भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದಂತಸೂತ್ರ

(ಪ್ರಾ) ಸ್ತನಿಗಳಲ್ಲಿ ಮೇಲು ಮತ್ತು ಕೆಳ ದವಡೆಗಳಲ್ಲಿರುವ ಹಲ್ಲುಗಳ ಸಂಖ್ಯೆ ಮತ್ತು ಬಗೆಯನ್ನು ವಿವರಿಸುವ ಸೂತ್ರ. ಪ್ರೌಢ ವ್ಯಕ್ತಿಯ ಮೇಲು ದವಡೆಯಲ್ಲಿ ಎರಡು ಜೊತೆ ಬಾಚಿಹಲ್ಲುಗಳು, ಒಂದು ಜೊತೆ ಕೋರೆಹಲ್ಲು, ಎರಡು ಜೊತೆ ಮುಂದವಡೆ ಹಲ್ಲುಗಳು ಮತ್ತು ಮೂರು ಜೊತೆ ಹಿಂದವಡೆ ಹಲ್ಲುಗಳು ಇವೆ ಎನ್ನುವುದನ್ನು ೨೧೨೩ ಎಂದು ಸೂಚಿಸುತ್ತೇವೆ. ಕೆಳದವಡೆಯಲ್ಲೂ ಇದೇ ರೀತಿ ಹಲ್ಲುಗಳಿರುವುದರಿಂದ ವ್ಯಕ್ತಿಯ ದಂತಸೂತ್ರ ೨೧೨೩/೨೧೨೩. ಮೊಲದ್ದು ೨೦೩೮/೧೦೨೩. ಕರಡಿಯದು ೩೧೪೨/೩೧೪೩. ಸೂತ್ರದಲ್ಲಿರುವ ಎಲ್ಲ ಸಂಖ್ಯೆಗಳನ್ನೂ ಕೂಡಿ ಎರಡರಿಂದ ಗುಣಿಸಿದರೆ ಒಟ್ಟು ಹಲ್ಲುಗಳ ಸಂಖ್ಯೆ ದೊರೆಯುತ್ತದೆ

ದಂತಹೀನತೆ

(ಪ್ರಾ) ಹಲ್ಲುಗಳು ಇಲ್ಲದಿರುವ ಸ್ಥಿತಿ

ದಂತಾಂಕುರಣ

(ವೈ) ಮಗುವಿನಲ್ಲಿ ಮೊದಲ ಹಲ್ಲುಗಳು ಕಾಣಿಸಿಕೊಳ್ಳುವುದು ಮತ್ತು ಶರೀರ ವ್ಯವಸ್ಥೆಯ ಮೇಲೆ ಅದರ ಪರಿಣಾಮಗಳು, ಹಲ್ಲು ಮೊಳೆಯುವುದು

ದಂತಾವಕಾಶ

(ಪ್ರಾ) ಹಲ್ಲುಗಳ, ವಿಶೇಷವಾಗಿ ಬಾಚಿ ಮತ್ತು ದವಡೆ ಹಲ್ಲುಗಳ ನಡುವಿನ ತೆರಪು

ದಂತಿತ

(ಜೀ, ಪ್ರಾ) ಹಲ್ಲುಳ್ಳ ಪ್ರಾಣಿ. (ಸ) ಗರಗಸದಂತೆ ಹಲ್ಲುಳ್ಳ ಎಲೆಯ ಅಂಚು. (ರ) ಸಹಯೋಜಕ ಬಂಧಕಗಳಿಂದ ಲಿಗ್ಯಾಂಡ್‌ಗಳು (ಅಣು ಅಥವಾ ಅಯಾನ್ ಆಗಿರಬಹುದು) ಒಂದು ಲೋಹದ ಪರಮಾಣುವಿಗೆ ಲಗತ್ತಾಗಿರುವುದು. ಉದಾ : ಫೆರೊಸಯನೈಡ್ ಅಯಾನ್ {Fe(CN)6}4–

ದತ್ತ ಮಾಹಿತಿಗಳು

(ಸಾ) ಯಾವುದೇ ವಾದಕ್ಕೆ, ಸಿದ್ಧಾಂತಕ್ಕೆ ಅಥವಾ ಪರೀಕ್ಷೆಗೆ ಆಧಾರವಾಗಿ ತೆಗೆದುಕೊಂಡ ವಾಸ್ತವಾಂಶ, ವೀಕ್ಷಣೆ, ಅನುಭವ ಅಥವಾ ಅಂಕಿಅಂಶಗಳು. (ಕಂ) ಕಂಪ್ಯೂಟರ್‌ನಲ್ಲಿ ಇನ್‌ಪುಟ್ ಆಗಿ ನೆರವಾಗುವ ಸಂಖ್ಯೆ, ಅಕ್ಷರ, ಪ್ರತೀಕ ಹಾಗೂ ಸದೃಶ ಪ್ರಮಾಣಗಳು

