भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಜೀನ್ ನಮೂನೆ

(ಜೀ) ಆನುವಂಶಿಕತೆಯ ಫಲವಾದ ಎಲ್ಲ ಗುಣಗಳೂ ಸಾಮಾನ್ಯವಾಗಿ ಇರುವಂಥ ಪ್ರಾಣಿಗಳ ಅಥವಾ ಸಸ್ಯಗಳ ಗುಂಪು, ನಮೂನೆ

ಜೀನ್ ಬ್ಯಾಂಕ್

(ಜೀ) ಆರ್ಥಿಕವಾಗಿ ಉಪಯುಕ್ತ ವಾದ ಸಸ್ಯಗಳ ಬೀಜ, ಬೀಜಕಗಳು ಗೆಡ್ಡೆ ಮತ್ತು ಪ್ರಾಣಿಗಳ ವೀರ್ಯಾಣು ಹಾಗೂ ಕೋಶಗಳನ್ನು ಸಂಗ್ರಹಿಸಿಡುವಿಕೆ. ಜೀವಿವೈವಿಧ್ಯ ಸಂರಕ್ಷಣೆಯಲ್ಲಿ ಇಂತಹ ಬ್ಯಾಂಕ್‌ಗಳು ಉಪಯುಕ್ತ. ವಿನಾಶದ ಅಂಚಿನ ಪ್ರಾಣಿಗಳ ಮರುಹುಟ್ಟಿಗೆ ಅನುಕೂಲಕರ. ಜೀನ್‌ಕೋಠಿ

ಜೀನ್ ಸಂಕೇತ

(ವೈ) ಡಿಎನ್‌ಎ ಅಥವಾ ಆರ್‌ಎನ್‌ಎಗಳಲ್ಲಿರುವ ೪ ಪ್ರತ್ಯಾಮ್ಲಗಳಿಗೂ ಪ್ರೋಟೀನ್‌ಗಳಲ್ಲಿ ಕಂಡುಬರುವ ೨೦ ಅಮೀನೊ ಆಮ್ಲಗಳಿಗೂ ನಡುವಿನ ಸಂಬಂಧ ಸೂಚಕ ನಿಯಮಗಳು. ೪ ಪ್ರತ್ಯಾಮ್ಲಗಳ ಎಲ್ಲ ಕ್ರಮಯೋಜನೆ ಗಳನ್ನೂ ಬಳಸಿಕೊಂಡು ೬೪ ವಿಭಿನ್ನ ೩-ಪ್ರತ್ಯಾಮ್ಲೀಯ ಶ್ರೇಣಿಗಳನ್ನು ಪಡೆಯುವುದು ಸಾಧ್ಯವಿದೆ. ಆನುವಂಶಿಕ ಸಂಕೇತ ಭಾಷೆ. ಜೀವಕೋಶದೊಳಗೆ ನ್ಯೂಕ್ಲಿಯಿಕ್ ಆಮ್ಲ ಪ್ರೋಟೀನ್ ಅಣುವಿನ ಸಂಶ್ಲೇಷಣೆಯನ್ನು ನಿರ್ಧರಿಸುವ ಸಂದರ್ಭದಲ್ಲಿ ನ್ಯೂಕ್ಲಿಯಿಕ್ ಆಮ್ಲದಲ್ಲಿಯ ನ್ಯೂಕ್ಲಿಯೊಟೈಡ್‌ಗಳ ಅನುಕ್ರಮಕ್ಕೂ ಆ ನ್ಯೂಕ್ಲಿಯಿಕ್ ಆಮ್ಲದ ನಿರ್ದೇಶನದಲ್ಲಿ ಸಂಶ್ಲೇಷಣೆಗೊಳ್ಳುವ ಪ್ರೋಟೀನ್‌ನಲ್ಲಿಯ ಅಮೀನೊಆಮ್ಲಗಳ ಅನುಕ್ರಮಕ್ಕೂ ಇರುವ ಸಂಬಂಧವನ್ನು ಸೂಚಿಸುವ ‘ಸಂಕೇತ’ಗಳ ವ್ಯವಸ್ಥೆ

