भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದೂಲ

(ಭೌ) ಸಮಾಂತರಿಸಿದ ಅಥವಾ ಸ್ಥೂಲವಾಗಿ ಏಕದಿಶಾಭಿಮುಖವಾಗಿ ಚಲಿಸುವಂತೆ ಅಳವಡಿಸಿದ ವಿದ್ಯುತ್ಕಾಂತ ವಿಕಿರಣದ (ರೇಡಿಯೋ, ಬೆಳಕು, ಎಕ್ಸ್-ಕಿರಣಗಳ) ಅಥವಾ ಕಣಗಳ (ಪರಮಾಣುಗಳು, ಎಲೆಕ್ಟ್ರಾನ್‌ಗಳು, ಅಣುಗಳ) ದಂಡಿಗೆ. ಕಿರಣದಂಡ

ದೂಲ ರಂಧ್ರ

(ಭೌ) ಬೈಜಿಕ ಕ್ರಿಯಾಕಾರಿಯ ರಕ್ಷಾಕವಚದಲ್ಲಿ/ಸೈಕ್ಲೊಟ್ರಾನ್‌ನ ಪರಿಧಿಯಲ್ಲಿ ಇರುವ ರಂಧ್ರ. ಇದರ ಮೂಲಕ ನ್ಯೂಟ್ರಾನ್‌ಗಳ ಅಥವಾ ಗ್ಯಾಮ ಕಿರಣಗಳ ದೂಲವನ್ನು ಹೊರ ಸೆಳೆಯಬಹುದು ಅಥವಾ ವಿಕಿರಣಕ್ಕೆ ಒಳ ಪಡಿಸಲು ಸಲಕರಣೆ/ಮಾದರಿಗಳನ್ನು ಒಳತೂರಿಸಬಹುದು

ದೂಲನ

(ತಂ) ನಿರ್ದಿಷ್ಟ ಗುರಿಯತ್ತ ವಿಕಿರಣ ಬೀರುವುದು

ದೂಲಬಂಧಕ

(ತಂ) ಕ್ಯಾಥೋಡ್ ಕಿರಣ ನಳಿಗೆಯಲ್ಲಿ ಇರುವ ಬಕೆಟ್ ರೂಪದ ಎಲೆಕ್ಟ್ರೋಡ್. ಎಲೆಕ್ಟ್ರಾನ್ ಕಿರಣಗಳು ತೆರೆಯ ಮೇಲೆ ಬೀಳಬಾರದೆಂದು ಬಯಸಿದಾಗ ಅವನ್ನು ಈ ದೂಲಬಂಧಕಕ್ಕೆ ಹರಿಸಲಾಗುತ್ತದೆ

ದೂಲಾರೋಹಣ

(ಭೌ) ರೇಡಿಯೋ ಸಂಜ್ಞೆಗಳ ದೂಲದಿಂದ ಕ್ಷಿಪಣಿಯ ಸಂಚಾರ ಪಥವನ್ನು ದಿಗ್ದರ್ಶಿಸುವುದು

ದೃಕ್‌ಶ್ರವಣ

(ತಂ) ದೃಶ್ಯ (ವಿಶುವಲ್) ಹಾಗೂ ಶ್ರವಣ (ಆಡಿಯೋ) ಮಾಧ್ಯಮಗಳಿಗೆ ಸಂಬಂಧಿಸಿದ. ಶ್ರವಣ ಹಾಗೂ ದೃಶ್ಯ ಮಾಧ್ಯಮಗಳನ್ನು ಬಳಸಿಕೊಂಡು ಶಿಕ್ಷಣ/ತರಬೇತಿ ನೀಡುವ ವಿಧಾನಗಳಿಗೆ ಸಂಬಂಧಿಸಿದ

ದೃಗಕ್ಷ

(ಭೌ) ಮಸೂರದ ಮೇಲ್ಮೈಯ ವಕ್ರತಾ ಕೇಂದ್ರದ ಮೂಲಕ ಸಾಗಿಹೋಗುವ ರೇಖೆ. ಇದರ ಮೂಲಕ ಸಾಗುವ ಬೆಳಕಿನ ಕಿರಣಗಳು ಪ್ರತಿಫಲಿಸುವುದೂ ಇಲ್ಲ, ವಕ್ರೀಭವಿಸುವುದೂ ಇಲ್ಲ. ಇದಕ್ಕೆ ‘ಪ್ರಧಾನ ಅಕ್ಷ’ ಎಂಬ ಹೆಸರೂ ಉಂಟು. (ಭೂವಿ) ಎರಡು ಬಾರಿ ವಕ್ರೀಭವನಗೊಳ್ಳುವ ಮಾಧ್ಯಮದಲ್ಲಿಯ (ಸ್ಫಟಿಕ) ಅಕ್ಷದ ದಿಶೆ. ಈ ದಿಶೆಯಲ್ಲಿ ಸಾಗುವ ಬೆಳಕಿನ ಸಾಧಾರಣ ಹಾಗೂ ಅಸಾಧಾರಣ ತರಂಗಗಳು ಒಂದೇ ವೇಗದಲ್ಲಿ ಪ್ರವಹಿಸುತ್ತವೆ. ಹಾಗಾಗಿ ದ್ವಿ-ವಕ್ರೀಭವನ ಇಲ್ಲವಾಗುತ್ತದೆ. ಏಕಾಕ್ಷೀಯ ಖನಿಜಗಳಲ್ಲಿ ಒಂದು ದ್ವಿ-ಅಕ್ಷೀಯ ಖನಿಜಗಳಲ್ಲಿ ಎರಡೂ ಇಂಥ ಅಕ್ಷಗಳಿರುತ್ತವೆ

