भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಚಿರಾಯತ

(ಸ) ಜೆನ್ಸಿಯನೇಸೀ ಕುಟುಂಬದ ಮೂಲಿಕೆ ಸಸ್ಯ. ಸ್ವರ್ಷಿಯ ಚೆರೆಟ ವೈಜ್ಞಾನಿಕ ನಾಮ. ಸಾಮಾನ್ಯವಾಗಿ ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ. ಆರ್ಥಿಕ ಪ್ರಾಮುಖ್ಯವಿದೆ. ಒಫೆಲಿಕ್ ಮತ್ತು ಚಿರಾಚಿನ್ ಆಮ್ಲಗಳು ಇರುವುದರಿಂದ ಕಹಿ ರುಚಿ. ಔಷಧೀಯ ಮಹತ್ತ್ವವುಂಟು

ಚಿಲುಮೆ

(ಭೂವಿ) ಸಾಂದ್ರವಾಗಿ ಶೇಖರಗೊಂಡ ಅಂತರ್ಜಲವು ನೆಲಮಟ್ಟವನ್ನು ತಲಪಿದಾಗ ಇಲ್ಲವೇ ಬೇರೆಡೆ ಮಣ್ಣಿನ ಪದರದಿಂದ ಮುಕ್ತವಾದಾಗ ಹೊರಹೊಮ್ಮುವ ನೀರಿನ ಊಟೆ

ಚಿಲುಮೆ ಬಾವಿ

(ಭೂವಿ) ಅವ್ಯಾಪ್ತ ಸ್ತರಗಳ ಕೆಳಗಿರುವ ಜಲಧರ ವ್ಯಾಪ್ತ ಸ್ತರಕ್ಕೆ ಕೊರೆದ ತೂತಿನಿಂದ ಮೇಲಕ್ಕೆ ಸತತವಾಗಿ ನೀರು ಚಿಮ್ಮುತ್ತಿರುವುದು; ವ್ಯಾಪ್ತಸ್ತರ ಹಲವಾರು ಎಡೆಗಳಲ್ಲಿ ತೂತು ಕೊರೆದ ನೆಲೆಗಿಂತ ಎತ್ತರಕ್ಕೆ ಚಾಚಿಕೊಂಡಿದ್ದು ಈ ಕಾರಣದಿಂದ ಉದ್ಭವಿಸುವ ದ್ರವದ ಸ್ಥಿತ್ಯಾತ್ಮಕ ಒತ್ತಡವು ತೂತಿನಿಂದ ನೀರನ್ನು ಬುಗ್ಗೆ ಏಳುವಂತೆ ಮಾಡುತ್ತದೆ. ಫ್ರಾನ್ಸಿನ ಆರ್ಟ್ವಾ ಪ್ರಾಂತದಲ್ಲಿ ಮೊದಲು ಇಂಥ ಬಾವಿ ತೋಡಿದುದರಿಂದ ಇದಕ್ಕೆ ಆರ್ಟೀಸಿಯನ್ ವೆಲ್ ಎಂಬ ಹೆಸರಿದೆ. ಬುಗ್ಗೆ ಬಾವಿ

ಚಿಲ್

(ಸಾ) ದೇಹಕ್ಕೆ ಹಿತವಲ್ಲದ ಗಾಳಿ, ನೀರು ಮೊದಲಾದ ವುಗಳ ಶೀತ, ತಂಡಿ, ಚಳಿ. (ತಂ) ಲೋಹಶೀತಕ. ಎರಕದ ಲೋಹದಲ್ಲಿ ಸ್ಥಳೀಯ ಶಾಖವನ್ನು ಥಟ್ಟನೆ ತಗ್ಗಿಸಲು ಅಚ್ಚಿನ ನಡುವೆ ಇಡುವ ತಣ್ಣಗಿರುವ ಲೋಹದ ತುಂಡು ಅಥವಾ ಯಾವುದೇ ವಸ್ತು

ಚಿಹ್ನೆ

(ಗ) +, -, ,, ¸ ಮುಂತಾದ ಗಣಿತ ಪರಿಕರ್ಮ ಸೂಚಕ ಸಂಕ್ಷಿಪ್ತಗಳು

ಚಿಹ್ನೆ ಕುರಿತ ಸಂಪ್ರದಾಯ

(ರ) ಮೊದಲು ಬಹಿರುಷ್ಣಕ ಕ್ರಿಯೆಯ ಎಂತಾಲ್ಪಿ ಬದಲಾವಣೆಯನ್ನು ಧನ ಚಿಹ್ನೆಯಿಂದ ಮತ್ತು ಅಂತರುಷ್ಣಕ ಕ್ರಿಯೆಯ ಎಂತಾಲ್ಪಿ ಬದಲಾವಣೆಯನ್ನು ಋಣ ಚಿಹ್ನೆಯಿಂದ ಸೂಚಿಸಲಾಗುತ್ತಿತ್ತು. ಆದರೆ ಆ ರೂಢಿ ಈಗ ಅದಲು ಬದಲಾಗಿದೆ. ಬಹಿರುಷ್ಣಕ ಕ್ರಿಯೆಯ ಎಂತಾಲ್ಪಿ ಬದಲಾವಣೆಯನ್ನು ಋಣ ಚಿಹ್ನೆಯಿಂದಲೂ, ಅಂತರುಷ್ಣಕ ಕ್ರಿಯೆಯ ಎಂತಾಲ್ಪಿ ಬದಲಾವಣೆಯನ್ನು ಧನಚಿಹ್ನೆಯಿಂದಲೂ ಸೂಚಿಸಲಾಗುತ್ತಿದೆ. (ಗ) ಎರಡು ಆಯಾಮಗಳ ಕಾರ್ಟೀಸಿಯನ್ ನಿರ್ದೇಶಕ ವ್ಯವಸ್ಥೆ ಯಲ್ಲಿ ಪಾಲಿಸುವ ಏರ್ಪಾಡು. ಕ್ಷಿತಿಜೀಯ ಅಕ್ಷದಲ್ಲಿ (x-ಅಕ್ಷ) ಎಡದಿಂದ ಬಲಕ್ಕೆ, ಅಂತೆಯೇ ಊರ್ಧ್ವಾಕ್ಷದಲ್ಲಿ (y-ಅಕ್ಷ) ಕೆಳಗಿನಿಂದ ಮೇಲಕ್ಕೆ ಸಾಗುವ ದಿಶೆಗಳು ಧನಾತ್ಮಕ, ವಿರುದ್ಧ ದಿಶೆಗಳು ಋಣಾತ್ಮಕ ಎಂಬುದು ಅಂಗೀಕೃತ ಸಂಪ್ರದಾಯ

ಚೀಟಾ

(ಪ್ರಾ) ಫೀಲಿಡೀ ಕುಟುಂಬಕ್ಕೆ ಸೇರಿದ, ನಾಯಿ ಹಾಗೂ ಚಿರತೆಗಳನ್ನು ಹೋಲುವ ಮಾಂಸಾಹಾರಿ ಸ್ತನಿ. ವೈಜ್ಞಾನಿಕ ನಾಮ ಆಸಿನೋನಿಕ್ಸ್ ಜುಬೇಟಸ್. ಒಳಸೆಳೆದುಕೊಳ್ಳಲು ಆಗದಂಥ ಕಾಲು ಉಗುರುಗಳೂ ನೀಳವಾದ ಕಾಲುಗಳೂ ಉಂಟು. ಪುಟ್ಟ ತಲೆ. ಕಪ್ಪಾದ ಮಚ್ಚೆಗಳು ಇರುವ ಮಸುಕು ಮಸುಕಾದ ಕಂದು ಚರ್ಮ. ಜಿಂಕೆ ಮೊದಲಾದವನ್ನು ಬೇಟೆ ಆಡುವುದನ್ನು ಕಲಿಸಬಹು ದಾದ ಒಂದು ಬಗೆಯ ನಾಯಿ ಚಿರತೆ. ಭಾರತದಲ್ಲಿ ೧೯೪೮ರಿಂದಾಚೆಗೆ ನಿರ್ವಂಶವಾಗಿರುವ ಚಿರತೆ. ಇದಕ್ಕೆ ಕಣ್ಣಿನಿಂದ ತುಟಿಯವರೆಗೆ ನೀರು ಹರಿದಿದೆಯೋ ಎಂಬಂತೆ ಕಪ್ಪು ಗುರುತಿತ್ತು. ಸುಮಾರು ೩೦೦ ಮೀ.ಗಳವರೆಗೆ ಗಂಟೆಗೆ ನೂರು ಕಿ.ಮೀ. ವೇಗದಲ್ಲಿ ಓಡಬಲ್ಲುದಾಗಿತ್ತು. ಆಫ್ರಿಕಾದಲ್ಲಿ ಇನ್ನೂ ಕಂಡುಬರುತ್ತದೆ

