भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದ್ವಿಬಂಧ

(ರ) ಎರಡು ಪರಮಾಣುಗಳು ತಮ್ಮ ನಡುವೆ ಎರಡು ಎಲೆಕ್ಟ್ರಾನ್ ಜೋಡಿಗಳನ್ನು ಸಹಭೋಗಿಸುವ ಸಂದರ್ಭ. ಇದರಲ್ಲಿ ಒಂದು ಸಿಗ್ಮಾ ಮತ್ತೊಂದು ಪೈ ಬಂಧ. ಉದಾ: ಎಥಿಲೀನ್ CH2 = CH2

ದ್ವಿಬಂಧಿತ

(ಗ) p ==> q ಮತ್ತು q ==>=pಆಗಿದ್ದರೆ ಆಗ p ಮತ್ತು q ಎಂಬ ಎರಡು ಪ್ರತಿಜ್ಞಾ (ಅಥವಾ ಪ್ರಮೇಯ)ಗಳು ದ್ವಿಬಂಧಿತವಾಗಿವೆ ಎನ್ನುತ್ತೇವೆ

ದ್ವಿಬಾಷ್ಪ ಎಂಜಿನ್

(ತಂ) ಎರಡು ಪ್ರತ್ಯೇಕ ಕಾರ್ಯೋಪಯೋಗಿ ತರಲಗಳನ್ನು ಬಳಸುವ ಉಷ್ಣ ಎಂಜಿನ್. ಸಾಮಾನ್ಯವಾಗಿ ಪಾದರಸ ಬಾಷ್ಪವನ್ನೂ ಉಗಿಯನ್ನೂ ನಿಯೋಜಿಸುವುದು ವಾಡಿಕೆ