ದೃಢಕಾಯ

(ಗ) ಈ ಆದರ್ಶಕಾಯದ ಮೇಲಿನ ಪ್ರತಿಯೊಂದೂ ಜೊತೆ ಬಿಂದುಗಳ ನಡುವಿನ ಅಂತರ ವ್ಯತ್ಯಯ ವಾಗದು. ಪ್ರಯೋಗಗಳಲ್ಲಿ ಶೀಘ್ರವಾಗಿ ವಿರೂಪಗೊಳ್ಳದವು. ಸನ್ನಿಹಿತವಾದ ದೃಢಕಾಯಗಳು

ದೃಢಚಲನೆ

(ಗ) ಆಕಾರ ಅಥವಾ ಗಾತ್ರಗಳಲ್ಲಿ ಬದಲಾವಣೆ ಆಗದಂತೆ ಯಾವುದೇ ಆಕೃತಿಯನ್ನು ಒಂದು ನೆಲೆಯಿಂದ ಇನ್ನೊಂದು ನೆಲೆಗೆ ಸ್ಥಾನಾಂತರಿಸುವುದು. ನಿರ್ದೇಶಕಾಕ್ಷಗಳ ವಿನ್ಯಾಸ ಬದಲಾಗದ ರೀತಿಯಲ್ಲಿ ನಡೆಯುವ ಐಸೊಮೆಟ್ರಿಯು ಒಂದು ದೃಢಚಲನೆ. ಸಮತಲ ಜ್ಯಾಮಿತಿಯಲ್ಲಿ ಆಕೃತಿಗಳ ಅಧ್ಯಾರೋಪಣೆಯು (ಸೂಪರ್ ಪೊಸಿಷನ್) ದೃಢ ಚಲನೆಗೆ ಇನ್ನೊಂದು ಉದಾಹರಣೆ

ದೃಢತೆ

(ತಂ) ಮಂದ್ರದ್ರವದ ದಪ್ಪತನ, ಸಾಂದ್ರತೆ, ಗಟ್ಟಿತನ ಮುಂತಾದವುಗಳ ಮೊತ್ತ

ದೃಢತೆ

(ಭೌ) ಬಲಪ್ರಯೋಗಕ್ಕೊಳಗಾದಾಗ ಗಾತ್ರ, ರೂಪಗಳಲ್ಲಿ ಬದಲಾವಣೆ ತೋರದ ವಸ್ತುವಿನ ಗುಣ

ದೃಢಪರ್ಣಿ

(ಸ) ಚೆನ್ನಾಗಿ ಬಲಿತಿರುವ ಗಟ್ಟಿ ಎಲೆ. ಗಡಸಾಗಿಯೂ ಚಕ್ಕಳದಂತೆಯೂ ಇದ್ದು ಹಸಿರಾಗಿ ಇರುತ್ತದೆ. ಉದಾ: ಆಲಿವ್ ಮತ್ತು ಯೂಕಲಿಪ್ಟಸ್. ಈ ಎಲೆಗಳಲ್ಲಿ ಕೋಶಗಳ ನಡುವೆ ಅಂತರ ಅತ್ಯಲ್ಪವಾಗಿರುವುದರಿಂದ ಇವು ನೀರಿಲ್ಲದೆ ದೀರ್ಘಕಾಲ ಇರಬಲ್ಲವು

ದೃಷ್ಟಿ

(ಭೌ) ಕಣ್ಣಿನ ದ್ಯುತಿಸಂವೇದೀ ಕೋಶಗಳ ಮೇಲೆ ಬೆಳಕು ಬಿದ್ದಾಗ ಉಂಟಾಗುವ ಸಂವೇದನೆ

ದೃಷ್ಟಿ

(ವೈ) ವಸ್ತುಗಳ ರೂಪ, ಬಣ್ಣ, ಗಾತ್ರ, ಚಲನೆ ಮತ್ತು ದೂರ ಇವನ್ನು ಪರಿಭಾವಿಸಬಲ್ಲ ಪ್ರಜ್ಞೆ

ದೃಷ್ಟಿ ಉಳಿಕೆ

(ಭೌ) ದೃಕ್ ಪ್ರಚೋದನೆ ಮುಗಿದ ಬಳಿಕವೂ ಕಣ್ಣಿನ ಅಕ್ಷಿಪಟದ ಮೇಲೆ ಪ್ರತಿಬಿಂಬ ಸ್ವಲ್ಪಹೊತ್ತು ಉಳಿದಿರುವುದು. ಸಿನಿಮಾ ಮತ್ತು ಟಿವಿ ವೀಕ್ಷಣೆಯಲ್ಲಿ ಇದು ಒಂದು ಅಗತ್ಯ ಅಂಶ

