भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಧಾರಾರೇಖೆ

(ಭೌ) ತರಲದಲ್ಲಿಯ ಒಂದು ರೇಖೆ. ಇದರ ಪ್ರತಿಯೊಂದು ಬಿಂದುವಿನಲ್ಲೂ ಎಳೆದ ಸ್ಪರ್ಶಕ ಆ ಕ್ಷಣದಲ್ಲಿ ತರಲದ ಕಣಚಲನೆಯ ದಿಶೆಯಲ್ಲಿರುತ್ತದೆ

ಧೂಪಕ

(ತಂ) ಕ್ರಿಮಿಗಳನ್ನೂ ಅವುಗಳ ಮರಿಹುಳು ಗಳನ್ನೂ ಇತರ ಹಾನಿಕಾರಕ ಕೀಟಗಳನ್ನೂ ನಾಶಗೊಳಿಸಲು ಅನಿಲ ಸ್ಥಿತಿಯಲ್ಲಿ ವರ್ತಿಸುವ ರಾಸಾಯನಿಕ ಸಂಯುಕ್ತ

ಧೂಮ

(ತಂ) ರಾಸಾಯನಿಕ ಕ್ರಿಯೆಯಿಂದಾಗಿ ಇಲ್ಲವೇ ಬಾಷ್ಪಗಳ ಸಾಂದ್ರೀಕರಣದಿಂದಾಗಿ ಉದ್ಭವಿಸಿ ಗಾಳಿಯಲ್ಲಿ ಹರಡುವ ಕಡಿಮೆ ಬಾಷ್ಪಶೀಲತೆಯ, ೧ ಮೈಕ್ರೋಮೀಟರ್‌ಗೂ ಕಡಿಮೆ ಗಾತ್ರದ, ಸಾಮಾನ್ಯವಾಗಿ ಗೋಚರ, ಕಣಗಳ ಸಮೂಹ. ಹೊಗೆ

ಧೂಮಕೇತು

(ಖ) ಸೌರವ್ಯೂಹದ ವಿಶಿಷ್ಟ ಸದಸ್ಯ ಕಾಯ. ಅಲ್ಪರಾಶಿ, ಮೀಥೇನ್, ಮಂಜು, ಕಾರ್ಬನ್ ಡೈಆಕ್ಸೈಡ್ ದೂಳು ಮುಂತಾದವು ಇದರ ಘಟಕಗಳು. ಸೂರ್ಯನ ಸುತ್ತ ಉತ್ಕೇಂದ್ರೀಯ ಕಕ್ಷೆಯಲ್ಲಿ ಸುತ್ತುತ್ತದೆ. ಅಲ್ಪ ಅವಧಿ ಧೂಮಕೇತುಗಳ ಪರಿಭ್ರಮಣ ಅವಧಿ ೧೫೦ ವರ್ಷಗಳಿಗೂ ಕಮ್ಮಿ ಇದ್ದರೆ, ದೀರ್ಘ ಅವಧಿಗಳದು ೧೦೦,೦೦೦ ವರ್ಷಗಳಿಗೂ ಮೀರಿರುತ್ತದೆ. ಧೂಮಕೇತುವಿನ ಬೀಜಕೇಂದ್ರವು ಮಂಜು ಹಾಗೂ ದೂಳಿನಿಂದ ಕೂಡಿರುತ್ತದೆ. ಅದರ ಸುತ್ತ ಅನಿಲ ಹಾಗೂ ದೂಳಿನ ಮೇಘಾವರಣವಿರುತ್ತದೆ. ಧೂಮಕೇತುವಿಗೆ ಒಂದು ಬಾಲವೂ ಇದ್ದು, ಅದು ಸೂರ್ಯನಿಗೆ ಸಮೀಪವಿದ್ದಾಗ ಮಾತ್ರ ಕಾಣಬರುತ್ತದೆ. ಹೆಚ್ಚಿನ ಧೂಮಕೇತುಗಳ ಬೀಜಕೇಂದ್ರಗಳು ‘ಕೊಳಕು ಹಿಮಚೆಂಡುಗಳು. ಅವುಗಳ ವ್ಯಾಸ ಒಂದು ಕಿಮೀ ಆಗಿದ್ದರೆ, ಕೆಲವು ಧೂಮಕೇತುಗಳ ವ್ಯಾಸ ೧೦ ಕಿಮೀಗೂ ಹೆಚ್ಚು. ಕೇಂದ್ರದ ಸುತ್ತಲಿನ ಮೇಘಾವರಣದ ವ್ಯಾಸ ೧೦೪-೧೦೫ ಕಿಮೀ ಆಗಿದ್ದು ಬಾಲದ ಉದ್ದ ೧೦೭ ಕಿಮೀ ಆಗಿರಬಹುದು. ಬಾಲಚುಕ್ಕಿ, ಬಾಲಕೇತು. ನೋಡಿ: ಹ್ಯಾಲೀ ಧೂಮಕೇತು

