भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ದ್ಯುತಿಗಾಜು

(ಭೌ) ಮಸೂರ, ಅಶ್ರಗ ಮತ್ತಿತರ ದೃಗುಪಕರಣ ಭಾಗಗಳನ್ನು ತಯಾರಿಸಲು ಬಳಸುವ ಗಾಜು. ಇದು ಆದ್ಯಂತ ಸಮರೂಪದ್ದು. ಇದರಲ್ಲಿ ಗುಳ್ಳೆ, ಗೆರೆ ಎಳೆಗಳಿರುವುದಿಲ್ಲ. ರಾಸಾಯನಿಕ ರಚನೆಯೂ ಸಾಮಾನ್ಯ ಗಾಜಿನದಕ್ಕಿಂತ ಭಿನ್ನ

ದ್ಯುತಿಗೋಳ

(ಖ) ಸೌರಕಲೆ ಮತ್ತಿತರ ಭೌತ ಗುರುತುಗಳು ಪ್ರಕಟವಾಗುವ ಸೂರ್ಯನ ಮೇಲ್ಮೈಗೆ ನೀಡಿರುವ ಹೆಸರು. ಬರಿಗಣ್ಣಿಗೆ ಕಾಣುವ ಸೂರ್ಯನ ಅತ್ಯಂತ ಪ್ರಕಾಶ ಭಾಗ. ನೂರಾರು ಕಿಮೀ ದಪ್ಪದ ಅನಿಲ ಗೋಳ. ಇದರ ಸರಾಸರಿ ಉಷ್ಣತೆ ೬೦೦೦K. ಪ್ರಭಾಗೋಳ

ದ್ಯುತಿಪಟುತ್ವ

(ಭೌ) ಸ್ಫಟಿಕ, ದ್ರವ ಅಥವಾ ದ್ರಾವಣದಂಥ ಪಾರಕ ಪದಾರ್ಥದ ಮೂಲಕ ಧ್ರುವೀಕೃತ ಬೆಳಕು ಹಾದುಹೋಗುವಾಗ ಅದರ ಧ್ರುವೀಕರಣ ಸಮತಲ ಎಡಕ್ಕಾಗಲೀ ಬಲಕ್ಕಾಗಲೀ ತಿರುಗುವುದಕ್ಕೆ ಈ ಹೆಸರು. ಹೀಗೆ ತಿರುಗಿಸಬಲ್ಲ ಪದಾರ್ಥವೇ ದ್ಯುತಿಪಟು ಪದಾರ್ಥ. ತಿರುಗುವ ಪ್ರಮಾಣವು ಬೆಳಕು ಆ ಮಾಧ್ಯಮದಲ್ಲಿ ಪ್ರಯಾಣಿಸಿದ ದೂರಕ್ಕೂ ಮಾಧ್ಯಮದ ಸಾಂದ್ರತೆಗೂ ಅನುಪಾತೀಯವಾಗಿರುತ್ತದೆ ಮತ್ತು ಬೆಳಕಿನ ಅಲೆಯುದ್ದವನ್ನೂ (ಅಂದರೆ ಬಣ್ಣ) ಅವಲಂಬಿಸಿರುತ್ತದೆ

ದ್ಯುತಿಭೀತಿ

(ವೈ) ಬೆಳಕಿನ ಬಗೆಗೆ ಅಪಸಾಮಾನ್ಯ ಭಯ, ಬೆಳಕಿಗೆ ಕಣ್ಣು ತೆರೆಯಲಾಗದಿರುವುದು

ದ್ಯುತಿಮಾಪಕ

(ಭೌ) ಎರಡು ಅಥವಾ ಹೆಚ್ಚು ಬೆಳಕಿನ ಆಕರಗಳ ದೀಪ್ತಿ ತೀವ್ರತೆ ಅಳೆಯಲು ಮತ್ತು ಹೋಲಿಸಲು ಉಪಯೋಗಿಸುವ ಉಪಕರಣ. ಖಭೌತ ವಿಜ್ಞಾನದಲ್ಲಿ ದೂರ ನಕ್ಷತ್ರಗಳ ಬೆಳಕಿನ ತೀವ್ರತೆ ಅಳೆಯಲು ದ್ಯುತಿವಿದ್ಯುತ್ ದ್ಯುತಿಮಾಪಕಗಳನ್ನು ಬಳಸಲಾಗುತ್ತದೆ

