भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ನಾಡಶಿಲೆ

(ಭೂವಿ) ಲೋಹದ ಅದಿರಿನ ಸಿರಗಳನ್ನು ಅಥವಾ ನಿಕ್ಷೇಪಗಳನ್ನು ಸುತ್ತುವರಿದಿರುವ ಕಲ್ಲು. ಸ್ವತಃ ಈ ಕಲ್ಲಿಗೆ ಯಾವ ಬೆಲೆಯೂ ಇಲ್ಲ

ನಾಡಿ

(ವೈ) ಪ್ರತಿಬಾರಿ ಹೃದಯ ಸಂಕೋಚಿಸಿದಾಗಲೂ ಒತ್ತಡದ ಅಲೆಯಿಂದಾಗಿ ಧಮನಿ ಭಿತ್ತಿಗಳಲ್ಲಿ ಆವರ್ತಕವಾಗಿ ಸಂಭವಿಸುವ ವ್ಯಾಕೋಚನ ಮತ್ತು ಲಂಬನ (ಸಂಕೋಚನ). ಮಿಡಿತ. ಸ್ಪಂದ. ಧಮನಿಗಳಲ್ಲಿ ರಕ್ತವು ನುಗ್ಗಿ ಬರುವಾಗ ನಡೆಯುವ ಲಯಬದ್ಧವಾದ ಸ್ಪಂದನ. ಇದನ್ನು ಕೈಯ ಮಣಿಕಟ್ಟು, ಗಂಡಸ್ಥಳ ಮೊದಲಾದವನ್ನು ಬೆರಳುಗಳಿಂದ ಹಿಡಿದು ತಿಳಿಯಬಹುದು

ನಾಡಿ ದರ

(ವೈ) ಧಮನಿಯ ಸ್ಪರ್ಶವೇದ್ಯ ಮಿಡಿತವೇ ನಾಡಿ. ಇದು ಹೃದಯದ ಸಂಕೋಚನ-ವ್ಯಾಕೋಚನಗಳ ಫಲವಾಗಿ ರಕ್ತ ಪ್ರವಾಹದಲ್ಲುಂಟಾಗುವ ಅಲೆಯ ಪ್ರತೀಕ. ಮಿಡಿತದ ವೇಗ ವ್ಯಕ್ತಿಯಿಂದ ವ್ಯಕ್ತಿಗೆ, ಅದೇ ವ್ಯಕ್ತಿಯಲ್ಲಿ ಹೊತ್ತಿನಿಂದ ಹೊತ್ತಿಗೆ ವ್ಯತ್ಯಾಸವಾಗುತ್ತಾ ಹೋಗುತ್ತದೆ. ಆದರೆ ವಯಸ್ಕರಲ್ಲಿ ಮಿನಿಟ್‌ಗೆ ೬೦ ರಿಂದ ೮೦ ಬಾರಿ ನಾಡಿ ಮಿಡಿತವಿದ್ದು ಸರಾಸರಿಯಲ್ಲಿ ಅದನ್ನು ೭೨ ಎಂದು ಗಣಿಸಲಾಗಿದೆ. ಇದೇ ನಾಡಿ ದರ. ನಾಡಿ ನೋಡಿ ವ್ಯಕ್ತಿಯ ಹೃದಯದ ಕಾರ್ಯ ಸಮರ್ಥತೆಯ ಬಗೆಗೆ, ಆತನ ಶರೀರದ ಆರೋಗ್ಯದ ಬಗೆಗೆ ಮಾಹಿತಿ ಪಡೆಯಬಹುದು

ನಾದ

(ಭೌ) ಒಂದೇ ಆವೃತ್ತಿಯ ಧ್ವನಿ ಸಂಕೇತ. ಸಂಗೀತ ಪರಿಭಾಷೆಯಲ್ಲಿ ಸ್ಥಿರವಾದ ಮೂಲಭೂತ ಆವೃತ್ತಿಯುಳ್ಳ ಒಂದು ಸಂಕೀರ್ಣ ಶ್ರುತಿಸ್ವರ. ಒಂದೇ ಆವೃತ್ತಿಯ ಧ್ವನಿಯನ್ನು ಶುದ್ಧ ನಾದವೆಂದು ಭಾವಿಸಲಾಗುತ್ತದೆ

