भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಟಾಟೊಮೆರಿಸಮ್

(ರ) ಅಣುವಿನಲ್ಲಿರುವ ಹೈಡ್ರೊಜನ್ ಪರಮಾಣು ಸ್ಥಾನಾಂತರಗೊಂಡು ಟಾಟೋ ಗುಂಪು ಈನಾಲ್ ಆಗಿಯೂ ಈನಾಲ್ ಗುಂಪು ಟಾಟೋ ಗುಂಪಾಗಿಯೂ ಪರಿವರ್ತನೆಯಾಗುವ ಮೂಲಕ ಐಸೊಮರ್‌ಗಳು ರೂಪುಗೊಂಡು ಸಮಸ್ಥಿತಿಯಲ್ಲಿರುವ ವ್ಯವಸ್ಥೆ. ಉದಾ: ಈಥೈಲ್ ಅಸಿಟೊಅಸಿಟೇಟ್

ಟಾನ್ಸಿಲೆಕ್ಟೊಮಿ

(ವೈ) ಗಲೋದ್ರೇಕಕ್ಕೊಳಗಾದ ಗಲಗ್ರಂಥಿಗಳನ್ನು ತಂತಿ ಕುಣಿಕೆ, ಚಾಕು, ಇಲ್ಲವೇ ವಿದ್ಯುದಾತಂಚನ (electrocoagulation – ಗರಣೆ ಕಟ್ಟುವಿಕೆ) ಮೂಲಕ ಶಸ್ತ್ರಕ್ರಿಯೆ ಯಿಂದ ತೆಗೆದುಹಾಕುವುದು. ಇದೊಂದು ಸಾಮಾನ್ಯ ಹಾಗೂ ತುಂಬ ಪರಿಪೂರ್ಣಗೊಂಡ ಶಸ್ತ್ರಕ್ರಿಯೆ. ಆದರೆ ಇದನ್ನು ಆಸ್ಪತ್ರೆಯ ಅತ್ಯುತ್ತಮ ಪರಿಸ್ಥಿತಿಗಳಲ್ಲಷ್ಟೆ ನಡೆಸಬೇಕು, ಏಕೆಂದರೆ, ವಿಪರೀತ ರಕ್ತಸ್ರಾವದಂಥ ತೊಡಕುಗಳು ಉಂಟಾಗಬಹುದು. ಮಕ್ಕಳ ವಿಷಯದಲ್ಲಿ ಈ ಶಸ್ತ್ರಕ್ರಿಯೆಯನ್ನು ಹೆಚ್ಚು ಎಚ್ಚರಿಕೆಯಿಂದ ನಡೆಸಬೇಕು. ಪದೇ ಪದೇ ಶೀತವಾಗುವುದು, ಗಂಟಲ ನೋವು ಹಾಗೂ ಗಲಗ್ರಂಥಿಗಳ ಉರಿಯೂತ ಇದ್ದಾಗಲಷ್ಟೇ ಆರೋಗ್ಯದ ಪೂರ್ವಾಪರ ವಿವೇಚನೆ ನಡೆಸಿ, ರೋಗಿಗಳನ್ನು ಆಯ್ದು ಶಸ್ತ್ರಕ್ರಿಯೆ ನಡೆಸಬೇಕು. ಗಲಗ್ರಂಥಿಗಳನ್ನು ತೆಗೆದುಹಾಕುವಾಗ ಸಾಮಾನ್ಯ ವಾಗಿ ಅಡಿನಾಯ್ಡ್ ಗ್ರಂಥಿಗಳನ್ನೂ ತೆಗೆದುಹಾಕಲಾಗುತ್ತದೆ

ಟಾನ್ಸಿಲೈಟಿಸ್

(ವೈ) ಗಲಗ್ರಂಥಿಯ ಉರಿಯೂತ. ಗಲೋದ್ರೇಕ

ಟಾನ್ಸಿಲ್

(ವೈ) ನೋಡಿ: ಗಲಗ್ರಂಥಿಗಳು

ಟಾಪಾಲಜಿ

(ಗ) ಸಂಸ್ಥಿತಿ ವಿಜ್ಞಾನ. ಜ್ಯಾಮಿತೀಯ ಆಕೃತಿಗಳ ವಿಶಿಷ್ಟ ಗುಣಗಳ ಗಣಿತಾಧ್ಯಯನ. ಮೂಲತಃ ಲಿಯೊನ್‌ಹಾರ್ಡ್ ಆಯ್ಲರ್ (೧೭೦೭-೮೧) ಪ್ರಾರಂಭಿಸಿದ ಈ ಗಣಿತ ವಿಭಾಗ ಈಗ ಬಹು ಆಯಾಮಗಳಲ್ಲಿ ಅಭಿವರ್ಧಿಸಿದೆ. ಇದರ ಎರಡು ಮುಖ್ಯ ವಿಭಾಗಗಳು: ಬೀಜಗಣಿತಾತ್ಮಕ ಸಂಸ್ಥಿತಿವಿಜ್ಞಾನ ಮತ್ತು ಸಾರ್ವತ್ರಿಕ ಸಂಸ್ಥಿತಿವಿಜ್ಞಾನ. ರಬ್ಬರ್ ಹಾಳೆ ಜ್ಯಾಮಿತಿ ಪರ್ಯಾಯ ನಾಮ