ಜೀಬ್ರ ಮೀನು

(ಪ್ರಾ) ಸ್ಕಾರ್ಪೀನಿಫಾರ್ಮೀಸ್ ಗಣಕ್ಕೆ ಸೇರಿದ ಸಮುದ್ರವಾಸಿ ಮೀನು. ದೇಹದ ಮೇಲೆ ಜೀಬ್ರದಂತೆ ಬಣ್ಣ ಬಣ್ಣದ ಪಟ್ಟಿಗಳು ಇರುವುದರಿಂದ ಈ ಹೆಸರು. ಟೆರಾಯಿಸ್ ವಾಲಿಟಾನ್ಸ್ ಇದರ ವೈಜ್ಞಾನಿಕ ನಾಮ. ಆಸ್ಟ್ರೇಲಿಯಾದ ಬಿಳಿ ಹವಳದ ದಿಬ್ಬಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದ ಪೂರ್ವ ಕರಾವಳಿಯ ಸಣ್ಣ ಝರಿಗಳಲ್ಲಿ ಕಂಡುಬರುವ ಬ್ರ್ಯಾಕಿಡಾನಿಯೊತೊ ರೇರಿಯೊ ಎಂಬುದಕ್ಕೂ ಜೀಬ್ರ ಮೀನು ಎಂಬ ಹೆಸರೇ ಇದೆ

ಜೀರಿಗೆ

(ಸ) ಏಪಿಯೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಸಂಬಾರ ಸಸ್ಯ ಮತ್ತು ಅದರ ಬೀಜ. ಕ್ಯೂಮಿನಮ್ ಸೈಮಿನಮ್ ವೈಜ್ಞಾನಿಕ ನಾಮ. ಇದರ ತವರು ಈಜಿಪ್ಟ್. ಭಾರತದಲ್ಲಿ ಅಸ್ಸಾಮ್, ಬಂಗಾಳ ಬಿಟ್ಟು ಬೇರೆಡೆಗಳಲ್ಲೆಲ್ಲ ಬೆಳೆಯುತ್ತದೆ.

ಜೀರುಂಡೆ

(ಪ್ರಾ) ಕೋಲಿಯಾಪ್ಟರ ವರ್ಗದ ಕೀಟಗಣದ ಸದಸ್ಯ ಪ್ರಾಣಿ. ಇದರ ಮೇಲು ರೆಕ್ಕೆಗಳು ಪಕ್ಷರಕ್ಷೆಗಳಾಗಿ ಮಾರ್ಪಟ್ಟಿವೆ. ದುಂಬಿ. ವಾಟೆ ಹುಳು

ಜೀರ್ಣನಾಳ

(ವೈ) ಜಠರ, ಕರುಳುಗಳ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ಆನುಷಂಗಿಕ ಅಂಗಗಳ ಒಟ್ಟು ಹೆಸರು. ಬಾಯಿಯಲ್ಲಿ ಆರಂಭವಾಗಿ ಗುದದ್ವಾರದಲ್ಲಿ ಅಂತ್ಯಗೊಳ್ಳುತ್ತದೆ. ಆಹಾರದ ಪಚನ, ರಕ್ತಕ್ಕೆ ಅದರ ವರ್ಗಾವಣೆ, ಆಹಾರದ ಅಸ್ವೀಕೃತ ಅಂಶಗಳ ಉಚ್ಚಾಟನೆ ಇದರ ಕ್ರಿಯೆ. ವಿವಿಧಾಂಗಗಳ ಯಾಂತ್ರಿಕ ಹಾಗೂ ಜೀರ್ಣರಸಗಳ ರಾಸಾಯನಿಕ ಕ್ರಿಯೆ ಮೂಲಕ ಈ ಕಾರ್ಯ ಜರಗುತ್ತದೆ

ಜೀವ

(ಪ್ರಾ) ಜಡ ದ್ರವ್ಯದಿಂದ ಪ್ರತ್ಯೇಕಿಸುವ ಗುಣ. ಪ್ರಾಣಿಗಳ ಹಾಗೂ ಸಸ್ಯಗಳ ಚಟುವಟಿಕೆಗಳ ಮೊತ್ತ. ಜೀವನ

ಜೀವ ಚಟುವಟಿಕೆಗಳು

(ಜೀ) ಎಲ್ಲ ಜೀವಾಧಾರಕ ಚಟುವಟಿಕೆಗಳು. ಪ್ರಾಣಾಂಗಗಳ ಪರಿಣಾಮಕಾರಿ ಕಾರ್ಯ: ಹೃದಯ ಮಿಡಿತ, ಉಸಿರಾಟ, ಮಿದುಳಿನ ಚಟುವಟಿಕೆ ಇತ್ಯಾದಿ

