भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಡಾಮರ್

(ರ) ಆಗ್ನೇಯ ಏಷ್ಯ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಗಳಲ್ಲಿ ಬೆಳೆಯುವ ಅನೇಕ ನಿತ್ಯಹರಿದ್ವರ್ಣ ಸಸ್ಯಗಳಿಂದ ಪಡೆದ ಅಂಟು ಅಥವಾ ಮೇಣ. ವಾರ್ನಿಷ್ ತಯಾರಿಕೆಯಲ್ಲಿ ಬಳಕೆ

ಡಾಲೆರೈಟ್

(ಭೂವಿ) ಮಧ್ಯಮ ಕಣಗಾತ್ರದ ಡೈಕ್ ರೂಪದಲ್ಲಿ ಮೈದಳೆದ ಕ್ಷಾರೀಯ ಅಗ್ನಿಶಿಲೆ. ಫೆಲ್ಡ್‌ಸ್ಪಾರ್ ಮತ್ತು ಪೈರಾಕ್ಸಿನ್ ಇದರ ಘಟಕಗಳು. ಅಲಂಕಾರಶಿಲೆಯಾಗಿ ಉಪಯೋಗ. ನೋಡಿ: ಡಯಾಬೇಸ್

ಡಾಲೊಮೈಟ್

(ಭೂವಿ) ಕ್ಯಾಲ್ಸಿಯಮ್ ಮತ್ತು ಮೆಗ್ನೀಸಿಯಮ್ ಕಾರ್ಬೊನೇಟ್‌ಗಳಿಂದಾದ ಬಿಳಿ/ನಿರ್ವರ್ಣ ಜಲಜಶಿಲೆ. ಷಡ್ಭುಜಾಕೃತಿಯಲ್ಲಿ ಸ್ಫಟಿಕೀಕರಣ. ಶಾಖ ನಿರೋಧಕ. CaMg. (Co3)2

ಡಾಲ್ಫಿನ್

(ಪ್ರಾ) ಸಿಟೇಷಿಯ ವರ್ಗ, ಒಡಂಟಾಸೆಟೀ ಉಪವರ್ಗ, ಡೆಲ್ಫಿನಿಡೀ ಹಾಗೂ ಪ್ಲಾಟಿನಿಸ್ಟಿಡೀ ಕುಟುಂಬಕ್ಕೆ ಸೇರಿದ ಹಲವು ಬಗೆ ಜಲವಾಸಿ ಸ್ತನಿಗಳ ಸಾಮಾನ್ಯ ನಾಮ. ತಿಮಿಂಗಿಲದ ಹತ್ತಿರ ಸಂಬಂಧಿ. ಜಗತ್ತಿನೆಲ್ಲೆಡೆ ಸಾಗರ, ದೊಡ್ಡ ನದಿಗಳಲ್ಲಿ ವಾಸ. ದೇಹದ ಉದ್ದ ಸುಮಾರು ೪ ಮೀ. ತೂಕ ೩೦-೧೬೦ ಕಿಗ್ರಾಮ್. ಮೂತಿ ಉದ್ದವಾಗಿ ಕೊಕ್ಕಿನಂತೆ ಚಾಚಿರುವುದು ಇದರ ವಿಶಿಷ್ಟ ಲಕ್ಷಣ. ಚುರುಕುಬುದ್ಧಿಯದು. ಪಳಗಿಸಬಹುದು. ಹಂದಿಮೀನು. (ತಂ) ಹಡಗುಗಳನ್ನು ಲಂಗರು ಹಾಕಿ ನಿಲ್ಲಿಸಲು ಬಳಸುವ ಸ್ಥಿರ ಸ್ವರೂಪದ ಸರಪಳಿ

ಡಾಲ್ಮೆನ್

(ತಂ) ನೆಲಕ್ಕೆ ಲಂಬವಾಗಿ ಊರೆಕಲ್ಲುಗಳನ್ನು ನೆಟ್ಟು, ಮೇಲೆ ಹಾಸುಗಲ್ಲು ಇಟ್ಟು ತಯಾರಿಸಿದ ಗೋರಿ/ನೆಲೆ