ದ್ಯುತಿರಸಾಯನ ವಿಜ್ಞಾನ

(ರ) ವಿಕಿರಣದ, ಪ್ರಧಾನವಾಗಿ ಗೋಚರ ಹಾಗೂ ಅತಿನೇರಿಳೆ ವಿಕಿರಣದ, ರಾಸಾಯನಿಕ ಪರಿಣಾಮಗಳನ್ನೂ ರಾಸಾಯನಿಕ ಬದಲಾವಣೆ ಯಿಂದ ವಿಕಿರಣವು ನೇರವಾಗಿ ಉತ್ಪಾದನೆಯಾಗುವುದನ್ನೂ ಅಧ್ಯಯನ ಮಾಡುವ ವಿಜ್ಞಾನ ವಿಭಾಗ

ದ್ಯುತಿವಾಹಕತೆ

(ರ) ಸೆಲೀನಿಯಮ್‌ನಂಥ ಕೆಲವು ಅಲೋಹ ಪದಾರ್ಥಗಳು ಬೆಳಕಿನ ಅಥವಾ ವಿದ್ಯುತ್ ಕಾಂತ ವಿಕಿರಣದ ಪ್ರಭಾವಕ್ಕೊಳಗಾದಾಗ ವಿದ್ಯುತ್ ವಾಹಕತೆಯಲ್ಲಿ ವ್ಯತ್ಯಯ ತೋರುವ ಗುಣ

ದ್ಯುತಿವಿಜ್ಞಾನ

(ಭೌ) ಬೆಳಕು ಹಾಗೂ ದೃಷ್ಟಿ ಕುರಿತ ವಿಜ್ಞಾನ. ರೋಹಿತದಲ್ಲಿ ಎಕ್ಸ್-ಕಿರಣಗಳ ದೀರ್ಘತರಂಗ ಅಂಚಿನಿಂದ ಹಿಡಿದು ರೇಡಿಯೋಗಳ ಹ್ರಸ್ವ ತರಂಗ ಅಂಚಿನವರೆಗೆ, ಅಂದರೆ ಸುಮಾರು ೧ ಮಿಲಿಮೀಟರ್‌ನಿಂದ ಸುಮಾರು ೧ ನ್ಯಾನೊಮೀಟರ್ ಅಲೆಯುದ್ದದವರೆಗೆ ವಿಸ್ತರಿಸಿರುವ ಪ್ರದೇಶದಲ್ಲಿಯ ವಿದ್ಯುತ್ಕಾಂತ ವಿಕಿರಣದ ಉತ್ಪಾದನೆ, ಸಾಗಣೆ ಹಾಗೂ ಶೋಧನೆಯನ್ನು ಅಭ್ಯಸಿಸುವ ವಿಜ್ಞಾನ ಶಾಖೆ. ಭೌತ ದೃಗ್ವಿಜ್ಞಾನವು ಬೆಳಕಿನ ಸ್ವರೂಪ ಹಾಗೂ ತರಂಗ ಗುಣಗಳ (ಉದಾ: ವಿವರ್ತನೆ, ವ್ಯತಿಕರಣ ಹಾಗೂ ಧ್ರುವೀಕರಣ) ಅಧ್ಯಯನ ಮಾಡುತ್ತದೆ. ಜ್ಯಾಮಿತೀಯ ದೃಗ್ವಿಜ್ಞಾನವು ಬೆಳಕಿನ ತರಂಗ ಸ್ವರೂಪವನ್ನು ನಿರ್ಲಕ್ಷಿಸಿ, ಕಿರಣ ಸ್ವರೂಪದ ದೃಷ್ಟಿಯಿಂದ ಪ್ರತಿಫಲನ, ವಕ್ರೀಭವನ ಸಮಸ್ಯೆಗಳ ಅಧ್ಯಯನ ಮಾಡುತ್ತದೆ