ದ್ವಿಭಾಜಕ

(ಗ) ನೋಡಿ: ಅರ್ಧಕ

ದ್ವಿಭಾಜನ

(ಜೀ) ಎರಡೆರಡಾಗಿ ಕವಲೊಡೆಯುತ್ತ ಹೋಗುವುದು

ದ್ವಿಮಾನ ಅಂಕೆ

(ಕಂ) ನೋಡಿ: ಬಿಟ್

ದ್ವಿಮಾನ ಅಂಕಗಣಿತ

(ಕಂ) ದ್ವಿಮಾನ ಅಂಕನ ವ್ಯವಸ್ಥೆಯನ್ನು ಬಳಸುವ ಅಂಕಗಣಿತ

ದ್ವಿಮಾನ ಪದ್ಧತಿ

(ಗ) ಸಂಖ್ಯಾಗಣನೆಯಲ್ಲಿ ಅಂಕೆಗಳ ಸ್ಥಾನಮೌಲ್ಯವನ್ನು ನಿರ್ದೇಶಿಸಲು ರೂಢಿಯಲ್ಲಿರುವ ದಶಮಾನಕ್ಕೆ ಬದಲು ಮೂಲಾಂಕ ೨ ಇಟ್ಟುಕೊಂಡು ಎಣಿಕೆ ಮಾಡುವ ಪದ್ಧತಿ. ಇದರಲ್ಲಿ ಬಳಕೆ ಆಗುವ ಪ್ರತೀಕಗಳು ೦ ಮತ್ತು ೧. ಉದಾ : ೧ರ ಪಕ್ಕದಲ್ಲಿ ೦ ಇಟ್ಟರೆ ದಶಮಾನದಲ್ಲಿ ಆಗುವಂತೆ ‘ಹತ್ತು’ ಆಗುವುದಿಲ್ಲ. ‘ಎರಡು’ ಆಗುವುದು. ಏಕೆಂದರೆ ಇಲ್ಲಿ ಏಕಸ್ಥಾನದಲ್ಲಿ ಬಲದಿಂದ ಎಡಕ್ಕೆ ಎಣಿಸುವುದು ಸೊನ್ನೆ, ದ್ವಿತೀಯ ಸ್ಥಾನದಲ್ಲಿ ಇರುವ ೧ಕ್ಕೆ ಬೆಲೆ ೨. ಹಾಗೆಯೇ 11 = 1+(1×2)=3. 1000 ಎಂಬ ಸಂಖ್ಯೆಯಲ್ಲಿ ನಾಲ್ಕು ಸ್ಥಾನಗಳಿರುವುದರಿಂದ, ಎರಡು ಎರಡಲ ಎರಡು = ೮; ೧೦೦೦೦ = ಎರಡು ಎರಡಲ ಎರಡಲ ಎರಡು = 16; 111=1+(1×2)+(1x2x2)=7; 1111=1+(1×2) +(1x2x2)+(1x2x2x2)=15…. ಇತ್ಯಾದಿ. ಅಂದರೆ ರೂಢಿಯಲ್ಲಿ (ದಶಮಾಂಶ ಪದ್ಧತಿಯಲ್ಲಿ) ಇರುವಂತೆ ಸ್ಥಾನದ ಬೆಲೆ ಹತ್ತು ಹತ್ತರಷ್ಟು ಹೆಚ್ಚುವುದಕ್ಕೆ ಬದಲಾಗಿ ದ್ವಿಮಾನ ಪದ್ಧತಿಯಲ್ಲಿ ಅದು ಎರಡು ಎರಡರಷ್ಟು ಹೆಚ್ಚುತ್ತಾ ಹೋಗುತ್ತದೆ. ಎಲೆಕ್ಟ್ರಾನಿಕ್ ಮಂಡಲಗಳಲ್ಲಿ ಸ್ವಿಚ್ ಚಾಲೂ ಆಗಿರುವುದನ್ನು ೧ ಪ್ರತೀಕವೂ ನಂದಿರುವುದನ್ನು ೦ ಪ್ರತೀಕವೂ ಸೂಚಿಸುತ್ತವೆ. ಎಂದೇ ದ್ವಿಮಾನ ಪದ್ಧತಿಯ ಅನಿವಾರ್ಯತೆ

ದ್ವಿಮಾನ ಸಂಕೇತ

(ಕಂ) ೦ ಮತ್ತು ೧ ಎಂಬ ಎರಡು ಪ್ರತೀಕಗಳನ್ನು ಮಾತ್ರ ಬಳಸಿ ಮಾಹಿತಿ ನಿರೂಪಿಸುವ ವ್ಯವಸ್ಥೆ

ದ್ವಿಮಾನಾಂಕನ

(ಕಂ) ದ್ವಿಮಾನದಲ್ಲಿ (೦ ಮತ್ತು ೧) ಸಂಖ್ಯೆಗಳನ್ನು ನಿರೂಪಿಸುವ ಕ್ರಮ. ನೋಡಿ : ದ್ವಿಮಾನ ಪದ್ಧತಿ

ದ್ವಿಮುಖಿ ಎಲೆ

(ಸ) ಎರಡು ಸ್ಪಷ್ಟ ಪಾರ್ಶ್ವಗಳಿರುವ ಎಲೆ. ಸರ್ವಸಾಮಾನ್ಯವಾಗಿ ಎಲ್ಲ ಎಲೆಗಳೂ ದ್ವಿಮುಖಿಗಳೇ

ದ್ವಿಯುಗ್ಮಕ

(ಪ್ರಾ) ಎರಡು ವಿಭಿನ್ನ ರೀತಿಯ ಯುಗ್ಮಕಗಳಿರುವ

ದ್ವಿಯುಗ್ಮಿತ

(ಸಾ) ಎರಡು ಜೋಡಿಗಳಲ್ಲಿರುವ. ದ್ವಿಶ್ರೇಣಿಕ. ದ್ವಿಯುಗಳೀಯ

ದ್ವಿಯುಗ್ಮಿತ ನಾಡಿ

(ವೈ) ನಾಡಿಮಿಡಿತಗಳು, ಪ್ರತಿ ಎರಡು ಜೋಡಿಗಳ ನಡುವೆ ಕಾಲಾವಧಿ ಇರುವಂತೆ, ಜೋಡಿ ಗಳಲ್ಲಿ ಸಂಭವಿಸುವುದು

