भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದೀರ್ಘ ತರಂಗಗಳು

(ಭೌ) ೧೦೦೦ ಮೀಟರ್‌ಗೂ ಹೆಚ್ಚಿನ ಅಲೆಯುದ್ದದ, ೩೦೦ ಕಿಲೋಹರ್ಟ್ಸ್‌ಗೂ ಕಡಿಮೆ ಆವೃತ್ತಿಯ ರೇಡಿಯೊ ತರಂಗಗಳು

ದೀರ್ಘಕಾಲಿಕ

(ವೈ) ಆಳವಾಗಿ ಬೇರೂರಿದ ಅಥವಾ ಸಾಕಷ್ಟು ಕಾಲದಿಂದ ಬಾಧಿಸುತ್ತಿರುವ ಬೇನೆ ಕುರಿತು

ದೀರ್ಘಕಾಲಿಕ ಪ್ರವೃತ್ತಿ

(ಸಂ) ದತ್ತಾಂಶವನ್ನು ಕಾಲಾನುಕ್ರಮದಲ್ಲಿ ಜೋಡಿಸಿ ವಿಶ್ಲೇಷಿಸಿದಾಗ ಅದರಲ್ಲಿ ಕಂಡು ಬರುವ ದೀರ್ಘಕಾಲಿಕ ಚಲನೆ. ಉದಾ: ಒಂದು ದೇಶದಿಂದ ರಫ್ತಾಗುವ ಖಾದ್ಯ ವಸ್ತುಗಳ ಒಟ್ಟು ಮೌಲ್ಯದ ಬಗ್ಗೆ ೨೦ ವರ್ಷಗಳ ಮಾಹಿತಿಯಿಂದ ದೊರೆಯುವ ಏರಿಳಿತದ ದೀರ್ಘಕಾಲಿಕ ಪ್ರವೃತ್ತಿ

ದೀರ್ಘಕಾಲಿಕ ವೇಗೋತ್ಕರ್ಷ

(ಖ) ಭೂಮಿಯ ಸುತ್ತ ಚಂದ್ರನ ಪರಿಭ್ರಮಣ ವೇಗದಲ್ಲಿ ಪ್ರಕಟ ವಾಗುವ ಅತಿನಿಧಾನ ಗತಿಯ ಹೆಚ್ಚಳ. ಇದರಿಂದಾಗಿ ೧೦೦ ವರ್ಷಗಳಲ್ಲಿ ಈ ಪರಿಭ್ರಮಣಾವಧಿ ವೇಗ ಸುಮಾರು ೧೧ ಸೆಕೆಂಡ್‌ಗಳಷ್ಟು ಅಷ್ಟೇ ಹೆಚ್ಚುತ್ತದೆ

ದೀರ್ಘವೃತ್ತ

(ಗ) ಲಂಬವೃತ್ತೀಯ ಶಂಕುವನ್ನು ಸಮತಲ ಛೇದಿಸಿದಾಗ ದೊರೆಯುವ ಮೂರು ಬಗೆಯ ವಕ್ರಗಳ ಪೈಕಿ ಒಂದು. ಉಳಿದೆರಡು ಪರವಲಯ ಮತ್ತು ಅತಿಪರವಲಯ. ಅಂಡವೃತ್ತ. ಇದೊಂದು ಸಂವೃತ ವಕ್ರರೇಖೆ. ಇದರ ಉತ್ಕೇಂದ್ರತೆ ೦ ಮತ್ತು ೧ರ ನಡುವಿನ ಭಿನ್ನರಾಶಿ. ಸೂರ್ಯನ ಸುತ್ತ ಗ್ರಹದ ಕಕ್ಷೆ ಒಂದು ದೀರ್ಘವೃತ್ತ. ಅಂಡಾಕೃತಿ, ಅಂಡಾಕಾರ. ನೋಡಿ : ಪರವಲಯ, ಅತಿಪರವಲಯ, ಶಂಕುಜ

