भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಮಲ್ಲಿಗೆ

(ಸ) ಜ್ಯಾಸ್ಮಿನಮ್ ಜಾತಿಗೆ ಸೇರಿದ, ಬಿಳಿ ಅಥವಾ ಹಳದಿ ಹೂ ಬಿಡುವ ಬಗೆಬಗೆಯ ಹೂ, ಬಳ್ಳಿ ಅಥವಾ ಪೊದೆ. ನೋಡಿ: ಜಾಜಿ

ಮಸಿಚೀಲ

(ಪ್ರಾ) ಕಟ್ಲ್ ಮೀನಿನಂಥ ಕೆಲವು ಜಾತಿಯ ಮೀನುಗಳಲ್ಲೂ ಶೀರ್ಷಪದಿಗಳಲ್ಲೂ ಗುದದ್ವಾರದ ಬಳಿ ಅನ್ನನಾಳದ ಒಳಕ್ಕೆ ತೆರೆದುಕೊಳ್ಳುವ ಹಾಗೂ ಒಂದು ಬಗೆಯ ಕಪ್ಪು-ಕಂದು ದ್ರವ ಸಂಚಯಿಸುವ ದೊಡ್ಡ ಗ್ರಂಥಿ. ಆಪತ್ತಿನಿಂದ ತಪ್ಪಿಸಿಕೊಳ್ಳಲು ಪ್ರಾಣಿ ಈ ಗ್ರಂಥಿಯಿಂದ ಕಪ್ಪು ದ್ರವವನ್ನು ಹೊರಚಿಮ್ಮಿಸುತ್ತದೆ

ಮಸುಕಾಗು

(ಸಾ) ಬಣ್ಣ ಕ್ರಮೇಣ ಅಳಿಸಿಹೋಗುವುದು, ಅದೃಶ್ಯವಾಗುವುದು, ಚಲಚ್ಚಿತ್ರದಲ್ಲಿ ದೃಷ್ಟಿಪಥದಿಂದ ಚಿತ್ರ ಸರಿದು ಹೋಗುವುದು. ರೇಡಿಯೋ ತರಂಗ ಕುರಿತಂತೆ ಹೆಚ್ಚು ದುರ್ಬಲವಾಗುವುದು

ಮಸೂರ

(ಭೌ) ಒಂದು ಪಕ್ಕದಲ್ಲಿ ಅಥವಾ ಎರಡೂ ಪಕ್ಕಗಳಲ್ಲಿ ಒಳ ಅಥವಾ ಹೊರ ಬಾಗುಳ್ಳದ್ದಾಗಿ ಬೆಳಕಿನ ಕಿರಣಗಳನ್ನು ಕೇಂದ್ರೀಕರಿಸುವ ಅಥವಾ ಚದರಿಸುವ ಗಾಜಿನ ಅಥವಾ ಇತರ ಪಾರಕ ವಸ್ತುವಿನ ಬಿಲ್ಲೆ. (ಚಿತ್ರದಲ್ಲಿ ಕ್ರಮವಾಗಿ ದ್ವಿಪೀನ, ದ್ವಿನಿಮ್ನ, ಸಮಪೀನ, ಸಮನಿಮ್ನ, ನಿಮ್ನಪೀನ). ಯವ. ಲೆನ್ಸ್

ಮಸೂರಕವಾಟ

(ತಂ) ಕ್ಯಾಮೆರಾದಲ್ಲಿ ಮಸೂರವನ್ನು ಮುಚ್ಚುವ, ತೆರೆಯುವ ಸಾಧನ. ಇದು ವಿವಿಧ ವೇಗಗಳಲ್ಲಿ ಹಾಗೂ ವಿವಿಧ ಪ್ರಮಾಣಗಳಲ್ಲಿ ತೆರೆದು ಮುಚ್ಚುತ್ತ ಫಿಲ್ಮ್ ಮೇಲೆ ಬೀಳುವ ಬೆಳಕಿನ ಪ್ರಮಾಣವನ್ನು ಹೆಚ್ಚು ಅಥವಾ ಕಡಿಮೆ ಮಾಡಲು ನೆರವಾಗುತ್ತದೆ. ಕೆಲವು ಬಗೆಯ ಕ್ಯಾಮೆರಾಗಳಲ್ಲಿ ಇಂತಹ ಕವಾಟವನ್ನು ಮಸೂರದ ಒಳಗೆ (ನಡುವಿನಲ್ಲಿ) ಇನ್ನು ಕೆಲವಲ್ಲಿ ಅದರ ಹಿಂಬದಿಯಲ್ಲಿ ಅಳವಡಿಸಲಾಗಿರುತ್ತದೆ

