भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಡೀಮಲ್ಸಿಫಿಕೇಷನ್

(ರ) ಯಾವುದೇ ಎಮಲ್ಷನ್‌ಅನ್ನು ಅದರ ಘಟಕಗಳಾಗಿ ಪ್ರತ್ಯೇಕಿಸುವ ಪ್ರಕ್ರಿಯೆ. ಎಮಲ್ಷನೀಕರಣ ತಾನಾಗಿ ಆಗದಂಥ ರೂಪಕ್ಕೆ ಬದಲಾಯಿಸುವ ಪ್ರಕ್ರಿಯೆ. ನೋಡಿ: ಎಮಲ್ಷನ್

ಡೀರೈಬೋಸ್

(ವೈ) ರೈಬೊನ್ಯೂಕ್ಲಿಯಿಕ್ ಆಮ್ಲದಲ್ಲಿ ಇರುವ ಶರ್ಕರ

ಡೀಸೆಲ್

(ತಂ) ಕಚ್ಚಾ ತೈಲವನ್ನು ಆಂಶಿಕ ಆಸವನದಿಂದ ಬಟ್ಟಿ ಇಳಿಸಿದಾಗ ೨೩೦0-೩೪೦0 ಸೆ. ಉಷ್ಣತಾವ್ಯಾಪ್ತಿಯಲ್ಲಿ ಲಭಿಸುವ ಅಂಶ. ಈ ಅಂಶವನ್ನು ಇಂಧನವಾಗಿ ಬಳಸುವ ಅಂತರ್ದಹನ ಎಂಜಿನ್ನನ್ನು ರುಡಾಲ್ಫ್ ಡೀಸೆಲ್ (೧೮೫೮-೧೯೧೩) ಉಪಜ್ಞಿಸಿದುದರಿಂದ ಅದಕ್ಕೆ ಡೀಸೆಲ್ ಎಂಜಿನ್, ಇಂಧನಕ್ಕೆ ಡೀಸೆಲ್ ಎಂಬ ಹೆಸರುಗಳು

ಡೀಸೆಲ್ ಎಂಜಿನ್

(ತಂ) ಡೀಸೆಲ್ ಇಂಧನವನ್ನು ತೀವ್ರ ಒತ್ತಡದಲ್ಲಿ ಬಳಸಿ ನಡೆಸುವ ಅಂತರ್ದಹನ ಯಂತ್ರ. ಇದರಲ್ಲಿ ಸ್ಪಾರ್ಕ್ ಪ್ಲಗ್‌ಗಳ ಆವಶ್ಯಕತೆ ಇಲ್ಲ

ಡೆಕಟ್ರಾನ್

(ತಂ) ಒಂದು ಕೇಂದ್ರೀಯ ಆನೋಡ್, ಅದರ ಸುತ್ತ ೧೦ ಕ್ಯಾಥೋಡ್‌ಗಳು ಹಾಗೂ ಸಂಬಂಧಿತ ಟ್ರಾನ್ಸ್‌ಫರ್ ಎಲೆಕ್ಟ್ರೋಡ್‌ಗಳು ಇಷ್ಟನ್ನು ಒಳ ಗೊಂಡಿರುವ ನಿಯಾನ್‌ಭರಿತ ನಳಿಕೆ. ನಳಿಕೆಯು ವೋಲ್ಟೇಜ್ ಸ್ಪಂದಗಳನ್ನು ಸ್ವೀಕರಿಸಿದಾಗ ಆಗುವ ದೀಪ್ತಿ ವಿಸರ್ಜನೆಯು ಎಲೆಕ್ಟ್ರೋಡ್‌ಗಳ ಒಂದು ಸೆಟ್‌ನಿಂದ ಇನ್ನೊಂದಕ್ಕೆ ಚಲಿಸುತ್ತದೆ. ಇದರಿಂದ ಈ ಸಾಧನವನ್ನು ದಶಮಾಂಶ ಪದ್ಧತಿಯಲ್ಲಿ ದೃಗ್ಗೋಚರ ಗಣಕ ನಳಿಕೆಯನ್ನಾಗಿ ಬಳಸಲು ಸಾಧ್ಯವಾಗುತ್ತದೆ. ನಳಿಕೆಯನ್ನು ಸ್ವಿಚಿಂಗ್ ಕಾರ್ಯ ನಿರ್ವಹಿಸಲೂ ಬಳಸಬಹುದು

