Navakarnataka Vijnana Tantrajnana Padasampada (2011)
Navakarnataka Publications Private Limited
ಚಲ ತರಂಗ
(ಭೌ) ಮಾಧ್ಯಮದ ಒಂದು ಭಾಗದಿಂದ ಇನ್ನೊಂದಕ್ಕೆ ಶಕ್ತಿ ಸಾಗಿಸುವ ಅಲೆ. ಸ್ಥಿರ ಅಲೆಗೆ ವಿರುದ್ಧ
ಚಲಚ್ಚಿತ್ರ
(ತಂ) ವಿಶೇಷ ಉಪಕರಣ ವೊಂದರಿಂದ ತೆಗೆದ, ಒಂದರ ನಂತರ ಮತ್ತೊಂದರಂತೆ ತ್ವರಿತ ಗತಿಯಲ್ಲಿ ನೋಡಿದಾಗ ನಿರಂತರತೆಯ ಹಾಗೂ ಚಲನೆಯ ಭಾವನೆ ಮೂಡಿಸುವ, ಛಾಯಾಚಿತ್ರಗಳ ಸರಣಿ. ಯಾವುದೇ ವಿಷಯಕ್ಕೆ ಹೊಂದಿಸಿ ರಚಿಸಿದ ಚಿತ್ರಗಳ ಸಂಪೂರ್ಣ ಒಳಸಾರ. ಸಿನಿಮಾ. ಚಲನಚಿತ್ರ
ಚಲನ ಅಸ್ವಸ್ಥತೆ
(ವೈ) ವೇಗೋತ್ಕರ್ಷದಲ್ಲಿ ಹಠಾತ್ತಾಗಿ ಏರುಪೇರಾದಾಗ ಮಾವನ ಶರೀರದಲ್ಲಿ ತೋರುವ ಅಸ್ವಸ್ಥತೆ, ಸಾಮಾನ್ಯವಾಗಿ ಹಡಗು/ವಿಮಾನ/ವಾಹನಗಳಲ್ಲಿ ಚಲಿಸುವಾಗ ಇದರ ಅನುಭವವಾಗುತ್ತದೆ. ಬೆವರಿಕೆ, ಬಾಯಿ ಒಣಗುವುದು, ಮಂಪರು ಮತ್ತು ವಾಂತಿ ಇದರ ಲಕ್ಷಣಗಳು
ಚಲನ ನಿಯಮಗಳು
(ಭೌ) ಐಸಾಕ್ ನ್ಯೂಟನ್ (೧೬೪೨-೧೭೨೭) ೧೬೮೭ರಲ್ಲಿ ಮಂಡಿಸಿದ ಭೌತ ಚಲನ ನಿಯಮಗಳು ಮೂರು: ೧. ಬಾಹ್ಯಬಲ ಪ್ರಯೋಗವಾದ ವಿನಾ ಪ್ರತಿಯೊಂದು ಕಾಯವೂ ನಿಶ್ಚಲ ಸ್ಥಿತಿಯಲ್ಲಿಯೇ ಇರುವುದು ಅಥವಾ ಸರಳರೇಖೆಯ ನೇರ ಏಕರೀತಿ ಚಲನೆಯಲ್ಲಿ ಮುಂದುವರಿಯುತ್ತ ಇರುವುದು. ೨. ಸಂವೇಗದ ದರದಲ್ಲಿಯ ವ್ಯತ್ಯಯವು, ಪ್ರಯೋಗಿಸಿದ ಬಲಕ್ಕೆ ಅನುಪಾತೀಯ ಮತ್ತು ಬಲದ ದಿಶೆಯಲ್ಲಿ ಸಂಭವಿಸುವುದು. ೩. ಕ್ರಿಯೆ ಮತ್ತು ಪ್ರತಿಕ್ರಿಯೆ ಸಮ ಮತ್ತು ವಿರುದ್ಧ. ಅಂದರೆ, ಎರಡು ಕಾಯಗಳು ಪರಸ್ಪರ ಅಂತರವರ್ತಿಸುವಾಗ ಮೊದಲನೆಯದು ಎರಡನೆಯದರ ಮೇಲೆ ಪ್ರಯೋಗಿಸುವ ಬಲ ಎರಡನೆಯದು ಮೊದಲನೆಯದರ ಮೇಲೆ ಪ್ರಯೋಗಿಸುವ ಬಲಕ್ಕೆ ಸಮವೂ ವಿರುದ್ಧವೂ ಆಗಿರುವುದು
ಚಲನ ವಿಜ್ಞಾನ
