भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಗೋಡು ಮಣ್ಣು

(ಭೂವಿ) ಹೊಳೆ, ಕೆರೆ, ಬಾವಿ ಮುಂತಾದವುಗಳಲ್ಲಿರುವ, ಖನಿಜಗಳಿಗಾಗಿ ಕೊರೆಯುವ ರಂಧ್ರಗಳಿಂದ ಬರುವ ಕೆಸರು. ಹೂಳು

ಗೋಣಿತಟ್ಟು

(ತಂ) ಸೆಣಬು/ಕತ್ತಾಳೆ ನಾರಿನಿಂದ ತಯಾರಿಸಿದ ಒರಟು ಗಟ್ಟಿ ಬಟ್ಟೆ/ತಟ್ಟು. ಸಾಮಾನು ಸಾಗಣೆಯ ಚೀಲ ತಯಾರಿಕೆಯಲ್ಲಿ ಬಳಕೆ. ಕೋಟು, ಸೋಫಾ ಹಾಗೂ ಪಾದರಕ್ಷೆ ಅಸ್ತರಿಗಳಿಗೂ ಬಳಸುವುದುಂಟು. ಕೆಲವು ರಾಸಾಯನಿಕ ಗಳನ್ನು ಬಳಸಿ ನೀರಿನಿಂದ ಇದು ಕೊಳೆಯದಿರುವಂತೆ ಮಾಡಿ ಇದರ ಉಪಯುಕ್ತತೆಯನ್ನು ಹೆಚ್ಚಿಸಲಾಗುತ್ತದೆ. ಸಾಗಾಣಿಕೆಯ ಒರಟು ವಿಧಾನಗಳಿಗೆ ಒಗ್ಗುತ್ತದೆ. ಆದರೂ ಈಚೆಗೆ ಕೃತಕ ಎಳೆಗಳ ಚೀಲಗಳು ಬಂದು ಗೋಣಿತಟ್ಟಿನ ಬಳಕೆ ತಗ್ಗಿದೆ

ಗೋಣುಕುರು

(ವೈ) ‘ಗಲಗ್ರಂಥೀ ಉಪರಿ ಕುರು (ಪೆರಿ ಟಾನ್ಸಿಲ್ಲಾರ್ ಅಬ್ಸೆಸ್) ಗಲಗ್ರಂಥಿಗಳಲ್ಲಿ ಸೋಂಕು ಉಂಟಾಗಿ ಅದರ ಸುತ್ತ ಕೀವು ತುಂಬಿರುವ ಸ್ಥಿತಿ

ಗೋದಿ

(ಸ) ಪೋಯೇಸೀ ಕುಟುಂಬಕ್ಕೆ ಸೇರಿರುವ ಒಂದು ಜಾತಿಯ ಹುಲ್ಲು. ವೈಜ್ಞಾನಿಕ ನಾಮ ಟ್ರಿಟಿಕಮ್ ಈಸ್ಟಿವಮ್. ಮಾನವನ ಆಹಾರ ಧಾನ್ಯಗಳ ಪೈಕಿ ಬಹಳ ಮುಖ್ಯವೆಂದು ಗಳಿಸಲಾಗಿರುವ ಒಂದು ಜಾತಿಯ ಆಹಾರ ಸಸ್ಯ. ಮಾನವ ಕೃಷಿ ಮಾಡಿ ಬೆಳೆಸಿದ ಪ್ರಾಚೀನ ಧಾನ್ಯಗಳಲ್ಲಿ ಗೋದಿಯೂ ಒಂದು

ಗೋಂದು

(ಸ) ಸಸ್ಯ ಸ್ರಾವ, ಸಹಜವಾಗಿ ಇಲ್ಲವೆ ಸಸ್ಯಕ್ಕೆ ಮಾಡಿದ ಗಾಯದಿಂದ ಒಸರುವ ಅಂಟುದ್ರವ. ನೀರಿನಲ್ಲಿ ವಿಲೇಯ ಅಥವಾ ಹಿಗ್ಗುತ್ತದೆ. ಅಂಟು

ಗೋನಿಯೋಮೀಟರ್

(ತಂ) ಕೋನಗಳನ್ನು ಅಳೆಯಲು ಅಥವಾ ದಿಕ್ಕು ಕಂಡುಹಿಡಿಯಲು ಬಳಸುವ ಉಪಕರಣ. ಸ್ಫಟಿಕದ ಮುಖಭಾಗಗಳ ನಡುವಿನ ಕೋನವನ್ನಳೆಯಲು ಬಳಸುವ ಸಲಕರಣೆ

