ ಗಣ, ಸರ್ಕೋಪಿತಿಡೀ ಕುಟುಂಬ ಹಾಗೂ ಮಕಾಕ ಜಾತಿಗೆ ಸೇರಿದ ಕೋತಿ. ಆಫ್ರಿಕ, ಭಾರತ, ಆಗ್ನೇಯ ಏಷ್ಯಾ ವಾಸಿ. ೧೨ ಪ್ರಭೇದಗಳು ಉಂಟು. ಭಾರಿ ಗಾತ್ರದವಲ್ಲವಾದರೂ ಸದೃಢ ಮೈಕಟ್ಟು, ಪುಷ್ಪವಾದ ಕೈಕಾಲು, ಕೆನ್ನೆ ಚೀಲ, ಉದ್ದವಾದ ಬಾಲ ಇರುವ ಬಲಶಾಲಿಯೂ ಧೈರ್ಯಶಾಲಿಯೂ ಆದ ಕೋತಿ. ಪಳಗಿಸಿ, ಆಟ ಆಡಿಸಿ ಮನರಂಜನೆಗೆ ಬಳಸ ಲಾಗುತ್ತದೆ. ವೈದ್ಯಕೀಯ ಹಾಗೂ ಬಾಹ್ಯಾಕಾಶ ಪ್ರಯೋಗಗಳಲ್ಲೂ ಉಪಯೋಗಿಸಿದ್ದಿದೆ
ಮಕ್ರೂರ
(ಪ್ರಾ) ಏಡಿ, ಸೀಗಡಿ, ಪ್ರಾನ್ ಮುಂತಾದವನ್ನು ಒಳಗೊಂಡ ರೆಪ್ಟಾಂಷಿಯ ಉಪವಿಭಾಗಕ್ಕೆ ಸೇರಿದ ದಶಪಾದಿ ವಲ್ಕವಂತಗಳ ಒಂದು ಗುಂಪು. ವಿಸ್ತೃತಗೊಂಡ ಉದರ ಹಾಗೂ ಚೆನ್ನಾಗಿ ಅಭಿವರ್ಧನೆಗೊಂಡ ಬಾಲತೋಕೆ ಇವಕ್ಕೆ ಇರುತ್ತವೆ
ಮಖಮಲ್ಲು
(ಪ್ರಾ) ಸಾರಂಗದ ವರ್ಧಿಸುತ್ತಿರುವ ಕವಲು ಕೊಂಬನ್ನು ಆವರಿಸಿರುವ ಊತಕ ಪದರಗಳುಳ್ಳ ಚರ್ಮ. (ಸಾ) ಒಂದು ಪಕ್ಕದಲ್ಲಿ ಮೋಟುಮೋಟಾದ ದಟ್ಟವಾದ ತುಪ್ಪುಳ ಜುಂಗು ಇರುವ, ಒತ್ತಾಗಿ ಹೆಣೆದ ನುಣುಪಾದ ಹೊಳಪುಳ್ಳ ಬಟ್ಟೆಯ ಜಾತಿ
ಮಂಗ
(ಪ್ರಾ) ಪ್ರೈಮೇಟ್ ಗಣಕ್ಕೆ ಸೇರಿದ ಸಾಮಾನ್ಯವಾಗಿ ವೃಕ್ಷವಾಸಿಯಾದ ಬಾಲವುಳ್ಳ ಪ್ರಾಣಿ. ಪ್ರಾಚೀನ ಹಾಗೂ ನವ ಪ್ರಪಂಚದ ಉದ್ದ ಬಾಲದ ಪ್ರಾಣಿಗಳಿಗೂ ಮ್ಯಾರ್ಮಸೆಟ್ ಗಳಿಗೂ ಆಗ್ನೇಯ ಏಷ್ಯ, ಜಪಾನ್, ಜಿಬ್ರಾಲ್ಟರ ಹಾಗೂ ಉತ್ತರ ಆಫ್ರಿಕದ ಮೋಟುಬಾಲದ ಪ್ರಾಣಿಗಳಿಗೂ ಈ ಹೆಸರು ಅನ್ವಯವಾಗುತ್ತದೆ. ಕೋತಿ
ಮಂಗನ ಬಾವು
(ವೈ) ಕುತ್ತಿಗೆಯಲ್ಲಿ ಕರ್ಣೋಪಾಂತ ಗ್ರಂಥಿಗಳೂ ಲಾಲಾ ಗ್ರಂಥಿಗಳೂ ಊದಿಕೊಂಡು ನೋವು ಉಂಟುಮಾಡುವ ಒಂದು ತೀವ್ರತರ ಸಾಂಕ್ರಾಮಿಕ ಜಾಡ್ಯ
ಮಗುತನ
(ಮ) ವ್ಯಕ್ತಿಯ ಅಭಿವರ್ಧನೆಯಲ್ಲಿ ಎರಡನೆಯ ಹಂತ. ವಯೋಮಿತಿ ಸುಮಾರು ೧-೫ ವರ್ಷ
ಮಗ್ಗ
(ತಂ) ನೂಲಿನಿಂದ ಬಟ್ಟೆಯನ್ನು ನೇಯುವಯಂತ್ರ. ಇದರಲ್ಲಿ ‘ಹಾಸು’ ಹಾಗೂ ‘ಹೊಕ್ಕು’ ಎಂಬ ಎರಡು ಸೆಟ್ ದಾರಗಳಿರುತ್ತವೆ. ‘ಹೊಕ್ಕು’ ದಾರ ವನ್ನು ‘ಹಾಸು’ ದಾರದ ಮೇಲೆ ಅತ್ತಿಂದಿತ್ತ ಒಯ್ಯುತ್ತ ಲಾಳಿಯು ಹಾಸು-ಹೊಕ್ಕುಗಳನ್ನು ಪರಸ್ಪರ ಹೆಣೆದು ವಸ್ತ್ರವನ್ನು ತಯಾರಿಸುತ್ತದೆ