ಜೀವ ವೈವಿಧ್ಯ

(ಜೀ) ಭೂಮಿಯ ಮೇಲಿರುವ ಜೀವಿಗಳ ವೈವಿಧ್ಯ. ಇದು ಸಾವಿರಾರು ಸಸ್ಯಗಳು, ಪ್ರಾಣಿಗಳು, ಸೂಕ್ಷ್ಮ ಜೀವಿಗಳು ಇವುಗಳಲ್ಲಿರುವ ಜೀನ್‌ಗಳನ್ನು ಮತ್ತು ಇವುಗಳು ವಾಸಿಸುವ ವಿವಿಧ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ. ಈ ಪದ ಬಳಕೆಗೆ ಬಂದದ್ದು ೧೯೮೦ರ ದಶಕದಲ್ಲಿ. ಜೀವವೈವಿಧ್ಯ ಸಂರಕ್ಷಿಸಲು ಈಗ ಕ್ರಮ ಕೈಗೊಳ್ಳಲಾಗಿದೆ. ಭಾರತದಲ್ಲಿ ಗ್ರಾಮೀಣ ಮಟ್ಟದಲ್ಲೂ ಜೀವವೈವಿಧ್ಯ ದಾಖಲಾತಿ ಪ್ರಾರಂಭವಾಗಿದೆ

ಜೀವ ಸೃಜನ

(ಜೀ) ಸ್ವತಃ ನಿರ್ಜೀವಿಯಾಗಿದ್ದು ಸ್ವಯಂ ಪುನರುತ್ಪಾದಕ ಗುಣವುಳ್ಳ ಸಂಕೀರ್ಣ ಆರ್ಗ್ಯಾನಿಕ್ ಅಣುಗಳಿಂದ ಜೀವಂತ ವಸ್ತುವಿನ ಅಭಿವರ್ಧನೆ. ವಿಶ್ವದಲ್ಲಿ ಜೀವೋತ್ಪತ್ತಿ ಈ ರೀತಿ ಆಯಿತೆಂದು ಭಾವಿಸಲಾಗಿದೆ. ನೋಡಿ : ಜೀವದ ಉಗಮ

ಜೀವಕ

(ಪ್ರಾ) ಪ್ರೋಟೋಜೋವ, ಸಿಲೆಂಟರೇಟ ಮುಂತಾದ ಪ್ರಾಣಿ ವಸಾಹತುಗಳಲ್ಲಿಯ ಹೆಚ್ಚು ಕಡಿಮೆ ಸ್ವತಂತ್ರವಾದ ಯಾವುದೇ ಸದಸ್ಯ ಪ್ರಾಣಿ

ಜೀವಕಾಂತತ್ವ

(ಪವಿ) ಭೂಕಾಂತತ್ವವು ಜೀವಿಗಳ ಮೇಲೆ ಬೀರುವ ಪ್ರಭಾವ. ಕೆಲವು ಜೀವಿಗಳು, ವಿಶೇಷವಾಗಿ ಜೇನು ನೊಣ, ಕೆಲವು ಹಕ್ಕಿಗಳು ಹಾಗೂ ಕೆಲವು ಸ್ತನಿಗಳು ಭೂಕಾಂತತ್ವದ ಆವರಣ ಅನುಸರಿಸಿ ತಮ್ಮ ನೆಲೆಗಳನ್ನು ಗುರುತಿಸಿಕೊಳ್ಳುತ್ತವೆ

ಜೀವಕೋಶ

(ಜೀ) ನೋಡಿ: ಕೋಶ

ಜೀವಜಾಲ

(ಪ್ರಾ) ಯಾವುದೇ ಪರಿಸರವನ್ನು ಆಶ್ರಯಿಸಿ ಬೆಳೆದು ಅಭಿವರ್ಧಿಸುತ್ತಿರುವ ಜೀವಿಗಳ ಸಂಕುಲ

ಜೀವಂಜೀವ ಹಕ್ಕಿ

(ಪ್ರಾ) ಫೇಸಿಯಾನಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಬೇಟೆಯ ಹಕ್ಕಿ. ಉದ್ದ ಬಾಲ. ಲೈಂಗಿಕ ದ್ವಿರೂಪತ್ವ ಈ ವರ್ಗದ ಹಕ್ಕಿಗಳ ವಿಶಿಷ್ಟ ಗುಣ