ಗೋನೊಕಾಕಸ್

(ವೈ) ಗೊನೋರಿಯ ರೋಗಕ್ಕೆ ಕಾರಣವಾಗುವ ನಿಸ್ಸೀರಿಯೇ ಗೊನೊರಿಯೇ ಎಂಬ ಬ್ಯಾಕ್ಟೀರಿಯ

ಗೋಬರ್ ಅನಿಲ

(ಸಾ) ಸಗಣಿಮೂಲದಿಂದ ಬರುವ ಅನಿಲ. ಇಂಧನವಾಗಿ ಬಳಕೆ. ನೋಡಿ: ಗೊಬ್ಬರ ಅನಿಲಸ್ಥಾವರ

ಗೋಮಾರಿ ರೋಗ

(ಪ್ರಾ) ದನ, ಕುರಿ ಮತ್ತು ಆಡುಗಳಿಗೆ ತಗಲುವ ತೀವ್ರ ಸಾಂಕ್ರಾಮಿಕ ಜಾಡ್ಯ, ಜ್ವರ, ಕರುಳಿನ ಲೋಳೆ ಪದರದಲ್ಲಿ ಹುಣ್ಣು – ಈ ರೋಗ ಲಕ್ಷಣ. ನೋಡಿ: ದೊಡ್ಡರೋಗ

ಗೋಮೇಧಿಕ

(ಭೂವಿ) ಜಿರ್ಕಾನ್ ಮತ್ತು ಹೆಸ್ಸೊನೈಟ್ ಖನಿಜಗಳ ಸಾಮಾನ್ಯ ನಾಮ. ಗೋಮೂತ್ರದ ಬಣ್ಣ ಇದರ ಲಕ್ಷಣ. ನವರತ್ನ ಖನಿಜಗಳಲ್ಲೊಂದು. ಉಳಿದವು: ವಜ್ರ, ನೀಲ, ಮಾಣಿಕ್ಯ, ಪಚ್ಚೆ, ವೈಡೂರ್ಯ, ಪುಷ್ಯರಾಗ, ಹವಳ, ಮುತ್ತು

ಗೋಮೈಲಿ

(ವೈ) ದನಕ್ಕೆ ತಾಗುವ ಸಿಡುಬು. ಇದರ ರಸಿಗೆಯಿಂದ ಸಿಡುಬು ಲಸಿಕೆ ತಯಾರಿಸುವರು

ಗೋರಂಟಿ

(ಸ) ಲಿತ್ರೇಸೀ ಕುಟುಂಬಕ್ಕೆ ಸೇರಿರುವ ಸುವಾಸನೆಯ ಬಿಳಿ ಹೂವಿನ ಪೊದೆ ಸಸ್ಯ ಇಲ್ಲವೇ ಮರ. ಲಾಸೋನಿಯ ಇನರ್ಮಿಸ್ ವೈಜ್ಞಾನಿಕ ನಾಮ. ಉತ್ತರ ಆಫ್ರಿಕ ಹಾಗೂ ನೈರುತ್ಯ ಏಷ್ಯದ ಮೂಲವಾಸಿ. ಎಲೆಗಳಿಂದ ದೊರೆಯುವ ಕೆಂಪು ವರ್ಣದ್ರವ್ಯಕ್ಕಾಗಿ ಬೆಳೆಸುತ್ತಾರೆ. ಉಗುರು, ಕೂದಲು, ಅಂಗೈ ಹಾಗೂ ಅಂಗಾಲುಗಳಿಗೆ ಬಣ್ಣದ ಅಲಂಕರಣಕ್ಕೆ ಈ ವರ್ಣದ್ರವ್ಯದ ಬಳಕೆ ಇದೆ. ಮದರಂಗಿ

ಗೋರಿಕಾಯಿ

(ಸ) ಲೆಗ್ಯೂಮಿನೋಸೀ ಕುಟುಂಬ, ಪ್ಯಾಪಿಲಿಯೊನೇಸೀ ಉಪಕುಟುಂಬಕ್ಕೆ ಸೇರಿರುವ ತರಕಾರಿ ಸಸ್ಯ. ಸಯಮಾಪ್ಸಿಸ್ ಟೆಟ್ರಗೊನೊಲೋಬ ವೈಜ್ಞಾನಿಕ ನಾಮ. ಭಾರತ ತವರು, ತರಕಾರಿಯಾಗಿ ಅಲ್ಲದೆ ದನ ಕುದುರೆಗಳಿಗೆ ಉತ್ತಮ ಮೇವಾಗಿಯೂ ಬಳಕೆ. ಚವಳಿಕಾಯಿ