ದ್ಯುತಿವಿದ್ಯುತ್ ಪರಿಣಾಮ

(ಭೌ) ವಿದ್ಯುತ್ಕಾಂತ ವಿಕಿರಣಕ್ಕೆ ಒಡ್ಡಿದಾಗ ವಸ್ತುಗಳು ಎಲೆಕ್ಟ್ರಾನ್‌ಗಳನ್ನು ಹೊರಸೂಸುವ ಕ್ರಿಯೆ. ಹೊರಹೊಮ್ಮುವ ಎಲೆಕ್ಟ್ರಾನ್‌ಗಳ ಸಂಖ್ಯೆ ವಿಕಿರಣದ ತೀವ್ರತೆಯನ್ನಾಧರಿಸಿರುತ್ತದೆ

ದ್ಯುತಿಸಂವೇದೀ

(ರ) ಗೋಚರ ಅಥವಾ ಅಗೋಚರ ವಿಕಿರಣಕ್ಕೆ ಸಂವೇದಿಯಾಗಿರುವ ಗುಣ. ವಿದ್ಯುತ್ಕಾಂತ ವಿಕಿರಣಕ್ಕೊಳಪಟ್ಟಾಗ ಯಾವುದೇ ವಸ್ತುವು ದ್ಯುತಿ ಉತ್ಸರ್ಜಕ, ದ್ಯುತಿವಾಹಕ, ಫೋಟೊವೋಲ್ಟಾಯಿಕ್ ಪರಿಣಾಮ ತೋರುವ ಗುಣ. ಉದಾ: ಫೋಟೊಗ್ರಾಫಿಕ್ ಫಿಲ್ಮ್‌ನ ಲೇಪನವು ವಿದ್ಯುತ್ಕಾಂತ ವಿಕಿರಣಕ್ಕೊಳಗಾದಾಗ ರಾಸಾಯನಿಕ ಬದಲಾವಣೆ ತೋರುತ್ತದೆ

