भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಜ್ಞಾನದಂತ

(ವೈ) ನೋಡಿ: ಬುದ್ಧಿಹಲ್ಲು

ಜ್ಞಾನಮೀಮಾಂಸೆ

(ಸ) ತತ್ತ್ವಶಾಸ್ತ್ರದಲ್ಲಿ ಪ್ರಮಾಣ ಪ್ರಮೇಯ ವಿಚಾರ; ಜ್ಞಾನ ಉಂಟಾಗುವ ರೀತಿ ಮತ್ತು ಅದರ ಆಧಾರಗಳನ್ನು ಕುರಿತ ಶಾಸ್ತ್ರ ಭಾಗ

ಜ್ಞಾಪಕನಷ್ಟ

(ವೈ) ದಿಗಿಲು, ಆಯಾಸ, ಆಘಾತ ಮತ್ತು ಕಾಯಿಲೆಗಳಿಂದ ಮಿದುಳಿಗೆ ಬರುವ ಮರವು ರೋಗ. ನೋಡಿ: ಸ್ಮರಣನಾಶ

ಜ್ಞಾಪಕಾಂಗ

(ಕಂ) ನೋಡಿ: ಕಂಪ್ಯೂಟರ್

ಜ್ಯಾಕ್‌ಫ್ರೂಟ್

(ಸ) ಹಲಸಿನ ಹಣ್ಣು. ನೋಡಿ: ಹಲಸು

ಜ್ಯಾಮಿತಿ

(ಗ) ಬಿಂದು, ರೇಖೆ, ತಲಗಳಂಥ ಮೂಲ ಘಟಕಗಳಿಂದ ರಚಿಸಬಹುದಾದ ವಿವಿಧ ಆಕಾರ ವಿನ್ಯಾಸಗಳ ವಿಶ್ಲೇಷಣೆ. ಜ್ಯಾಮಿತಿಯಲ್ಲಿಯ ಪ್ರಕಾರಗಳು: ಯೂಕ್ಲಿಡ್, ನಿರ್ದೇಶಕ (ವಿಶ್ಲೇಷಣ), ವಿಕ್ಷೇಪ, ಬೈಜಿಕ ಮತ್ತು ಅಯೂಕ್ಲಿಡ್. ಯೂಕ್ಲಿಡ್ ಜ್ಯಾಮಿತಿ: ಕ್ರಿಪೂ ಸುಮಾರು ೩೦೦ರಲ್ಲಿ ಪ್ರಕಟವಾದ ಯೂಕ್ಲಿಡ್‌ನ ‘ಎಲಿಮೆಂಟ್ಸ್’ ಗ್ರಂಥದಲ್ಲಿ ಈ ವಿಭಾಗದ ಆರಂಭ ಕಾಣುತ್ತೇವೆ. ವ್ಯಾಖ್ಯೆಗಳನ್ನೂ ಆದ್ಯುಕ್ತಿಗಳನ್ನೂ ಆಧರಿಸಿ ಪ್ರಮೇಯಗಳನ್ನು ಸಾಧಿಸುವ ಒಂದು ಔಪಚಾರಿಕ ತಾರ್ಕಿಕ ರಚನೆಯಾಗಿ ಜ್ಯಾಮಿತಿಯನ್ನು ಈ ಪುಸ್ತಕದಲ್ಲಿ ಅಭಿವರ್ಧಿಸಿದೆ. ನಿರ್ದೇಶಕ/ವಿಶ್ಲೇಷಣ ಜ್ಯಾಮಿತಿ: ರೀನ್ ದೆಕಾರ್ತ್ (೧೫೯೬- ೧೬೫೦) ಜ್ಯಾಮಿತಿಯ ಪರಿಕಲ್ಪನೆಗಳನ್ನು ಬೀಜಗಣಿತದ ಭಾಷೆಯಲ್ಲಿ ನಿರೂಪಿಸಿ ಈ ವಿಭಾಗದ ಸಮಗ್ರ ಅಧ್ಯಯನಕ್ಕೆ ನೂತನ ಆಯಾಮ ನೀಡಿದರು. ವಿಕ್ಷೇಪ ಜ್ಯಾಮಿತಿ: ಗಿರಾರ್ಡ್ ಡೆಸಾರ್ಗ್ಯುಯಸ್ (೧೫೯೩-೧೬೬೨) ಜ್ಯಾಮಿತೀಯ ಆಕೃತಿಗಳ ನಡುವೆ ಯಥಾದೃಷ್ಟಿ ಗಳನ್ನು ಸಾಧಿಸುವ ದಿಶೆಯಲ್ಲಿ ಈ ವಿಭಾಗ ಮೈದಳೆಯಿತು. ಲಂಬವೃತ್ತೀಯ ಶಂಕುವನ್ನು ಸಮತಲದಿಂದ ವಿವಿಧ ಓರೆಗಳಲ್ಲಿ ಛೇದಿಸಿದಾಗ ದೊರೆಯುವ ವಿವಿಧ ಸಮತಲಾಕೃತಿಗಳ (ಇವು ಶಂಕುಜಗಳು) ನಡುವಿನ ಜ್ಯಾಮಿತೀಯ ಸಂಬಂಧಗಳ ಅನ್ವೇಷಣೆಯೇ ಇಲ್ಲಿಯ ಅಧ್ಯಯನ ವಸ್ತು. ಬೈಜಿಕ ಜ್ಯಾಮಿತಿ: ೧೯ನೆಯ ಶತಮಾನದಲ್ಲಿ ಜ್ಯಾಮಿತಿಗೆ ಸೇರ್ಪಡೆಯಾದ ನೂತನ ವಿಭಾಗಗಳ ಒಟ್ಟು ಹೆಸರು. n-ಆಯಾಮಗಳ ಆಕಾಶದ ವಿಶ್ಲೇಷಣ ಜ್ಯಾಮಿತಿ, ಲೆಬಾಚೇವ್‌ಸ್ಕಿ, ಬೋಲ್ಯಾಯ್ ಮತ್ತು ಗೌಸ್ ಸ್ವತಂತ್ರವಾಗಿ ಅಭಿವರ್ಧಿಸಿದ ಅಯೂಕ್ಲಿಡೀಯ ಜ್ಯಾಮಿತಿಗಳು. ಅಯೂಕ್ಲಿಡ್ ಜ್ಯಾಮಿತಿ: ಯೂಕ್ಲಿಡ್ ಜ್ಯಾಮಿತಿಯ ಆಧಾರಭಾವನೆಗಳಿಗಿಂತ ಭಿನ್ನವಾದವನ್ನು ಬಳಸಿಕೊಂಡು ಅಭಿವರ್ಧಿಸಿರುವ ಜ್ಯಾಮಿತಿ ವಿಭಾಗ. ಮುಖ್ಯವಾಗಿ ಯೂಕ್ಲಿಡ್‌ನ ೫ನೆಯ ಆದ್ಯುಕ್ತಿಯನ್ನು (ದತ್ತ ಬಿಂದುವಿನ ಮೂಲಕ ದತ್ತ ಸರಳರೇಖೆಗೆ ಒಂದು ಮತ್ತು ಒಂದು ಮಾತ್ರ ಸಮಾಂತರ ರೇಖೆಯನ್ನು ಎಳೆಯಬಹುದು ಎಂಬ ಅದ್ಯುಕ್ತಿಯನ್ನು) ಇದರಲ್ಲಿ ನಿರಾಕರಿಸಿದೆ

ಜ್ಯಾಮಿತೀಯ ವಿತರಣೆ

(ಸಂ) ಯಾವುದೇ ಕೈ ಎಸಕದಲ್ಲಿ ಗೆಲುವು/ಸೋಲು ತರಹದ ಎರಡೇ ಫಲಿತಗಳು ಸಾಧ್ಯವಿದ್ದು, ಪ್ರಯೋಗವನ್ನು ಮೊದಲ ಗೆಲುವು ದೊರೆಯುವ ತನಕ ಮುಂದುವರಿಸಿದರೆ, ಕೈ ಎಸಕಗಳ ಒಟ್ಟು ಸಂಖ್ಯೆ x ಯಾದೃಚ್ಛಿಕ. ಅದರ ಸಂಭವತೆ ವಿತರಣೆ P(K) = (1-p)k-1 p; K=1,2,… ಆಗಿರುತ್ತದೆ. ಇಲ್ಲಿ ಯಾವುದೇ ಕೈ ಎಸಕದಲ್ಲಿ ಗೆಲುವಿನ ಸಂಭವತೆಯನ್ನು P ಸೂಚಿಸುತ್ತದೆ. ಈ ವಿತರಣೆಗೆ ಜ್ಯಾಮಿತೀಯ ವಿತರಣೆಯೆಂದು ಹೆಸರು. ಇದು ಒಂದು ಸಾರ್ವತ್ರೀಕರಣ ಋಣದ್ವಿಪದ ವಿತರಣೆ