ಮಸ್ಕಯೆ ವಲಿಟಾಂಟಿಸ್

(ವೈ) ಕಾಚದ್ರವ ಮತ್ತು ಕಣ್ಣಿನ ಮಸೂರದಲ್ಲಿ ಸೇರಿಕೊಂಡ ಪುಟ್ಟ ಕೋಶಕಣಗಳ ಮತ್ತು ಜೀವಕಣಗಳ ಚೂರುಗಳಿಂದಾಗಿ ಕಣ್ಣುಗಳ ಮುಂಭಾಗ ದಲ್ಲಿ ಕಪ್ಪು ಚುಕ್ಕೆಗಳು ಚಲಿಸುವಂತೆ ಕಾಣಬರುವುದು

ಮಸ್ಕಾಲಜಿ

(ಸ) ಪಾಚಿ ಜಾತಿಯ ಸಸ್ಯಗಳ ಅಧ್ಯಯನ ಮಾಡುವ ವಿಜ್ಞಾನ. ಶೈವಲವಿಜ್ಞಾನ

ಮಸ್ಕೊವೈಟ್

(ರ) ಬಿಳಿ ಅಭ್ರಕ. ಅಲ್ಯೂಮಿನಿಯಮ್ ಹಾಗೂ ಪೊಟ್ಯಾಸಿಯಮ್‌ಗಳ ಜಲಯುಕ್ತ ಸಿಲಿಕೇಟ್. ಏಕನತ ವ್ಯವಸ್ಥೆಯಲ್ಲಿ ಸ್ಫಟಿಕೀಕರಿಸುತ್ತದೆ. ಬಿಳಿ-ಬೂದು ಬಣ್ಣ. ಕೆಲವು ಮಾದರಿಯ ಗ್ರಾನೈಟ್ ಹಾಗೂ ಪೆಗ್ಮಟೈಟ್ ಶಿಲೆಗಳಲ್ಲಿ ಲಭ್ಯ. ರೂಪಾಂತರಿತ ಹಾಗೂ ಜಲಜಶಿಲೆಗಳಲ್ಲೂ ಕಾಣಬರುವುದುಂಟು. ವಿದ್ಯುದುಪಕರಣಗಳ ತಯಾರಿಕೆಯಲ್ಲಿ, ಗೋಡೆ ಕಾಗದ ಹಾಗೂ ಪೆಯಿಂಟ್‌ಗಳಲ್ಲಿ ಬಳಕೆ

ಮಸ್ಟರ್ಡ್ ಅನಿಲ

(ರ) ಅತ್ಯಂತ ವಿಷಮಯ ಅನಿಲ. ಚರ್ಮದ ಮೇಲೆ ಸುಡುವ ಪರಿಣಾಮ ಬೀರುತ್ತದೆ. ಡೈಕ್ಲೊರೊ ಡೈ ಇಥೈಲ್ ಸಲ್ಫೈಡ್. (CICH2CH2)2S. ಎಥೀನ್ ಹಾಗೂ ಡೈಸಲ್ಫರ್ ಡೈಕ್ಲೋರೈಡ್‌ಗಳಿಂದ (S2CI2) ತಯಾರಿಕೆ. ಯುದ್ಧಾನಿಲವಾಗಿ ಬಳಕೆ. ತೈಲರೂಪದಲ್ಲಿ ಸಾಂದ್ರತೆ ೧.೨೮. ಕುಬಿಂ ೨೧೫0ಸೆ. ಸಾಸುವೆ ಅನಿಲ