ದ್ಯುತಿಸಂಶ್ಲೇಷಣೆ

(ಸ) ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡನ್ನು ವಿಭಜಿಸಿ ಕಾರ್ಬನ್‌ಅನ್ನು ಮಾತ್ರ ಉಳಿಸಿ ಕೊಳ್ಳುವ ಹಸಿರು ಸಸ್ಯಗಳು, ಪಾಚಿಗಳು ಮತ್ತು ಕೆಲಬಗೆಯ ಬ್ಯಾಕ್ಟೀರಿಯಗಳು ಬೆಳಕಿನ ಸಹಾಯದಿಂದ ನಡೆಸುವ ಕ್ರಿಯಾ ಸರಣಿ. ಇದು ಎಲೆಗಳಲ್ಲಿರುವ ಹರಿದ್ರೇಣುಗಳಿಂದ ಜರಗುತ್ತದೆ. ಇದರಿಂದ ಅವುಗಳಿಗೆ ಅವಶ್ಯಕವಾದ ಆಹಾರ ಲಭಿಸುವುದರ ಜೊತೆಗೆ ಜೀವಿಗಳ ಉಸಿರಾಟಕ್ಕೆ ಅತ್ಯವಶ್ಯವಾದ ಆಕ್ಸಿಜನ್ ವಾತಾವರಣಕ್ಕೆ ಅಪಾರ ಪ್ರಮಾಣಗಳಲ್ಲಿ ಬಿಡುಗಡೆಯಾಗುತ್ತದೆ. ಬೆಳಗಿನ ಹೊತ್ತು (‘ಸೌರಕ್ರಿಯೆ’) ಗಿಡಗಳಲ್ಲಿ ಇರುವ ಹಸಿರು ವರ್ಣದ್ರವ್ಯ ಕ್ಲೋರೊಫಿಲ್ ಸೌರಶಕ್ತಿಯನ್ನು ಹೀರಿಕೊಂಡು ಅದನ್ನು ರಾಸಾಯನಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ರಾತ್ರಿ ವೇಳೆಯಲ್ಲಿ (‘ನಿಶಾಕ್ರಿಯೆ’) ಈ ರಾಸಾಯನಿಕ ಶಕ್ತಿಯನ್ನು ಬಳಸಿ ಕೊಂಡು ಗಿಡಗಳು ಕಾರ್ಬನ್ ಡೈಆಕ್ಸೈಡ್ ಮತ್ತು ನೀರಿನಿಂದ ಸರಳ ಜೈವಿಕ ಪದಾರ್ಥಗಳನ್ನು ಉತ್ಪಾದಿಸುತ್ತವೆ. ಭೂಮಿ ಮೇಲಿನ ಎಲ್ಲ ಜೀವಿ ರೂಪಗಳೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಆಹಾರಕ್ಕಾಗಿ ಸಸ್ಯಾಧರಿಸಿರುವುದರಿಂದ ದ್ಯುತಿಸಂಶ್ಲೇಷಣೆಯು ಭೂಮಿ ಮೇಲಿನ ಎಲ್ಲ ಜೀವಕ್ಕೂ ಆಧಾರ. ವಾತಾವರಣದಲ್ಲಿನ ಆಕ್ಸಿಜನ್ನೆಲ್ಲ ದ್ಯುತಿಸಂಶ್ಲೇಷಣೆಯಿಂದಲೇ ಬಂದುದಾಗಿದೆ

ದ್ಯುತಿಸೂಕ್ಷ್ಮದರ್ಶಕ

(ಭೌ) ಗೋಚರ ಬೆಳಕಿನ ನೆರವಿನಿಂದ (ಎಲೆಕ್ಟ್ರಾನ್‌ಗಳಿಂದಲ್ಲ) ಚಿಕ್ಕಗಾತ್ರದ ವಸ್ತುವಿನ ದೊಡ್ಡ ಗಾತ್ರದ ಪ್ರತಿಬಿಂಬ ಪಡೆಯಲು ಬಳಸುವ ಸಾಧನ. ಇದರಲ್ಲಿ ಸಾಮಾನ್ಯವಾಗಿ ಒಂದು ಬೆಳಕಿನ ಆಕರ, ಒಂದು ಸಾಂದ್ರಕ, ಒಂದು ವಸ್ತುಕ ಹಾಗೂ ಒಂದು ನೇತ್ರಕ ಇರುತ್ತವೆ. ನೇತ್ರಕದ ಸ್ಥಳದಲ್ಲಿ ಬೇಕಾದರೆ ಬಿಂಬ ದಾಖಲಿಸುವ ಒಂದು ಸಲಕರಣೆಯನ್ನೂ ಇರಿಸ ಬಹುದು. ಇದಕ್ಕೆ ದೃಕ್‌ಸೂಕ್ಷ್ಮ ದರ್ಶಕ, ಫೋಟಾನ್ ಸೂಕ್ಷ್ಮದರ್ಶಕ ಎಂಬ ಹೆಸರುಗಳೂ ಉಂಟು