ಜ್ಯಾಮ್

(ತಂ) ಸಕ್ಕರೆ ಪಾಕದಲ್ಲಿ ಕುದಿಸಿ ರಸಾಯನದಂತೆ ಮಾಡಿದ ಹಣ್ಣು. ಮುರಬ್ಬ

ಜ್ಯಾವಲಿನ್

(ತಂ) ಕ್ರೀಡೆಯಲ್ಲಿ ಸಾಧನವಾಗಿ, ಯುದ್ಧದಲ್ಲಿ ಆಯುಧವಾಗಿ ಬಳಸುವ ಹಗುರವಾದ ಈಟಿ. ಭಲ್ಲೆ. ಭರ್ಜಿ

ಜ್ಯೂನಿಪರ್

(ಸ) ಕೋನಿಫೆರೀ ಗುಂಪಿನ ಕ್ಯೂಪ್ರೆಸೇಸೀ ಕುಟುಂಬಕ್ಕೆ ಸೇರಿದ ನಿತ್ಯಹರಿದ್ವರ್ಣ ಸಸ್ಯ. ಜ್ಯೂನಿಪರಸ್ ವೈಜ್ಞಾನಿಕ ನಾಮ. ೪೦ ಪ್ರಭೇದಗಳುಂಟು. ಉತ್ತರ ಗೋಳಾರ್ಧದಲ್ಲಿ ಹೆಚ್ಚು. ಹಿಮಾಲಯ ಪ್ರದೇಶದಲ್ಲಿ ಕಾಣಬರುತ್ತದೆ. ಪಿರಮಿಡ್ ಆಕಾರದಲ್ಲಿ ಹರಡಿಕೊಂಡು ಬೆಳೆಯುವುದರಿಂದ ಅಂದಕ್ಕಾಗಿ ರಸ್ತೆ ಬದಿಗಳಲ್ಲೂ ಉದ್ಯಾನಗಳಲ್ಲೂ ಬೆಳೆಸುತ್ತಾರೆ. ಕಾಯಿಗಳಲ್ಲೂ ಅವುಗಳ ಎಣ್ಣೆಯಲ್ಲೂ ಔಷಧೀಯ ಗುಣಗಳುಂಟು. ಚೌಬೀನೆಯಿಂದ ಉಪಕರಣ ಮತ್ತು ಪೆನ್ಸಿಲ್ ತಯಾರಿಸುತ್ತಾರೆ

ಜ್ಯೋತಿಷ ಶಾಸ್ತ್ರ

(ಮ) ನೋಡಿ: ಫಲಜ್ಯೋತಿಷ

ಜ್ವರ ವಿರಾಮ ಸ್ಥಿತಿ

(ವೈ) ಜ್ವರ ಇಲ್ಲದಿರುವಿಕೆ

ಜ್ವಲನ

(ಸಾ) ಬೆಂಕಿ ಉರಿಯುವುದು, ಉರಿತ. ಉರಿ. ಸುಡು. (ತಂ) ಮಿಶ್ರಲೋಹವೊಂದನ್ನು ಅತ್ಯುನ್ನತ ಉಷ್ಣತೆಗೆ ಕಾಸಿ ಸ್ಥಳೀಯ ಸಂಲಯನ ಅಥವಾ ಅತಿ ಹೆಚ್ಚಿನ ಆಕ್ಸೈಡ್ ವೇಧಕತೆ ಉಂಟಾಗುವಂತೆ ಮಾಡಿ ಆ ಮಿಶ್ರಲೋಹವನ್ನು ದುರ್ಬಲವೂ ಭಿದುರವೂ ಆಗುವಂತೆ ಮಾಡುವುದು. (ಭೂವಿ) ಕೆಲವು ಪ್ರಶಸ್ತ ರತ್ನಗಳನ್ನು ಶಾಖಕ್ಕೆ ಒಡ್ಡಿ ಅವುಗಳ ಬಣ್ಣ ಬದಲಿಸುವುದು

ಜ್ವಲನ

(ಭೌ) ಅಂತರ್ದಹನ ಎಂಜಿನ್ನಿನ ವರ್ತುಲ ನಾಳಿ ಯಲ್ಲಿ ಅನಿಲ ಮಿಶ್ರಣವನ್ನು ವಿದ್ಯುತ್ ಕಿಡಿಯಿಂದ ಹೊತ್ತಿಸುವುದು (ಆವಿ) ನೋದನಕಾರಿಗಳ ದಹನವನ್ನು ಪ್ರಾರಂಭಿಸುವ ಮೂಲಕ ರಾಕೆಟ್ ಕಾರ್ಯಾರಂಭಿಸುವಂತೆ ಮಾಡುವ ಸಾಧನ