ಚೀನೀಮಣ್ಣು

(ಭೂವಿ) ನೋಡಿ: ಕೆಯೊಲಿನ್

ಚುಕ್ಕಾಣಿ

(ತಂ) ವಿಮಾನ ಮತ್ತು ಹಡಗುಗಳಲ್ಲಿ ದಿಕ್ಕು ನಿಯಂತ್ರಕವಾಗಿ ವರ್ತಿಸುವ ಅಳವಡಿಕೆ. ಹಡಗಿನಲ್ಲಿ ಇದು ಅಗಲ, ಚಪ್ಪಟೆ ಮತ್ತು ನುಣುಪಾಗಿ ಇರುವ ಮರದ ಅಥವಾ ಉಕ್ಕಿನ ಅಲಗುಗಳ ಚೌಕಟ್ಟು. ಹಡಗಿನ ಹಿಂಬದಿ ಹೊರ ಮೈಯಲ್ಲಿ ನೆಟ್ಟಗೆ ನಿಂತಿರುವ ಬೆನ್ನು ಕಂಬಕ್ಕೆ ತಿರುಗಣಿ ಕೀಲಿನಿಂದ ಬಿಗಿಯಲ್ಪಟ್ಟಿರುತ್ತದೆ. ವಿಮಾನದಲ್ಲೂ ಹಿಂಭಾಗದಲ್ಲಿ ಮೇಲುಗಡೆ ಚುಕ್ಕಾಣಿಯನ್ನು ಅಳವಡಿಸಿರುತ್ತಾರೆ. ಚಾಲಕ ತನ್ನ ಸ್ಥಾನದಲ್ಲಿ ಕುಳಿತು ಚುಕ್ಕಾಣಿಯ ವಿನ್ಯಾಸವನ್ನು ನಿಯಂತ್ರಿಸುತ್ತಾನೆ

ಚುಕ್ಕಾಣಿ ಗಿಯರ್

(ತಂ) ಚಲಿಸುತ್ತಿರುವ ವಾಹನದ ಚಲನದಿಶೆಯನ್ನು ಬದಲಾಯಿಸಲು ಉಪಯೋಗಿಸುವ ಯಾಂತ್ರಿಕ ಸಾಧನ. ಎಣ್ಣೆ ತುಂಬಿದ ಸಂಪುಟದಲ್ಲಿ ಅಳವಡಿಸಲಾಗಿರುತ್ತದೆ

ಚುಕ್ಕಾಣಿ ಚಕ್ರ

(ತಂ) ಯಾವುದೇ ಸ್ವಯಂಚಾಲಿತ ವಾಹನದ ಅಥವಾ ದೋಣಿಯ ಚಲನ ದಿಶೆ ಮತ್ತು ಗತಿಯನ್ನು ನಿಯಂತ್ರಿಸಲು ಬಳಸುವ ಸಾಧನವಾದ ಚುಕ್ಕಾಣಿಗೆ ದಪ್ಪವಾದ ಕೇಬಲ್‌ಗಳಿಂದ ಇಲ್ಲವೇ ಎಣ್ಣೆ ತುಂಬಿದ ನಳಿಗೆಗಳಿಂದ ಸೇರಿಸಿದ ಚಕ್ರ. ಈ ಚಕ್ರವನ್ನು ತಿರುಗಿಸಿ ಚುಕ್ಕಾಣಿಯನ್ನೂ ಅದರೊಟ್ಟಿಗೆ ವಾಹನವನ್ನೂ ಬೇಕಾದ ದಿಕ್ಕಿಗೆ ತಿರುಗಿಸಬಹುದು. ಸಣ್ಣ ವಾಹನಗಳಲ್ಲಿ ಚುಕ್ಕಾಣಿಗಳನ್ನು ಕೈಯಿಂದ ತಿರುಗಿಸಿದರೆ ದೊಡ್ಡ ಹಡಗುಗಳಲ್ಲೂ ವಿಮಾನಗಳಲ್ಲೂ ಅವನ್ನು ಉಗಿಯಂತ್ರ ಅಥವಾ ವಿದ್ಯುತ್ ಯಂತ್ರಗಳಿಂದ ಇಲ್ಲವೇ ಸ್ವಯಂಚಾಲಿತ ವ್ಯವಸ್ಥೆಯಿಂದ ತಿರುಗಿಸಲಾಗುತ್ತದೆ. ಸ್ಟೀರಿಂಗ್ ವ್ಹೀಲ್

ಚುಕ್ಕಿರೋಗ

(ವೈ) ಟ್ರಿಪೊನೀಮ ಕೆರೇಟಿಯಮ್ ಹೆಸರಿನ ಬ್ಯಾಕ್ಟೀರಿಯದಿಂದ ಹರಡುವ ರೋಗ. ಅಮೆರಿಕದ ಉಷ್ಣವಲಯ ಪ್ರದೇಶದಲ್ಲಿ ಹೆಚ್ಚು ವ್ಯಾಪಕ, ಮೈಯಲ್ಲಿ ಅಲ್ಲಲ್ಲಿ ಬಣ್ಣ ಕಳೆದು ಚರ್ಮ ಗಂಟು ಕಟ್ಟುತ್ತದೆ. ಕೆಂಪು ಚುಕ್ಕಿಗಳಂಥ ದದ್ದುಗಳು ಏಳುತ್ತವೆ. ಪೆನಿಸಿಲಿನ್ ಮದ್ದಿನಿಂದ ಗುಣವಾಗುತ್ತದೆ