ಡೆಕಪ್ಲಾಯ್ಡ್

(ಜೀ) ಕ್ರೋಮೊಸೋಮ್‌ಗಳ ಹ್ಯಾಪ್ಲಾಯಿಡ್ ಸಂಖ್ಯೆಯ ಹತ್ತು ಪಟ್ಟು ಇರುವ

ಡೆಕ್‌ಸ್ಟ್ರಿನ್

(ರ) ಡಿ-ಗ್ಲೂಕೋಸಿನ ಒಂದು ಪಾಲಿಮರ್; ಸಂಕೀರ್ಣತೆಯಲ್ಲಿ ಇದು ಪಿಷ್ಟಕ್ಕೂ ಮಾಲ್ಟೋಸ್‌ಗೂ ನಡುವಿ ನಲ್ಲಿದೆ. ಶಾಖ, ಆಮ್ಲಗಳು ಅಥವಾ ಕಿಣ್ವಗಳ ಕ್ರಿಯೆಯಿಂದ ಪಿಷ್ಟವು ಭಾಗಶಃ ಜಲವಿಭಜನೆ ಹೊಂದಿದಾಗ ಉಂಟಾಗುವ ಅಂಟಂಟಾದ ಯಾವುದೇ ಪಾಲಿಶರ್ಕರ. ಪಾಲಿಸ್ಯಾಕರೈಡ್

ಡೆಕ್‌ಸ್ಟ್ರೋರ್ಸ್

(ಜೀ) ಸಾಂಪ್ರದಾಯಿಕ ಬಲಸುತ್ತಿನ ತಿರುಪಿನಂತೆ ತಿರುಚಿಕೊಂಡಿರುವ ಅಥವಾ ಸುರುಳಿ ಸುತ್ತಿರುವ. ಬಲಚ. ಉದಾ: ಬಲಮುರಿ ಶಂಖ. ಬಲಮುರಿ

ಡೆಕ್‌ಸ್ಟ್ರೋಸ್

(ರ) C6H12O6.H2O ಬಲಮುರಿ ಮಾನೊಸ್ಯಾಕರೈಡ್. ಬಿಳಿ, ಸ್ಫಟಿಕೀಯ, ನಿರ್ಗಂಧ, ಸಿಹಿ ರುಚಿಯ ಪುಡಿ. ನೀರಿನಲ್ಲಿ ವಿಲೇಯ. ಕಾರ್ಬೊಹೈಡ್ರೇಟ್ ಉಪಾಪಚಯದಲ್ಲಿ ಒಂದು ಮುಖ್ಯ ಮಧ್ಯವರ್ತಿ. ಪುಷ್ಟಿದಾಯಕ ಉದ್ದೇಶಗಳಿಗಾಗಿ, ತಾತ್ಕಾಲಿಕ ರಕ್ತವೃದ್ಧಿಗಾಗಿ ಮತ್ತು ಮೂತ್ರೋತ್ತೇಜಕವಾಗಿ ಬಳಕೆ. ಕಾರ್ನ್ ಸಕ್ಕರೆ, ದ್ರಾಕ್ಷಿ ಸಕ್ಕರೆ. ನೋಡಿ : ಗ್ಲೂಕೋಸ್

