भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ತೇಗ

(ಸ) ವರ್ಬಿನೇಸೀ ಕುಟುಂಬಕ್ಕೆ ಸೇರಿದ ದುಂಡು ಶಿರದ ಪರ್ಣಪಾತಿ ಮರ. ಟೆಕ್ಟೋನಗ್ರ್ಯಾಂಡಿಸ್ ವೈಜ್ಞಾನಿಕ ನಾಮ. ಸರ್ವೋಪಯೋಗಿ. ೩೦-೪೦ ಮೀಟರ್ ಎತ್ತರ ಬೆಳೆಯುತ್ತದೆ. ಭಾರತ ಮತ್ತು ಆಗ್ನೇಯ ಏಷ್ಯಾ ವಾಸಿ. ಸಾಗುವಾನಿ

ತೇಗು

(ವೈ) ಜಠರದಿಂದ ವಾಯುವು ಬಾಯಿ ಮೂಲಕ ಹೊರಹೊಮ್ಮುವುದು

ತೇಮಾನ

(ಭೂವಿ) ನೈಸರ್ಗಿಕ ಕಾರಕಗಳಾದ ಗಾಳಿ, ಹೊಳೆ ನೀರು, ಹಿಮನದಿ ಮುಂತಾದವು ಶಿಲೆಯ ಮೇಲೆ ವರ್ತಿಸು ವುದರಿಂದ ಆಗುವ ಸವೆತ

ತೇರಲೈಟ್

(ಭೂವಿ) ಪೂರ್ಣ ಸ್ಫಟಿಕಾಕೃತಿ ಅಂತಾರಚನೆ ಇರುವ ಅಂತರ್ಗತ ಅಗ್ನಿಶಿಲೆ. ನೆಫೀಲೀನ್, ಕ್ಷಾರ ಪ್ಲೇಜಿಯೋಕ್ಲೇಸ್ ಖನಿಜ ವರ್ಗದ ಲ್ಯಾಬ್ರಡೊರೈಟ್ ಹಾಗೂ ಟೈಟಾನಿಫೆರಸ್ ಆಗೈಟ್ ಈ ಶಿಲೆಯ ಮುಖ್ಯ ಖನಿಜಗಳು

ತೇಲು

(ಸಾ) ೧. ಗಾಳದ ದಾರಕ್ಕೆ ಸಿಕ್ಕಿಸಿರುವ ಬೆಂಡು ಅಥವಾ ಗರಿ. ೨. ತೊಟ್ಟಿಯ ನಾಳದಲ್ಲಿ ನೀರಿನ ಹರಿತವನ್ನು ನಿಯಂತ್ರಿಸಲು ಜೋಡಿಸಿರುವ ಪೊಳ್ಳು ಚೆಂಡು

ತೇಲು ಬುರುಡೆ

(ತಂ) ಅಳುವೆ, ಕಡಲ್ಗಾಲುವೆ, ತೆಟ್ಟೆ ನೀರಿನ ಪ್ರದೇಶಗಳಲ್ಲಿ ನಾವಿಕರಿಗೆ ಅಪಾಯರಹಿತ ದಾರಿ ಸೂಚಿಸುವ ಸಲುವಾಗಿ ಲಂಗರು ಹಾಕಿ ತೇಲುಬಿಟ್ಟ ಗುರುತು ವಸ್ತು. ಪ್ಲವಕ