ಧೂಮನ

(ವೈ) ಹೊಗೆಯಿಂದ ಹೊಗೆಕಾರಕ ಕ್ರಿಮಿಗಳನ್ನು ನಾಶಗೊಳಿಸುವುದು. ನೋಡಿ : ಹೊಗೆಗೆ ಒಡ್ಡು

ಧ್ರುವ ಮತ್ತು ಧ್ರುವೀಯ

(ಗ) ವೃತ್ತವನ್ನೂ ಒಳಗೊಂಡಂತೆ ಶಂಕುಜತಲದಲ್ಲಿರುವ ಪರಸ್ಪರ ಸಂಬಂಧಿತ ಬಿಂದು ಮತ್ತು ಸರಳರೇಖೆ; ವಕ್ರ ಕುರಿತಂತೆ ಬಿಂದುವಿನ ಸಂಗತ ಸಹವರ್ತಿಗಳ (ಹಾರ್ಮಾನಿಕ್ ಕಾಂಜ್ಯುಗೇಟ್ಸ್) ಪಥವೇ ಧ್ರುವೀಯ; ಆಗ ಬಿಂದು ಈ ಧ್ರುವೀಯದ ಧ್ರುವ. ಶಂಕುಜದ ಹೊರಗೆ ಧ್ರುವ ಇರುವಾಗ ಇದರಿಂದ ಶಂಕುಜಕ್ಕೆ ಎಳೆದ ಸ್ಪರ್ಶಕಗಳ ಸ್ಪರ್ಶ ಬಿಂದು ಜೋಡಣೆಯೇ ಧ್ರುವೀಯ

ಧ್ರುವಗಳು (ಭೌಗೋಳೀಯ)

(ಖ) ಭೂಮಿಗೆ ನೈಸರ್ಗಿಕವಾಗಿ ಪ್ರಾಪ್ತವಾಗಿರುವ ಆವರ್ತನೆಗೆ ಮೂಲವಾದ ಅಕ್ಷದ ಉಭಯ ಕೊನೆಗಳು. ಈ ಬಿಂದುಗಳಲ್ಲಿ ನಿಂತವನು ೨೪ ಗಂಟೆಗಳಿಗೆ ಒಮ್ಮೆ ಸ್ವಪ್ರದಕ್ಷಿಣೆಗೊಳಗಾಗುತ್ತಾನೆ. ಅಕ್ಷದ ವಿಸ್ತರಣೆಯು ಖಗೋಳವನ್ನು ಸಂಧಿಸುವ ಬಿಂದುಗಳೂ ಧ್ರುವಗಳೇ: ಮೊದಲಿನವು ಭೌಗೋಳೀಯ ಧ್ರುವಗಳು, ಎರಡನೆಯವು ಖಗೋಳೀಯ ಧ್ರುವಗಳು. ಧ್ರುವ ನಕ್ಷತ್ರವು ಸ್ಥೂಲವಾಗಿ ಉತ್ತರ ಖಗೋಳೀಯ ಧ್ರುವದ ಸ್ಥಾನವನ್ನು ಸೂಚಿಸುತ್ತದೆ. ದಕ್ಷಿಣ ಖಗೋಳೀಯ ಧ್ರುವ ಕುರಿತಂತೆ ಇಂಥ ಯಾವ ನೈಸರ್ಗಿಕ ಸೌಕರ್ಯವೂ ಇಲ್ಲ. (ಭೌ) ಅಯಸ್ಕಾಂತ (ನೈಸರ್ಗಿಕ ಕಾಂತ) ಮತ್ತು ಕಾಂತ (ಮಾನವ ಕೃತ) ಕುರಿತಂತೆ ಧ್ರುವಗಳಿವೆ. ದಂಡಕಾಂತವನ್ನು ಗತ್ಯಾತ್ಮಕ ಸಮತೋಲದಲ್ಲಿ ಇರುವಂತೆ ತೂಗುಬಿಟ್ಟಾಗ ಅದು ಖಚಿತವಾಗಿ ಮತ್ತು ಸದಾ ಭೂಮಿಯ ಉತ್ತರ-ದಕ್ಷಿಣ ದಿಶಾಭಿಮುಖವಾಗಿ ನೆಲೆ ಗೊಳ್ಳುತ್ತದೆ. ಮೊದಲನೆಯ ಕೊನೆಯನ್ನು ಉತ್ತರಾಭಿಮುಖಿ ಧ್ರುವವೆಂದೂ ಎರಡನೆಯದನ್ನು ದಕ್ಷಿಣಾಭಿಮುಖಿ ಧ್ರುವ ಎಂದೂ ಹೇಳುತ್ತೇವೆ. ಭೂಮಿಯು ಒಂದು ಬೃಹತ್ಕಾಂತವಾಗಿ ವರ್ತಿಸುವುದೇ ಈ ವಿಶೇಷ ವಿನ್ಯಾಸದ ಕಾರಣ. ಕಾಂತಗಳ ಸದೃಶ ಧ್ರುವಗಳು ಪರಸ್ಪರ ವಿಕರ್ಷಿಸಿದರೆ, ವಿದೃಶ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ

ಧ್ರುವದೂರ

(ಖ) ಗೋಳದ ಮೇಲಿನ ಯಾವುದೇ ಬಿಂದುವಿನಿಂದ ಅದರ ಸಮೀಪತರ ಧ್ರುವದ ಕೋನದೂರ

ಧ್ರುವಪಕ್ಷಿ

(ಪ್ರಾ) ಪ್ರೋಸಿಲ್ಲೇರೈಯಿ ಫಾರ್ಮೀಸ್ ಉಪ ಗಣ, ಪ್ರೋಸಿಲ್ಲೇರಿಡೀ ಕುಟುಂಬಕ್ಕೆ ಸೇರಿದ ಸಾಗರವಾಸಿ ಪಕ್ಷಿ. ಫುಲ್ಮರಸ್ ಗ್ಲೇಸಿಯಾಲಿಸ್ ವೈಜ್ಞಾನಿಕ ನಾಮ. ಉತ್ತರ ಧ್ರುವಪಕ್ಷಿ ಹಾಗೂ ದಕ್ಷಿಣ ಧ್ರುವಪಕ್ಷಿ ಎಂದು ಎರಡು ಬಗೆಗಳುಂಟು. ನೋಡಲು ಗಲ್ ಪಕ್ಷಿಯಂತಿವೆ. ವೈರಿಗಳು ಬಂದಾಗ ಜಠರದಿಂದ ದುರ್ವಾಸನೆಯ ತೈಲ ಉಗುಳುತ್ತವಾದ್ದರಿಂದ ಇವನ್ನು ಫುಲ್ಮರ್ (ದುರ್ವಾಸನೆ) ಎಂದು ಕರೆಯುತ್ತಾರೆ

ಧ್ರುವಪ್ರಭೆ

(ಭೂ) ಉನ್ನತ ಅಕ್ಷಾಂಶಗಳಲ್ಲಿ ರಾತ್ರಿ ವೇಳೆ ಪ್ರಕಟವಾಗುವ ಬೆಳಕಿನ ನಾಲಗೆಗಳು ಅಥವಾ ಚಾಚುಗಳು; ಸೂರ್ಯನಿಂದ ಹರಿದುಬರುವ ವಿದ್ಯುದಾವಿಷ್ಟ ಕಣಗಳನ್ನು ಭೂಕಾಂತ ಕ್ಷೇತ್ರ ಪ್ರಭಾವಿಸಿ ಧ್ರುವವಲಯಗಳತ್ತ ಪ್ರವಹಿಸುವಂತೆ ಮಾಡುತ್ತದೆ; ಅಲ್ಲಿ ಈ ಕಣಗಳು ಉನ್ನತ ವಾಯುಮಂಡಲದ ಪರಮಾಣುಗಳ ಜೊತೆ ಸಂಘಟ್ಟಿಸಿದಾಗ ಪ್ರಭೆ ಹೊರಹೊಮ್ಮುತ್ತದೆ; ಉತ್ತರ ಧ್ರುವವಲಯದಲ್ಲಿಯದು ಉತ್ತರ ಧ್ರುವಪ್ರಭೆ, ದಕ್ಷಿಣ ಧ್ರುವ ವಲಯದಲ್ಲಿಯದು ದಕ್ಷಿಣ ಧ್ರುವಪ್ರಭೆ

ಧ್ರುವಬಿಂದುಗಳು (ಖಗೋಳೀಯ)