ಡೆಂಗೆ ಜ್ವರ

(ವೈ) ಒಂದು ವೈರಸ್‌ನಿಂದ (ಗ್ರೂಪ್ ಬಿ ಆರ್ಬೊ ವೈರಸ್) ಹರಡುವ ತೀವ್ರ ಸ್ವರೂಪದ ಸೋಂಕು ಜ್ವರ. ಇದು ಭಾರತದಲ್ಲಿ ಮಾತ್ರವಲ್ಲದೆ ಮೆಕ್ಸಿಕೋ, ಮಧ್ಯ ಅಮೆರಿಕ ಮತ್ತು ಆಗ್ನೇಯ ಏಷ್ಯದಂತಹ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ. ಇದು ಏಡಿಸ್ ಈಜಿಪ್ಟೈ ಎಂಬ ಸೊಳ್ಳೆಯಿಂದ ಹರಡುತ್ತದೆ. ಇದರ ದೇಹದ ಮೇಲೆ ನಾಮ ರೂಪದ ಬಿಳಿಯ ಗೆರೆಯಿರುವುದರಿಂದ ಇದನ್ನು ಸ್ಥಳೀಯರು ‘ನಾಮದ ಸೊಳ್ಳೆ’ ಎಂದು ಕರೆಯುತ್ತಾರೆ. ಇದು ಸೊಳ್ಳೆಯನ್ನು ಗುರುತಿಸಲು ನೆರವಾಗುವ ಪ್ರಮುಖ ಲಕ್ಷಣ. ವೈರಸ್ ನಮ್ಮ ದೇಹವನ್ನು ಸೇರಿದ ೫-೮ ದಿನಗಳ ಒಳಗೆ ಹಠಾತ್ತನೆ ಜ್ವರ ಕಾಣಿಸಿಕೊಳ್ಳುತ್ತದೆ. ಮೈ ಕೈ ನೋವು, ಕೀಲು ನೋವು, ತಲೆ ನೋವು, ಹೊಟ್ಟೆ ನೋವು ಇತ್ಯಾದಿ ಕಂಡುಬರುತ್ತವೆ. ಅನಂತರ ಮೈ ಮೇಲೆ ಚುಕ್ಕೆಗಳು ಕಾಣಿಸಿಕೊಳ್ಳ ಬಹುದು. ಈ ಹಂತದಲ್ಲಿ ಜನರು ಯಾವುದೇ ತೊಂದರೆಯಿಲ್ಲದೆ ರೋಗ ಲಕ್ಷಣಗಳಿಂದ ಪೂರ್ಣ ಮುಕ್ತರಾಗಬಹುದು. ಸುಮಾರು ಶೇ. ೫ ರೋಗಿಗಳಲ್ಲಿ ರೋಗದ ಎರಡನೆಯ ಹಂತ ಆರಂಭವಾಗ ಬಹುದು. ಕರುಳು, ಶ್ವಾಸಕೋಶ, ಮಿದುಳು ಮುಂತಾದ ಪ್ರಮುಖ ಅಂಗಗಳಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುವುದು ಈ ರೋಗದ ಎರಡನೇ ಹಂತ. ರಕ್ತ ಪರೀಕ್ಷೆ ಮಾಡಿದರೆ, ಬಿಳಿ ರಕ್ತ ಕಣಗಳ ಕೊರತೆ ಹಾಗೂ ರಕ್ತ ಹೆಪ್ಪುಗಟ್ಟಲು ಅಗತ್ಯವಾದ ಕಿರುಬಿಲ್ಲೆಗಳ (ಪ್ಲೇಟ್‌ಲೆಟ್ಸ್) ಸಂಖ್ಯೆ ತೀವ್ರವಾಗಿ ಕಡಿಮೆಯಾಗಿರುವುದು ಕಂಡುಬರುತ್ತದೆ. ಆಗ ಕಿರುಬಿಲ್ಲೆಗಳ ಪೂರಣ (ಪ್ಲೇಟ್‌ಲೆಟ್ ಟ್ರಾನ್ಸ್‌ಫ್ಯೂಷನ್) ಮಾಡದಿದ್ದರೆ ಸಾವು ಸಂಭವಿಸಬಹುದು. ರೋಗನಿದಾನಕ್ಕೆ ರಕ್ತ ಪರೀಕ್ಷೆ ಅಗತ್ಯ. ಡೆಂಗೇ ಜ್ವರವನ್ನು ತಡೆಗಟ್ಟುವ ಸಮರ್ಪಕ ಲಸಿಕೆ ಲಭ್ಯವಿಲ್ಲ. ಹಾಗಾಗಿ ಸೊಳ್ಳೆ ನಿಯಂತ್ರಣ ಒಂದೇ ದಾರಿ

ಡೆಂಡ್ರೈಟ್

(ವೈ) ನರಪ್ರಚೋದನೆಯನ್ನು ಜೀವಕೋಶಕ್ಕೆ ತಲಪಿಸುವ ಕವಲು ಚಾಚಿಕೆ. ನರಕವಲು. (ಭೂವಿ) ಸಸ್ಯಾಂಕಿತ ಶಿಲೆ ಅಥವಾ ಖನಿಜ; ಗಿಡದಂಥ ಅಥವಾ ಪಾಚಿಯಂಥ, ಮ್ಯಾಂಗನೀಸ್‌ನಿಂದಾದ ಗುರುತುಗಳಿರುವ ಶಿಲೆ ಅಥವಾ ಖನಿಜ

ಡೆನ್ಸಿಟೊಮೀಟರ್

(ಭೌ) ಯಾವುದೇ ವಸ್ತುವು ತನ್ನ ಮೇಲೆ ಬಿದ್ದ ಬೆಳಕಿನ ದೂಲವನ್ನು ಎಷ್ಟು ಪ್ರಮಾಣದಲ್ಲಿ ತನ್ನ ಮೂಲಕ ಸಾಗಗೊಡುತ್ತದೆ ಅಥವಾ ಪ್ರತಿಫಲಿಸುತ್ತದೆ ಎಂಬುದನ್ನು ಅಳೆದು ತನ್ಮೂಲಕ ಆ ವಸ್ತುವಿನ ಸಾಂದ್ರತೆಯನ್ನು ನಿರ್ಧರಿಸುವ ಸಾಧನ. ಛಾಯಾಚಿತ್ರದ ಋಣಪ್ರತಿಗಳ ಸಾಂದ್ರತೆಯನ್ನು ಅಳೆಯುವ ಸಾಧನ. ಸಾಂದ್ರತಾಮಾಪಕ

ಡೆಮೆರ್ಸಲ್

(ಪ್ರಾ) ತಳವಾಸಿ. ಆಳ ನೀರಿನಲ್ಲಿ ಅಥವಾ ಕಡಲ ತಳದಲ್ಲಿ ಕಾಣುವ. ಉದಾ: ತಳ ಸೇರಿರುವ ಮೀನಿನ ಮೊಟ್ಟೆ

ಡೆಲ್ಟಾ ಕಬ್ಬಿಣ

(ರ) ಕಬ್ಬಿಣದ ಬಹುರೂಪಗಳ ಪೈಕಿ ಒಂದು. ಇದು ೧೪೦೩0 ಸೆ ಮತ್ತು ಕಬ್ಬಿಣದ ದ್ರಬಿಂ ೧೫೩೨0 ಸೆ ವ್ಯಾಪ್ತಿಯಲ್ಲಿ ಸ್ಥಿರವಾಗಿರುವುದು

ಡೆಲ್ಟಾ ಕಿರಣ

(ಭೌ) ಯಾವುದೇ ವಸ್ತುವಿನ ಮೂಲಕ ಆಲ್ಫ ಕಣದಂಥ ಅಯಾನೀಕಾರಕ ಕಣ ಸಾಗುವುದರ ಪರಿಣಾಮವಾಗಿ ಆ ಪದಾರ್ಥ ಉತ್ಸರ್ಜಿಸುವ ಎಲೆಕ್ಟ್ರಾನ್‌ಗಳ ಪ್ರವಾಹ. ಉದಾ : ವಿಲ್ಸನ್ ಮೇಘಕೋಷ್ಠದಲ್ಲಿ