ಮಸ್ಲಿನ್

(ತಂ) ಬಲು ಸೂಕ್ಷ್ಮ ನೇಯ್ಗೆಯ ಹತ್ತಿ ಬಟ್ಟೆ. ಹೆಂಗಸರ ಉಡಿಗೆ, ಪರದೆ ಮೊದಲಾದವುಗಳಿಗೆ ಬಳಕೆ

ಮಹಜರು

(ಸಾ) ಪಂಚನಾಮೆ. ತನಿಖೆ. ಶೋಧನೆ

ಮಹತ್ತ್ವ

(ಭೌ) (ಬಲ ಅಥವಾ ಬಲಯುಗ್ಮದ) ಭ್ರಮಣ ಪ್ರಮಾಣ. ಬಿಂದುವೊಂದರಲ್ಲಿ ಬಲದ ಮಹತ್ತ್ವ = ಬಲ ´ನಿಗದಿತ ಬಿಂದುವಿನಿಂದ ಬಲದ ಕ್ರಿಯಾರೇಖೆಗಿರುವ ಲಂಬದೂರ; ಬಲ ಯುಗ್ಮದ ಮಹತ್ತ್ವ = ಬಲ´ ಬಲಗಳ ನಡುವಿನ ಲಂಬದೂರ

ಮಹಾ ಏಕೀಕೃತ ಸಿದ್ಧಾಂತ

(ಭೌ) ನಾಲ್ಕು ಮೂಲಬಲಗಳನ್ನು ಏಕೈಕ ಬಲವಾಗಿ ವ್ಯಕ್ತಪಡಿಸಿ ವಿಶ್ವದ ಮೂಲಕಣ ಗಳನ್ನು ವಿವರಿಸುವ ಸಿದ್ಧಾಂತ. ನೋಡಿ: ಏಕೀಕೃತ ಕ್ಷೇತ್ರ ಸಿದ್ಧಾಂತ

ಮಹಾ ಹಿಮಯುಗ

(ಭೂವಿ) ಭೂಮಿಯ ಇತಿಹಾಸದಲ್ಲಿ ಟರ್ಷಿಯರಿ ಅನಂತರದ ಪ್ಲಯಿಸ್ಟೊಸೀನ್ ಕಾಲಾವಧಿ. ಉತ್ತರ ಗೋಳಾರ್ಧದಲ್ಲಿ ಈಗಿರುವುದಕ್ಕಿಂತ ಹೆಚ್ಚಿನ ಭೂ ಭಾಗಗಳು ಹಿಮದಿಂದ ಆವೃತವಾಗಿದ್ದ ಕೊನೆಯ ೨೦ ಲಕ್ಷ ವರ್ಷಗಳ ಕಾಲಾವಧಿ

ಮಹಾಗನಿ

(ಸ) ಮೀಲಿಯೇಸೀ ಕುಟುಂಬದ ಉಷ್ಣ ವಲಯದ ಕೆಂಪು-ಕಂದು ಮಿಶ್ರಿತ ಚೌಬೀನೆ ಮರ. ಸ್ವೈಟೀನಿಯ ಮ್ಯಾಕ್ರೊಫಿಲ್ಲ ವೈಜ್ಞಾನಿಕ ನಾಮ. ಮಧ್ಯ ಅಮೆರಿಕ ಸಸ್ಯ. ಪೀಠೋಪಕರಣ ತಯಾರಿಕೆಯಲ್ಲಿ ಬಳಕೆ. ಬೇವುಡ್

ಮಹಾಧಮನಿ ಪದರ ಬೇರ್ಪಡೆ

(ವೈ) ಹೃದಯದಿಂದ ಹೊರಡುವ ಮಹಾಧಮನಿಯು ದೇಹದ ಎಲ್ಲ ಭಾಗ ಗಳಿಗೂ ಆಕ್ಸಿಜನ್‌ಭರಿತ ರಕ್ತವನ್ನು ಪೂರೈಸುತ್ತದೆ. ಈ ಧಮನಿಯು ಮೂರು ಪದರಗಳನ್ನು ಹೊಂದಿರುತ್ತದೆ. ಅಪರೂಪಕ್ಕೆ ಈ ಪದರಗಳು, ಒಂದು ಪ್ಲೈವುಡ್ ಹಲಗೆಯನ್ನು ಮಳೆಯಲ್ಲಿ ನೆನೆಯಲು ಬಿಟ್ಟರೆ ಅದರ ಪದರಗಳೆಲ್ಲಾ ಹೇಗೆ ಬೇರ್ಪಡುತ್ತವೆಯೋ ಹಾಗೆ ಬೇರ್ಪಡ ಬಹುದು. ಇದೊಂದು ಜೀವಕ್ಕೆ ಅಪಾಯಕಾರಿಯಾಗಬಹುದಾದ ಸ್ಥಿತಿ. ಆಗ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ. ಅನಿಯಂತ್ರಿತ ಅತಿ ರಕ್ತದೊತ್ತಡ, ಮಾರ್ಫನ್ ಲಕ್ಷಣಾವಳಿ, ಸಿಫಿಲಿಸ್‌ಗ್ರಸ್ತ ಮಹಾಧಮನಿ ಇಂತಹ ಪ್ರಸಂಗಗಳಲ್ಲಿ ಈ ಸ್ಥಿತಿ ತಲೆದೋರಬಹುದು