ಟಾರ್ಕ್

(ಭೌ) ನೋಡಿ: ಭ್ರಾಮಕ

ಟಾರ್ಟರ್

(ರ) ವೈನ್ ತಯಾರಿಕೆಗೆ ಉಪಯೋಗಿಸುವ ಭಾಂಡಗಳ ತಳದಲ್ಲಿಯೂ ಬದಿಗಳಲ್ಲಿಯೂ ಮೈದಳೆಯುವ ಕೆಂಗಂದು ಸ್ಫಟಕೀಯ ಪದಾರ್ಥದ ಲೇಪ. ಮುಖ್ಯವಾಗಿ KHC4H4O6. (ವೈ) ಹಲ್ಲುಗಳ ಮೇಲೆ ಮೈದಳೆಯುವ ಗಡಸು ಪದಾರ್ಥ. ಸುಣ್ಣದ ಫಾಸ್ಫೇಟ್ ಮತ್ತಿತರ ಪದಾರ್ಥಗಳ ಮಿಶ್ರಣ

ಟಾರ್ಟರ್ ಕೆನೆ

(ರ) ದ್ರಾಕ್ಷಾರಸ (ಮದ್ಯ) ತಯಾರಿಕೆಯಲ್ಲಿ ಪಾತ್ರೆಯ ಒಳಮೈ ಮೇಲೆ ಸಂಗ್ರಹವಾಗುವ ಟಾರ್ಟರ್ ಎಂಬ ನಿಕ್ಷೇಪವನ್ನು ಶುದ್ಧೀಕರಿಸಿದರೆ ಸಿಗುವ ಪೊಟ್ಯಾಸಿಯಮ್ ಬೈಟಾರ್ಟ್ರೇಟ್. KHC4H4O6. ಬಿಳಿ ಸ್ಫಟಿಕೀಯ ಆಮ್ಲ ಲವಣ. ಬೇಕಿಂಗ್ ಪೌಡರ್ (ಅಡುಗೆ ಸೋಡ) ಆಗಿ ಬಳಕೆ

ಟಾರ್ಟಾರಿಕ್ ಆಮ್ಲ

(ರ) ನಾಲ್ಕು ಸ್ಟೀರಿಯೊ ಐಸೊಮೆರಿಕ್ ರೂಪಗಳಲ್ಲಿ ಇರುವ ಒಂದು ಆರ್ಗ್ಯಾನಿಕ್ ಆಮ್ಲ. ಸೂತ್ರ COOH.(CHOH)2. COOH. ಇದರ ಸಾಮಾನ್ಯ ರೂಪವಾದ ಡಿ-ಟಾರ್ಟಾರಿಕ್ ಆಮ್ಲವನ್ನು ಅರ್ಗಾಲ್‌ನಿಂದ ಪಡೆಯುತ್ತೇವೆ. ಇದೊಂದು ಬಿಳಿ ವಿಲೇಯಶೀಲ ಸ್ಫಟಿಕೀಯ ಘನ. ದ್ರಬಿಂ ೧೭೦೦ ಸೆ. ಕ್ಯಾಲಿಕೊ ಮುದ್ರಣ, ಅಡುಗೆ ಸೋಡ ಮತ್ತು ರಂಗು ತಯಾರಿಕೆ ಮುಂತಾದವುಗಳಲ್ಲಿ ಉಪಯೋಗ

ಟಾರ್ಟಿಕೋಲಿಸ್

(ವೈ) ಕುತ್ತಿಗೆಯಲ್ಲಿರುವ ಸ್ನಾಯುಗಳು ಸೆಡೆತದ ಫಲವಾಗಿ ಕುಗ್ಗಿ, ಕುತ್ತಿಗೆ ಓರೆಯಾಗುವ ವಾತರೋಗ. ಇದು ಜನ್ಮದತ್ತವಾಗಿ ಬರಬಹುದು ಇಲ್ಲವೇ ಆರ್ಜಿತವಾಗಿರ ಬಹುದು. ಕಂಠ ಖಂಡಾಸ್ಥಿಗಳ ರೋಗ, ಕಂಠ ಗಳಲೆ, ಗಲಗ್ರಂಥಿ ಉರಿಯೂತ, ಕೀಲುವಾತ, ಹಿಮ್ಮಿದುಳ ಗಂತಿ ಇತ್ಯಾದಿಗಳ ಕಾರಣ ವಾಗಿಯೂ ಈ ನುಲಿಗೊರಳು ಕಂಡುಬರಬಹುದು. ಉರುಗೊರಳು