ಜ್ವಲನ ಬಿಂದು

(ಭೌ) ಮಿಶ್ರಾನಿಲ ಹೊತ್ತಿಕೊಂಡು ಉರಿಯುವ ಉಷ್ಣತಾಮಟ್ಟವನ್ನು ಸೂಚಿಸುವ ಬಿಂದು

ಜ್ವಲನಕಾರಿ

(ತಂ) ಗುರಿ ತಲಪಿದಾಗ ಹೊತ್ತಿ ಉರಿಯುವ ಸಿಡಿಮದ್ದುಗಳಿಂದ ತುಂಬಿದ

ಜ್ವಲಿಸು

(ರ) ಅನಿಲ ಮಿಶ್ರಣವನ್ನು ಅದು ಹೊತ್ತಿಕೊಂಡು ಉರಿಯುವವರೆಗೆ ಕಾಸು. ಯಾವುದೇ ಪದಾರ್ಥವನ್ನು ರಾಸಾಯನಿಕ ಬದಲಾವಣೆಯಾಗುವಷ್ಟು ತಾಪಕ್ಕೆ ಕಾಸು

ಜ್ವಾಲಕ

(ತಂ) ಸೀಮೆ ಎಣ್ಣೆಯ ಅಥವಾ ಉರಿಯುವ ಅನಿಲದ ದೀವಿಗೆಯಲ್ಲಿ ದೀಪ ಜ್ವಾಲೆಗೆ ಆಕಾರ ಕೊಡುವ ಭಾಗ; ಬೆಂಕಿ ಉರಿದು ನಾಲಗೆ ಚಾಚಲು ನೆರವಾಗುವ ದೀಪದ ಭಾಗ

ಜ್ವಾಲಾಜಿಹ್ವೆ

(ಖ) ಸೌರವರ್ಣಮಂಡಲದ ಮೇಲು ಸ್ತರದಲ್ಲಿ ಕಾಣಿಸುವ, ಪ್ರಧಾನವಾಗಿ ಹೈಡ್ರೊಜನ್ನಿನಿಂದ ಕೂಡಿದ, ದೀಪ್ತ ಅನಿಲ ರಾಶಿ. ಕ್ಷಿತಿಜೀಯ ಕಾಂತಕ್ಷೇತ್ರಗಳ ಪ್ರದೇಶದಲ್ಲಷ್ಟೆ ಗೋಚರ. ಏಕೆಂದರೆ ಇವು ಸೌರ ಗುರುತ್ವಕ್ಕೆ ವಿರುದ್ಧವಾಗಿ ಈ ದೀಪ್ತ ಅನಿಲ ರಾಶಿಗಳಿಗೆ ಬೆಂಬಲ ಒದಗಿಸುತ್ತವೆ. ಇವು ಸೂರ್ಯಗ್ರಹಣದ ಕಾಲದಲ್ಲಿ ಸೂರ್ಯಬಿಂಬದ ಅಂಚಿನಲ್ಲಿ ತುಂಬ ಚೆನ್ನಾಗಿ ಕಂಡುಬರುವುವಾದರೂ ಇವನ್ನು ಸ್ಪೆಕ್ಟ್ರೊಹೀಲಿಯೊಗ್ರಾಫ್ ಬಳಸಿಕೊಂಡು ದ್ಯುತಿ ವಲಯದ ಮೇಲೆ ಆಗಾಗ್ಗೆ ಕಾಣಬಹುದು

ಜ್ವಾಲಾನಿಲ ರಂಧ್ರಗಳು

(ಭೂವಿ) ಜ್ವಾಲಾಮುಖಿಯ ಶಂಕುವಿನ ಪಕ್ಕಗಳಲ್ಲಿ ಅಥವಾ ಜ್ವಾಲಾಮುಖಿಯ ಕುಳಿಯ ಮೇಲೆಯೇ ಇರುವ ಸಣ್ಣ ತೆರಪುಗಳು. ಇವುಗಳ ಮೂಲಕ ಅನಿಲೋತ್ಪನ್ನಗಳು ಹೊರಹೊಮ್ಮುತ್ತವೆ

Search Dictionaries

Loading Results

Follow Us :   
  Download Bharatavani App
  Bharatavani Windows App