(ಭೌ) ಕಾಯಗಳ ಚಲನೆಗೂ ಅವುಗಳ ರಾಶಿ ಮತ್ತು ಅವುಗಳ ಮೇಲೆ ಪ್ರಯೋಗವಾಗುವ ಬಲಗಳಿಗೂ ಇರುವ ಸಂಬಂಧವನ್ನು ಕುರಿತ ಭೌತವಿಜ್ಞಾನ ವಿಭಾಗ. ಬಲಗಳು ಕಾಯದ ಚಲನೆಯಲ್ಲಿ ಉಂಟುಮಾಡುವ ಬದಲಾವಣೆಗಳನ್ನು ಅಧ್ಯಯನ ಮಾಡುವ ಭೌತವಿಜ್ಞಾನ ವಿಭಾಗ. (ರ) ರಾಸಾಯನಿಕ ಕ್ರಿಯೆಗಳ ದರಗಳನ್ನು ಅಳೆಯುವ, ಅಧ್ಯಯನ ಮಾಡುವ ಭೌತ-ರಸಾಯನಶಾಸ್ತ್ರ ಶಾಖೆ. ಉಷ್ಣತೆ, ಒತ್ತಡ, ಇತ್ಯಾದಿಗಳ ವಿಭಿನ್ನ ಪರಿಸ್ಥಿತಿಗಳಲ್ಲಿ ರಾಸಾಯನಿಕ ಕ್ರಿಯೆಗಳ ದರಗಳ ಅಧ್ಯಯನ ಮಾಡುವ ಮೂಲಕ ಕ್ರಿಯೆಗಳ ರೀತಿ, ವಿಧಾನಗಳನ್ನು ನಿರ್ಧರಿಸುವುದು ಇದರ ಗುರಿ
ಚಲನ ಶಕ್ತಿ
(ಭೌ) ಚಲನೆಯಿಂದ ಉದ್ಭವಿಸುವ ಶಕ್ತಿ. v ವೇಗದಲ್ಲಿ ಚಲಿಸುತ್ತಿರುವ m ರಾಶಿಯ ಕಣದ ಚಲನಶಕ್ತಿ ½mv2. ಕಾಯದ ರಾಶಿ M ಜಡತಾ ಮಹತ್ತ್ವ Ig, ಗುರುತ್ವ ಕೇಂದ್ರದ ವೇಗ vg ಮತ್ತು ಕೋನೀಯ ವೇಗ w ಆಗಿದ್ದಲ್ಲಿ ಆಗ ಚಲನ ಶಕ್ತಿ Ig w2
ಚಲನಶೀಲ
(ಭೌ) ಚಲಿಸಲಾಗುವ; ಚಲಿಸುವಂತೆ ಮಾಡಲಾಗುವ (ಪ್ರಾ) ಒಂದೊಂದೂ ಸ್ವಲ್ಪ ಸ್ವತಂತ್ರ ಚಲನಶಕ್ತಿ ಇರುವ ಒಂದುಗೂಡಿರುವ ಮೂಳೆಗಳ ನಡುವಿನ ಸಂಬಂಧ
ಚಲನಾವಕಾಶ
(ತಂ) ಯಂತ್ರ ಮೊದಲಾದವುಗಳ ಭಾಗಗಳು ಸಲೀಸಾಗಿ ಚಲಿಸುವಂತೆ ಮಾಡುವುದು. ಪ್ಲೇ
ಚಲನೀಯ
(ತಂ) ಚಲನ ಸ್ವಾತಂತ್ರ್ಯವಿರುವ. ಸ್ಥಳದಿಂದ ಸ್ಥಳಕ್ಕೆ ಸುಲಭವಾಗಿ ಒಯ್ಯಲಾಗುವ. (ಉದಾ: ದೂರವಾಣಿ ಸಾಧನ). ಗತಿಶೀಲ
ಚಲನೆ
(ಭೌ) ಕಾಲಕ್ಕೆ ಸಂಬಂಧಿಸಿದಂತೆ ಕಾಯವೊಂದರ ಸ್ಥಾನದ ನಿರಂತರ ಬದಲಾವಣೆ. ಸಾಪೇಕ್ಷ ಚಲನೆಯನ್ನಷ್ಟೆ ಅಳೆಯಲು ಸಾಧ್ಯ. ನಿರಪೇಕ್ಷ ಚಲನೆ ಎಂಬುದು ಅರ್ಥಹೀನ ಪರಿಕಲ್ಪನೆ
ಚಹಾ