ಚುಂಗಾಣಿ ಜೇಡಿ

(ಭೂವಿ) ಪಿಂಗಾಣಿ ಕೈಗಾರಿಕೆಯಲ್ಲಿ ಬಳಸುವ, ಬಲುಮಟ್ಟಿಗೆ ಪರಿಶುದ್ಧವಾದ, ಕಬ್ಬಿಣಾಂಶ ಮುಕ್ತ ಬಿಳಿ ಜೇಡಿಮಣ್ಣು. ನೋಡಿ: ಕುಂಬಾರ ಜೇಡಿ, ಉಂಡೆಮಣ್ಣು

ಚುಂಗು

(ಪ್ರಾ) ೧. ಕೋಶದಿಂದ ಹೊರಚಾಚಿರುವ ಸೂಕ್ಷ್ಮ ರೋಮಸದೃಶ ಕಿವಿರು. ಲೋಮ ರೋಮ. ರೋಮಕ ೨. ಅನೇಕ ಕೆಳವರ್ಗದ ಜಲಚರಗಳಲ್ಲಿ ಚಲನ ಸಾಧನ

ಚುಂಚುಕಾಲು

(ಪ್ರಾ) ಕುದುರೆಯ ಗೊರಸಿನ ಮೇಲ್ಗಡೆಯ ಕೀಲಿನ ಮೇಲಿನ ಭಾಗದಲ್ಲಿ ಕೂದಲು ಕುಚ್ಚು ಕುಚ್ಚಾಗಿ ಬೆಳೆಯುವ ಸ್ಥಳ. ಅಲ್ಲಿರುವ ಕುಚ್ಚು ಕೂದಲು

ಚುಚ್ಚು

(ವೈ) ಚಿಕಿತ್ಸೆಗಾಗಿ ಅಥವಾ ರೋಗ ತಡೆಗಟ್ಟುವ ಉದ್ದೇಶದಿಂದ ಔಷಧ ಅಥವಾ ಲಸಿಕೆಯನ್ನು ಚರ್ಮದ ಕೆಳ ಭಾಗದಲ್ಲಿ ಅಥವಾ ಸ್ನಾಯುವಿನೊಳಗೆ ಅಥವಾ ಸಿರೆಯೊಳಗೆ ಸಿರಿಂಜಿನ ಸಹಾಯದಿಂದ ಚುಚ್ಚುವುದು

ಚುಚ್ಚುಕೊಂಡಿ

(ಜೀ) ಸಸ್ಯಕಾಂಡಗಳಲ್ಲಿ ಇಲ್ಲವೇ ಕೆಲವು ಕೀಟಗಳ ರೆಕ್ಕೆಗಳಲ್ಲಿ ಕಂಡುಬರುವ ಮೊನಚಾದ ರೋಮ ಸದೃಶ ಹೊರಚಾಚು

ಚುಚ್ಚುಮದ್ದು

(ವೈ) ನೋಡಿ: ಇಂಜೆಕ್ಷನ್

ಚೂಚುಕ

(ಪ್ರಾ) ನೋಡಿ: ಸ್ತನಾಗ್ರ

ಚೂಪುಚಾಚು

(ಪ್ರಾ) ಕೆಲವು ಪಕ್ಷಿ ಹಾಗೂ ಕೀಟಗಳ ಪಾದ ಗಳಲ್ಲಿ ಕಂಡುಬರುವ ಗಡಸು ಚೂಪು ಮುಂಚಾಚು. ಪದಕಂಟ. ಉದಾ: ಹುಂಜದ ಕಾಲಿನಲ್ಲಿಯ ಗಡಸುಚಾಚು. ಹುಂಜದ ಕಾಳಗದಲ್ಲಿ ಈ ಚಾಚಿಗೆ ತೊಡಿಸುವ ಉಕ್ಕಿನ ಮೊನೆಗೂ ಈ ಹೆಸರು ಉಂಟು. (ಭೂವಿ) ಬೆಟ್ಟದ ಚಾಚು: (ಸ) ಹೂವಿನ ಪೊಳ್ಳು ಚಾಚು

Search Dictionaries

Loading Results

Follow Us :   
  Download Bharatavani App
  Bharatavani Windows App