ದ್ವಿರೂಪತ್ವ

(ರ) ಯಾವುದೇ ಸಂಯುಕ್ತ ಎರಡು ವಿಭಿನ್ನ ರೂಪಗಳಲ್ಲಿ ಸ್ಫಟಿಕೀಕರಿಸುವುದು. ಉದಾ: ಇಂಗಾಲದಿಂದ ಗ್ರಾಫೈಟ್ ಅಥವಾ ವಜ್ರ. (ಸ) ಯಾವುದೇ ಗಿಡದಲ್ಲಿ ಎಲೆ ಅಥವಾ ಹೂ ವಿಭಿನ್ನ ರೂಪಗಳಲ್ಲಿರುವುದು. (ಪ್ರಾ) ಪ್ರಾಣಿಗಳ ಗಂಡು ಅಥವಾ ಹೆಣ್ಣುಗಳಲ್ಲಿ ನಿಚ್ಚಳ ರೂಪ ವ್ಯತ್ಯಾಸ ಇರುವುದು

ದ್ವಿರೇಖೀಯ ಪರಿವರ್ತನೆ

(ಗ) ರೀತ್ಯ, w ಮತ್ತು z ಮಿಶ್ರ ಸಮತಲಗಳ ನಡುವೆ ರೂಪಿಸುವ ಒಂದು-ಒಂದು ಫಲನ. ರೇಖೀಯ ಪರಿವರ್ತನೆಯ (linear transformation) ವಿಶೇಷ ರೂಪ. ಮೋಬಿಯಸ್ ಪರಿವರ್ತನೆ ಎಂದೂ ಕರೆಯುತ್ತಾರೆ

ದ್ವಿಲಿಂಗೀ

(ಜೀ) ಪುಂ ಅಂಗ ಮತ್ತು ಸ್ತ್ರೀ ಅಂಗ ಎರಡೂ ಇರುವ. ಉದಾ : ಮಣ್ಣು ಹುಳು. ಉಭಯಲಿಂಗೀ

ದ್ವಿಲಿಂಗೀಯತೆ

(ಮವಿ) ಉಭಯಲಿಂಗಿಗಳ ದೈಹಿಕ ಹಾಗೂ ಮಾನಸಿಕ ಲಕ್ಷಣಗಳಿರುವುದು. ಉಭಯ ಲಿಂಗಿಗಳಿಂದಲೂ ಲೈಂಗಿಕವಾಗಿ ಆಕರ್ಷಿತವಾಗಿರುವುದು. ಉಭಯಲಿಂಗೀಯತೆ

ದ್ವಿಲೋಹೀಯ ಪಟ್ಟಿ

(ತಂ) ವಿಭಿನ್ನ ವ್ಯಾಕೋಚನ ಶೀಲತೆಯ ಎರಡು ಲೋಹಗಳನ್ನು ಒಂದಾಗಿ ಬೆಸೆದಿರುವ ಇಲ್ಲವೇ ರಿವೆಟ್ ಮಾಡಿರುವ ಪಟ್ಟಿ. ಹಾಗಾಗಿ ಕಾಸಿದಾಗ ಈ ಪಟ್ಟಿ ಬಾಗುತ್ತದೆ. ಒಂದು ತುದಿ ಬಂಧಿತವಾಗಿದ್ದರೆ ಇನ್ನೊಂದು ತುದಿಯು ವಿದ್ಯುನ್ಮಂಡಲವನ್ನು ತೆರೆಯುವಂತೆ ಅಥವಾ ಮುಚ್ಚುವಂತೆ ಮಾಡಲು ಸಾಧ್ಯವಿದೆ – ಥರ್ಮೊಸ್ಟಾಟ್‌ನಲ್ಲಿರುವಂತೆ

ದ್ವಿವಕ್ರೀಕಾರಕ

(ಭೌ) ಒಳಹೊಕ್ಕ ಬೆಳಕಿನ ಕಿರಣವನ್ನು ಎರಡಾಗಿ ಒಡೆದು ಬೇರೆ ಬೇರೆ ಕೋನಗಳಲ್ಲಿ ವಕ್ರೀಭವನ ಗೊಳ್ಳುವಂತೆ ಮಾಡಬಲ್ಲ (ಹರಳು) ಉದಾ : ಕ್ಯಾಲ್ಸೈಟ್

Search Dictionaries

Loading Results

Follow Us :   
  Download Bharatavani App
  Bharatavani Windows App