ತೇಲ್ನೊರೆ ವಿಧಾನ

(froth flotation) (ತಂ) ಸಲ್ಫೈಡ್ ಅದಿರುಗಳನ್ನು ಸಾರೀಕರಿಸುವ ಮುಖ್ಯ ವಿಧಾನ. ಅದಿರಿನ ಪುಡಿಯನ್ನು ಅರಳಿದ ಸುಣ್ಣ ಮತ್ತು ಪೊಟಾಸಿಯಮ್ ಸಯನೈಡ್ ನೊಂದಿಗೆ ಗೋಲಿ ಗಿರಣಿಗಳಲ್ಲಿ ಅರೆದು ಸರಿ (ಪೇಸ್ಟ್)ಯನ್ನು ತಯಾರಿಸುತ್ತಾರೆ. ಇದಕ್ಕೆ ಪೈನ್ ಎಣ್ಣೆ ಅಥವಾ ಕ್ರೆಸಿಲಿಕ್ ಆಮ್ಲ ಮತ್ತು ಪೊಟ್ಯಾಸಿಯಮ್ ಕ್ಸ್ಯಾಂತೇಟ್ (K2COS2) ಕೂಡಿಸಿ ಬಂದ ಬಗ್ಗಡಕ್ಕೆ ಗಾಳಿ ಹಾಯಿಸಿ ಕಡೆಯಲಾಗುವುದು. ಆಗ ಅದಿರಿನ ಕಣಗಳ ಮೇಲ್ಮೈಯನ್ನು ಎಣ್ಣೆಯ ತೆಳುವಾದ ಪೊರೆ ಆವರಿಸುತ್ತದೆ. ಈ ಪೊರೆಗೆ ಗಾಳಿಯ ಗುಳ್ಳೆಗಳು ಅಂಟಿಕೊಳ್ಳುವುದರಿಂದ ಕಣಗಳು ಹಗುರವಾಗಿ ಮೇಲೇರಿ ನೊರೆಯಲ್ಲಿ ಸಂಗ್ರಹವಾಗುತ್ತವೆ. ಆಗಿಂದಾಗ್ಗೆ ಉಕ್ಕಿ ಹರಿಯುವ ನೊರೆಯಲ್ಲಿ ಶೇ. ೯೦ ಭಾಗ ಅದಿರು ಪಾರಾಗುತ್ತದೆ. ನೀರಿನಿಂದ ಒದ್ದೆಯಾದ ಖನಿಜ ಕಸ ಭಾರವಾದ್ದರಿಂದ ತೊಟ್ಟಿಯ ತಳ ಸೇರುತ್ತದೆ. ತಾಮ್ರದ ಪೈರೈಟಿಸ್ (CuFeS2), ಗೆಲಿನ (PbS) ಮತ್ತು ಸತುವಿನ ಬ್ಲೆಂಡ್ (Zns) ಮುಂತಾದ ಅದಿರುಗಳನ್ನು ಸಾರೀಕರಿಸುವುದು ಹೀಗೆ

ತೇವ

(ಭೌ) ನೀರಿನ ಆವಿ ಅಥವಾ ಸಣ್ಣ ಹನಿಗಳ ರೂಪದಲ್ಲಿ ಚದರಿರುವ ನೀರು; ಘನ ಪದಾರ್ಥದ ಮೇಲ್ಮೈ ಮೇಲೆ ಹನಿದ ನೀರು

