भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದುರ್ಗಂಧ ನಿವಾರಕ

(ರ) ದುರ್ವಾಸನೆಯನ್ನು ತೊಡೆದುಹಾಕುವ/ಮರೆಮಾಚುವ ರಾಸಾಯನಿಕ ಪದಾರ್ಥ

ದುರ್ಬಲ ಅಂತರಕ್ರಿಯೆ

(ಭೌ) ನೋಡಿ: ಮೂಲಭೂತ ಅಂತರಕ್ರಿಯೆಗಳು

ದುರ್ಬಲೀಕರಣ

(ಸ) ರೋಗಜನಕದ ಸಾಮರ್ಥ್ಯವನ್ನು ಕುಗ್ಗಿಸುವುದು. (ತಂ) ಆಕರದಿಂದ ದೂರ ಹೆಚ್ಚಾದಂತೆ ಹೀರಣೆ ಮತ್ತು ಚದರಿಕೆಯ ಫಲವಾಗಿ ಭೌತ ಪರಿಮಾಣವೊಂದು (ಉದಾ: ಶಬ್ದ, ವಿಕಿರಣ, ವಿದ್ಯುಚ್ಛಕ್ತಿ ಇತ್ಯಾದಿ) ದುರ್ಬಲಗೊಳ್ಳುವುದು. ತನೂಕರಣ. ಕ್ಷೀಣತ್ವ

ದುರ್ಬಲೀಕೃತ ಲಸಿಕೆ

(ವೈ) ಬ್ಯಾಕ್ಟೀರಿಯ ಗಳನ್ನು/ವೈರಸ್‌ಗಳನ್ನು ಹದವರಿತು ಆಯ್ದು ಸೇರಿಸುವ, ಅಥವಾ ಸೋಂಕಿನ ವಿರುದ್ಧ ರಕ್ಷೆ ಒದಗಿಸಲು ಸೂಕ್ಷ್ಮಜೀವಿಗಳಲ್ಲಿ ನಿಹಿತ ವಾಗಿರುವ ಸಾಮರ್ಥ್ಯ ನಷ್ಟವಾಗದಂತೆ ಇರಿಸಿ ಅವುಗಳ ರೋಗಕಾರಕ ಗುಣವನ್ನು ಕುಂಠಿತಗೊಳಿಸಿರುವ ಜೀವಂತ ಸೂಕ್ಷ್ಮ ಜೀವಿಯುಕ್ತ ಲಸಿಕೆ. ಉದಾ: ಪೋಲಿಯೋ ಮೈಲೈಟಿಸ್ (ಬಾಲ ಪಾರ್ಶ್ವವಾಯು), ದಡಾರ ಹಾಗೂ ಹಳದಿ ಜ್ವರದ ಲಸಿಕೆಗಳು

ದುರ್ಬೀನು

(ಭೌ) ಒಂದೇ ವೇಳೆ ಎರಡೂ ಕಣ್ಣುಗಳಿಂದ ವಸ್ತುಗಳನ್ನು ವೀಕ್ಷಿಸಬಹುದಾದ ಯುಗ್ಮ ದೂರದರ್ಶಕ. ದ್ವಿನೇತ್ರಿ. ದ್ವಿಲೋಚನ. ಇದರಲ್ಲಿಯ ಅಗತ್ಯ ಅಂಗಭಾಗಗಳು: ವಸ್ತುಕ, ನೇತ್ರಕ ಮತ್ತು ಬಿಂಬವನ್ನು ವಿಲೋಮ ಹಾಗೂ ವಿಪರ್ಯಯಿಸುವ ಅಶ್ರಗಗಳ ವ್ಯವಸ್ಥೆ

ದುರ್ಮಾಂಸ

(ವೈ) ಏಡಿಹುಣ್ಣಿನ ಮೊದಲ ಅವಸ್ಥೆಯಲ್ಲಿ ಕಾಣಿಸಿಕೊಳ್ಳುವ ಗಟ್ಟಿಗಂತಿ. ಇದರಲ್ಲಿ ಹೇರಳವಾಗಿ ಸಂಯೋಜಕ ಊತಕಗಳೂ ಕೆಲವೇ ಕೋಶಗಳೂ ಇರುತ್ತವೆ