ಡಿ-ಕ್ಯಾಲ್ಸಿಫೈ

(ರ) ಕ್ಯಾಲ್ಸಿಯಮ್ ಅಥವಾ ಕ್ಯಾಲ್ಸಿಯಮ್ ಸಂಯುಕ್ತ ವಸ್ತುಗಳನ್ನು ತೆಗೆದುಹಾಕುವುದು. ಸುಣ್ಣವನ್ನು ತೊಡೆದು ಹಾಕುವುದು. (ವೈ) ಎಲುಬು ಮೊದಲಾದವುಗಳಲ್ಲಿಯ ಸುಣ್ಣ ಭಾಗವನ್ನು ತೆಗೆದುಹಾಕುವುದು

ಡಿಅಮೈನೇಷನ್

(ರ) ಅಮೀನ್ ನಿವಾರಣೆ. ಸಂಯುಕ್ತ ವಸ್ತುವಿನಿಂದ ಅಮೀನ್ ಗುಂಪನ್ನು (-NH2) ತೆಗೆದುಹಾಕುವುದು. ಸ್ತನಿಗಳ ಯಕೃತ್ತಿನಲ್ಲಿರುವ ಅಮೀನೋ ಗುಂಪಿನ ಆಮ್ಲಗಳು ಯೂರಿಯಾ ತಯಾರಿಕೆಯಲ್ಲಿ ಬಳಕೆ. ನೋಡಿ: ಅಮೀನ್‌ಗಳು

ಡಿಎನ್‌ಎ ಜನಕತಂತು DNA

(ಜೈತಂ) ಡಿಎನ್‌ಎ ಸಂಶ್ಲೇಷಣೆಗೆ ಪೂರಕವಾದ ತಂತು. ಡಿಎನ್‌ಎ ಅಣುವಿನ ಎರಡು ತಂತುಗಳಲ್ಲಿರುವ ನ್ಯೂಕ್ಲಿಯೊಟೈಡ್ ಸರಪಳಿಗಳು ಒಂದಕ್ಕೊಂದು ಪೂರಕವಾಗಿರುತ್ತವೆ. ಇದರ ಪ್ರತಿಸೃಷ್ಟಿಯಾಗುವಾಗ ಪರಸ್ಪರ ಹೆಣೆದುಕೊಂಡ ತಂತುಗಳು ಬೇರೆ ಬೇರೆಯಾಗುತ್ತವೆ. ಈ ತಂತುಗಳು ಜನಕ ತಂತುಗಳಂತೆ ತಮ್ಮ ಪೂರಕ ಸರಪಳಿಯನ್ನು ಪ್ರತಿಸೃಷ್ಟಿಸಿಕೊಳ್ಳುತ್ತವೆ

ಡಿಎನ್‌ಎ ಬೆರಳಚ್ಚು DNA

(ಜೀ) ಎಲೆಕ್ಟ್ರೋ ಫೋರೆಸಿಸ್ ವಿಧಾನ ಬಳಸಿ ಡಿಎನ್‌ಎ ಮಾದರಿಗಳ ಹೋಲಿಕೆ, ವ್ಯತ್ಯಾಸಗಳನ್ನು ಪರೀಕ್ಷಿಸುವ ವಿಧಾನ. ಇದಕ್ಕೆ ಅತ್ಯಂತ ಹಳೆಯ ಹಾಗೂ ಕನಿಷ್ಠ ಪ್ರಮಾಣದ ಕೂದಲು, ಜೊಲ್ಲು, ವೀರ್ಯ, ಒಣಗಿದ ರಕ್ತ ಕಲೆ ಇತ್ಯಾದಿಗಳನ್ನು ಬಳಸಬಹುದು. ಅಪರಾಧ ತನಿಖೆಯಲ್ಲದೆ ವೈಜ್ಞಾನಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲೂ ಈ ವಿಧಾನವನ್ನು ಬಳಸಲಾಗುತ್ತದೆ

