भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗಡಸು ಅಂಗಳು

(ವೈ) ಕಿರುನಾಲಗೆಯ ಮುಂಭಾಗದ ಅಂಗಳು. ಪಶ್ಚತಾಲು

ಗಡಸು ನೀರು

(ರ) ಕ್ಯಾಲ್ಸಿಯಮ್, ಮೆಗ್ನೀಸಿಯಮ್ ಹಾಗೂ ಕಬ್ಬಿಣ ಸಂಯುಕ್ತಗಳು ವಿಲೀನವಾಗಿರುವ ಕಾರಣ ಒದ್ದೆ ಬಟ್ಟೆಗೆ ಸಾಬೂನು ಹಾಕಿದಾಗ ಕೂಡಲೇ ನೊರೆ ಕೊಡದ ನೀರು. ಸಾಬೂನಿನ ಮೇದಾಮ್ಲಗಳು ಈ ಲೋಹಗಳ ಲವಣಗಳನ್ನು ವಿಲೀನವಾಗದ ಗಷ್ಟಾಗಿ ರೂಪಿಸಿರುತ್ತವೆ. ಲವಣಗಳನ್ನು ನಿವಾರಣೆ ಮಾಡಿದಾಗಲಷ್ಟೆ ನೀರು ಮೃದುವಾಗುತ್ತದೆ

ಗಂಡಸ್ಥಲ

(ವೈ) ನೋಡಿ : ಕಣತಲೆ

ಗಡಿಯಾರ

(ಸಾ) ಕಾಲ ಅಳೆಯುವ ಅಥವಾ ಸೂಚಿಸುವ ಸಾಧನ. ಕಾಲಮಾಪಕ

ಗಡಿಯಾರ ಸಂರಚನೆ

(ತಂ) ಗಡಿಯಾರಕ್ಕೆ ಚಾಲನೆ ನೀಡಿದ ಬಳಿಕ ಅದರ ಒಳಗಿನ ವಿವಿಧ ಹಲ್ಲುಗಾಲಿಗಳು ಪರಸ್ಪರ ವರ್ತಿಸಿ ಗಡಿಯಾರ ಸ್ವಯಂ ಚಾಲಿತವಾಗಿ ನಡೆಯುವಂತೆ ಮಾಡುವ ಸಂರಚನೆ

ಗಂಡು

(ಪ್ರಾ) ಶುಕ್ರಾಣುಗಳನ್ನು ಅಥವಾ ಅದಕ್ಕೆ ಅನುಗುಣವಾದ ಯಾವುವೇ ರೂಪದ ಯುಗ್ಮಕಗಳನ್ನು ಉತ್ಪಾದಿಸುವಂಥ ಜನನ ಗ್ರಂಥಿಗಳಿರುವ ವ್ಯಕ್ತಿ/ಜೀವಿ. (ಸ) ಶಲಾಕೆಗಳಿರದೆ ಪುಂಕೇಸರ ಗಳಷ್ಟೆ ಇರುವ ಬೀಜ, ಸಸ್ಯ ಅಥವಾ ಹೂ