(ಖ) ಖಗೋಳಾಕ್ಷದ ಉಭಯಕೊನೆ ಬಿಂದುಗಳು; ಉತ್ತರ ಧ್ರುವ ಬಿಂದು, ದಕ್ಷಿಣ ಧ್ರುವಬಿಂದು. ಮೊದಲನೆಯದರ ತೀರ ಸನಿಹದಲ್ಲಿರುವ ತಾರೆಯೇ ಧ್ರುವ ನಕ್ಷತ್ರ

ಧ್ರುವೀಕರಣ

(ಭೌ) ಬೆಳಕಿನ (ಅಥವಾ ವಿದ್ಯುತ್ಕಾಂತ ವಿಕಿರಣ) ತರಂಗದಲ್ಲಿ ವಿದ್ಯುತ್ ಕ್ಷೇತ್ರದ (e) ಮತ್ತು ಕಾಂತಕ್ಷೇತ್ರದ (H) ಕಂಪನಗಳು ಪರಸ್ಪರ ಲಂಬವಾಗಿ ಇರುವ ಎರಡು ತಲಗಳಲ್ಲಿ ಒಂದೊಂದಕ್ಕಷ್ಟೆ ಸೀಮಿತವಾಗಿ ಇರುವುದು. e ಕಂಪನಗಳ ನೆಲೆ, ಕಂಪನ ತಲ, ಇದಕ್ಕೆ ಲಂಬವಾಗಿ ಧ್ರುವೀಕರಣತಲವಿರುವುದು. ವರ್ತುಲವಾಗಿ ಧ್ರುವೀಕೃತವಾದ ಬೆಳಕಿನಲ್ಲಿ ತರಂಗದ e ಸದಿಶವು (ವಿದ್ಯುತ್ ಸದಿಶ) ಯಾವುದೇ ಬಿಂದುವಿನಲ್ಲಿ ವರ್ತುಲವಾಗಿಯೂ ದೀರ್ಘವೃತ್ತೀಯವಾದದ್ದರಲ್ಲಿ ದೀರ್ಘವೃತ್ತೀಯವಾಗಿಯೂ ಸಾಗುತ್ತಿರುತ್ತದೆ. (ರ) ಬಾಹ್ಯಕಾರಕವೊಂದರ ಮೂಲಕ ಅಣುವಿನ ಧನ ಮತ್ತು ಋಣ ವಿದ್ಯುದಾವೇಶಗಳನ್ನು ಪ್ರತ್ಯೇಕಿಸುವುದು

ಧ್ರುವೀಕಾರಕ

(ಭೌ) ಸಾಮಾನ್ಯ ಬೆಳಕನ್ನು ಧ್ರುವೀಕೃತ ಬೆಳಕಾಗಿ ಪರಿವರ್ತಿಸುವ ಸಲಕರಣೆ. ದ್ವಿವಕ್ರೀಕಾರಕ ಪದಾರ್ಥದಿಂದ ಮಾಡಿದ ಅಶ್ರಗ ಅಥವಾ ಸಮತಲ ಧ್ರುವೀಕೃತ ಬೆಳಕನ್ನಷ್ಟೇ ಸಾಗಗೊಡುವ ಇಲ್ಲವೇ ಪ್ರತಿಫಲನದ ಮೂಲಕ ಅದನ್ನು ಉಂಟುಮಾಡುವ ಪೋಲರಾಯ್ಡ್ ಫಲಕ

ಧ್ರುವೀಮಾಪಕ

(ರ) ದ್ರವದ ದ್ಯುತಿಪಟುತ್ವ ಅಳೆಯುವ ಸಲಕರಣೆ. ಪಾರದರ್ಶಕ ಪದಾರ್ಥದ ಮೂಲಕ ಮುಖ್ಯವಾಗಿ ದ್ಯುತಿಪಟು ಸಂಯುಕ್ತಗಳ ದ್ರಾವಣಗಳ ಮೂಲಕ, ಧ್ರುವೀಕೃತ ಬೆಳಕು ಹಾದುಹೋಗುವಾಗ ಧ್ರುವೀಕರಣ ಸಮತಲವು ಎಷ್ಟು ತಿರುಗುವುದೆಂಬುದನ್ನು ಅಳೆಯುವ ಉಪಕರಣ