ದೂರ

(ಗ) ಎರಡು ಬಿಂದುಗಳ ನಡುವಿನ ಸರಳ ರೇಖಾಂತರ

ದೂರ ಛಾಯಾಗ್ರಹಣ

(ತಂ) ದೂರದರ್ಶಕ ಮತ್ತು ಛಾಯಾಗ್ರಾಹಕ ಮಸೂರಗಳ ಜೋಡಣೆಯಿಂದ ದೂರ ವಸ್ತುಗಳ ಛಾಯಾಚಿತ್ರ ತೆಗೆಯುವುದು

ದೂರ ನಿಯಂತ್ರಣ

(ತಂ) ಟೆಲಿವಿಷನ್‌ನಂಥ ಮಾನಿಟರಿಂಗ್ ಉಪಕರಣಗಳಿಂದ ಬರುವ ಮಾಹಿತಿಗಳನ್ನು (ಉದಾ : ಬೆಳಕು, ಬಣ್ಣ, ಶಬ್ದ, ಚಾನೆಲ್ ಇತ್ಯಾದಿಗಳನ್ನು) ದೂರದಲ್ಲಿ ಕುಳಿತಲ್ಲಿಂದಲೇ ರೇಡಿಯೋ ಅಥವಾ ವಿದ್ಯುತ್ ಸಂಜ್ಞೆಗಳ ಮೂಲಕ ನಿಯಂತ್ರಿಸುವುದು. ಹಾಗೆ ನಿಯಂತ್ರಿಸುವ ಸಾಧನ. ರಿಮೋಟ್ ಕಂಟ್ರೋಲ್

ದೂರ ಸ್ವಯಂಲೇಖಕ

(ತಂ) ಪ್ರೇಕ್ಷಕ ಸ್ಥಳದಲ್ಲಿ ಬರೆದ ಲೇಖನ ಮೊದಲಾದವನ್ನು ಗ್ರಾಹಕ ಸ್ಥಳದಲ್ಲಿ ಯಥಾಪ್ರತಿ ಮಾಡುವ ದೂರಲೇಖನ ಸಲಕರಣೆ

ದೂರದರ್ಶಕ

(ತಂ) ದೂರವಸ್ತುವಿನಿಂದ ಬರುವ ವಿಕಿರಣವನ್ನು ವಿಶ್ಲೇಷಿಸುವ ಅಥವಾ ಆ ವಸ್ತುವಿನ ಪ್ರತಿಬಿಂಬವನ್ನು ರೂಪಿಸುವ ಉಪಕರಣ (ನೋಡಿ: ರೇಡಿಯೋ ದೂರದರ್ಶಕ) ಗೋಚರ ವಿಕಿರಣ (ಬೆಳಕು) ಕುರಿತ ಉಪಕರಣಕ್ಕೆ ದೃಗ್ದೂರ ದರ್ಶಕವೆಂದು (ಆಪ್ಟಿಕಲ್ ಟೆಲಿಸ್ಕೋಪ್) ಹೆಸರು. ಖಗೋಳ ವೈಜ್ಞಾನಿಕ ದೂರದರ್ಶಕಗಳಲ್ಲಿ ಎರಡು ಮುಖ್ಯ ಬಗೆಗಳಿವೆ: ವಕ್ರೀಭವನ, ಪ್ರತಿಫಲನ. ಮೊದಲಿನ ಬಗೆಯದರಲ್ಲಿ ಬೆಳಕಿನ ಸಂಗ್ರಹಣೆಗೆ ಅಭಿಸರಣ ಮಸೂರವನ್ನು ಬಳಸಲಾಗುತ್ತದೆ. ಇದರಲ್ಲಿ ದೊರೆಯುವ ಪ್ರತಿಬಿಂಬವನ್ನು ಹ್ರಸ್ವ ನಾಭೀದೂರದ ಮಸೂರ ಇರುವ ನೇತ್ರಕದಿಂದ ಲಂಬಿಸಲಾಗುತ್ತದೆ. ಈ ಬಗೆಯ ದೂರ ದರ್ಶಕವನ್ನು ಹ್ಯಾನ್ಸ್ ಲಿಪ್ಪರ್‌ಶೇ (೧೫೮೭-೧೬೧೯) ರಚಿಸಿದರು (೧೬೦೮). ಮರುವರ್ಷವೇ ಗೆಲಿಲಿಯೋ ಇದರ ಸುಧಾರಿತ ರೂಪವನ್ನು ನಿರ್ಮಿಸಿ ಖಗೋಳ ವೈಜ್ಞಾನಿಕ ವೀಕ್ಷಣೆಗೆ ಬಳಸಿದರು. ಇದರ ನೇತ್ರಕವೊಂದು ಅಪಸರಣ ಮಸೂರ. ಯೊಹಾನ್ಸ್ ಕೆಪ್ಲರ್ (೧೫೭೧-೧೬೩೦) ಅಭಿಸರಣ ನೇತ್ರಕ ಮಸೂರ ಬಳಸಿ ಇನ್ನಷ್ಟು ಸುಧಾರಣೆ ತಂದರು. ಈ ಮಾದರಿ ಈಗಲೂ ಸಣ್ಣ ಖಗೋಳ ದೂರದರ್ಶಕಗಳಲ್ಲಿ ಬಳಕೆಯಲ್ಲಿದೆ. ಮೊದಲ ಪ್ರತಿಫಲನ ದೂರದರ್ಶಕ ನ್ಯೂಟನ್‌ರ ಕೊಡುಗೆ (೧೬೬೮). ಇದರಲ್ಲಿ ನಿಮ್ನದರ್ಪಣ ಬೆಳಕನ್ನು ಸಂಗ್ರಹಿಸಿ ನಾಭಿಸುತ್ತದೆ. ಈ ಬಿಂಬವನ್ನು ಪುಟ್ಟ ಕನ್ನಡಿಯೊಂದು ಲಂಬನಕಾರಿ ನೇತ್ರಕದತ್ತ ಪ್ರತಿಫಲಿಸುತ್ತದೆ. ಇವಲ್ಲದೆ ಗ್ರಿಗೊರಿಯನ್, ಕ್ಯಾಸ್ಸೆಗ್ರೇನ್, ಕೌದ್, ಮಾಕ್ಸುತೋವ್ ಹಾಗೂ ಷ್ಮಿದ್ತ್ ದೂರದರ್ಶಕಗಳೂ ಬಳಕೆಯಲ್ಲಿವೆ