ಮಹಾಭಕ್ಷಿ

(ಪ್ರಾ) ದೊಡ್ಡ ಆಹಾರ ಕಣಗಳನ್ನು ತಿನ್ನುವ (ಜೀವಿ)

ಮಹಾವೃತ್ತ

(ಖ) ಗೋಳಕೇಂದ್ರದ ಮೂಲಕ ಹಾಯುವ ಸಮತಲದಿಂದ ಗೋಳವನ್ನು ಛೇದಿಸಿದಾಗ ದೊರೆಯುವ ವೃತ್ತ. ಗೋಳ ಕೇಂದ್ರವೇ ಇದರ ಕೇಂದ್ರ ಆಗಿರುತ್ತದೆ. ತ್ರಿಜ್ಯವೂ ಸಹ ಹಾಗೆಯೇ ಆಗಿರುತ್ತದೆ. ಕೇಂದ್ರದ ಮುಖಾಂತರ ಸಮತಲವು ಸಾಗಿಹೋಗಲು ಆಗದಾಗ ದೊರೆಯುವ ಗೋಳಛೇದಕ್ಕೆ ಅಲ್ಪವೃತ್ತ (ನೋಡಿ) ಎಂದು ಹೆಸರು

ಮಹಾಸಂಕುಚಿತ

(ಖ) ವ್ಯಾಕೋಚಿಸುತ್ತಿರುವ ವಿಶ್ವದಲ್ಲಿ ಅಗತ್ಯವಿರುವಷ್ಟು ದ್ರವ್ಯ ಇದ್ದಲ್ಲಿ, ಮುಂದೊಮ್ಮೆ ವ್ಯಾಕೋಚನೆ ಸ್ಥಗಿತವಾಗಿ ಇಡೀ ವಿಶ್ವ ಕುಸಿತಗೊಂಡು ಮತ್ತೆ ಮೊದಲಿನ ಸ್ಥಿತಿಯತ್ತ ಸಂಕುಚಿತಗೊಳ್ಳಬಹುದೆಂಬ ಊಹೆ

ಮಹಾಸಿರೆ

(ವೈ) ದೇಹದ ಅಗ್ರ ಮತ್ತು ಪಶ್ಚ ಭಾಗ ಗಳಿಂದ ಆಕ್ಸಿಜನ್ ಪೂರ್ಣ ಪೂರೈಕೆಯಾಗಿರದ ರಕ್ತವನ್ನು ಹೃದಯಕ್ಕೆ ಸಾಗಿಸುವ ಎರಡು ಪ್ರಧಾನ ಸಿರೆಗಳಲ್ಲೊಂದು. ಅಗ್ರ ಮಹಾಸಿರೆಯು ತಲೆ ಮತ್ತು ಕತ್ತಿನಿಂದ ಬಲಹೃತ್ಕರ್ಣಕ್ಕೆ ರಕ್ತವನ್ನು ಒಯ್ದರೆ ಪಶ್ಚ ಮಹಾಸಿರೆಯು ಸೊಂಟ ಮತ್ತು ಹಿಂಬದಿ ಅಂಗಗಳಿಂದ ರಕ್ತವನ್ನು ಹೊರಹರಿಸುತ್ತದೆ. ಮಹಾಭಿಧಮನಿ

Search Dictionaries

Loading Results

Follow Us :   
  Download Bharatavani App
  Bharatavani Windows App