ದ್ರವ

(ಗ) ಪದಾರ್ಥದ ಘನ ಮತ್ತು ಅನಿಲ ಸ್ಥಿತಿಗಳ ನಡುವಿನ ಸ್ಥಿತಿ. ಈ ಸ್ಥಿತಿಯಲ್ಲಿ ಪದಾರ್ಥಕ್ಕೆ ನಿರ್ದಿಷ್ಟ ಆಕಾರ ಇರುವುದಿಲ್ಲ. ಧಾರಕದ ಆಕಾರವನ್ನೇ ತಳೆದಿರುತ್ತದೆ. ದ್ರವಸ್ಥಿತಿಯಲ್ಲಿ ಪದಾರ್ಥ ಹರಿಯಬಲ್ಲದು, ಆದರೆ ಅನಿಲದಂತೆ ಯಾವ ಗಾತ್ರಕ್ಕೆ ಬೇಕಾದರೂ ಹಿಗ್ಗಲಾರದು. ದ್ರವ ಪದಾರ್ಥವನ್ನು ಒತ್ತಡಕ್ಕೊಳ ಪಡಿಸಿ ಅದರ ಗಾತ್ರವನ್ನು ಕುಗ್ಗಿಸುವುದು ಬಲುಮಟ್ಟಿಗೆ ಅಸಾಧ್ಯ

ದ್ರವ ಬಾಷ್ಪ ಅಧಿಪದರಣ

(ತಂ) ಅಧಿಪರ್ಯಾಪ್ತ ದ್ರಾವಣದಿಂದ ತೆಳು ಫಿಲ್ಮುಗಳನ್ನು ಅಧಿಪದರಣ ಕ್ರಮದಲ್ಲಿ ತಯಾರಿಸುವ ವಿಧಾನ. ಇಲ್ಲಿ ಸಾಮಾನ್ಯವಾಗಿ ಕಡಿಮೆ ಕರಗುವ ಬಿಂದು ಹಾಗೂ ಕಡಿಮೆ ಬಾಷ್ಪೋತ್ತಡವಿರುವ ದ್ರಾವಣ ವನ್ನು ಆಯ್ಕೆಮಾಡಿಕೊಳ್ಳಲಾಗುತ್ತದೆ. ಈ ವಿಧಾನವನ್ನು ಸಂಯುಕ್ತ ಅರೆವಾಹಕಗಳಾದ ಗ್ಯಾಲಿಯಂ ಆರ್ಸನೈಡ್, ಸಿಲಿಕಾನ್ ಕಾರ್ಬೈಡ್ ಮುಂತಾದ ಫಿಲ್ಮುಗಳನ್ನು ತಯಾರಿಸಲು ಬಳಸುತ್ತಾರೆ. ದ್ರವ ಬಾಷ್ಪ ಅಧಿಪದರಣದಿಂದ ಫಿಲ್ಮುಗಳನ್ನು ತಯಾರಿಸುವ ಉಪಕರಣವು ಸರಳ, ಕಡಿಮೆ ವೆಚ್ಚ ಹಾಗೂ ಸುರಕ್ಷಿತವಾಗಿರುವುದು ಗಮನಾರ್ಹ.

ದ್ರವಕೃಷಿ

(ಸ) ಪ್ರಯೋಗ ಪರೀಕ್ಷಾರ್ಥ ಮತ್ತು ಕೆಲ ವೇಳೆ ಬೆಳೆ ತೆಗೆಯಲು ಕೂಡ ಸಸ್ಯಗಳನ್ನು ಮಣ್ಣಿನ ಆಧಾರವಿಲ್ಲದೇ ಬೆಳೆಸುವ ತಂತ್ರ. ಬೇರುಗಳು ಒಂದು ಪೋಷಕ ದ್ರಾವಣದೊಳಗಿರ ಬಹುದು ಅಥವಾ ಇಂಥ ದ್ರಾವಣ ಜಿನುಗುವ ಜಡ ಮಾಧ್ಯಮ ದೊಳಗಿರಬಹುದು. ದ್ರಾವಣಕೃಷಿ