ಡಿಕಸೇಟ್

(ಸ) ಎದುರುಬದುರು ಚಾಚಿರುವ ಪ್ರತಿಯೊಂದು ಎಲೆಗಳ ಜೋಡಿಯೂ ಅದರ ಮೇಲಿರುವ ಅಥವಾ ಕೆಳಗಿರುವ ಅಂತಹ ಜೋಡಿಗಳಿಗೆ ಲಂಬಕೋನದಲ್ಲಿರುವುದು; ಕತ್ತರಿ ( ) ಗೆರೆ ಮಾದರಿಯಲ್ಲಿರುವುದು

ಡಿಕೋಡರ್

(ಕಂ) ಸಂಕೇತರೂಪದ ಮಾಹಿತಿಯನ್ನು ಸಾಮಾನ್ಯ ಸಾದೃಶ್ಯ ಮಾಹಿತಿಯಾಗಿ ಪರಿವರ್ತಿಸುವ ವಿದ್ಯುನ್ಮಂಡಲ. ವಿಸಂಕೇತಕ (ತಂ) ಸ್ಟಿರಿಯೋ ಧ್ವನಿ ಸಂಕೇತಗಳನ್ನು ವಿಶ್ಲೇಷಿಸಿ ಅವನ್ನು ಎಡ, ಬಲ ಚಾನಲ್‌ಗಳಿಗೆ ಸಾಗಿಸುವ ಮಂಡಲ

ಡಿಕ್ಯಾಲಿಸೆನ್ಸ್

(ರ) ಲೋಹವನ್ನು ಕಾಸುತ್ತಾ ಹೋದಂತೆ, ಯಾವುದೋ ನಿರ್ದಿಷ್ಟ ಉಷ್ಣತೆಯಲ್ಲಿ, ಉಷ್ಣತೆಯ ಏರಿಕೆಯ ದರದಲ್ಲಿ ಕಂಡುಬರುವ ಹಠಾತ್ ಇಳಿತ: ಲೋಹ ರಚನೆಯಲ್ಲಿ ಆಗ ಪ್ರಕಟವಾಗುವ ವ್ಯತ್ಯಯದಲ್ಲಿ ಉಷ್ಣಶಕ್ತಿ ವ್ಯಯವಾಗುವುದೇ ಇದಕ್ಕೆ ಕಾರಣ. ನೋಡಿ : ರಿಕ್ಯಾಲಿಸೆನ್ಸ್

ಡಿಂಗೋ

(ಪ್ರಾ) ಮ್ಯಾಮೇಲಿಯ ವರ್ಗ ಕಾರ್ನಿವೊರ ಗಣದ ಕೇನಿಡೀ ಕುಟುಂಬಕ್ಕೆ ಸೇರಿದ ಕಾಡು ನಾಯಿ. ಕೇನಿಸ್‌ಡಿಂಗೋ ವೈಜ್ಞಾನಿಕ ನಾಮ. ಆಸ್ಟ್ರೇಲಿಯ ವಾಸಿ. ಜರಾಯು ಪ್ರಾಣಿಗಳಲ್ಲಿ ಒಂದು. ತೋಳಕ್ಕಿಂತ ಚಿಕ್ಕ ಗಾತ್ರದ್ದು. ಮುಂಗಾಲಿನಲ್ಲಿ ೫, ಹಿಂಗಾಲಿನಲ್ಲಿ ೪ ಬೆರಳುಗಳಿವೆ. ಉಗುರುಗಳನ್ನು ಹಿಂದಕ್ಕೆ ಎಳೆದುಕೊಳ್ಳಲಾರದು. ನಾಯಿ ಯಾಗಿದ್ದರೂ ಇದು ಅದರಂತೆ ಬೊಗಳುವುದಿಲ್ಲ. ಕಾಂಗರೂ, ಕೋಳಿ ಮತ್ತು ಕುರಿ ಇದರ ಆಹಾರ