ಡೆಲ್ಟಾ ಲೋಹ

(ರ) ಮುಖ್ಯವಾಗಿ ತಾಮ್ರ ಮತ್ತು ಸತುವು ಗಳಿಂದಲೂ ಅಲ್ಪಾಂಶ ಕಬ್ಬಿಣ ಮತ್ತು ಇತರ ಲೋಹಗಳಿಂದಲೂ ತಯಾರಿಸಿದ ಮಿಶ್ರಲೋಹ

ಡೆಲ್ಫಿನಿಡೀ

(ಪ್ರಾ) ತಿಮಿಗಣದ ಡಾಲ್ಫಿನ್. ಕಡಲ ಹಂದಿ ಮುಂತಾದ ಪ್ರಾಣಿಗಳ ಕುಟುಂಬಕ್ಕೆ ಸೇರಿದುದು. ಮಧ್ಯಮ ಗಾತ್ರದ ತಲೆ, ಉಭಯ ದವಡೆಗಳಲ್ಲೂ ಹಲ್ಲುಗಳು ಮತ್ತು ಬೆನ್ನ ಮೇಲೆ ಕಿವಿರು ಈ ಪ್ರಾಣಿಗಳ ವಿಶಿಷ್ಟ ಲಕ್ಷಣ

ಡೆಸಿಡುವ

(ಪ್ರಾ) ಸ್ತನಿಗಳಲ್ಲಿ ಹೆರಿಗೆಯಾದಾಗ ಹೊರಕ್ಕೆ ದೂಡಲ್ಪಡುವ ಜರಾಯು ಭಾಗ. ಮಾಸು. ಗರ್ಭವೇಷ್ಟನ. ಪತನಿಕ

ಡೆಸಿನಾರ್ಮಲ್ ದ್ರಾವಣ

(ರ) ಸಾಮಾನ್ಯ (ನಾರ್ಮಲ್) ದ್ರಾವಣದ ೧/೧೦ ಅಂಶ ಸಾರತೆ ಇರುವ ದ್ರಾವಣ

ಡೆಸಿಬೆಲ್

(ಭೌ) ಡೆಸಿಬೆಲ್ ಬೆಲ್‌ನ ಹತ್ತನೇ ಒಂದು ಪಾಲಾದರೂ ಡೆಸಿಬೆಲ್ಲೇ ಹೆಚ್ಚಾಗಿ ಬಳಕೆಯಲ್ಲಿರುವುದು. ೧. ಎರಡು ವಿದ್ಯುತ್ ಅಥವಾ ಧ್ವನಿ ಸಂಕೇತಗಳ ಪರಿಮಾಣುಗಳನ್ನು ಹೋಲಿಸಲು ಬಳಸುವ ಏಕಮಾನ. (ಅವೆರಡರ ದಾಮಾಷದ ಲಾಗರಿತಮ್‌ನ ಹತ್ತರಷ್ಟು) ೨. ಶಬ್ದ ಘೋಷವನ್ನು ಅಳೆಯುವ ಏಕಮಾನ. ಶ್ರವಣ ಸಾಧ್ಯವಾದ ಅತ್ಯಂತ ಕಡಿಮೆ ಘೋಷವನ್ನು ೧ ಎಂದೂ ಗರಿಷ್ಠ ಘೋಷವನ್ನು ೧೩೦ ಎಂದೂ ಪರಿಗಣಿಸಲಾಗಿದೆ. ೧೦೧೨ ಡೆಸಿಬಲ್ ನೋವು ಉಂಟು ಮಾಡುವ ಮಟ್ಟ. ಪ್ರತೀಕ dB ನೋಡಿ: ಬೆಲ್

Search Dictionaries

Loading Results

Follow Us :   
  Download Bharatavani App
  Bharatavani Windows App