ದೀರ್ಘವೃತ್ತಮಾಪನ

(ತಂ) ತೆಳು ಫಿಲಮ್‌ಗಳ ಪರಾವೈದ್ಯುತ ಗುಣಗಳನ್ನು ಹಾಗೂ ಅವುಗಳ ದಪ್ಪವನ್ನು ಅಳತೆ ಮಾಡುವ ಸುಲಭ ಹಾಗೂ ಶಕ್ತಿಶಾಲಿ ದೃಗ್ಗೋಚರ ತಂತ್ರ. ಇಲ್ಲಿ ಧ್ರುವೀಕೃತ ಬೆಳಕನ್ನು ಮಾದರಿ ವಸ್ತುವಿನ (ತೆಳು ಫಿಲ್ಮು) ಮೇಲೆ ಆಪಾತಗೊಳಿಸಲಾಗುವುದು. ಅನಂತರ, ಪ್ರತಿಫಲಿತ (ಕೆಲವೊಮ್ಮೆ ಸಂವಹನಗೊಂಡ) ಬೆಳಕಿನ ಧ್ರುವೀಕರಣದ ಸ್ಥಿತಿ ಹಾಗೂ ಪ್ರಾವಸ್ಥೆ ಯಲ್ಲಿನ ಬದಲಾವಣೆಯನ್ನು ಅವಲಂಬಿಸಿ ಮಾದರಿ ವಸ್ತುವಿನ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುವುದು. ಬೆಳಕಿನ ಧ್ರುವೀಕರಣದ ಅತ್ಯಂತ ಸಾಮಾನ್ಯ ಸ್ಥಿತಿಯು ದೀರ್ಘವೃತ್ತವಾದುದರಿಂದ ಈ ತಂತ್ರಕ್ಕೆ ದೀರ್ಘವೃತ್ತಮಾಪನವೆಂದು ಹೆಸರು. ಇದು ಅರೆವಾಹಕ ಭೌತ ವಿಜ್ಞಾನ, ಸೂಕ್ಷ್ಮ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ವಿಶೇಷವಾಗಿ ಅನ್ವಯ

ದೀರ್ಘವೃತ್ತಾಭ

(ಗ) ದೀರ್ಘ ವೃತ್ತವನ್ನು ಅದರ ಯಾವುದೇ ಅಕ್ಷದ ಸುತ್ತ ಪರಿಭ್ರಮಿಸಿದಾಗ ದೊರೆಯುವ ಘನಾಕೃತಿ. (ಎಲಿಪ್ಸಾಯಿಡ್). ಮೂರು ಆಯಾಮಗಳ ಈ ಘನಾಕೃತಿಯ ಸಮತಲ ಛೇದಗಳೆಲ್ಲವೂ ದೀರ್ಘ ವೃತ್ತಗಳು ಅಥವಾ ವೃತ್ತಗಳು. ದೀರ್ಘವೃತ್ತಕಲ್ಪ

ದೀರ್ಘವ್ಯಾಪ್ತಿ ಯಾನ

(ತಂ) ಮತ್ತೆ ಇಂಧನ ಹಾಕುವ ಆವಶ್ಯಕತೆ ಇಲ್ಲದ ವಿಮಾನ, ಹಡಗು ಅಥವಾ ಕ್ಷಿಪಣಿಯಲ್ಲಿ ದೀರ್ಘದೂರ ಯಾನ

ದೀರ್ಘಸ್ಥಾಯೀ ರೇಖೆಗಳು

(ಭೌ) ಧಾತುವಿನ ರೋಹಿತದಲ್ಲಿ ಅತ್ಯಂತ ಬಲಿಷ್ಠ ರೇಖೆಗಳು. ವಸ್ತುವಿನ ಪ್ರಮಾಣ ಅತ್ಯಲ್ಪವಾಗಿದ್ದು ಉಳಿದ ರೇಖೆಗಳು ಗೋಚರಿಸದಿದ್ದಾಗಲೂ ಇವು ಇದ್ದೇ ಇರುತ್ತವೆ