ದ್ರವಗಾರೆ

(ಎಂ) ಉಕ್ಕಿನ ಕಂಬಗಳ ಅಡಿಯಲ್ಲಿ, ಯಂತ್ರಗಳ ಅಡಿಯಲ್ಲಿ ಬೋಲ್ಟು ಕುಳಿಗಳಲ್ಲಿ ಪೂರ್ವ ಪ್ರತಿಬಲಿತ ಕಾಂಕ್ರೀಟಿನ ಕಟ್ಟಡಗಳ ನಳಿಕೆಗಳಲ್ಲಿ ತುಂಬಲು, ಕಾಂಕ್ರೀಟಿನಲ್ಲಿ ಉಂಟಾಗುವ ದೊಗರುಗಳನ್ನು ತುಂಬಲು ಬಳಸುವ ದ್ರವ ರೂಪದ ಗಾರೆ. ಹಲವು ವೇಳೆ ಕೆಲವು ರಾಸಾಯನಿಕಗಳನ್ನು ಬೆರೆಸಿ ನೀರಿನಂತೆ ಹರಿಯುವ ದ್ರವೀಯತೆ ಪಡೆಯುತ್ತಾರೆ

ದ್ರವಚಾಲಿತ ಒತ್ತುಗ

(ತಂ) ೧. ಒಂದು ಅಥವಾ ಹೆಚ್ಚು ಒತ್ತುಗಗಳಿದ್ದು ಹೆಚ್ಚು ಕಡಿಮೆ ನಿಯತ ಒತ್ತಡದಲ್ಲಿ ಕೆಲಸ ಮಾಡುವ ಮೇಲ್ಮೊಗ, ಕೆಳಮೊಗ ಅಥವಾ ಕ್ಷಿತಿಜೀಯ ಒತ್ತುಗ. ಸಾಧಾರಣಾಗಿ ದ್ರವಭರಿತವಾದ ಎರಡು ಉರುಳೆಗಳು – ಒಂದು ದೊಡ್ಡದು ಇನ್ನೊಂದು ಚಿಕ್ಕದು – ಇರುವುವು. ಇವು ಪರಸ್ಪರ ಕಿರುನಾಳದಿಂದ ಸಂಬಂಧಿತವಾಗಿರುತ್ತವೆ. ಚಿಕ್ಕ ಉರುಳೆಯ ಕೊಂತದ ಮೇಲೆ ಹಾಕಿದ ಕಡಿಮೆ ಒತ್ತಡವು ದೊಡ್ಡ ಉರುಳೆಯಲ್ಲಿ ಭಾರಿ ಒತ್ತಡವಾಗಿ ಪರಿಣಮಿಸಿ ಒತ್ತುಗವನ್ನು ಮೇಲಕ್ಕೆ ತಳ್ಳುತ್ತದೆ. ೨. ಈ ಸಾಧನದಲ್ಲಿ ಒಂದು ಸಣ್ಣ ಕೊಂತದ ಮೇಲೆ ಹಾಕಿದ ಬಲ (F1)ವು ಒತ್ತಡ (P) ಉಂಟುಮಾಡುತ್ತದೆ. ಈ ಒತ್ತಡವನ್ನು ಒಂದು ತರಲದ ಮೂಲಕ ಹೆಚ್ಚು ದೊಡ್ಡ ಕೊಂತ(A2)ಗೆ ವರ್ಗಾಯಿಸಲಾಗುತ್ತದೆ. ಅಲ್ಲಿ ಅದು ಅಧಿಕತರ ಬಲ (F2)ವನ್ನು ಉಂಟುಮಾಡುತ್ತದೆ. (ಚಿತ್ರ ನೋಡಿ). ಇದು ನಿರ್ಬಂಧಿತ ತರಲವೊಂದರ ಮೇಲೆ ಎಲ್ಲೇ ಹಾಕಿದ ಒತ್ತಡವೂ ಎಲ್ಲ ದಿಕ್ಕುಗಳಲ್ಲೂ ಸಮನಾಗಿ ಪ್ರೇಷಿತವಾಗುತ್ತದೆ ಎಂಬ ಪಾಸ್ಕಲ್ ನಿಯಮವನ್ನು ಆಧರಿಸಿದೆ. ದ್ರವಚಾಲಿತ ಒತ್ತುಗದ ಸೂತ್ರವನ್ನು ಜಾಕ್ (ಊರೆ ಎತ್ತುಗ)ಗಳಲ್ಲಿ, ವಾಹನ ಬ್ರೇಕ್‌ಗಳಲ್ಲಿ, ಭಾರಿ ಪ್ರಮಾಣದಲ್ಲಿ ಮಣ್ಣನ್ನು ತೋಡಲು, ತಳ್ಳಲು ಅಥವಾ ಸಾಗಿಸಲು ಬಳಸುವ ‘ಅರ್ತ್ ಮೂವರ್’ಗಳಲ್ಲಿ, ಸಾಮಾನ್ಯವಾಗಿ ತೈಲವನ್ನು ತರಲವನ್ನಾಗಿಸಿಕೊಂಡು ವಿಸ್ತೃತವಾಗಿ ಬಳಸಲಾಗುತ್ತದೆ.