ದೂರದರ್ಶನ

(ತಂ) ಚಲನೆಯಲ್ಲಿರುವ ಚಿತ್ರಗಳ ಹಾಗೂ ಅವುಗಳ ಸಂಗಾತಿ ಶಬ್ದಗಳ ವಿದ್ಯುತ್ ಪ್ರೇಷಣೆ. ಟಿ.ವಿ. ಕ್ಯಾಮರಾ ಸೆರೆಹಿಡಿದ ಚಿತ್ರಗಳನ್ನು ತೆರೆಯ ಮೇಲೆ ಮೂಡಿಸುವುದು. ಇದನ್ನು ಆಗುಮಾಡಲು ಚಿತ್ರಗಳನ್ನು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ಯೂರೋಪಿನಲ್ಲಿ ಒಂದೊಂದು ಚಿತ್ರ ಫ್ರೇಮ್‌ನಲ್ಲೂ ೬೨೫ ಗೆರೆಗಳಿದ್ದು ಸೆಕೆಂಡಿಗೆ ೨೫ ಫ್ರೇಮ್‌ಗಳು ಮೂಡುತ್ತವೆ. ಅಮೆರಿಕದಲ್ಲಿ ೫೨೫ ಗೆರೆಗಳು, ಸೆಕೆಂಡಿಗೆ ೩೦ ಫ್ರೇಮ್‌ಗಳು. ‘ಸಂವೃತ ಮಂಡಲ ದೂರದರ್ಶನ’ ದಲ್ಲಿ ಪ್ರೇಷಣೆ ತಂತಿ ಮೂಲಕ, ‘ಪ್ರಸರಣ ದೂರದರ್ಶನ’ದಲ್ಲಿ ರೇಡಿಯೊ ತರಂಗಗಳ ಮೂಲಕ. ಎರಡೂ ಸಂದರ್ಭಗಳಲ್ಲಿ ಪ್ರೇಷಕದಲ್ಲಿಯ ಟಿ.ವಿ. ಕ್ಯಾಮರಾ ಬೆಳಕಿನ ತರಂಗಗಳನ್ನು ವಿದ್ಯುತ್ ಆವೇಗಗಳಾಗಿ ಪರಿವರ್ತಿಸುತ್ತದೆ ಮತ್ತು ಟಿವಿ ಗ್ರಾಹಕದಲ್ಲಿಯ ಕ್ಯಾಥೋಡ್ ಕಿರಣ ನಳಿಗೆ ಅವನ್ನು ತೆರೆಯ ಮೇಲೆ ಚಿತ್ರಗಳಾಗಿ ಪುನಃಪರಿವರ್ತಿಸುತ್ತದೆ. ಆರಂಭದಲ್ಲಿ ಕಪ್ಪು-ಬಿಳಿ ಟಿವಿ ಇದ್ದುದು ಈಗ ವರ್ಣರಂಜಿತ ಚಿತ್ರ ದರ್ಶನವಲ್ಲದೆ, ಅನೇಕ ಗಣಕಯಂತ್ರ ಕ್ರಿಯೆಗಳನ್ನೂ ನೆರವೇರಿಸುವಂತೆ ಅದನ್ನು ಮಾರ್ಪಡಿಸಲಾಗಿದೆ. ಟಿವಿ