(ಸ) ತೀಯೇಸೀ (ಟರ್ನ್ಸ್ಟ್ರೋಮಿಯೇಸೀ) ಕುಟುಂಬದ ತೀಯ ಸೈನೆನ್ಸಿಸ್ ಅಥವಾ ಕಮೇಲಿಯ ಸೈನೆನ್ಸಿಸ್ ಜಾತಿಯ ಉಷ್ಣವಲಯ ನಿವಾಸಿ. ನಿತ್ಯಹರಿದ್ವರ್ಣದ ಪುಟ್ಟ ಮರ. ತವರು ಚೀನ. ೪೫ ಬಗೆಗಳಿವೆ. ವಾಣಿಜ್ಯ ಪ್ರಾಮುಖ್ಯದ ಬೆಟ್ಟ ಸೀಮೆ ಬೆಳೆ. ಇದರ ಎಳೆ ಚಿಗುರಿನಿಂದ ತಯಾರಿಸಿದ ಪಾನೀಯಕ್ಕೂ ಇದೇ ಹೆಸರುಂಟು. ಇದೊಂದು ಕೆಫೀನ್ಯುಕ್ತ ಉತ್ತೇಜಕ ಪಾನೀಯ
ಚಳಿ ಜ್ವರ
(ವೈ) ತೀವ್ರ ಮೈನಡುಕ, ತಲೆನೋವು ಮತ್ತು ಆಲಸ್ಯಸಹಿತ ಮೈ ಕಾವೇರುವ ಜ್ವರ. ಉದಾ: ಮಲೇರಿಯ
ಚಳಿಗಾಲ
(ಪವಿ) ಸಾಮಾನ್ಯವಾಗಿ ಉತ್ತರಾಯಣಾರಂಭ ದಿನದಿಂದ (ಡಿಸೆಂಬರ್ ೨೨) ವಸಂತ ವಿಷುವದ (ಮಾರ್ಚ್ ೨೧) ವರೆಗಿನ ಅವಧಿ. ಉತ್ತರಗೋಳಾರ್ಧದಲ್ಲಿ ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳುಗಳನ್ನೂ ದಕ್ಷಿಣ ಗೋಳಾರ್ಧದಲ್ಲಿ ಜೂನ್, ಜುಲೈ, ಆಗಸ್ಟ್ ತಿಂಗಳುಗಳನ್ನೂ ಚಳಿಗಾಲ ಎಂದು ಪವನ ವಿಜ್ಞಾನ ಉದ್ದೇಶಗಳಿಗಾಗಿ ಪರಿಗಣಿಸಲಾಗುತ್ತದೆ. ಮಾಗಿ
ಚಳುಕು
(ವೈ) ಥಟ್ಟನೆ ತಲೆದೋರುವ ತೀವ್ರ ಯಾತನೆ ಚುಚ್ಚುನೋವು
ಚಾಕೊಲೇಟ್
(ಸಾ) ಕೋಕೊ ಬೀಜದ ಹಿಟ್ಟಿನಿಂದ ತಯಾರಿಸಿದ ಸಿಹಿ ಬಿಲ್ಲೆ
ಚಾಕ್
(ಭೂವಿ) ಕ್ಯಾಲ್ಸಿಯಮ್ ಕಾರ್ಬೊನೇಟಿನ ಸೂಕ್ಷ್ಮ ಕಣಗಳೂ ಅತಿಸೂಕ್ಷ್ಮ ಆರ್ಗ್ಯಾನಿಕ್ ಅವಶೇಷಗಳೂ ಸೇರಿ ಆಗಿರುವ ಮೃದು ಸುಣ್ಣಕಲ್ಲು
ಚಾಕ್ಷುಷ
(ಪ್ರಾ) ಕಣ್ಣಿಗೆ ಸಂಬಂಧಿಸಿದ. ಕಣ್ಣುಗಳು ಗ್ರಹಿಸಲು ಸಮರ್ಥವಾದಂಥ. ಕಣ್ಣಿಗೆ ಬೀಳುವಂಥ
ಚಾಕ್ಷುಷಚಾಲಕ
(ಪ್ರಾ) ಕಣ್ಣಿನ ಚಲನೆಗೆ, ಚಲನೆಯನ್ನು ಉಂಟುಮಾಡುವುದಕ್ಕೆ ಸಂಬಂಧಿಸಿದ. (ವೈ) ಕಶೇರುಕಗಳಲ್ಲಿ ಕಣ್ಣು ಗುಡ್ಡೆಯ ಕೆಲವು ಸ್ನಾಯುಗಳವರೆಗೆ ಚಾಚಿರುವ ತೃತೀಯ ಕಪಾಲ ನರ
ಚಾಚು
(ಭೂವಿ) ಕಡಿದಾದ ಬಂಡೆಯ ಮುಖ ಮೊದಲಾದವು ಗಳಲ್ಲಿನ ಬಡುವಿನಂಥ ಚಾಚು; ಸಮುದ್ರದೊಳಕ್ಕೆ ಚಾಚಿ ಕೊಂಡಿರುವ ಭೂಭಾಗ
ಚಾಚು ಪಟ್ಟಿ