भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಚೂರ್ಣ ಪ್ರರೂಪ

(ತಂ) ೧. ಯಾವುದೇ ಪದಾರ್ಥದ ಪುಡಿಯನ್ನು ಎಕ್ಸ್-ಕಿರಣ ವಿವರ್ತನ ವಿಧಾನದಿಂದ ವಿಶ್ಲೇಷಿಸಿದಾಗ ಫಿಲ್ಮಿನ ಮೇಲೆ ಮೂಡುವ ವಿನ್ಯಾಸ. ೨. ಕಾಂತ ಪದಾರ್ಥದ ಮೇಲ್ಮೈ ಮೇಲೆ ಹರಡಿದ ಅತಿ ಸೂಕ್ಷ್ಮ ಪುಡಿ ಅಥವಾ ಕಲಿಲ ಕಣಗಳು ರೂಪಿಸುವ ವಿನ್ಯಾಸ

ಚೂರ್ಣ ಲೋಹವಿಜ್ಞಾನ

(ತಂ) ಟಂಗ್‌ಸ್ಟನ್ ನಂಥ ಉಷ್ಣರೋಧಕ ಲೋಹಗಳನ್ನು ಬೇಕಾದ ಆಕಾರಕ್ಕೆ ರೂಪಿಸುವ ವಿಧಾನ. ಇದರಲ್ಲಿ ಪುಡಿ ಮಾಡಿದ ಲೋಹವನ್ನು ಅಚ್ಚಿಗೆ ಹಾಕಿ, ಒತ್ತಿ, ಅನಂತರ ಉನ್ನತ ಉಷ್ಣತೆಯಲ್ಲಿ ಕಾಸಲಾಗುತ್ತದೆ

ಚೂರ್ಣಕಾರಿ

(ತಂ) ಘನ ಪದಾರ್ಥಗಳ ಸ್ಫಟಿಕೀಯ ಫಲಕಗಳಲ್ಲಿ ಸೀಳು ಮಾಡಿ ಲಭಿಸಿದ ತುಂಡುಗಳನ್ನು ಜಜ್ಜಿ ನವುರಾದ ಪುಡಿ ಮಾಡುವ ಸಾಧನ

ಚೂಷಕ

(ವೈ) ಕೊಳವೆಯ ಮೂಲಕ ವಾಯು, ದ್ರವ ಅಥವಾ ಅನಿಲವನ್ನು ಹೀರುವ ಸಲಕರಣೆ. ಕುರುವಿನೊಳಗಿನ ಕೀವನ್ನು ನಿರ್ವಾತ ಕೊಳವೆಯ ಮೂಲಕ ಹೊರಸೆಳೆಯುವ ಸಲಕರಣೆ. ಪೂಯಚೂಷಕ

ಚೂಷಕಾಂಗ

(ಸ) ಪರೋಪಜೀವಿಯ ಹೊರ ಮೈಯಲ್ಲಿರುವ ಒಂದು ಅಂಗಭಾಗ. ಇದು ಆತಿಥೇಯ ಗಿಡದ ಜೀವಸತ್ತ್ವದೊಳಕ್ಕೆ ಅಥವಾ ಕೋಶದೊಳಕ್ಕೆ ತೂರಿಕೊಂಡು ಹೋಗಿ ಅದರಿಂದ ಪೋಷಕಗಳನ್ನು ಹೀರಿ ಅವನ್ನು ಪರೋಪಜೀವಿಗೆ ಒದಗಿಸುತ್ತದೆ

ಚೆಮ್ಮೀನು

(ಪ್ರಾ) ನೋಡಿ: ಕೆಮ್ಮೀನು

ಚೆರಿ

(ಸ) ರೋಸೇಸೀ ಕುಟುಂಬಕ್ಕೆ ಸೇರಿದ ಜನಪ್ರಿಯ ಹಣ್ಣಿನ ಮರ. ಬಾದಾಮಿ, ಸಕ್ಕರೆ ಬಾದಾಮಿ, ಪ್ಲಮ್, ಪೀಚ್ ಮರಗಳಿಗೆ ಹತ್ತಿರ ಸಂಬಂಧಿ. ವೈಜ್ಞಾನಿಕ ನಾಮ ಪ್ರೂನಸ್. ಸಿಹಿ ಚೆರಿ, ಹುಳಿ ಚೆರಿ ಎಂಬ ಪ್ರಭೇದಗಳುಂಟು. ಹಣ್ಣಿಗಾಗಿಯೂ ರಸ್ತೆ ಪಕ್ಕಗಳಲ್ಲಿ ಅಲಂಕಾರಕ್ಕಾಗಿಯೂ ಬೆಳೆಸು ತ್ತಾರೆ. ಇದರಿಂದ ಚೌಬೀನೆ ಸೊಗಸಾದ ಮೆರುಗು ತೆಗೆದುಕೊಳ್ಳುವುದರಿಂದ ಪೀಠೋಪಕರಣಗಳ ತಯಾರಿಕೆಯಲ್ಲಿ ಬಳಕೆ