ಟಾರ್ಟ್ರಿಸಿಡೀ

(ಪ್ರಾ) ಲೆಪಿಡಾಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಎಲೆಗಳನ್ನು ತಿಂದು ಹಾಳು ಮಾಡುವ ಪತಂಗಗಳನ್ನು ಒಳಗೊಂಡಿದೆ. ಇವುಗಳ ಡಿಂಬಗಳು ಎಲೆಗಳನ್ನು ಸುತ್ತಿ ಕೊಳವೆ ಯಂತೆ ಮಾಡಿ ಒಳಗೆ ಹುದುಗಿ ಹಸುರು ತಿಂದು ಬಾಳುತ್ತವೆ. ಎಂದೇ ಇವಕ್ಕೆ ಎಲೆ ಸುತ್ತುವ ಹುಳುಗಳು ಎಂಬ ಹೆಸರು ಬಂದಿದೆ

ಟಾರ್ನೆಡೊ

(ಪವಿ) ಉಷ್ಣವಲಯದ ಅಟ್ಲಾಂಟಿಕ್ ಪ್ರದೇಶದ ಚಂಡಮಾರುತ. ವಾಯು ಪ್ರವಾಹಗಳು ಅತ್ಯಂತ ಪ್ರಬಲವಾಗಿ ಮೇಲೇರು ತ್ತಿರುವಾಗ ಉದ್ಭವಿಸುವ ತೀವ್ರ ವಿನಾಶಕಾರಕ ಚಂಡಮಾರುತ. ಯಾವ ಅಡೆತಡೆಯನ್ನೂ ಲೆಕ್ಕಿಸದೆ ಸೆಕೆಂಡಿಗೆ ೧೦೦ ಮೀಟರ್ ವರೆಗೂ ವೇಗದಿಂದ ಮುನ್ನುಗ್ಗುತ್ತದೆ. ವಾಯುಸ್ತಂಭಗಳನ್ನೂ ಕಡಲ ಮೇಲಿರುವಾಗ ಜಲಸ್ತಂಭಗಳನ್ನೂ ರೂಪಿಸುತ್ತದೆ. ಈ ಸ್ತಂಭಗಳ ಕೇಂದ್ರ ಪ್ರದೇಶ ನಿರ್ದ್ರವ್ಯ. ವ್ಯಾಪಕ ಗುಡುಗು ಸಿಡಿಲು ಮತ್ತು ಮಳೆಗೆ ಕಾರಣವಾಗುತ್ತದೆ. ತುಫಾನು

ಟಾರ್ಪಿಡೊ

(ತಂ) ನೌಕಾ ಯುದ್ಧದಲ್ಲಿ ಉಪಯೋಗಿಸುವ ಪ್ರಬಲ ವಿನಾಶಕಾರಿ ಆಯುಧ. ಶತ್ರುವಿನ ಹಡಗಿಗೆ ಗುರಿ ಇಟ್ಟು ನೀರೊಳಗೆ ಪ್ರಯೋಗಿಸುವ, ಗುರಿ ತಲಪಿದೊಡನೆ ಸಿಡಿಯುವ ಸ್ವಯಂಚಾಲಿತ ಅಸ್ತ್ರ. ಚುಟ್ಟದ ಆಕಾರವಿದೆ

ಟಾರ್ಬನೈಟ್

(ಭೂವಿ) ಕಲ್ಲಿದ್ದಲಿನ ಒಂದು ಬಗೆ. ಅಧಿಕ ಕಾರ್ಬನ್‌ಯುಕ್ತ ತೈಲಜೇಡು ಎಂದು ಪರಿಗಣಿತ. ಸ್ಕಾಟ್ಲೆಂಡಿನ ಟಾರ್ಬೇನ್ ಹಿಲ್ ಎಂಬಲ್ಲಿ ಮೊದಲು ಪತ್ತೆಯಾದ್ದರಿಂದ ಈ ಹೆಸರು