ಗೋರೋಚನ

(ರ) ಕೆಲವು ಪ್ರಾಣಿಗಳ (ಮುಖ್ಯವಾಗಿ ಮೆಲುಕು ಹಾಕುವ ಪ್ರಾಣಿಗಳ) ಆಹಾರಕೋಶದಲ್ಲಿ ಕ್ರಮೇಣ ಸ್ಥಾಪನೆಯಾಗಿ ಲಭಿಸುವ, ಪ್ರತಿವಿಷವೆಂದು ಹಿಂದೆ ನಂಬಿದ್ದ, ಪದಾರ್ಥ. ಪಶು ಪಾಷಾಣ

ಗೋರ್ಡ್

(ಸ) ಗಡಸು ಸಿಪ್ಪೆ, ಹೇರಳ ತಿರುಳು ಇರುವ (ಕುಂಬಳ, ಕಲ್ಲಂಗಡಿ, ಸೋರೆ ಮೊದಲಾದವುಗಳಂಥ) ದೊಡ್ಡಕಾಯಿ ಹಾಗೂ ಅಂಥ ಕಾಯಿ ಬಿಡುವ, ನೆಲದ ಮೇಲೆ ಅಥವಾ ಚಪ್ಪರದ ಮೇಲೆ ಹಬ್ಬುವ ಬಳ್ಳಿಜಾತಿ

ಗೋಲಿ ಕವಾಟ

(ತಂ) ಕೊಳವೆಯೊಳಗೆ ಉಂಗುರದ ಮೇಲೆ ನಿಂತಿರುವ ಗೋಲಿ. ಕೊಳವೆ ಮೂಲಕ ಅನಿಲ ಇಲ್ಲವೇ ದ್ರವವನ್ನು ಒಂದು ದಿಶೆಯಲ್ಲಿ ಮಾತ್ರ ಹರಿಯಗೊಡುವುದು, ಎದುರು ದಿಶೆಯಲ್ಲಿ ಅಲ್ಲ. ಪುಟ್ಟ ವಾಯುರೇಚಕಗಳಲ್ಲಿಯೂ ಜಲರೇಚಕಗಳಲ್ಲಿಯೂ ಬಳಕೆ

ಗೋಲಿ ಹೇನು

(ಪ್ರಾ) ಕ್ರಸ್ಟೇಸಿಯ ವರ್ಗದ ಐಸಾಪೊಡ ಗಣಕ್ಕೆ ಸೇರಿದ ಭೂವಾಸಿ ಪ್ರಾಣಿ. ಮುಟ್ಟಿದಾಗ ಗುಂಡಗೆ ಗೋಲಿಯ ಹಾಗೆ ಸುತ್ತಿಕೊಳ್ಳುವುದರಿಂದ ಇದಕ್ಕೆ ಈ ಹೆಸರು. ಆರ್ಮ್‌ಡಿ ಲಿಡಿಯಮ್ ವಲ್ಗೇರ್ ಇದರ ವೈಜ್ಞಾನಿಕ ನಾಮ

ಗೋಷ್ವಾರೆ

(ತಂ) ೧. ರಿಯಾಕ್ಟರಿನಲ್ಲಿರುವ ವಿದಲನ ಸಾಮಗ್ರಿಯ ಒಟ್ಟು ಮೊತ್ತ. ೨. ಪಿಚಕಾರಿ ಎರಕದ ತಾಪಕ ಉರುಳೆಯಲ್ಲಿರುವ ಪ್ಲಾಸ್ಟಿಕ್‌ನ ಪ್ರಮಾಣ. ೩. ಸಾಮಾನುಗಳು, ಪೀಠೋಪಕರಣಗಳು ಇತ್ಯಾದಿಗಳ ತಪಶೀಲು ಪಟ್ಟಿ

ಗೋಷ್ವಾರೆ

(ಸಾ) ಪ್ರಬಂಧದ ಸಂಗ್ರಹ ರೂಪ

ಗೋಷ್ವಾರೆ

(ಸಾ) ಸಾರಾಂಶ. ಸಾರ

Search Dictionaries

Loading Results

Follow Us :   
  Download Bharatavani App
  Bharatavani Windows App