ದೀರ್ಘಾಕ್ಷ

(ಗ) ದೀರ್ಘವೃತ್ತದ ಉಭಯ ನಾಭಿಗಳ ಮೂಲಕ ಹೋಗುವ ಮತ್ತು ಗರಿಷ್ಠ ದೀರ್ಘತೆಯ ವ್ಯಾಸ

ದೀರ್ಘಾಕ್ಷ ಗೋಳಾಭ

(ಗ) ನೋಡಿ: ಪರಿಭ್ರಮಣ ದೀರ್ಘವೃತ್ತಾಭ

ದೀರ್ಘಾಯುಷ್ಯ

(ವೈ) ಬಹುಕಾಲ ಬದುಕಿರುವಿಕೆ. ದೀರ್ಘಾಯುಸ್ಸು

ದುಗ್ಧ ಗ್ರಂಥಿ

(ವೈ) ಸ್ತನಿಗಳಲ್ಲಿ ಕ್ಷೀರೋತ್ಪತ್ತಿ ಮಾಡುವ ಸ್ತನ ಸಂಬಂಧೀ ಗ್ರಂಥಿ. ಜರಾಯುಜ (ವೀವಿಪರಸ್) ಟ್ಸೆಟ್ಸೀ ನೊಣಗಳಲ್ಲಿ ವಿಶೇಷ ಗರ್ಭಾಶಯದ ಗ್ರಂಥಿಗಳು. ಮರಿಹುಳು ಪೊರೆ ಹುಳುವಾಗುವವರೆಗೂ ಇವುಗಳಿಂದ ಪುಷ್ಟಿ ಪಡೆಯುತ್ತವೆ

ದುಗ್ಧರಸ

(ವೈ) ಶರೀರದ ಅಂಗೋಪಾಂಗಗಳೆಲ್ಲವನ್ನೂ ತೋಯಿಸುವ, ರಕ್ತದ ಪ್ಲಾಸ್ಮದಂತೆ ನಿರ್ವರ್ಣವಾಗಿರುವ, ಬಿಳಿಯ ರಕ್ತಕಣಗಳಿರುವ, ದುಗ್ಧನಾಳಗಳ ಮೂಲಕ ಹೋಗಿ ರಕ್ತವನ್ನು ಸೇರುವ ಕ್ಷಾರೀಯ ದ್ರವ. ಜೀರ್ಣವಾದ ಆಹಾರದ (ಬಿಳಿಯ) ಕೊಬ್ಬಿನಂಶ ಸೇರುವುದರಿಂದಾಗಿ ಇದು ಹಾಲಿನಂತೆ ಕಾಣುವುದರಿಂದ ಇದನ್ನು ಹಾಲ್ರಸ ಅಥವಾ ದುಗ್ಧರಸ ಎನ್ನುತ್ತಾರೆ. ಇದರಲ್ಲಿ ಪ್ರಧಾನವಾಗಿ ನೀರು ಇರುವುದಲ್ಲದೆ ಅಲ್ಬ್ಯಮೀನ, ಗ್ಲಬ್ಯುಲಿನ್, ಲವಣಗಳು, ಯೂರಿಯ, ಗ್ಲೂಕೋನ್ ಮುಂತಾದವು ಇರುತ್ತವೆ. ಲಸಿಕೆಯಾಗಿ ಬಳಸುವ ದ್ರವ. ಕರುವಿನ ಸಿಡುಬು ಗುಳ್ಳೆಗಳಿಂದ ತೆಗೆದ ದ್ರವ. ಸಿಡುಬುರೋಗ ಪರಿಹಾರಕ್ಕಾಗಿ ಬಳಕೆ

ದುಗ್ಧರಸ ಚಿಕಿತ್ಸೆ

(ವೈ) ಪ್ರಾಣಿ ಅಥವಾ ಮನುಷ್ಯನ ದೇಹಕ್ಕೆ ದುಗ್ಧರಸ ಚುಚ್ಚಿ ನೀಡುವ ರೋಗಪರಿಹಾರಕ ಅಥವಾ ಪ್ರತಿರೋಧಕ ಚಿಕಿತ್ಸೆ. ದುಗ್ಧರಸದಲ್ಲಿ ಬ್ಯಾಕ್ಟೀರಿಯಗಳಿಗೆ ಅಥವಾ ರೋಗಕಾರಕ ವಿಷಕ್ಕೆ ವಿರುದ್ಧವಾದ ಪ್ರತಿಕಾಯಗಳಿರುತ್ತವೆ