ದ್ರವನ ಬಿಂದು

(ಭೌ) ದತ್ತ ಘನ ಪದಾರ್ಥವೊಂದು ದ್ರವಿಸಲು ತೊಡಗುವ ಉಷ್ಣತೆ. ಶುದ್ಧಲೋಹಗಳೂ ಯೂಟೆಕ್ಟಿಕ್ ಗಳೂ ಕೆಲವು ಮಾಧ್ಯಮ ಘಟಕಗಳೂ ಒಂದು ಸ್ಥಿರ ಉಷ್ಣತೆಯಲ್ಲಿ ಕರಗುತ್ತವೆ. ಮಿಶ್ರಲೋಹಗಳು ಭಿನ್ನ ಉಷ್ಣತೆಗಳಲ್ಲಿ ಕರಗುತ್ತವೆ. ಸಂಕ್ಷಿಪ್ತ ದ್ರಬಿಂ

ದ್ರವಬಲ ವಿಜ್ಞಾನ

(ಭೌ) ಚಲನೆಯಲ್ಲಿರುವ ದ್ರವಗಳ ಬಲ, ಶಕ್ತಿ ಹಾಗೂ ಒತ್ತಡಗಳ ಗಣಿತೀಯ ಅಧ್ಯಯನ. ಅಸಂಪೀಡಿತ ತರಲಗಳ ಚಲನೆ ಮತ್ತು ಅಂಥ ತರಲಗಳಿಗೂ ಅವುಗಳ ಎಲ್ಲೆಗಳಿಗೂ ನಡುವಿನ ಅಂತರ ಕ್ರಿಯೆಗಳ ಅಧ್ಯಯನ

ದ್ರವಬಿಂದು ಪ್ರತಿರೂಪ

(ಭೌ) ಪರಮಾಣು ನ್ಯೂಕ್ಲಿಯಸ್‌ನ ಒಂದು ಕಾಲ್ಪನಿಕ ಮಾದರಿ. ನ್ಯೂಕ್ಲಿಯಸ್‌ನ ಗುಣ ಗಳನ್ನು ಅಸಂಪೀಡಿತ ದ್ರವ ಹನಿಯ ಗುಣಗಳಿಗೆ ಹೋಲಿಸಲಾಗುತ್ತದೆ. ನ್ಯೂಕ್ಲಿಯಸ್‌ನ ನ್ಯೂಕ್ಲಿಯಾನ್‌ಗಳು ದ್ರವಹನಿಯ ಅಣುಗಳಿಗೆ ಸದೃಶವಾಗಿರುತ್ತವೆ. ಬಂಧಕ ಶಕ್ತಿ, ವಿದಲನ, ಸಾಮೂಹಿಕ ಚಲನೆ, ಕ್ಷಯ ಹಾಗೂ ಪ್ರತಿಕ್ರಿಯೆಗಳ ಅಧ್ಯಯನಕ್ಕೆ ಬಳಕೆ

Search Dictionaries

Loading Results

Follow Us :   
  Download Bharatavani App
  Bharatavani Windows App