ಚೆಲುವೆ ಪುಡಿ

(ರ) Ca(ClO3)2. CaCl2. Ca(OH)2. H2O ಎಂಬ ಮಿಶ್ರಣ. ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಮತ್ತು ಕ್ಲೋರೀನ್‌ಗಳಿಂದ ಪಡೆಯುವ ಇದೊಂದು ಕ್ರಿಮಿನಾಶಕ. ನೀರಿನ ಶುದ್ಧೀಕರಣದಲ್ಲಿ ಬಳಸಲಾಗುತ್ತದೆ

ಚೆಲುವೆಗೊಳಿಸು

(ತಂ) ಕಚ್ಚಾ ಕಾಗದ, ಬಟ್ಟೆ, ಎಳೆ ಮುಂತಾದವನ್ನು ಅಪೇಕ್ಷಿತ ಶುಭ್ರತೆಗೆ ತರುವುದು. ಬಣ್ಣ ಕಳೆ

ಚೇತರಿಕೆ

(ವೈ) ಕಾಯಿಲೆಯಿಂದ ಗುಣ ಹೊಂದು ತ್ತಿರುವುದು. ವ್ಯಾಧಿಮುಕ್ತವಾಗಿ ಆರೋಗ್ಯದ ಮರುಗಳಿಕೆ. ಆರೈಕೆಯಲ್ಲಿರುವುದು. ಹುಷಾರಾಗುತ್ತಿರುವುದು

ಚೇನ್

(ಭೂವಿ) ಪ್ರತಿಯೊಂದೂ ೭.೯೨ ಇಂಚು ಉದ್ದದ ೧೦೦ ಸರಳುಗಳನ್ನು ಸೇರಿಸಿ ತಯಾರಿಸಿದ ಸರಪಳಿ. ಭೂಮೋಜಣಿಯಲ್ಲಿ ಬಳಕೆಯಲ್ಲಿರುವ ಮಾನಕ. ೧ ಚೇನ್=೬೬ ಅಡಿಗಳು. ೧೦೦ ಚದರ ಚೇನ್‌ಗಳು = ೧ ಎಕ್ರೆ = ೪೦೪೬.೭೨೪ ಚಮೀ. (೧ ಅಡಿ=೧೨ ಇಂಚ್=೩೦.೪೮ಸೆಂಮೀ)

ಚೇರಲೈಟ್

(ಭೂವಿ) (CeCaThu) (Psi)O4 ವಿರಳ ಧಾತುಗಳ ಒಂದು ವಿಕಿರಣಪಟು. ಖನಿಜ. ಮೋನಜೈಟ್‌ನ

ಚೇಳು

(ಪ್ರಾ) ಆರ‍್ಯಾಕ್ನಿಡ ವರ್ಗದ ಸ್ಕಾರ್ಪಿಯನೀಸ್ ಗಣ ಹಾಗೂ ಸ್ಕಾರ್ಪಿಯಾನಿಡೀ ಕುಟುಂಬಕ್ಕೆ ಸೇರಿದ ದೊಡ್ಡ ಸಂಧಿಪದಿ. ಬಾಲದ ತುದಿಯಲ್ಲಿ ವಿಷ ಗ್ರಂಥಿಯುಳ್ಳ ಕೊಂಡಿ ಉಂಟು. ೪೦೦ಕ್ಕೂ ಹೆಚ್ಚು ಪ್ರಭೇದಗಳಿವೆ. ನಿಶಾಚರಿ. ಒಂಟಿ ಜೀವಿ. ಸಣ್ಣಪುಟ್ಟ ಕೀಟಗಳು ಮುಖ್ಯ ಆಹಾರ. ಆಹಾರ ಇಲ್ಲದೆ ಬಹಳ ದಿನ, ಕೆಲವೊಮ್ಮೆ ವರ್ಷಕ್ಕೂ ಹೆಚ್ಚು ಕಾಲ ಬದುಕಿರಬಲ್ಲದು. ಸಂತಾನೋತ್ಪತ್ತಿ ಕಾಲದಲ್ಲಿ ಸಂಭೋಗ ಕ್ರಿಯೆಯ ಅನಂತರ ಹೆಣ್ಣು ಚೇಳು ಗಂಡು ಚೇಳನ್ನು ತಿಂದುಬಿಡುತ್ತದೆ. ಅಂಡ ಬೆಳೆದು ಮರಿಯಾಗಿ ಗರ್ಭದಿಂದ ಹೊರ ಬಂದ ಮರಿಚೇಳು ಕೆಲ ಕಾಲ ತಾಯಿಯ ಬೆನ್ನ ಮೇಲೆ ಸವಾರಿ ಮಾಡುತ್ತಿದ್ದು ಕೊಂಚ ಬೆಳೆದ ಬಳಿಕ ಕೆಳಗಿಳಿಯುತ್ತದೆ. ತಾಯಿ ಬೆನ್ನನ್ನು ಭೇದಿಸಿಕೊಂಡು ಮರಿ ಹೊರಬರುತ್ತದೆ ಎಂಬ ತಪ್ಪು ಭಾವನೆಗೆ ಎಡೆಮಾಡಿಕೊಟ್ಟಿದೆ