ದೂರದ್ಯುತಿಚಿತ್ರಣ ಮಸೂರ

(ತಂ) ಕ್ಯಾಮೆರಾದಲ್ಲಿಯ ಮಾಮೂಲಿ ಮಸೂರದ ಸ್ಥಾನದಲ್ಲಿ ಅಳವಡಿಸಿರುವ ನಿಮ್ನಪೀನ ಮಸೂರ. ಇದರ ನಾಭೀದೂರ ಸಾಕಷ್ಟು ದೀರ್ಘವಾಗಿರುವುದರಿಂದ ಇದರಲ್ಲಿ ಅತಿ ದೂರದ ಕಾಯಗಳ ಸ್ಫುಟ ಪ್ರತಿಬಿಂಬ ದೊರೆಯುತ್ತದೆ

ದೂರಮನಃಸ್ಪರ್ಶನ

(ವೈ) ದೂರದಲ್ಲಿರುವ ಒಬ್ಬ ವ್ಯಕ್ತಿಯ ಮನಸ್ಸಿನ ಮೇಲೆ ಇನ್ನೊಬ್ಬನ ಮನಸ್ಸು ಭಾವ ಪ್ರಭಾವದ ಮೂಲಕ (ಇಂದ್ರಿಯಗಳ ಮೂಲಕವಲ್ಲ) ವರ್ತಿಸುವುದು ಸಾಧ್ಯವೆಂಬ ಒಂದು ನಂಬಿಕೆ. ಭಾವಪ್ರೇಷಣೆ, ಅನ್ಯಮನಸ್ಪರ್ಶನ

ದೂರಮಾಪನೆ

(ತಂ) ಮಾಪನೋಪಕರಣದ ಓದಿಕೆಯನ್ನು/ದಾಖಲೆಯನ್ನು ರೇಡಿಯೋ ಹಾಗೂ ಎಲೆಕ್ಟ್ರಾನಿಕ್ ಪ್ರಕ್ರಿಯೆಗಳ ಮೂಲಕ ದೂರದಿಂದ ಸೂಚಿಸುವ/ದಾಖಲಿಸುವ ವಿಧಾನ. ಉದಾ: ಕೃತಕ ಉಪಗ್ರಹ ದಾಖಲಿಸಿದ ಮಾಹಿತಿಯನ್ನು ಭೂಕೇಂದ್ರಗಳು ಪಡೆಯುವುದು

ದೂರಲೇಖ

(ತಂ) ಸಂಖ್ಯೆಗಳನ್ನೂ ಅಕ್ಷರಗಳನ್ನೂ ನಿರ್ದಿಷ್ಟ ಕ್ರಮದಲ್ಲಿ ಪ್ರತಿನಿಧಿಸುವ ವಿದ್ಯುದಾವೇಗಗಳನ್ನು ದೂರ ಪ್ರದೇಶಗಳ ನಡುವೆ ತಂತಿಗಳ ಮೂಲಕ ಪ್ರೇಷಿಸುವ ಒಂದು ಹಳೆಯ ವ್ಯವಸ್ಥೆ. ನೋಡಿ: ಮಾರ್ಸ್ ಸಂಕೇತ