ತೈಮಸ್

(ವೈ) ಶರೀರದಲ್ಲಿ ರೋಗ ಸೋಂಕು ಇತ್ಯಾದಿಗಳ ವಿರುದ್ಧ ಪ್ರತಿರಕ್ಷೆ (ಶ್ವೇತ ರಕ್ತಕಣಗಳ) ಬೆಳವಣಿಗೆಗೆ ನೆರವಾಗುವ ಕಶೇರುಕಗಳಲ್ಲಷ್ಟೇ ಅಸ್ತಿತ್ವದಲ್ಲಿ ಇರುವ ಅತಿಮುಖ್ಯ ಅಂಗ. ಮನುಷ್ಯರಲ್ಲಿ ಕೆಳಕುತ್ತಿಗೆಯ, ಎದೆಯ ಮೇಲುಭಾಗಗಳಲ್ಲಿ ತೈರಾಯ್ಡ್ ಗ್ರಂಥಿ ಕೆಳಗಿನಿಂದ ಎದೆ ಮೂಳೆಯ ಹಿಂದಿನ ನಾಲ್ಕನೆಯ ಪಕ್ಕೆಲುಬಿನವರೆಗೆ ಹರಡಿರುವ ಚಪ್ಪಟೆ ಹಾಗೂ ಮೃದು ಅಂಗ. ದುಗ್ಧರಸ ಕಣಗಳ ಸಂಖ್ಯೆಯನ್ನು ವರ್ಧಿಸುವುದು, ಪ್ರತಿಜನಕ ಕಣಗಳನ್ನು ಅಗತ್ಯ ಎನಿಸುವಷ್ಟು ವೈವಿಧ್ಯ ಹಾಗೂ ಸಂಖ್ಯೆಗಳಲ್ಲಿ ಅಸ್ತಿತ್ವದಲ್ಲಿ ಇಟ್ಟಿರುವುದು ತೈಮಸ್‌ನ ವಿಶಿಷ್ಟ ಕ್ರಿಯೆ. ಮನುಷ್ಯರಲ್ಲಿ ಯೌವನ ಮೂಡುವಾಗ ಇದು ಕರಗಿಹೋಗುತ್ತದೆ

ತೈಮೀನ್

(ರ) ತೈಮಸ್‌ನಿಂದ ಮೊದಲು ಪ್ರತ್ಯೇಕಿಸಿದ ನ್ಯೂಕ್ಲಿಯಿಕ್ ಆಮ್ಲದ ಪಿರಿಮಿಡೀನ್ ಘಟಕ, ಡಿಎನ್‌ಎಯ ನ್ಯೂಕ್ಲಿಯೊಟೈಡ್‌ಗಳಲ್ಲಿರುವ ಎರಡು ಪಿರಮಿಡೀನ್ ಆಧಾರಗಳಲ್ಲಿ ಒಂದು. ಆನುವಂಶಿಕ ಸಂಕೇತ ಭಾಷೆ ರೂಪಿಸುವುದರಲ್ಲಿ ಭಾಗವಹಿಸುತ್ತದೆ. ಸೂತ್ರ C5H6N2O2

ತೈರಾಕ್ಸಿನ್

(ರ) ತೈರಾಯ್ಡ್ ಗ್ರಂಥಿ ಸ್ರವಿಸುವ ಒಂದು ಹಾರ್ಮೋನ್, C15H11O4NI4 ಶರೀರದಲ್ಲಿ ಆಕ್ಸಿಡೀಕರಣದ ದರ ಹೆಚ್ಚಿಸುವ ಗುಣವುಳ್ಳದ್ದು. ಶರೀರದ ಅಭಿವರ್ಧನೆಗೆ ಅತಿಮುಖ್ಯ

ತೈರಾಯ್ಡ್

(ವೈ) ಧ್ವನಿ ಸಂಪುಟದ ಕೆಳಗಡೆ ಮುಂಗೊರಲಿ ನಲ್ಲಿ ಶ್ವಾಸನಾಳದ ಮೇಲೆ ಇರುವ ನಿರ್ನಾಳ ಗ್ರಂಥಿ. ಚರ್ಮ ಮತ್ತು ಇತರ ಕೆಲವು ತೆಳು ಸ್ನಾಯುಗಳು ಇದನ್ನು ಆವರಿಸಿರುತ್ತವೆ. ಮುಖ್ಯವಾಗಿ ಇದು ದೇಹದ ಬೆಳವಣಿಗೆ ಮತ್ತು ಉಪಾಪಚಯ ಕ್ರಿಯೆಗಳ ದರ ನಿಯಂತ್ರಿಸುವ ಹಾರ್ಮೋನನ್ನು ಉತ್ಪಾದಿಸುತ್ತದೆ. ತೈರಾಯ್ಡ್ ಗ್ರಂಥಿಯ ಬೆಳವಣಿಗೆ ಹಾಗೂ ಚಟುವಟಿಕೆಗಳನ್ನು ತೈರೊಟ್ರೊಫಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ. ಈ ಹಾರ್ಮೋನನ್ನು ಪಿಟ್ಯೂಟರಿ ಗ್ರಂಥಿ ಸ್ರವಿಸುತ್ತದೆ