ಡಿಗ್ರಿ

(ಗ) ೧. ಕೋನಮಾಪನೆಯ ಏಕಮಾನಗಳ ಪೈಕಿ ಒಂದು. ಪೂರ್ಣಾವರ್ತನೆಯ ೧/೩೬೦ ಭಾಗ. ಪ್ರತೀಕ ೦. ೨. ax+b, ax2+bx+c, ax3+bx2+cx+d ಮುಂತಾದವು ಬಹುಪದಿಗಳು. ಇವುಗಳಲ್ಲಿಯ ಚರ x. ಇಲ್ಲಿ xನ ಗರಿಷ್ಠ ಘಾತ ಒಂದನೆಯದರಲ್ಲಿ ೧, ಎರಡನೆಯದರಲ್ಲಿ ೨, ಮೂರನೆಯದರಲ್ಲಿ ೩. ಈ ಘಾತಗಳು ಆಯಾ ಬಹುಪದಿಗಳ ಡಿಗ್ರಿಗಳು. axy2 + by2z3 + cz7 + d ಈ ಬಹುಪದಿಯ ಡಿಗ್ರಿ ೭. (ಭೌ) ಉಷ್ಣತೆಯನ್ನು ಅಳೆಯಲು ಬಳಸುವ ಏಕಮಾನ. ಉದಾ : ಸೆಲ್ಸಿಯಸ್ ಮಾನಕದಲ್ಲಿ ನೀರಿನ ಬರ್ಫ ಬಿಂದುವನ್ನು ೦0 ಸೆ. ಎಂದೂ, ಕುಬಿಂ ಅನ್ನು ೧೦೦0 ಸೆ. ಎಂದೂ ವ್ಯಾಖ್ಯಿಸಿ ಈ ಅಂತರವನ್ನು ೧೦೦ ಸಮಭಾಗಗಳಾಗಿ ವಿಭಾಗಿಸಿದೆ. ಒಂದೊಂದು ಅಂತರವೂ ೧0

ಡಿಜಿಟಲ್ ಕಂಪ್ಯೂಟರ್

(ತಂ) ಅಂಕಗಳ ರೂಪದಲ್ಲಿ ಒದಗಿಸುವ (ಆದಾನ) ಮಾಹಿತಿಗಳನ್ನು ಆಧರಿಸಿ ಕ್ರಿಯೆ ಜರಗಿಸುವ ಎಲೆಕ್ಟ್ರಾನಿಕ್ ಯಂತ್ರ. ಹೀಗಲ್ಲದೆ ಸಾದೃಶ್ಯ (ಅನಲಾಗ್) ಕಂಪ್ಯೂಟರ್‌ನಲ್ಲಿ ವೋಲ್ಟೇಜ್ ಅಥವಾ ಒತ್ತಡಗಳಂಥ ಭೌತರಾಶಿಗಳನ್ನು ಒದಗಿಸಲಾಗುತ್ತದೆ. ಆರಂಭದ ದಿನಗಳಲ್ಲಿ ಚಾಲಕದಂಡ, ಗಿಯರು, ಸನ್ನೆ ಮುಂತಾದ ವನ್ನು ಉಪಯೋಗಿಸುತ್ತಿದ್ದರು. ಆದರೆ ಈಗ ಎಲೆಕ್ಟ್ರಾನಿಕ್ ತಂತ್ರಗಳು ಬಳಕೆಗೆ ಬಂದಿವೆ. ಎಂದೇ ಕಂಪ್ಯೂಟರ್ ಪರಿಕ್ರಮಗಳನ್ನು ಅತಿ ಕ್ಷಿಪ್ರವಾಗಿಯೂ ನಿಖರವಾಗಿಯೂ ನಿರ್ವಹಿಸುವುದು ಸಾಧ್ಯವಾಗಿದೆ. ಆಧುನಿಕ ಡಿಜಿಟಲ್ ಕಂಪ್ಯೂಟರಿನ ಪರಿಭಾಷೆ ‘೦’ ಮತ್ತು ‘೧’ ಎಂಬ ಎರಡು ಅಂಕಗಳಿಂದ ರೂಪುಗೊಂಡಿರುವ ವ್ಯವಸ್ಥೆ. ದತ್ತಾಂಶ ಗಳನ್ನು ಕಂಪ್ಯೂಟರಿಗೆ ಈ ಪರಿಭಾಷೆಯಲ್ಲೇ ಆದಾನಿಸಬೇಕು. ಕಂಪ್ಯೂಟರಿನಿಂದ ದೊರೆಯುವ ಪ್ರದಾನವಾದರೋ ಇದೇ ಪರಿಭಾಷೆಯಲ್ಲಿ ಇರುತ್ತದೆ. ಇದನ್ನು ಸಾಮಾನ್ಯ ಭಾಷೆಗೆ ರೂಪಾಂತರಿಸಿದಾಗ ನಮಗೆ ಫಲಿತಾಂಶ ದೊರೆಯುತ್ತದೆ. ಅಂಕಾತ್ಮಕ ಗಣಕ. ನೋಡಿ : ಅನಲಾಗ್ ಕಂಪ್ಯೂಟರ್