ದೂರವಾಣಿ

(ತಂ) ಶಬ್ದದ ಅಲೆಗಳನ್ನು ಅನುಗುಣ ವ್ಯತ್ಯಯಗಳ ವಿದ್ಯುತ್ ತರಂಗಗಳಾಗಿ ಮಾರ್ಪಡಿಸಿ ಅವುಗಳನ್ನು ಪ್ರೇಷಕದ ಸಹಾಯದಿಂದ ತಂತಿ ಅಥವಾ ರೇಡಿಯೋ ಮೂಲಕ ದೂರಸ್ಥಳಕ್ಕೆ ರವಾನಿಸಿ ಅಲ್ಲಿ ಗ್ರಾಹಕದ ಸಹಾಯದಿಂದ ಆ ವಿದ್ಯುತ್ ತರಂಗಗಳನ್ನು ಶಬ್ದದ ಅಲೆಗಳನ್ನಾಗಿ ಪುನರ್ ಪರಿವರ್ತಿಸುವ ಜಾಲಬಂಧ. ವಾಸ್ತವವಾಗಿ ಒಂದು ನೆಲೆಯಲ್ಲಿ ಪ್ರೇಷಕಕ್ಕೆ ಆಡಿದ ಮಾತು ದೂರದ ನಿಶ್ಚಿತ ನೆಲೆಯೊಂದರ ಗ್ರಾಹಕದಲ್ಲಿ ಆ ಕ್ಷಣದಲ್ಲಿಯೇ ಮಾತಾಗಿ ಕೇಳುವಂತೆ ಮಾಡಿರುವ ಸಮಗ್ರ ಉಪಕರಣ ವ್ಯವಸ್ಥೆ. ಟೆಲಿಫೋನ್

ದೂರಸಂಪರ್ಕ

(ತಂ) ಸಾಧಾರಣವಾಗಿ ಎರಡು ದೂರ ಪ್ರದೇಶಗಳ ನಡುವೆ ಮಾಹಿತಿಭರಿತ ವಿದ್ಯುತ್ ಸಂಜ್ಞೆಗಳನ್ನು ಕಳುಹಿಸಿಕೊಡುವ ಮತ್ತು ಪಡೆಯುವ ವ್ಯವಸ್ಥೆ

ದೂರಸಂವೇದನೆ

(ತಂ) ಯಾವುದೇ ವಸ್ತು ಅಥವಾ ಕ್ಷೇತ್ರದೊಂದಿಗೆ ವಾಸ್ತವ ಸಂಪರ್ಕವಿಲ್ಲದೆಯೇ ಅದನ್ನು ಸಂಜ್ಞೆಗಳ ಮೂಲಕ ಅಧ್ಯಯನ ಮಾಡಲು ಅನುಮಾಡಿಕೊಡುವ ತಂತ್ರಗಳು. ಭೂಸಂಪನ್ಮೂಲಗಳ ಸಮೀಕ್ಷೆ, ಏರಿಯಲ್ ಛಾಯಾಚಿತ್ರಣ, ಬಹುರೋಹಿತ ಬಿಂಬೀಕರಣ ಮತ್ತು ರೇಡಾರ್ ಇವು ಇಂಥ ಕೆಲವು ತಂತ್ರಗಳು. ದೂರಸಂವೇದನೆಯನ್ನು ಸಾಮಾನ್ಯವಾಗಿ ವಿಮಾನಗಳ ಸಹಾಯದಿಂದ ಹಾಗೂ ಈಚೆಗೆ ಹೆಚ್ಚು ಹೆಚ್ಚಾಗಿ ಉಪಗ್ರಹಗಳ ಮೂಲಕ ಕೈಗೊಳ್ಳಲಾಗುತ್ತಿದೆ. ಭೂಪಟ ರಚನೆಯಲ್ಲೂ ಈ ತಂತ್ರವನ್ನು ಬಳಸಲಾಗುತ್ತಿದೆ

ದೂರಸ್ಥ

(ಜೀ) ಜೋಡಣೆ ಬಿಂದುವಿನಿಂದ – ಅವಯವ ಕುರಿತಂತೆ ದೇಹದಿಂದ, ರಕ್ತನಾಳ ಕುರಿತಂತೆ ಹೃದಯದಿಂದ, ನರ ಕುರಿತಂತೆ ಕೇಂದ್ರ ನರಮಂಡಲದಿಂದ – ದೂರದಲ್ಲಿರುವ. ನೋಡಿ : ಸಮೀಪಸ್ಥ

Search Dictionaries

Loading Results

Follow Us :   
  Download Bharatavani App
  Bharatavani Windows App