ತೈಲ

(ರ) ಸಸ್ಯ, ಪ್ರಾಣಿ ಅಥವಾ ಖನಿಜಗಳಿಂದ ದೊರೆಯುವ ರಾಸಾಯನಿಕವಾಗಿ ತಟಸ್ಥವಾದ, ಸುರಿದರೆ ಧಾರೆಯಾಗಿ ಬೀಳುವ, ಜಿಡ್ಡುಜಿಡ್ಡಾದ, ಹೊತ್ತಿಸಿದರೆ ಉರಿಯುವ ದ್ರವ ಪದಾರ್ಥ. ನೀರಿಗಿಂತ ಹಗುರ ಹಾಗೂ ಅದರಲ್ಲಿ ಅವಿಲೇಯ. ಆದರೆ ಆಲ್ಕಹಾಲ್ ಹಾಗೂ ಈತರ್‌ಗಳಲ್ಲಿ ವಿಲೇಯ. ಮೂರು ಮುಖ್ಯ ಪ್ರಭೇದಗಳು: ೧. ಸ್ಥಿರ (ಕೊಬ್ಬಿನ) ತೈಲಗಳು. ಪ್ರಾಣಿ/ಸಸ್ಯ/ಸಾಗರ ಮೂಲದವು. ಮೇದಾಮ್ಲಗಳ ಎಸ್ಟರ್ ಹಾಗೂ ಗ್ಲಿಸರೈಡ್ ಗಳಿಂದ ಕೂಡಿರುತ್ತವೆ. ೨. ಖನಿಜ ತೈಲಗಳು, ಪೆಟ್ರೋಲಿಯಮ್, ಕಲ್ಲಿದ್ದಲು, ಜೇಡಿ ಪದರಗಲ್ಲು ಇತ್ಯಾದಿಗಳಿಂದ ಲಭ್ಯ. ಹೈಡ್ರೊ ಕಾರ್ಬನ್‌ಗಳಿಂದ ಕೂಡಿರುತ್ತವೆ. ೩. ಬಾಷ್ಪಶೀಲ ತೈಲಗಳು. ಸುಲಭವಾಗಿ ಆವಿಯಾಗುತ್ತವೆ. ಪ್ರಧಾನವಾಗಿ ಹೈಡ್ರೊಕಾರ್ಬನ್ ಗಳು. ಕಟುವೂ, ತಿಳಿಯೂ ಆದ, ಬಟ್ಟಿ ಇಳಿಸಲಾಗುವ, ಸಸ್ಯ ಮೊದಲಾದವುಗಳ ಸುವಾಸನೆಗೆ ಆಧಾರವಾದ, ಔಷಧಗಳಲ್ಲೂ ಪರಿಮಳ ದ್ರವ್ಯಗಳಲ್ಲೂ ಬಳಸುವ ಚಂಚಲ ದ್ರವ್ಯಗಳು. ಎಣ್ಣೆ

ತೈಲ ಅಟ್ಟಣಿಗೆ

(ಸಾವಿ) ಆಳವಿಲ್ಲದ ಸಾಗರ ಭಾಗದಲ್ಲಿ ತಳ ಕೊರೆದು ತೈಲ ಮತ್ತು ನೈಸರ್ಗಿಕ ಅನಿಲ ಪಡೆಯಲು ಉಪಯೋಗಿಸುವ ಯಂತ್ರಗಳ ಆಧಾರ ರಚನೆ. ಆಳವಾದ ಸಾಗರ ಭಾಗದಲ್ಲಿ ತೇಲು ಅಟ್ಟಣೆಗಳನ್ನು ಬಳಸಲಾಗುತ್ತದೆ