ದೃಷ್ಟಿ ಕೋನ

(ವೈ) ವಸ್ತುವಿನ ಎರಡು ಕೊನೆಗಳಿಂದ ಹೊರಟು ಕಣ್ಣಿಗೆ ಸೇರುವ ಅಥವಾ ಎರಡು ಕಣ್ಣುಗಳಿಂದಲೂ ಹೊರಟು ಒಂದು ಬಿಂದುವಿನಲ್ಲಿ ಸೇರುವ, ಎರಡು ರೇಖೆಗಳ ಮಧ್ಯದ ಕೋನ. (ಭೂವಿ) ದ್ವಿ-ಅಕ್ಷೀಯ ಖನಿಜಗಳಲ್ಲಿ, ಎರಡೂ ಅಕ್ಷಗಳ ನಡುವಿನ ಕೋನ

ದೃಷ್ಟಿ ನರ

(ವೈ) ಎರಡನೆಯ ಕಪಾಲ ನರ: ಒಂದೊಂದೂ ಕಣ್ಣಿನಿಂದ ಹೊರಟು ಮಿದುಳು ಸೇರುವ ಯುಗ್ಮಿತ ಸಂವೇದನ (ಜ್ಞಾನ)ವಾಹಿನಿ ನರ. ಕಣ್ಣಿನ ಅಕ್ಷಿಪಟದಲ್ಲಿಯ ಶಲಾಕೆಗಳೂ ಶಂಕುಗಳೂ ಪಡೆದ ದೃಶ್ಯ ಉದ್ದೀಪನಗಳನ್ನು ವ್ಯಾಖ್ಯಾನಿಸಲು ಅವನ್ನು ಈ ನರವು ಮಿದುಳಿಗೆ ಸಾಗಿಸುತ್ತದೆ

ದೃಷ್ಟಿ ನಷ್ಟ

(ವೈ) ಅಕ್ಷಿಪಟ ಅಥವಾ ದೃಷ್ಟಿನರ ಅಥವಾ ದೃಷ್ಟಿ ಪ್ರದೇಶದಲ್ಲಿ ವಿಕಾರ ಹಣುಕಿದುದರ ಪರಿಣಾಮವಾಗಿ ಆದ ಅಂಧತೆ. ಕಣ್ಣಿನ ಆಕಾರ ಕೆಡದೆ ನರದ ಬೇನೆಯಿಂದ ಆಗುವ ಕುರುಡು ಅಥವಾ ಅರೆಗುರುಡು

ದೃಷ್ಟಿ ಭ್ರಾಂತಿ

(ವೈ) ದೃಕ್ ಸಂವೇದನೆಗಳ ತಪ್ಪು ವ್ಯಾಖ್ಯೆ. ಇದೊಂದು ದೃಷ್ಟಿ ವೈಪರೀತ್ಯ. ಇದರಲ್ಲಿ ವಸ್ತು ಅಥವಾ ಚಿತ್ರ ಹೇಗಿರುವುದೋ ಹಾಗೆ ಕಾಣದೆ ಬೇರೆ ಆಗಿರುವಂತೆ ಕಾಣಿಸುತ್ತದೆ. ನೋಡಿದ ಚಿತ್ರ ಅಪೂರ್ಣವಾಗಿದ್ದರೂ ಹಿಂದಿನ ಅನುಭವದ ಫಲವಾಗಿ ಪೂರ್ಣವಾಗಿದೆ ಎಂದೇ ಗ್ರಹಿಸುವುದು. ಎರಡು ರೇಖೆಗಳ ಉದ್ದ ಒಂದೇ ಆಗಿದ್ದರೂ ಲಘುಕೋನ ಅಧಿಕಕೋನಗಳಿಂದಾಗಿ ಒಂದು ಚಿಕ್ಕದು ಇನ್ನೊಂದು ದೊಡ್ಡದಾಗಿ ಕಾಣುವುದೂ ದೃಷ್ಟಿಭ್ರಾಂತಿಗೆ ನಿದರ್ಶನ

ದೃಷ್ಟಿ ಮಬ್ಬು

(ವೈ) ನೋಡಿ : ಸ್ಕೋಟೋಮ

Search Dictionaries

Loading Results

Follow Us :   
  Download Bharatavani App
  Bharatavani Windows App