ಗಂಡು ಜೇನ್ನೊಣ

(ಪ್ರಾ) ಸಂತಾನವನ್ನು ವೃದ್ಧಿಸುವುದರ ಹೊರತು ಬೇರಾವ ಕೆಲಸವನ್ನೂ ಮಾಡದ ಮೈಗಳ್ಳ ಜೇನ್ನೊಣ

ಗಂಡುಸುತನ

(ವೈ) ಹೆಣ್ಣಿನಲ್ಲಿ ಗಂಡಿನ ವರ್ತನ ಲಕ್ಷಣಗಳು ಪ್ರಕಟಗೊಳ್ಳುವುದು. ಪುರುಷತ್ವ

ಗಡ್ಡೆ

(ಸ) ಸಸ್ಯದ ಮೇಲೆ, ಅದರಲ್ಲೂ ವಿಶೇಷವಾಗಿ ಬೇರಿನ ಮೇಲೆ, ಕಾಣಿಸಿಕೊಳ್ಳುವ ಪುಟ್ಟ ಗುಂಡಗಿನ ಊತ. ಇದರಲ್ಲಿ ನೈಟ್ರೊಜನ್ ಸ್ಥಿರೀಕರಿಸುವ ಬ್ಯಾಕ್ಟೀರಿಯ ಅಥವಾ ಆಕ್ಟಿನೊ ಮೈಸಿಟೀಸ್‌ಗಳು ಸಹಜೀವನ ನಡೆಸುತ್ತವೆ. ಗಂತಿ

ಗಣ

(ಗ) ಸುವ್ಯಾಖ್ಯಿತ ವಸ್ತುಗಳ ಯಾವುದೇ ಸಮುಚ್ಚಯ. ಇದರ ಬಿಡಿ ವಸ್ತುಗಳಿಗೆ ಧಾತುಗಳೆಂದು ಹೆಸರು. ‘ಸುವ್ಯಾಖ್ಯಿತ’ ಎಂದರೆ ಯಾವುದೇ ಗಣ ಮತ್ತು ಧಾತು ದತ್ತವಾಗಿರುವಾಗ ಈ ಧಾತು ಆ ಗಣದ ಸದಸ್ಯ ಧಾತುವೇ ಅಲ್ಲವೇ ಎನ್ನುವುದನ್ನು ನಿರ್ಧರಿಸುವುದು ಸಾಧ್ಯವಾಗಬೇಕು ಎಂಬುದು ಇಂಗಿತ. ಗಣ A = {ಮೇಜು, ವಿಮಾನ, ಕನ್ನಡಕ, ೪, ಕತ್ತೆ, ಸೂರ್ಯ}. ಧಾತು ‘ಮೇಜು’ಈ ಗಣಕ್ಕೆ ಸೇರಿದೆ; ಅಂತೆಯೇ ಧಾತು ‘ಕುರ್ಚಿ’ ಈ ಗಣಕ್ಕೆ ಸೇರಿಲ್ಲ. ಧಾತುರಹಿತ ಗಣಕ್ಕೆ ಶೂನ್ಯ ಗಣವೆಂದು ಹೆಸರು. ಇದರ ಪ್ರತೀಕ ={}. ೨ಕ್ಕಿಂತ ಅಧಿಕವೂ ೧ಕ್ಕಿಂತ ಕಡಿಮೆಯೂ ಆಗಿರುವ ಧನ ಪೂರ್ಣಾಂಕಗಳ ಗಣ ಶೂನ್ಯಗಣ, ಕೂಟ

ಗಣ

(ಜೀ) ಸಸ್ಯಗಳನ್ನೂ ಪ್ರಾಣಿಗಳನ್ನೂ ಅವುಗಳ ಗುಣ ವೈಶಿಷ್ಟ್ಯಾನುಸಾರ ವೈಜ್ಞಾನಿಕವಾಗಿ ಗುಂಪುಗೂಡಿಸಲು ಬಳಸುವ ಪದ. ವರ್ಗದ (ಕ್ಲಾಸ್) ಒಂದು ವಿಭಾಗ ಗಣ. ಇದು ಅನೇಕ ಕುಟುಂಬಗಳಿಂದ (ಫ್ಯಾಮಿಲಿ) ಕೂಡಿರುತ್ತದೆ

ಗಣಕ

(ತಂ) ಯಂತ್ರವೊಂದು ಮಾಡುವ ಕ್ರಿಯೆಗಳ ಸಂಖ್ಯೆಯನ್ನು ಅಥವಾ ದಂಡವೊಂದರ ಆವರ್ತನೆಗಳ ಸಂಖ್ಯೆಯನ್ನು ದಾಖಲಿಸುವ ಉಪಕರಣ