ಚೇಳೇಡಿ

(ಪ್ರಾ) ನೋಡಿ: ಲಾಬ್‌ಸ್ಟರ್

ಚೈತನ್ಯ

(ವೈ) ಓಜಸ್ಸು

ಚೈನ್

(ಪ್ರಾ) ಪ್ರಾಣಿಯ ಬೆನ್ನು ಮೂಳೆ/ಕಶೇರು. (ತಂ) ಹಡಗಿನ ತಳ ಮತ್ತು ಪಕ್ಕ ಸೇರುವ ಏಣು. ಕೂಡೇಣು

ಚೋಕ್

(ತಂ) ೧. ಕಾರ್ಬ್ಯುರೇಟರಿನ ವಾಯುದ್ವಾರದಲ್ಲಿ ಇರುವ ಕವಾಟ. ೨. ಪರ್ಯಾಯ ವಿದ್ಯುತ್ ಪ್ರವಾಹ ಪಥದಲ್ಲಿ ಅದರ ಹರಿಯುವಿಕೆಯನ್ನು ತಡೆಯಲು ಸೇರಿಸುವ, ವಿದ್ಯುನ್ನಿರೋಧ ಕಡಿಮೆ ಮತ್ತು ಅಧಿಕ ಪ್ರೇರಕತೆ ಇರುವ ತಂತಿ ಸುರುಳಿ. ರೋಧಕ ಸುರುಳಿ

ಚೋಂದ ಕಪ್ಪೆ

(ಪ್ರಾ) ಕಪ್ಪೆ ಮರಿ. ಮೊಟ್ಟೆಯಿಂದ ಹೊರಕ್ಕೆ ಬಂದಾಗ ದುಂಡಗಿನ ದೇಹ ಮತ್ತು ನೀಳವಾದ ಕಿವಿರುಸಹಿತ ಬಾಲ ಇರುತ್ತದೆ. ಮರಿಯು ಬೆಳೆದಂತೆ ಈ ಕಿವಿರುಗಳೂ ಬಾಲವೂ ಬಿದ್ದು ಹೋಗುತ್ತವೆ. ತೊಂದೆ. ಗೊದಮೊಟ್ಟೆ

ಚೋಷಣ

(ರ) ಹೊರಗಣ ವಾಯುವಿನ ಒತ್ತಡದಿಂದ ದ್ರವ ಮೊದಲಾದವನ್ನು ತೆರಪಾದ ಸ್ಥಳಕ್ಕೆ ಒಳ ನುಗ್ಗಿಸುವುದು, ಮೇಲ್ಮೈಗಳನ್ನು ಹೀರಿಕೆಯಿಂದ ಪರಸ್ಪರ ಕಚ್ಚಿಸುವುದು/ಒಳಗಿನ ವಾಯು ಮೊದಲಾದವನ್ನು ತೆಗೆದುಹಾಕುವುದು. ಹೀರಿಕೆ. ಸೇದಿಕೆ

ಚೌಕ

(ಗ) ಈ ಚತುರ್ಭುಜದ ಎಲ್ಲ ಭುಜಗಳೂ ಸಮ ಮತ್ತು ಪ್ರತಿಯೊಂದು ಕೋನವೂ ಲಂಬಕೋನ

Search Dictionaries

Loading Results

Follow Us :   
  Download Bharatavani App
  Bharatavani Windows App