ಟಾರ್ಬರ್ನೈಟ್

(ಭೂವಿ) ತಾಮ್ರ, ಯುರೇನಿಯಮ್‌ಗಳ ಜಲಾಂಶಯುಕ್ತ ದ್ವಿತೀಯಕ ಖನಿಜ. ರಾಸಾಯನಿಕ ಸೂತ್ರ Cu(UO2)2 (PO4)2. 8-12H2O. ಯುರೇನಿಯಮ್‌ನ ಗೌಣ ಅದಿರುಗಳ ಪೈಕಿ ಒಂದು. ಸ್ವೀಡಿಷ್ ರಸಾಯನತಜ್ಞ ಟಾರ್ಬರ್ನ್ ಬರ್ಗ್‌ಮನ್ (೧೭೩೫-೮೪) ಗೌರವಾರ್ಥ ಈ ಹೆಸರು

ಟಾರ್ಮಿಗನ್

(ಪ್ರಾ) ಗ್ಯಾಲಿಫಾರ್ಮೀಸ್ ಗಣದ ಟೆಟ್ರೊ ವೋನಿಡೀ ಕುಟುಂಬಕ್ಕೆ ಸೇರಿದ ಪಕ್ಷಿ. ವೈಜ್ಞಾನಿಕ ನಾಮ ಲ್ಯಾಗೋಪಸ್. ಸುಮಾರು ೬೦೦ ರಿಂದ ೧೨೦೦ ಮೀಟರ್ ಎತ್ತರದ ಕಲ್ಲುಬಂಡೆಗಳ ಮಧ್ಯದ ಬಂಜರು ಪ್ರದೇಶಗಳಲ್ಲಿ ವಾಸ. ಗ್ರೌಸ್

ಟಾರ್ಸಿಯರ್ ಕೋತಿ

(ಪ್ರಾ) ಪ್ರೈಮೇಟ್ ಗಣ, ಪ್ರೊಸಿಮಿಯೈ ಉಪಗಣ, ಟಾರ್ಸೆಯಿಡೀ ಕುಟುಂಬಕ್ಕೆ ಸೇರಿದ ಪ್ರಾಣಿ. ವೈಜ್ಞಾನಿಕ ನಾಮ ಟಾರ್ಸಿ ಯಸ್. ಇಂಡೊಮಲಯ ಪ್ರದೇಶದ ದಟ್ಟ ಕಾಡುಗಳಲ್ಲಿ ಮಾತ್ರ ಕಾಣಬರುತ್ತದೆ

ಟಾಲೀನ್

(ರ) ಪೆಟ್ರೋಲಿಯಮ್ ಉತ್ಪನ್ನ, ರಾಸಾಯನಿಕ ಸೂತ್ರ C6H5CH3. ದ್ರಬಿಂ -೯೫0 ಸೆ., ಕುಬಿಂ ೧೧೧0 ಸೆ. ವರ್ಣರಹಿತ ವಕ್ರೀಭವನಶೀಲ ದ್ರವ. ನಿರ್ದಿಷ್ಟ ವಾಸನೆ ಉಂಟು. ಹೊಗೆ ಕಾರುವ ಜ್ವಾಲೆಸಹಿತ ಉರಿಯುತ್ತದೆ. ಉಗಿಯಲ್ಲಿ ತೀವ್ರ ಬಾಷ್ಪಶೀಲ. ಸ್ಯಾಕರೀನ್, ಟಿಎನ್‌ಟಿ (ಸಿಡಿಮದ್ದು)ಗಳ ತಯಾರಿಕೆಯಲ್ಲಿ ಬಳಕೆ

ಟಾಲ್ಕ್

(ಭೂವಿ) ಅತ್ಯಂತ ಮೃದು ಖನಿಜ. ಉಗುರಿನಿಂದ ಗೀರಬಹುದು. ಕಾಠಿಣ್ಯಾಂಕ ೧. ಪ್ರಧಾನವಾಗಿ ಮೆಗ್ನೀಸಿಯಮ್ ಸಿಲಿಕೇಟ್‌ನಿಂದಾದುದು. 3MgO.4SiO2.H2O. ಅಲಂಕಾರ ಪೌಡರ್ ಆಗಿ ಬಳಕೆ

ಟಿಂಕಲ್

(ಭೂವಿ) ಉಪ್ಪು ಸರೋವರಗಳಿಂದ (ಉದಾ : ಕಾಶ್ಮೀರ ಹಾಗೂ ಟಿಬೆಟ್‌ಗಳಲ್ಲಿಯವು) ಪಡೆದ ಕಚ್ಚಾ ಬೊರಾಕ್ಸ್‌ನ ಹಳೆಯ ಹೆಸರು. ಬೊರಾನ್ ಸಂಯುಕ್ತಗಳ ಪ್ರಧಾನ ಘಟಕ. ಟಂಕಣ. ಕಚ್ಚಾ ಬಿಳಿಗಾರ. ನೋಡಿ: ಬೋರಾಕ್ಸ್

Search Dictionaries

Loading Results

Follow Us :   
  Download Bharatavani App
  Bharatavani Windows App