ಧ್ರುವೀಯ ಅಕ್ಷ

(ಗ) ಇದೊಂದು ನಿರ್ದೇಶಿತ ಸರಳರೇಖೆ. ಸಮತಲದಲ್ಲಿಯ ಯಾವುದೇ ಬಿಂದುವನ್ನು ಗುರುತಿಸಲು ಆ ಬಿಂದುವು ನಿರ್ದೇಶಿತ ರೇಖೆಯ ಮೇಲಿನ ಎರಡು ಸಮದೂರದ ಬಿಂದುಗಳೊಡನೆ ಉಂಟುಮಾಡುವ ಕೋನವನ್ನು ಅಳೆಯಲಾಗುತ್ತದೆ

ಧ್ರುವೀಯ ಕಕ್ಷೆ

(ಆವಿ) ಧ್ರುವ ಪ್ರದೇಶಗಳ ಮೇಲೆ ಹಾದುಹೋಗುವ ಉಪಗ್ರಹವೊಂದರ ಕಕ್ಷೆ. ಸಾಮಾನ್ಯವಾಗಿ ಹವಾಮಾನ ಮತ್ತು ದೂರ ಸಂವೇದೀ ಉಪಗ್ರಹಗಳು ಇಂತಹ ಕಕ್ಷೆಗಳಲ್ಲಿರುತ್ತವೆ. ಈ ಕಕ್ಷೆಯಿಂದ ಇಡೀ ಭೂಮಂಡಲದ ಹವಾಮಾನ ವೀಕ್ಷಣೆ ಸಾಧ್ಯ

ಧ್ರುವೀಯ ಕಾಯಗಳು

(ಜೀ) ಮಿಯಾಟಿಕ್ ಕೋಶ ವಿಭಜನೆಯ ಮೂಲಕ ಅಂಡಾಣು ಉತ್ಪತ್ತಿಯಾಗುವಾಗ ಮೈದಳೆಯುವ ನಾಲ್ಕು ಕೋಶಗಳ ಪೈಕಿ ಮೂರು ನಿಷ್ಕ್ರಿಯ ಕೋಶಗಳು. ಆದರೆ ರೇತ್ರಾಣು ಉತ್ಪತ್ತಿಯಾಗುವಾಗ ಉಂಟಾಗುವ ನಾಲ್ಕು ಕೋಶಗಳು ಕ್ರಿಯಾಶೀಲವಾಗಿರುತ್ತವೆ

ಧ್ರುವೀಯ ಟೊಪ್ಪಿ

(ಖ) ಮಂಗಳ ಗ್ರಹದ ಧ್ರುವೀಯ ಪ್ರದೇಶದ ಯಾವುದೇ ಉಜ್ಜ್ವಲ ಭಾಗ. ಇದು ಕಾರ್ಬನ್ ಡೈ ಆಕ್ಸೈಡ್ ಘನೀಕೃತಗೊಂಡಿರುವುದರಿಂದ ಹೀಗೆ ಕಾಣುವುದು

ಧ್ರುವೀಯ ನಿರ್ದೇಶಕ ವ್ಯವಸ್ಥೆ

(ಗ) ಎರಡು ಆಯಾಮಗಳಲ್ಲಿ P ಬಿಂದುವಿನ ಸ್ಥಾನವನ್ನು ನಿರ್ದೇಶಿಸಲು ಬಳಸುವ ವ್ಯವಸ್ಥೆ. ಮೂಲದಿಂದ Pಯ ದೂರ r ಆಗಿದ್ದು x ಅಕ್ಷಕ್ಕೂ OPಗೂ ನಡುವಿನ ಕೋನ ಆಗಿದ್ದರೆ, ಆಗ Pಯ ಧ್ರುವೀಯ ನಿರ್ದೇಶಕಗಳು (r,r). ಇಲ್ಲಿ rಗೆ Pಯ ಅರೀಯ ಸದಿಶವೆಂದೂ ಕ್ಕೆ ಸದಿಶ ಕೋನವೆಂದೂ ಹೆಸರು. P ಬಿಂದುವಿನ ಕಾರ್ಟೀಸಿಯನ್ ನಿರ್ದೇಶಕಗಳು (x,y) ಆಗಿದ್ದರೆ ಆಗ x = r cos ಹಾಗೂ y = r sin

ಧ್ರುವೀಯ ಬಂಧ

(ರ) ವಿಭಿನ್ನ ವಿದ್ಯುತ್ ಋಣಾತ್ಮಕತೆ ಇರುವ ಧಾತುಗಳ ನಡುವಿನ ಸಹವೇಲೆನ್ಸೀಯ ಬಂಧ

Search Dictionaries

Loading Results

Follow Us :   
  Download Bharatavani App
  Bharatavani Windows App