ತೈಲ ಜೇಡುಶಿಲೆ

(ಭೂವಿ) ನವುರಾದ ಸ್ತರಗಳುಳ್ಳ ಕಂದು/ಕಪ್ಪು ಬಣ್ಣದ ಪದರುಗಲ್ಲು. ಕಾರ್ಬನ್‌ಯುಕ್ತ ಜಲಜ ಶಿಲೆ. ಕಾಸಿದಾಗ ಇದರಲ್ಲಿರುವ ಕೆರೊಜೆನ್ ಎಂಬ ಆರ್ಗ್ಯಾನಿಕ್ ಪದಾರ್ಥ ವಿಘಟಿಸಿ ತೈಲ ದೊರೆಯುತ್ತದೆ. ಉತ್ತರ ಅಮೆರಿಕದ ಕೊಲರಾಡೊದಲ್ಲಿ ಇದರ ಅಧಿಕ ನಿಕ್ಷೇಪಗಳುಂಟು. ಕೆರೊಜೆನ್ ಷೇಲ್

ತೈಲಧರ ಮರಳು

(ಭೂವಿ) ಹೈಡ್ರೊಕಾರ್ಬನ್ ಅಥವಾ ಪೆಟ್ರೋಲಿಯಮ್‌ಗರ್ಭಿತ ಮರಳುಗಲ್ಲು ಅಥವಾ ಸರಂಧ್ರ ಕಾರ್ಬೊನೇಟ್ ಶಿಲೆಗಳು. ಕೆನಡಾದಲ್ಲಿ ಇವುಗಳ ನಿಕ್ಷೇಪ ಅಧಿಕ

ತೈಲಮಾಲಿನ್ಯ

(ಪವಿ) ತೈಲ ಸಾಗಣೆಯಲ್ಲಿ ಸಾಗರದಲ್ಲಿ ನೌಕೆಗಳು ಅಪಘಾತಕ್ಕೊಳಗಾಗಿ ತೈಲ ಸೋರಿ ಸಾಗರಕ್ಕೆ ಬಿಡುಗಡೆಯಾಗಿ ಜಲಚರಗಳಿಗೆ ಹಾನಿ ಉಂಟಾಗುವ ವಿದ್ಯಮಾನ. ತೈಲ ಹೀರುವ ಬ್ಯಾಕ್ಟೀರಿಯಾಗಳನ್ನು ಬಿಟ್ಟು ಮಾಲಿನ್ಯದ ಪ್ರಮಾಣ ವನ್ನು ತಗ್ಗಿಸಬಹುದು. ತೈಲದ ಹೆಪ್ಪು ದೀರ್ಘಕಾಲ ನೀರಿನಲ್ಲಿ ಇರುವುದರಿಂದ ಶುದ್ಧೀಕರಣ ಕ್ರಿಯೆ ಅತ್ಯಂತ ಪ್ರಯಾಸಕರ

ತೈಲಯುತ

(ರ) ಎಣ್ಣೆಯಿಂದ ಕೂಡಿರುವ. ಎಣ್ಣೆ ಉತ್ಪಾದಿಸುವ (ಪದಾರ್ಥ). ಜಿಡ್ಡಾದ

ತೈಲರಾಳ

(ರ) ರಾಳ ಹಾಗೂ ಬಾಷ್ಪಶೀಲ ತೈಲಗಳ ಕಟು ರುಚಿಯ ಮಿಶ್ರಣ. ನಾನಾ ಸಸ್ಯಗಳಿಂದ ಇಂಗಿಸಿ ತೆಗೆದ ಸಾರವಸ್ತು. ಔಷಧಿಗಳ ತಯಾರಿಕೆಯಲ್ಲಿ ಬಳಕೆ

ತೈಲಸ್ಫಟಿಕ

(ಭೂವಿ) ನೋಡಿ: ಶಿಲಾರಾಳ

Search Dictionaries

Loading Results

Follow Us :   
  Download Bharatavani App
  Bharatavani Windows App