ದತ್ತಾಂಶ ಸಂಗ್ರಹ

(ಕಂ) ಕಂಪ್ಯೂಟರ್‌ನಲ್ಲಿ ದತ್ತಾಂಶಗಳನ್ನು ಸಂಗ್ರಹಿಸುವ ಸಾಧನ. ಇದರ ಸಹಾಯದಿಂದ ದತ್ತಾಂಶಗಳನ್ನು ಬೇಕೆಂದಾಗ ಪಡೆಯಬಹುದು. ಸ್ಮೃತಿಕೋಶ

ದತ್ತಾಂಶ ಸಂಸ್ಕರಣೆ

(ಕಂ) ಕಲೆ ಹಾಕಿದ ಅಂಕೆ ಅಂಶಗಳನ್ನು ಅಥವಾ ಮಾಹಿತಿಗಳನ್ನು ನೇರ್ಪುಗೊಳಿಸುವ ಪ್ರಕ್ರಿಯೆ. ದತ್ತಾಂಶಗಳನ್ನು ಕಂಪ್ಯೂಟರ್ ನೆರವಿನಿಂದ ಉಪಯುಕ್ತ ರೂಪಕ್ಕೆ ಪರಿವರ್ತಿಸುವುದು

ದದ್ದು

(ವೈ) ಚರ್ಮದ ಮೇಲೇಳುವ ಸಣ್ಣ ಕೆಂಪು ಗುಳ್ಳೆ

ದನದ ಅಸೆಟೊನೇಮಿಯ

(ಪ್ರಾ) ಹಾಲು ಕೊಡುವ ಹಸುಗಳನ್ನು, ರಕ್ತಹೀನತೆಯ ಕಾರಣವಾಗಿ, ವಿಶೇಷವಾಗಿ ಚಳಿಗಾಲದಲ್ಲಿ, ಬಾಧಿಸುವ ನಿತ್ರಾಣ ಪರಿಸ್ಥಿತಿ

ದನಿಯಾ

(ಸ) ನೋಡಿ : ಕೊತ್ತುಂಬರಿ

ದಬ್ಬೆ

(ವೈ) ಮುರಿದ ಮೂಳೆಗಳನ್ನು ಸರಿಪಡಿಸಿದ ಮೇಲೆ ಅವು ಕದಲದಂತಿಡಲು ಉಪಯೋಗಿಸುವ ಗಡಸು ಪಟ್ಟಿ

ದಮ್ಮು

(ವೈ) ನೋಡಿ : ಆಸ್ತಮ

ದರ

(ಭೌ) ಸಾಪೇಕ್ಷ ಸಂಬಂಧ/ಮೌಲ್ಯಗಳ ತುಲನೆ. ವಸ್ತು ಕ್ರಮಿಸಿದ ದೂರವನ್ನು (s) ಈ ಚಲನೆಯ ವೇಳೆಯಲ್ಲಿ ಸಂದ ಕಾಲದಿಂದ (t) ಭಾಗಿಸಿದಾಗ ಚಲನದರ (s¸t) ದೊರೆಯುತ್ತದೆ. ಇದು ಜವ ಅಥವಾ ದ್ರುತಿ. ಸ್ಥಾನಾಂತರದ ದರವೇ ವೇಗ. ವೇಗದಲ್ಲಿ ಕ್ಷಣ ಕ್ಷಣವೂ ವೃದ್ಧಿಯಾಗುತ್ತಿದ್ದರೆ ಆ ವೃದ್ಧಿಯನ್ನು ಸಂದ ಕಾಲದಿಂದ ಭಾಗಿಸಿದಾಗ ದೊರೆಯುವ ದರವೇ ವೇಗೋತ್ಕರ್ಷ. (ಸಾ) ಹಣಕಾಸು ಸಂಸ್ಥೆಗಳಲ್ಲಿ ಹೂಡಿದ ಮೊಬಲಗಿಗೆ ದೊರೆಯುವ ಬಡ್ಡಿದರ. ನಿರ್ದಿಷ್ಟ ಬಿಂದುವಿನಲ್ಲಿ ಫಲನದಲ್ಲಿ ಉಂಟಾಗುವ ವೇಗ ವೃದ್ಧಿಯ ದರ