ನಾದಗುಣ

(ಭೌ) ಆಯಾ ವಾದ್ಯಕ್ಕೆ ಅಥವಾ ಶರೀರಕ್ಕೆ ವಿಶಿಷ್ಟ ವಾದ, ಕಂಪನ ಸ್ವರೂಪವನ್ನು ಅವಲಂಬಿಸಿರುವ ಸಂಗೀತ ಗುಣ

ನಾದು

(ಸಾ) ನೀರು ಹಾಕಿ ಕಲೆಸಿದ ಹಿಟ್ಟು, ಜೇಡಿಮಣ್ಣು ಮೊದಲಾದವನ್ನು ಹಿಸುಕಿ, ಮರ್ದಿಸಿ, ಹದವಾಗಿ ಮಾಡುವುದು

ನಾನ್‌ವೇಲೆಂಟ್

(ರ) ೦ ವೇಲೆನ್ಸೀಯ. ಅಂದರೆ ಇತರ ಪರಮಾಣುಗಳೊಂದಿಗೆ ಕೂಡಿಕೊಳ್ಳುವ ಶಕ್ತಿ ಇಲ್ಲದ. ಉದಾ: ಹೀಲಿಯಮ್. ಅವೇಲೆನ್ಸೀಯ

ನಾಪಾಮ್ ಬಾಂಬ್

(ತಂ) ಅಲ್ಯೂಮಿನಿಯಮ್ ಭಸ್ಮ ತುಂಬಿ ತಯಾರಿಸಿದ ಸಿಡಿಗುಂಡು. ಜ್ವಲನೀಯ ಹೈಡ್ರೊ ಕಾರ್ಬನ್ ತೈಲಗಳನ್ನು ಸಾಬೂನುಗಳೊಂದಿಗೆ ಬೆರೆಸಿ ತಯಾರಿಸಿದ ಅರ್ಧಘನ ಸ್ಥಿತಿಯ ಅಸ್ಫಟಿಕ ದ್ರಾವಣವಿರುವ ಬಾಂಬ್. ಅಗ್ಗ, ಸುಲಭ ಬಳಕೆ ಹಾಗೂ ಗುರಿಗೆ ಅಂಟಿಕೊಂಡೇ ಉರಿಯುವ ಗುಣ ಇವುಗಳಿಂದಾಗಿ ಯುದ್ಧಗಳಲ್ಲಿ ಬಳಕೆ

ನಾಭಿ

(ಭೌ) ದ್ಯುತಿ ವ್ಯವಸ್ಥೆಯೊಂದರ ಮೂಲಕ (ಮಸೂರ ಅಥವಾ ದರ್ಪಣದ ಮೂಲಕ) ಹಾದುಬಂದ ಸಮಾಂತರ ಕಿರಣಗಳು ವಕ್ರೀಭವಿಸಿಯೋ ಪ್ರತಿಫಲಿಸಿಯೋ ವ್ಯವಸ್ಥೆಯ ಅಕ್ಷದ ಮೇಲೆ ಅಭಿಸರಿಸುವ ಅಥವಾ ಅಕ್ಷದಿಂದ ಅಪಸರಿಸುವ ಬಿಂದು. ಮೊದಲ ಪ್ರಸಂಗದಲ್ಲಿಯ ನಾಭಿಯನ್ನು ನೈಜವೆಂದೂ ಎರಡನೆಯ ಪ್ರಸಂಗದ್ದನ್ನು ಮಿಥ್ಯವೆಂದೂ ಹೇಳುತ್ತೇವೆ. (ಗ) ನೋಡಿ : ಶಂಕುಜ