ದುಗ್ಧರಸ ಮಂಡಲ

(ವೈ) ಕಶೇರುಕಗಳ ಶರೀರದಾದ್ಯಂತ ವ್ಯಾಪಿಸಿರುವ ಊತಕ ತರಲಗಳಿಂದ ರಕ್ತ ಪ್ರವಾಹಕ್ಕೆ ದುಗ್ಧರಸವನ್ನು ಒಯ್ಯುವ ನಾಳ ವ್ಯೂಹ. ಇದಕ್ಕೆ ಮಿದುಳನ್ನು ಬಿಟ್ಟು ಉಳಿದೆಲ್ಲ ಅಂಗಗಳೊಂದಿಗೆ, ನರವ್ಯೂಹ ದೊಂದಿಗೂ, ಸಂಪರ್ಕ ಉಂಟು. ಅದರ ಮಾರ್ಗದಲ್ಲಿ ದುಗ್ಧರಸ ಗ್ರಂಥಿಗಳೂ ದುಗ್ಧರಸ ಹೃದಯ (ವ್ಯಾಕೋಚನ ಸಂಕೋಚನಗಳ ಮೂಲಕ ದುಗ್ಧರಸವು ನಾಳಗಳಲ್ಲಿ ಹರಿಯುವಂತೆ ಮಾಡುವ ದುಗ್ಧರಸ ನಾಳಗಳ ಒಂದು ಭಾಗ)ಗಳೂ ಕಂಡುಬರುತ್ತವೆ. ದುಗ್ಧರಸ ವ್ಯವಸ್ಥೆ

ದುಂಡುತನ

(ಭೂವಿ) ಕಲ್ಲು ಮುಂತಾದ ಒಡ್ಡೊಡ್ಡು ಕಾಯಗಳ ಮೇಲ್ಮೈ ನುಣುಪುತನದ ಮಾನಕ. ಕಾಯದ ಅಂಚು ಗಳಲ್ಲಿಯ ವಕ್ರತಾ ತ್ರಿಜ್ಯಗಳ ಸರಾಸರಿಗೂ ಗರಿಷ್ಠ ಅಂತಃವೃತ್ತದ ತ್ರಿಜ್ಯಕ್ಕೂ ನಡುವಿನ ನಿಷ್ಪತ್ತಿ. ಪರಿಪೂರ್ಣ ದುಂಡುತನವಿರುವ ಕಾಯವೇ ಗೋಳ. ಇದರ ದುಂಡುತನ ೧. ನೋಡಿ : ಗೋಳೀಯತೆ

ದುಂಡುಬಾಯಿ ಮೀನು

(ಪ್ರಾ) ಕಶೇರುಕಗಳ ಅಗ್ನಾತ ಎಂಬ ಒಂದು ವರ್ಗ. ಶಲ್ಕ ಗಳಾಗಲೀ (ಹುರುಪೆ) ದವಡೆ ಹಲ್ಲುಗಳಾಗಲೀ ಪಾದಗಳಾಗಲೀ ಇರದ ಹಾವಿನಂಥ ಜಲಚರ ಪ್ರಾಣಿಗಳು. ದುಂಡುಮೂತಿಯಿಂದ ಮೀನುಗಳ ರಕ್ತ ಹೀರುತ್ತವೆ. ಕಿವಿರುಗಳಿಂದ ಉಸಿರಾಡುತ್ತವೆ. ಮೂಗಿನಲ್ಲಿ ಹೊಳ್ಳೆ ಒಂದೇ ಒಂದು ಇರುವುದು

ದುರಸ್ತಿ

(ತಂ) ಕಟ್ಟಡ, ಉಡುಪು, ಯಂತ್ರ, ಅಂಗಾಂಶ, ಬಲ ಮೊದಲಾದವನ್ನು ಮತ್ತೆ ಸುಸ್ತಿಗೆ ತರುವುದು. ನೇರ್ಪು

ದುರ್ಗಂಧ

(ವೈ) ಕೊಳೆತ ಪದಾರ್ಥಗಳಿಂದ ಹೊಮ್ಮುವ ಅಸಹ್ಯ ವಾಸನೆ. ದುರ್ವಾಸನೆ. ನಾತ

Search Dictionaries

Loading Results

Follow Us :   
  Download Bharatavani App
  Bharatavani Windows App