ದರ್ಜೆ

(ಗ) ೧. ವಕ್ರರೇಖೆಯ/ವಕ್ರತಲದ ದರ್ಜೆ: ಯಾವುದೇ ಸರಳರೇಖೆ ಇದನ್ನು ಛೇದಿಸಬಹುದಾದ ಗರಿಷ್ಠ ಬಿಂದುಗಳ (ನೈಜ/ಸಂಪಾತ/ಕಾಲ್ಪನಿಕ) ಸಂಖ್ಯೆ; ಸಮೀಕರಣ ರೂಪದಲ್ಲಿ ಇದ್ದರೆ ಅದರ ಡಿಗ್ರಿ. ೨. ಅವಕಲನಾಂಕದ ದರ್ಜೆ: ಎಷ್ಟು ಬಾರಿ ಅವಕಲಿಸಲಾಗಿದೆ ಎಂಬುದರ ಅಳತೆ. ಉದಾ: ಇಲ್ಲಿ ಒಂದನೆಯದನ್ನು ೧ ಬಾರಿಯೂ ಎರಡನೆಯದನ್ನು ೨ ಬಾರಿಯೂ ಮೂರನೆಯದನ್ನು ೩ ಬಾರಿಯೂ… nನೆಯದನ್ನು n ಬಾರಿಯೂ ಅವಕಲಿಸಿದೆ. ಎಂದೇ ಇವುಗಳ ದರ್ಜೆಗಳು ಅನುಕ್ರಮವಾಗಿ ೧, ೨, ೩,………,n. ೩. ಅವಕಲ ಸಮೀಕರಣ ದರ್ಜೆ : ಇದರಲ್ಲಿರುವ ಗರಿಷ್ಠ ದರ್ಜೆಯೇ ಅವಕಲನಾಂಕದ ದರ್ಜೆ. ಉದಾ: ಸಮೀಕರಣ ದರ್ಜೆ ೩.

ದರ್ಜೆ

(ತಂ) ಯಂತ್ರದ ಕಾರ್ಯನಿರ್ವಹಣೆಗೆ ತಯಾರಕರು ಗೊತ್ತುಪಡಿಸಿರುವ ಮಿತಿ. ನಿರ್ವಾಹಕತಾಂಕ

ದರ್ಜೆ

(ಭೂವಿ) ರೂಪಾಂತರ ಪ್ರಮಾಣವನ್ನು ಆಧರಿಸಿ ಕಲ್ಲಿದ್ದಲಿನ ವರ್ಗೀಕರಣ. ಪಂಕ್ತಿ , ಸ್ಥಾನ

ದರ್ಜೆ

(ರ) ಯಾವುದೇ ರಾಸಾಯನಿಕ ಕ್ರಿಯೆಯಲ್ಲಿ ಸಾರತೆ ವ್ಯತ್ಯಯಗೊಳ್ಳುವ ಪರಿವರ್ತಕಗಳ ಅಣುಸಂಖ್ಯೆಗೆ ಅನುಗುಣವಾಗಿ (೧,೨,೩ ಅಥವಾ ಹೆಚ್ಚು) ಆ ಕ್ರಿಯೆಯನ್ನು ಮೊದಲನೆಯ, ಎರಡನೆಯ ಮೂರನೆಯ ಅಥವಾ ಇನ್ನೂ ಹೆಚ್ಚಿನ ದರ್ಜೆಯ ಕ್ರಿಯೆಯಾಗಿ ವರ್ಗೀಕರಿಸುವ ವಿಧಾನ. ಉದಾ: H2O2 ವಿಘಟಿಸಿ ನೀರು (H2O) ಹಾಗೂ ಆಕ್ಸಿಜನ್ (O) ರೂಪುಗೊಳ್ಳುವುದು ಮೊದಲನೆಯ ದರ್ಜೆಯ ಕ್ರಿಯೆ. ಪಾಟಿ

ದರ್ಜೆ

(ಸಾ) ೧. ಲೋಹ ಪಡೆಯಬಹುದಾದ ಪ್ರಮಾಣಕ್ಕೆ ಅನುಗುಣವಾಗಿ ಅದಿರಿನ ವರ್ಗೀಕರಣ. ೨. ಭಾರಿ ಸ್ಫೋಟಕಗಳ ಶಕ್ತಿ ಸೂಚ್ಯಂಕ. ೩. ಒಂದೇ ರೀತಿಯ ಇಳಕಲು ಇರುವಂತೆ ರೈಲು ಮಾರ್ಗವನ್ನು ಇಲ್ಲವೇ ಭೂಮಿ ಹರವನ್ನು ಸಿದ್ಧಗೊಳಿಸುವುದು

ದವಡೆ

(ವೈ) ಕಶೇರುಕಗಳ ಬಾಯಿಯನ್ನು ರೂಪಿಸುವ ಎರಡು ಎಲಬುಗಳಲ್ಲೊಂದು. ಮೇಲಿನದು ಮೇಲ್ದವಡೆ, ಕೆಳಗಿನದು ಕೆಳದವಡೆ. ಬಾಯಿಯನ್ನು ತೆರೆಯಲು ಮತ್ತು ಮುಚ್ಚಲು ನೆರವಾಗುತ್ತದೆ. ಬೇಟೆಯನ್ನು ಹಿಡಿದು ಅಥವಾ ಜಗಿಯುವ ಸಲುವಾಗಿ ದವಡೆಯಲ್ಲಿ ಹಲ್ಲುಗಳಿರುವುವು. ಅಕಶೇರುಕಗಳಲ್ಲಿ ಇಂಥದೇ ರಚನೆ ಅನ್ನನಾಳದ ಮುಂತುದಿಯಲ್ಲಿರುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App