ನಾಭಿ ಆಶಯ

(ಪ್ರಾ) ಉನ್ನತ ಪ್ರಾಣಿಗಳಲ್ಲಿ ಬಂಡಾರ (ಪೀತಕ) ಚೀಲ ಅಥವಾ ಭ್ರೂಣದ ಹೊರಗಿರುವ ಹಾಗೂ ಹೊಕ್ಕಳು ಬಳ್ಳಿಯ ಮೂಲಕ ಅದರೊಂದಿಗೆ ಸಂಬಂಧ ಹೊಂದಿರುವ ಬಂಡಾರ ಚೀಲದ ಭಾಗ

ನಾಭಿ ಜ್ಯಾ

(ಗ) ಯಾವುದೇ ಒಂದು ಶಂಕುಜದ (ಕೋನಿಕ್) ನಾಭಿಯ (ಫೋಕಸ್) ಮೂಲಕ ಹಾದುಹೋಗುವ ಜ್ಯಾ (ಕಾರ್ಡ್)

ನಾಭಿತಲ

(ಭೌ) ಮಸೂರದ ಅಥವಾ ಮಸೂರ ವ್ಯವಸ್ಥೆಯ ಪ್ರಧಾನ ಅಕ್ಷಕ್ಕೆ ಲಂಬಕೋನದಲ್ಲಿಯ ವ್ಯವಸ್ಥೆಯ ನಾಭೀಬಿಂದುವಿನ ಮೂಲಕ ಹಾದುಹೋಗುವ ಹಾಗೂ ನಿರ್ದಿಷ್ಟ ವಸ್ತುವಿನ ಬಿಂಬ ರೂಪುಗೊಳ್ಳುವ ಸಮತಲ. ವಕ್ರ ತಲವಿರುವ ಮಸೂರ ಅಥವಾ ಕನ್ನಡಿಗೆ ಸಮಾಂತರವಾಗಿದ್ದು ಅದರ ನಾಭಿಯನ್ನೊಳಗೊಳ್ಳುವ ಸಮತಲ

ನಾಭಿಸು

(ಭೌ) ನಾಭಿಯಲ್ಲಿ ಒಂದುಗೂಡುವಂತೆ ಮಾಡು

ನಾಭೀ ಲಂಬ

(ಗ) ಶಂಕುಜದಲ್ಲಿ ಸಮಮಿತಿ ಅಕ್ಷಕ್ಕೆ ಲಂಬವಾಗಿರುವ ಹಾಗೂ ನಾಭಿ ಮೂಲಕ ಸಾಗುವ ಜ್ಯಾದ ದೀರ್ಘತೆ

ನಾಮಪದ್ಧತಿ

(ಸಾ) ಯಾವುದೇ ವಿಜ್ಞಾನದಲ್ಲಿ ಬಳಸುವ ವಿಶಿಷ್ಟ ಹೆಸರುಗಳನ್ನು ಅಣಿಗೊಳಿಸುವ ವ್ಯವಸ್ಥಿತ ಕ್ರಮ

ನಾಯಿ

(ಪ್ರಾ) ಕಾರ್ನಿವೊರ ಗಣ, ಕೇನಿಡೀ ಕುಟುಂಬಕ್ಕೆ ಸೇರಿದ ಕೇನಿಸ್ ಫೆಮಿಲಿಯಾರಿಸ್ ಎಂಬ ಹೆಸರಿನ ಸಾಕು ಪ್ರಾಣಿ. ಮನುಷ್ಯ ಪಳಗಿಸಿದ ಪ್ರಾಚೀನ ಪ್ರಾಣಿ. ಉತ್ತಮ ಒಡನಾಡಿ. ಗೆಳೆಯ, ನಿಷ್ಠಾವಂತ ಸೇವಕ. ಬೆರಳುಗಳನ್ನು ನೆಲಕ್ಕೆ ಊರಿ ನಡೆಯು ವುದರಿಂದ ಅಂಗುಲಿಗಾಮಿ (ಡಿಜಿಟಿಗ್ರೇಡ್) ಎಂಬ ಹೆಸರೂ ಉಂಟು. ಜಗತ್ತಿನಾದ್ಯಂತ ನೂರಾರು ಮಾದರಿ ತಳಿಗಳಿವೆ. ಜ್ಞಾಪಕಶಕ್ತಿ ಅಧಿಕ. ಕಣ್ಣು, ಕಿವಿ ಸೂಕ್ಷ್ಮ. ಘ್ರಾಣೇಂದ್ರಿಯ ಇನ್ನೂ ಹೆಚ್ಚು ಸೂಕ್ಷ್ಮ

