Navakarnataka Vijnana Tantrajnana Padasampada (2011)
Navakarnataka Publications Private Limited
ಚಕಮಕಿ ಕಲ್ಲು
(ಭೂವಿ) ಪ್ರಧಾನವಾಗಿ ಸಿಲಿಕಾನ್ ಡೈ ಆಕ್ಸೈಡ್ನಿಂದ ರೂಪಿತವಾದ, ಅತ್ಯಂತ ಗಡುಸಾದ, ಬೂದು ಅಥವಾ ಬಲುಮಟ್ಟಿಗೆ ಕಪ್ಪು ಬಣ್ಣದ, ಅತ್ಯಂತ ಹರಿತವಾದ ಅಂಚುಗಳುಳ್ಳ ಬೆಣಚಿನ ಮಾದರಿ
ಚಕಮಕಿ ಗಾಜು
(ತಂ) ಸೀಸದ ಸಿಲಿಕೇಟ್ ಅಳವಡಿಸಿರುವ ಒಂದು ಬಗೆಯ ಗಾಜು. ದ್ಯುತಿ ಪ್ರಯೋಗಗಳಲ್ಲಿ ಬಳಸುವ ಮಸೂರ. ಪ್ರಿಸ್ಮ್ ಮೊದಲಾದ ಸಾಧನಗಳ ತಯಾರಿಕೆಗೆ ಸೂಕ್ತವಾದ ಉತ್ತಮ ಪಾರದರ್ಶಕ ಗಾಜು
ಚಕ್ಕಳ
(ಪ್ರಾ) ಹೆಚ್ಚಾಗಿ ಸಾಕು ಪ್ರಾಣಿಗಳ, ಆದರೆ ತಿಮಿಂಗಿಲ, ಸೀಲ್, ಷಾರ್ಕ್, ಮೊಸಳೆ, ಹಾವು, ಕಾಂಗರೂ, ಒಂಟೆ, ಉಷ್ಟ್ರಪಕ್ಷಿ ಮುಂತಾದವೂ ಸೇರಿದಂತೆ ಕೆಲ ಬಗೆಯ ಪ್ರಾಣಿಗಳ, ಚರ್ಮವನ್ನು ಉಪಯೋಗಕ್ಕೆ ಬರುವಂತೆ ಹದ ಮಾಡಿ ಪಡೆದ ಪದಾರ್ಥ. ಯುಕ್ತವಾಗಿ ಸಂಸ್ಕರಿಸಿದ ಸೆಲ್ಯೂಲೋಸ್ ನೈಟ್ರೇಟ್, ಪಿವಿಸಿ ಅಥವಾ ಪಾಲಿಯುರೆಥೇನ್ಗಳಿಂದ ಕೃತಕ ತೊಗಲನ್ನು ತಯಾರಿಸುವುದುಂಟು. ತೊಗಲು
ಚಕ್ರಜ
(ಗ) ವೃತ್ತವನ್ನು ಸರಳರೇಖೆಯ ನೇರ ಉರುಳಿಸುವಾಗ ಪರಿಧಿಯಲ್ಲಿಯ ಸ್ಥಿರ ಬಿಂದು ರೇಖಿಸುವ ಪಥ. ಇದು ಕಮಾನಿನ ಆಕಾರದಲ್ಲಿರುವುದು. ನೋಡಿ: ಟ್ರೊಕಾಯ್ಡ್
ಚಕ್ರವಾತ
(ಭೂವಿ) ಉಷ್ಣವಲಯದಲ್ಲಿ ಪ್ರಕಟವಾಗುವ ಸುಂಟರಗಾಳಿ. ಈ ಪ್ರದೇಶಗಳಲ್ಲಿ ವಾಯುಮಂಡಲ ಒತ್ತಡ ತೀವ್ರವಾಗಿ ಕುಸಿದಾಗ ಗಾಳಿ ರಭಸದಿಂದ ತಿರುಗತೊಡಗುತ್ತದೆ. ಇದರ ಕೇಂದ್ರದಲ್ಲಿ ಒತ್ತಡ ನಿಮ್ನತಮವಾಗಿದ್ದು ಇಲ್ಲಿಂದ ಗಾಳಿಯ ಆವರ್ತನೆ ಆರಂಭವಾಗುತ್ತದೆ. ಸಮಭಾಜಕದ ದಕ್ಷಿಣದಲ್ಲಿ ಆವರ್ತನ ದಿಶೆ ಪ್ರದಕ್ಷಿಣ, ಉತ್ತರದಲ್ಲಿ ಅಪ್ರದಕ್ಷಿಣ. ಹಿಂದೂ ಮಹಾಸಾಗರದಲ್ಲಿ ಉಗಮಿಸುವ ಚಂಡಮಾರುತವು ಬಂಗಾಳ ಕೊಲ್ಲಿಗೂ ಅರೇಬಿಯನ್ ಸಮುದ್ರಕ್ಕೂ ನುಗ್ಗಿ ಆಯಾ ತೀರಗಳಲ್ಲಿ ಮತ್ತು ಒಳನಾಡುಗಳಲ್ಲಿ ಅಪಾರ ಜನ, ಧನ ಹಾನಿಗೆ ಕಾರಣ ವಾಗುತ್ತದೆ. ಚಂಡಮಾರುತ, ಸುಂಟರಗಾಳಿ
ಚಕ್ರಹಲ್ಲು
(ತಂ) ಸರಪಣಿಯ ಕೊಂಡಿಗಳಲ್ಲಿ ಅಥವಾ ಚಲಚ್ಚಿತ್ರ ಫಿಲ್ಮ್ ಇತ್ಯಾದಿಗಳ ಸಾಲುರಂಧ್ರಗಳಲ್ಲಿ ಕೂರುವಂತೆ ಚಕ್ರದ ಅಥವಾ ಸಿಲಿಂಡರಿನ ಪರಿಧಿಯ ಮೇಲೆ ಮಾಡಿರುವ ಹಲ್ಲುಗಳಲ್ಲೊಂದು
ಚಕ್ರೀಯ ಏರಿಳಿತ
(ಸಂ) ಚರಗಳ ಕಾಲ ಸರಣಿಯಲ್ಲಿ ಕಂಡುಬರುವ, ಒಂದು ವರ್ಷಕ್ಕಿಂತ ದೀರ್ಘ ಅವಧಿಯ ಏರಿಳಿತ. ವ್ಯಾಪಾರ ಚಕ್ರಗಳು ಇದಕ್ಕೆ ಉದಾಹರಣೆ
ಚಕ್ರೀಯ ಕ್ರಮಯೋಜನೆ
(circular) permutation (ಗ) ಗಣವೊಂದರ ಪ್ರತಿಯೊಂದು ಧಾತುವೂ ಉತ್ತರ ಪದವೊಂದನ್ನು ಪ್ರತಿಸ್ಥಾಪಿಸುವ ಅಥವಾ ಪ್ರತಿಯೊಂದು ಧಾತುವೂ ಉತ್ತರ ಪದದಿಂದ ಪ್ರತಿಸ್ಥಾಪಿಸಲ್ಪಡುವ ಕ್ರಮ ಯೋಜನೆ. ಉದಾ: xxy, yyz, zzx ಇದು x, y ಮತ್ತು zಗಳಲ್ಲಿ ಒಂದು ಚಕ್ರೀಯ ಕ್ರಮಯೋಜನೆ
ಚಕ್ರೀಯ ಚತುರ್ಭುಜ
(ಗ) ಈ ಚತುರ್ಭುಜದ ನಾಲ್ಕು ಶೃಂಗಗಳೂ ಒಂದೇ ವೃತ್ತ ಪರಿಧಿಯ ಮೇಲಿರುವುವು
ಚಂಚಲ ತಾರೆ
(ಖ) ಕಾಲದೊಂದಿಗೆ ಕಾಂತಿಮಾನ ವ್ಯತ್ಯಾಸವಾಗುವ ಯಾವುದೇ ತಾರೆ. ಈ ಚಾಂಚಲ್ಯ ಕ್ರಮಬದ್ಧವಾಗಿ ಇರಬಹುದು ಇಲ್ಲದಿರಬಹುದು. ನಕ್ಷತ್ರಗಳ ಗೋಚರ ಉಜ್ಜ್ವಲತಾಂಕ ವಿವಿಧ ಕಾರಣಗಳಿಗಾಗಿ ಬದಲಾಗಬಹುದು. ೧. ಗ್ರಹಣಕಾರಕ ಯಮಳದಲ್ಲಿ ಒಂದು ನಕ್ಷತ್ರ ಇನ್ನೊಂದರ ಗ್ರಹಣಕ್ಕೆ ಕಾರಣ ವಾದಾಗ ಇನ್ನೊಂದರ ಉಜ್ಜ್ವಲತೆ ಕ್ರಮೇಣ ಮಸುಕಾಗಿ ಗ್ರಹಣ ಮೋಕ್ಷವಾದಾಗ ಮತ್ತೆ ಉಜ್ಜ್ವಲಿಸುತ್ತದೆ. ಚಂಚಲ ನಕ್ಷತ್ರ. ೨. ಸಿಫೀಡ್ ಚಂಚಲ ತಾರೆಗಳಂಥವು ಆಂತರಿಕ ಕಾರಣಗಳಿಂದಾಗಿ ಉಜ್ಜ್ವಲತೆಯಲ್ಲಿ ನಿಯತಕಾಲಿಕ ಏರಿಳಿತಗಳನ್ನು ಪ್ರದರ್ಶಿಸುತ್ತವೆ. ನೋಡಿ: ಸಿಫೀಡ್ ಚಂಚಲ ತಾರೆಗಳು
ಚಂಚಲಪ್ರಭೆ
(ಸಾ) ಕ್ಷೀಣವಾಗಿ ಅಥವಾ ಚಂಚಲವಾಗಿ ಮಿನುಗುವುದು. ಮಂಕಾಗಿ ಅಥವಾ ಆಗೊಮ್ಮೆ ಈಗೊಮ್ಮೆ ಹೊಳೆಯುವುದು. ಮಿಣುಕು
ಚಂಡಮಾರುತ
(ಭೂ) ಭೂಮಿಯಿಂದ ೧೦ ಮೀಟರ್ ಎತ್ತರದಲ್ಲಿ ೩೪ ನಾಟ್ (ಗಂಟೆಗೆ ೬೩ ಕಿಮೀ) ವೇಗದಲ್ಲಿ ಬೀಸುವ ಗಾಳಿ. ಬೋಫರ್ಟ್ ಮಾನದಲ್ಲಿ ಇದರ ಬಲ ೮. ಬಿರುಗಾಳಿ
ಚಂಡುಪಾಚಿ
(ಸಾ) ನೋಡಿ: ಗದ್ದೆ ಹಾವಸೆ
ಚಂಡುಮಂಜರಿ
(inflorescence) (ಸ) ಒಂದು ಬಗೆಯ ರೇಸಿಮೋಸ್ ಹೂಗೊಂಚಲು. ಇದರ ಪೀಠ ಚಪ್ಪಟೆ ತಟ್ಟೆಯಂತಿದ್ದು ಮೇಲಕ್ಕೆ ಸಣ್ಣ ಗಾತ್ರದ ತೊಟ್ಟಿಲ್ಲದ ಹೂಗಳು ಒತ್ತೊತ್ತಾಗಿ ಜೋಡಣೆಗೊಂಡಿರುತ್ತವೆ. ಇಡೀ ಗೊಂಚಲಿನ ಸುತ್ತ ಪತ್ರಕಗಳ ಆವರಣವಿದ್ದು ಅದು ಒಟ್ಟಾರೆ ಒಂಟಿ ಹೂವಿನಂತೆ ಕಾಣುತ್ತದೆ. ಈ ಬಗೆಯ ಗೊಂಚಲನ್ನು ಆಸ್ಟರೇಸೀ ಕುಟುಂಬದ ಸಸ್ಯಗಳಲ್ಲಿ ಕಾಣಬಹುದು. ಉದಾ: ಸೂರ್ಯಕಾಂತಿ
ಚತುರಂಗುಲಿ
(ಪ್ರಾ) ನೋಡಿ: ಟೆಟ್ರಡ್ಯಾಕ್ಟಿಲ್
ಚತುರ್ಗುಣಿತ
(ಗ) ನಾಲ್ಕು ಮಡಿ, ನಾಲ್ಕು ಪಟ್ಟು
ಚತುರ್ಗುಣಿತ
(ಪ್ರಾ) ಪ್ರತಿಯೊಂದು ಗಣದಲ್ಲಿಯೂ ನಾಲ್ಕು ಕ್ರೋಮೊಸೋಮ್ಗಳಿರುವ ಇಂಥ ನಾಲ್ಕು ಗಣಗಳಿರುವ ಜೀವಿ
ಚತುರ್ಘಾತೀಯ
(ಗ) ಡಿಗ್ರಿ ೪ರ ಯಾವುದೇ ಬೀಜಗಣಿತ ಸಮೀಕರಣ. ನೋಡಿ: ಚತುರ್ಘಾತೀಯ ಸಮೀಕರಣ
ಚತುರ್ಘಾತೀಯ ಸಮೀಕರಣ
(ಗ) ax4+bx3+cx2+dx+c=0 ರೂಪದ, ಚರವು ನಾಲ್ಕನೆಯ ಘಾತದ್ದಾಗಿರುವ, ಸಮೀಕರಣ
ಚತುರ್ಥಕ