ಜೀವಜ್ಜೀವ ಸೃಷ್ಟಿ

(ಜೀ) ನೋಡಿ: ಜೈವಿಕ ಜನನ

ಜೀವತ್ವ

(ವೈ) ಜೀವಧಾರಣ ಶಕ್ತಿ

ಜೀವದ ಉಗಮ

(ಪ್ರಾ) ನಿರ್ಜೀವ ಪದಾರ್ಥದಿಂದ ಜೀವ ವಿಕಾಸಗೊಂಡ ಪ್ರಕ್ರಿಯೆ. ಭೂಮಿಯ ಮೇಲೆ ೩೫೦೦-೪೦೦೦ ಮಿಲಿಯನ್ ವರ್ಷಗಳ ಹಿಂದೆ ಇದು ಸಂಭವಿಸಿತೆಂದು ಸಾಮಾನ್ಯ ಭಾವನೆ. ಆದಿಮ ವಾತಾವರಣವು ಅಮೋನಿಯ, ಮೀಥೇನ್, ಹೈಡ್ರೊಜನ್ ಹಾಗೂ ನೀರಿನ ಆವಿಯಂಥ ಜೈವಿಕ ದ್ರವ್ಯದ ಮೂಲ ಘಟಕಗಳನ್ನೊಳಗೊಂಡಿದ್ದ ರಾಸಾಯನಿಕ ಎಸರಿನಂತೆ ಇದ್ದಿತೆಂದೂ ಈ ಘಟಕಗಳು ಸೂರ್ಯನ ಹಾಗೂ ವಿದ್ಯುನ್ಮಾರುತ ಕ್ಷೋಭೆಗಳ ಶಕ್ತಿಯನ್ನು ಬಳಸಿಕೊಂಡು ರಾಸಾಯನಿಕ ವಿಕಸನ ಪ್ರಕ್ರಿಯೆ ಗೊಳಗಾಗಿ ಅಮೀನೊ ಆಮ್ಲ, ಪ್ರೋಟೀನ್ ಹಾಗೂ ವೈಟಮಿನ್ ಗಳಂಥ ಸತತವಾಗಿ ಹೆಚ್ಚು ಹೆಚ್ಚು ಸಂಕೀರ್ಣವಾದ ಅಣುಗಳಾಗಿ ಒಂದುಗೂಡಿದುವೆಂದೂ ಕೊನೆಯಲ್ಲಿ ಎಲ್ಲ ಜೀವದ ಮೂಲಾಧಾರ ವಾದ ಸ್ವಯಂಪುನರಾವೃತ್ತಿಗೊಳ್ಳುವ (ಸ್ವಸಂವರ್ಧಕ) ನ್ಯೂಕ್ಲಿಯಿಕ್ ಆಮ್ಲಗಳು ವಿಕಾಸಗೊಂಡಿದ್ದಿರಬಹುದೆಂದೂ ಭಾವಿಸಲಾಗಿದೆ. ಮೊತ್ತಮೊದಲ ಜೀವಿಯು ತೆಳುಪೊರೆಯಿಂದ ಆವೃತವಾದ ಅಂಥ ಅಣುಗಳಿಂದ ಕೂಡಿದ್ದಿರಬಹುದು

ಜೀವದಾಯಕ ಚುಂಬನ

(ವೈ) ಪೆಟ್ಟು ತಿಂದ ಅಥವಾ ನೀರಿನಲ್ಲಿ ಮುಳುಗಿದ್ದ ವ್ಯಕ್ತಿಗೆ ಮತ್ತೆ ಸರಾಗವಾಗಿ ಉಸಿರಾಡುವಂತೆ ಮಾಡಲು ರಕ್ಷಕ ತನ್ನ ಬಾಯಿಯನ್ನು ಅವನ ಬಾಯಿಗೆ ಇಟ್ಟು ಗಾಳಿ ಊದುವ ಮೂಲಕ ಅವನ ಶ್ವಾಸಕೋಶವನ್ನು ಉಬ್ಬಿಸಿ ಜೀವ ಉಳಿಸುವ ವಿಧಾನ. ಪುನರುಜ್ಜೀವಕ ಚುಂಬನ

Search Dictionaries

Loading Results

Follow Us :   
  Download Bharatavani App
  Bharatavani Windows App