ನಾಯಿಕಜ್ಜಿ

(ವೈ) ಸಾರ್ಕಾಪ್ಟಿಕ್ ಅಥವಾ ಡಿಮೊಡೆಕ್ಟಿಕ್ ಜಾತಿಗೆ ಸೇರಿದ (ಜೇಡರ ಬಳಗದ) ಪರೋಪಜೀವಿ ನುಸಿಗಳಿಂದ ಕೂದಲು ಅಥವಾ ತುಪ್ಪಟ ಉಳ್ಳ ಪ್ರಾಣಿಗಳಲ್ಲಿ (ನಾಯಿಗಳಲ್ಲಿ), ಕೆಲವು ವೇಳೆ ಮನುಷ್ಯರಲ್ಲೂ ಉಂಟಾಗುವ ಒಂದು ರೀತಿಯ ಅಂಟು ಚರ್ಮರೋಗ

ನಾರಡ್ರೀನಲಿನ್

(ಜೀ) ಅನುವೇದನಾ ನರವ್ಯೂಹ ದಲ್ಲಿ ಅಡ್ರೀನಲ್ ಗ್ರಂಥಿಗಳು ಉತ್ಪಾದಿಸುವ ಹಾಗೂ ನರಗಳ ತುದಿಗಳು ಸ್ರವಿಸುವ ಒಂದು ಹಾರ್ಮೋನ್. ಇದು ನರಾವೇಗ ಗಳನ್ನು ಸಾಗಿಸುವ ರಾಸಾಯನಿಕ. ಸಾಮಾನ್ಯ ಕ್ರಿಯೆಗಳೆಲ್ಲ ಅಡ್ರೀನಲಿನ್‌ನ ಕ್ರಿಯೆಗಳಂತೆಯೇ. ಆದರೆ ತುರ್ತು ಪರಿಸ್ಥಿತಿಗಳಿಗೆ ಶರೀರವನ್ನು ಸಿದ್ಧಗೊಳಿಸುವುದಕ್ಕಿಂತ ಹೆಚ್ಚಾಗಿ ಇದು ಶರೀರದ ಚಟುವಟಿಕೆ ಸಹಜವಾಗಿ ಇರಿಸುವುದರ ಕಡೆಗೇ ಗಮನ ನೀಡುತ್ತದೆ

ನಾರಾಯಣಿ ಪಕ್ಷಿ

(ಪ್ರಾ) ನೋಡಿ : ಕಬ್ಬಾರೆ ಹಕ್ಕಿ

ನಾರ್ಕೊಟಿಕ್

(ರ) ಔಷಧಿಯಾಗಿ ಸೇವಿಸಿದಾಗ ಸಂವೇದನ ಶೀಲತೆಯನ್ನು ಕುಂಠಿತಗೊಳಿಸುವ ಪದಾರ್ಥ. ಅಧಿಕ ಪ್ರಮಾಣದಲ್ಲಿ ಸೇವಿಸಿದಾಗ ಮತ್ತನ್ನು ಬರಿಸುತ್ತದೆ ಹಾಗೂ ಪ್ರಜ್ಞಾಹೀನ ಸ್ಥಿತಿ ಉಂಟು ಮಾಡುತ್ತದೆ. ಸತತ ಬಳಕೆ ಚಟವಾಗಿ ಪರಿಣಮಿಸುವುದರಿಂದ ನಿಯಂತ್ರಣದ ಆವಶ್ಯಕತೆ ಇದೆ

Search Dictionaries

Loading Results

Follow Us :   
  Download Bharatavani App
  Bharatavani Windows App