ಮಚ್ಚೆ
(ವೈ) ಭ್ರೂಣವನ್ನಾವರಿಸಿರುವ ಸಂಚಿಯಲ್ಲಿ ರಕ್ತಸ್ರಾವ ಆದ ಪರಿಣಾಮವಾಗಿ ಫೆಲೋಪಿಯನ್ ನಾಳದಲ್ಲಿ ಉಂಟಾದ ರಕ್ತಸುರಿಕೆಯ ಮುದ್ದೆ. ಚರ್ಮದಲ್ಲಿ ವರ್ಣ ದ್ರವ್ಯದಿಂದ ಕೂಡಿದ ಗಂಟು. ಸಣ್ಣ ರಕ್ತನಾಳದ ಹಿಗ್ಗಿನಿಂದ ಚರ್ಮದಲ್ಲಾದ ಊತ/ಕಲೆ
ಮಂಜರಿ
(ಸ) ಹೂಗೊಂಚಲು. ಪುಷ್ಪಮಂಜರಿ
ಮಂಜರಿಫಲ
(ಸ) ಅಂಡಾಶಯ ಮತ್ತು ಬೀಜಗಳು ಸೇರಿದಂತೆ ಪುಷ್ಪದ ಇತರ ಭಾಗಗಳೂ ಕೂಡಿ ಆದ ಫಲ
ಮಂಜು ಹನಿ
(ಸಾ) ನೀರಿನ ಆವಿಯು ದೂಳಿನ ಕಣಗಳ ಮೇಲೆ ಸಾಂದ್ರೀಕರಿಸಿ ರೂಪುಗೊಂಡ ನೀರಿನ ಕಿರಿಹನಿಗಳು. ಇವು ತೆಳುವಾದ ಬೂದು ಆವರಣ ನಿರ್ಮಿಸಿ ಗೋಚರತೆಯನ್ನು ಕಾವಳಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿಸುತ್ತವೆ. ಸಾಪೇಕ್ಷ ಆರ್ದ್ರತೆ ಶೇ. ೯೫ಕ್ಕಿಂತ ಕಡಿಮೆ. ನೋಡಿ: ಇಬ್ಬನಿ
ಮಂಜುಗಡ್ಡೆ
(ಪವಿ) ನೋಡಿ: ಬರ್ಫ
ಮಜ್ಜೆ
(ಪ್ರಾ) ಹೆಚ್ಚಿನ ಕಶೇರುಕಗಳಲ್ಲಿ ಉದ್ದ ಮೂಳೆಗಳ ಒಳಗಿನ ಪೊಳ್ಳು ಭಾಗಗಳಲ್ಲೂ (ಹಳದಿ ಮಜ್ಜೆ) ಕೆಲವು ಮಾದರಿಯ ಸರಂಧ್ರ ಎಲುಬುಗಳಲ್ಲೂ (ಕೆಂಪು ಮಜ್ಜೆ) ಕಂಡುಬರುವ, ನಾಳಗಳಿಂದ ಕೂಡಿರುವ ಸಂಬಂಧಕ ಊತಕ ಅಥವಾ ಮೆತ್ತನೆಯ ಕೊಬ್ಬು ಪದಾರ್ಥ. ಎಲುಬು ನೆಣ
ಮಟ್ಟಕಟ್ಟೆ
(ತಂ) ವಿಭಿನ್ನ ಮಟ್ಟಗಳ ಜಲರಾಶಿಗಳ ನಡುವೆ ನಿರ್ಮಿಸಿದ, ಇಬ್ಬದಿಗಳಲ್ಲೂ ಹೆಬ್ಬಾಗಿಲುಗಳಿರುವ ಕಟಕಟ್ಟೆ. ಕಟ್ಟೆಯೊಳಗಿನ ನೀರಿನ ಮಟ್ಟವನ್ನು ದೋಣಿ ಇರುವ ಬದಿಯ ನೀರಿನ ಮಟ್ಟಕ್ಕೆ ಸರಿಹೊಂದುವಂತೆ ಯುಕ್ತವಾಗಿ ಬದಲಿಸಿ ದೋಣಿ ಒಳಬರುವಂತೆ ಮಾಡಿ ಅನಂತರ ಕಟ್ಟೆಯೊಳಗಿನ ನೀರಿನ ಮಟ್ಟವನ್ನು ಇನ್ನೊಂದು ಬದಿಯ ನೀರಿನ ಮಟ್ಟಕ್ಕೆ ಬರುವಂತೆ ಪುನಃ ಸರಿಹೊಂದಿಸಿ ದೋಣಿ ಅತ್ತ ಬದಿಗೆ ಸುಲಭವಾಗಿ ಸಾಗುವಂತೆ ಮಾಡಲು ಇಂಥ ಕಟ್ಟೆಗಳು ಸಹಕಾರಿ
ಮಟ್ಟಸಭೂಮಿ
(ಭೂವಿ) ಮಟ್ಟಸ ಮೇಲ್ಮೈಯುಳ್ಳ, ಹರವಾದ ಎತ್ತರ ಪ್ರದೇಶ. ಮಧ್ಯೆ ಮಧ್ಯೆ ಕಣಿವೆಗಳಿಂದ ಆಳವಾಗಿ ಛೇದಿಸಲ್ಪಟ್ಟಿರುತ್ತದೆ
ಮಂಡಕೋಲು
(ತಂ) ಮಗ್ಗದಲ್ಲಿ ಹಾಸನ್ನು ಸುತ್ತಲು ಬಳಸುವ ಉರುಳೆ
ಮಂಡಲ