ಗಣದ ವಿಭಾಗೀಕರಣ

(ಗ) ವಿಯೋಜಿತ ಉಪಗಣಗಳ ಸಾಂತ ಸಮುಚ್ಚಯ; ಇವುಗಳ ಸಂಯೋಗ ದತ್ತ ಗಣ. ಉದಾ: ಸರಿಸಂಖ್ಯೆಗಳ ಹಾಗೂ ಬೆಸಸಂಖ್ಯೆಗಳ ಗಣಗಳು ನೈಸರ್ಗಿಕ ಸಂಖ್ಯೆಗಳ ಗಣದ ವಿಭಾಗೀಕರಣದ ಫಲ

ಗಣನ ಸಂಖ್ಯೆಗಳು

(ಗ) ಗಣದಲ್ಲಿರುವ ಧಾತುಗಳ ಸಂಖ್ಯೆಯನ್ನು ಸೂಚಿಸುವ ಸಂಖ್ಯೆ. ಉದಾ: ಫುಟ್‌ಬಾಲ್ ತಂಡದ ಗಣನ ಸಂಖ್ಯೆ ೧೧. ಸಾರ್ವತ್ರಿಕವಾಗಿ, n ವಿವಿಕ್ತ ಧಾತುಗಳಿರುವ ಗಣದ ಗಣನ ಸಂಖ್ಯೆ n. ಎರಡು ಗಣಗಳನ್ನೂ ಪರಸ್ಪರ ಏಕ-ಏಕ ಸಂವಾದಿತ್ವದಲ್ಲಿ ಅಳವಡಿಸಬಹುದಾದರೆ ಅವುಗಳ ಗಣನ ಸಂಖ್ಯೆ ಒಂದೇ ಆಗಿರುವುದು. ಮೂಲಾಂಕಗಳು ೧,೨,೩,… ಇತ್ಯಾದಿ ಪದಾರ್ಥಗಳ ಸಂಖ್ಯಾಸೂಚಿ. ಆದರೆ ೧ನೆಯ, ೨ನೆಯ, ೩ನೆಯ ಇತ್ಯಾದಿ ಪದಾರ್ಥಗಳ ಸ್ಥಾನಸೂಚಿ

ಗಣನಶೀಲ

(ಸಾ) ಲೆಕ್ಕಕ್ಕೆ ಸಿಕ್ಕುವ

ಗಣನಾತ್ಮಕ ಗಣ

(ಗ) ಎಣಿಕೆಗೆ ನಿಲುಕುವ ಗಣ. ಅನಂತ ಧಾತುಗಳಿರುವ ಈ ಗಣದ ಧಾತುಗಳನ್ನು ಧನ ಪೂರ್ಣಾಂಕಗಳ ಜೊತೆ ಏಕ-ಏಕ ಸಂವಾದಿಯಾಗಿ ಹೊಂದಿಸ ಬಹುದು. ಗಣನೀಯ ಗಣ

ಗಣಿ

(ತಂ) ಆರ್ಥಿಕ ಉಪಯುಕ್ತತೆಯ ಖನಿಜಗಳ (ಲೋಹ, ಕಲ್ಲಿದ್ದಲು, ಇತ್ಯಾದಿಗಳ) ಶೋಧನೆಗಾಗಿ ಮತ್ತು ಅವನ್ನು ಹೊರತೆಗೆಯುವುದಕ್ಕಾಗಿ ಭೂಮಿಯಡಿ ತೋಡಿ ನಿರ್ಮಿಸಿದ ದೊಡ್ಡ ಕುಳಿ