ಡಿಜಿಟಲ್ ಗಡಿಯಾರ

(ತಂ) ಸಾಂಪ್ರದಾಯಿಕ ಗಡಿಯಾರಗಳು ಮುಳ್ಳಿನ ಚಲನೆ ಯಿಂದ ಕಾಲದ ಹರಿವನ್ನು ಸೂಚಿಸುತ್ತವೆ. ಆದರೆ ಡಿಜಿಟಲ್ ಗಡಿಯಾರಗಳು ೧ರಿಂದ ೨೪ರ ವರೆಗಿನ ಸಂಖ್ಯಾಶ್ರೇಣಿಯಿಂದ ನೇರವಾಗಿ ಕಾಲವನ್ನು ಗುರುತಿ ಸುತ್ತವೆ. ಅಂಕಾತ್ಮಕ ಗಡಿಯಾರ

ಡಿಜಿಟಲ್ ಸಂಪರ್ಕ ತಂತ್ರಜ್ಞಾನ

(ಅಂವಿ) ಸಂಪರ್ಕ ಸಂಕೇತಗಳನ್ನು ಅಂಕಗಳ ರೂಪದಲ್ಲಿ ರವಾನಿಸುವ ಮತ್ತು ಪಡೆಯುವ ವಿಧಾನ. ಉಪಗ್ರಹದಿಂದ ಪಡೆದ ಚಿತ್ರಗಳ ನಿರ್ವಹಣೆ ಸುಲಭ ಸಾಧ್ಯ ವಾಗುತ್ತದೆ. ಉಪಗ್ರಹಗಳಿಂದ ಮಾಹಿತಿಯನ್ನು ದಕ್ಷವಾಗಿ ರವಾನಿಸಲು ಪ್ರಸಾರ ಮಾಡಲು ಅನುವು ಮಾಡಿಕೊಡುತ್ತದೆ

ಡಿಜಿಟಾಲಿಸ್

(ವೈ) ಡಿಜಿಟೊನಿನ್ ಮತ್ತು ಡಿಜಿಟಾಕ್ಸಿನ್ ಸಸ್ಯಮೂಲ ಗ್ಲೂಕೊಸೈಡ್‌ಗಳ ಮಿಶ್ರಣ. ವೈದ್ಯಕೀಯದಲ್ಲಿ ಹೃತ್ಕ್ರಿಯಾ ಪ್ರಚೋದಕವಾಗಿ ಬಳಕೆ

ಡಿಟ್ರೈಟಸ್

(ವೈ) ಜೀವಿ ಕೊಳೆತು ಉಳಿದ ಉತ್ಪನ್ನ. (ಭೂವಿ) ಉಜ್ಜಿ, ಸವೆದು ಉಂಟಾದ ದ್ರವ್ಯ, ಸಾಮಗ್ರಿ (ಉದಾ: ಪುಡಿಗಲ್ಲು , ಮರಳು ಇತ್ಯಾದಿ)

ಡಿನೇಚರ್ಡ್ ಸ್ಪಿರಿಟ್

(ರ) ನೋಡಿ: ಮಿಥಿಲೇಟೆಡ್ ಸ್ಪಿರಿಟ್

Search Dictionaries

Loading Results

Follow Us :   
  Download Bharatavani App
  Bharatavani Windows App