ಗಣಿ ತ್ಯಾಜ್ಯ

(ಪವಿ) ಅದಿರನ್ನು ಹೊರ ತೆಗೆಯುವಾಗ ಅದರೊಡನೆ ಬರುವ ಶಿಲಾತ್ಯಾಜ್ಯಗಳು ಮತ್ತು ಯಂತ್ರಗಳಲ್ಲಿರುವ ಗಸಿ. ಇದು ಹರಿವ ನೀರನ್ನು ಸೇರಿ ಪ್ರವಾಹಕ್ಕೆ ತಡೆ ಉಂಟು ಮಾಡುವುದಲ್ಲದೆ, ಅದರಲ್ಲಿರುವ ಲೋಹಾಂಶಗಳು ನೀರಿನಲ್ಲಿ ವಿಲೀನವಾಗಿ ಜಲಚರಗಳಿಗೆ ಮಾರಕವಾಗುತ್ತವೆ. ಚಿನ್ನದ ಗಣಿಗಳಲ್ಲಿ ಅದಿರನ್ನು ಸಂಸ್ಕರಿಸುವಾಗ ಬಳಸುವ ಸಯನೈಡ್ ಸುತ್ತಲಿನ ನೆಲವನ್ನು ಕ್ಷಾರಯುಕ್ತ ಮಾಡಿ ಬೆಳೆಗಳನ್ನು ಹಾಳು ಮಾಡುತ್ತದೆ

ಗಣಿಗಾರಿಕೆ

(ಭೂವಿ) ಖನಿಜಗಳನ್ನು ಪತ್ತೆ ಹಚ್ಚಿ ಅಗೆದು ತೆಗೆಯುವ ತಂತ್ರವಿದ್ಯೆ. ಇದರಲ್ಲಿ ಎರಡು ಬಗೆ: ಒಂದು, ಭೂಮಿಯ ಒಳಭಾಗದ ಗಣಿಗಾರಿಕೆ; ಇನ್ನೊಂದು ತೆರೆದ ಗಣಿಗಾರಿಕೆ

ಗಣಿತ

(ಗ) ಸಂಖ್ಯೆ, ಆಕಾರ ಮತ್ತು ಇತರ ಸದೃಶ ಗುಣಗಳನ್ನು ತಾರ್ಕಿಕವಾಗಿ ಅಭ್ಯಸಿಸುವ ವಿಜ್ಞಾನ ವಿಭಾಗ. ಸ್ಥೂಲವಾಗಿ ಇದನ್ನು ಶುದ್ಧಗಣಿತ ಮತ್ತು ಅನ್ವಿತಗಣಿತ ಎಂದು ವಿಭಾಗಿಸಿದೆ. ಆದರೆ ಈ ಎರಡು ಶಾಖೆಗಳೂ ಸ್ವತಂತ್ರವಲ್ಲ. ಪರಸ್ಪರ ಅವಲಂಬಿತ. ಭೌತ ವಿದ್ಯಮಾನಗಳ ಅಧ್ಯಯನ ಅನ್ವಿತ ಗಣಿತಕ್ಕೆ ಸೇರಿದೆ. ಉದಾ: ಸಂಖ್ಯಾಕಲನ ವಿಜ್ಞಾನ, ಸಂಭಾವ್ಯತಾ ಸಿದ್ಧಾಂತ, ಬಲ ವಿಜ್ಞಾನ, ಸಾಪೇಕ್ಷತಾ ಸಿದ್ಧಾಂತ ಮತ್ತು ಶಕಲ ಬಲ ವಿಜ್ಞಾನ. ಅಮೂರ್ತ ಗುಣಗಳ ನಡುವೆ ನಿಯೋಜಿತ ಕ್ರಮವಿಧಿಗಳ ಪ್ರಕಾರ ಸಂಬಂಧಗಳ ಅನ್ವೇಷಣೆಯೇ ಶುದ್ಧಗಣಿತ. ಇದರ ಶಾಖೆಗಳು: ಅಂಕಗಣಿತ, ಬೀಜಗಣಿತ, ಜ್ಯಾಮಿತಿ, ತ್ರಿಕೋಣ ಮಿತಿ, ಕಲನಶಾಸ್ತ್ರ ಮತ್ತು ಸಂಸ್ಥಿತಿ ವಿಜ್ಞಾನ (ಟಾಪಾಲಜಿ) ಇತ್ಯಾದಿ

Search Dictionaries

Loading Results

Follow Us :   
  Download Bharatavani App
  Bharatavani Windows App