भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

< previous12Next >

ಖಗೋಳ

(ಖ) ನಾವು ಕೇಂದ್ರದಲ್ಲಿದ್ದು ನಮ್ಮನ್ನು ಅತಿ ದೂರದಲ್ಲಿ ಸುತ್ತಲೂ ಆವರಿಸಿರುವಂತೆ ಭಾಸವಾಗುವ ಕಾಲ್ಪನಿಕ ಗೋಳ. ಆಕಾಶಕಾಯಗಳೆಲ್ಲವೂ ಇದರ ಒಳಮೈಗೆ ಅಂಟಿಕೊಂಡು ಇರುವಂತೆ ತೋರುವುವು. ಆಕಾಶ ಗೋಳ. ಬಾನ್ಗುಮ್ಮಟ

ಖಗೋಳ ಕೋಷ್ಟಕ

(ಖ) ಸೂರ್ಯ, ಚಂದ್ರ, ಗ್ರಹಗಳ ಮತ್ತು ಕೆಲವು ತಾರೆಗಳ ದೈನಂದಿನ ಸ್ಥಾನಗಳ ತಃಖ್ತೆಯ ಸಂಗ್ರಹದ ಅನುಕ್ರಮ ಪ್ರಕಟಣೆ. ಇದರಲ್ಲಿ ನಾವಿಕರಿಗೂ ಖಗೋಳ ವೀಕ್ಷಕರಿಗೂ ಅಗತ್ಯವಿರುವ ಇತರ ಮಾಹಿತಿಗಳೂ ಇರುತ್ತವೆ. ಧಾರ್ಮಿಕ ಪಂಚಾಂಗದಲ್ಲಿ ತಿಥಿ, ನಕ್ಷತ್ರ, ವಾರ, ಯೋಗ ಮತ್ತು ಕರಣ ಎಂಬ ಐದು ಅಂಗಗಳಿವೆ. ಮೊದಲ ಎರಡು ಅಂಗಗಳಿಗೆ ಮಾತ್ರ ಖಗೋಳದಲ್ಲಿ ಅಸ್ತಿತ್ವವಿದೆ

ಖಗೋಳ ತ್ರಿಭುಜ

(ಖ) ಆಕಾಶ ಕಾಯ S, ಧ್ರುವ P ಮತ್ತು ವೀಕ್ಷಕನ ಖಮಧ್ಯ Z ಖಗೋಳ ತಲದ

ಖಗೋಳ ಯಂತ್ರವಿಜ್ಞಾನ

(ಖ) ನ್ಯೂಟನ್‌ನ ಗುರುತ್ವಾಕರ್ಷಣ ನಿಯಮವನ್ನೂ ಯಂತ್ರವಿಜ್ಞಾನದ ತತ್ತ್ವ ಗಳನ್ನೂ ಆಕಾಶಕಾಯಗಳ ಗತಿ ವೃತ್ತಾಂತವನ್ನೂ ಅಭ್ಯಸಿಸುವ ಖಗೋಳ ವಿಜ್ಞಾನ ವಿಭಾಗ

ಖಗೋಳ ವಿಜ್ಞಾನ

(ಖ) ಖಗೋಳ (ಅಂದರೆ ಆಕಾಶದ ಗೋಳ) ಮತ್ತು ಅದಕ್ಕೆ ಲಗತ್ತಾಗಿ ಅದರೊಂದಿಗೆ ಮತ್ತು ಅದರ ಮೈಮೇಲೆ ಚಲಿಸುತ್ತಿರುವಂತೆ ಭಾಸವಾಗುವ ಖಗೋಳಕಾಯಗಳ ವ್ಯವಸ್ಥಿತ ಅಧ್ಯಯನ. ಈ ಕಾಯಗಳಲ್ಲಿ, ನಮಗೆ ಕಾಣುವಂತೆ, ಆರು ವಿಭಿನ್ನ ಬಗೆಗಳಿವೆ: ಸೂರ್ಯ, ಚಂದ್ರ, ಗ್ರಹ, ನಕ್ಷತ್ರ, ಉಲ್ಕೆ, ಧೂಮಕೇತು; ಆಕಾಶಗಂಗೆಯನ್ನೂ ಈ ಗುಂಪಿಗೆ ಸೇರಿಸಬಹುದು. ಇವುಗಳಿಂದ ಪ್ರಸಾರವಾಗುವ ಬೆಳಕನ್ನು ನಾವು ಗುರುತಿಸು ವುದರಿಂದ ಮತ್ತು ಇವುಗಳಿಗೆ ಸಾಮೂಹಿಕ ಹಾಗೂ ವೈಯಕ್ತಿಕ ಚಲನೆಗಳು ಇರುವಂತೆ ಭಾಸವಾಗುವುದರಿಂದ ಇವು ನಮಗೆ ಗೋಚರವಾಗುವುವು. ಆಕಾಶಗಂಗೆಯನ್ನೂ ಒಳಗೊಂಡಂತೆ ಸಮಸ್ತ ಖಗೋಳ ಕಾಯಗಳೂ ನಮ್ಮಿಂದ ಒಂದೇ ದೂರದಲ್ಲಿ ಇರುವಂತೆ (ಇದು ಖಗೋಳದ ತ್ರಿಜ್ಯ; ಇಲ್ಲಿಯ ಕೇಂದ್ರ ಖುದ್ದು ನಾವೇ!) ಭಾಸವಾಗುತ್ತವೆ. ಅಲ್ಲದೆ ಅವುಗಳ ನಡುವೆ ಸಾಪೇಕ್ಷ ಸರಿತಗಳು ಸಂಭವಿಸುವುದೂ ತಿಳಿಯುತ್ತದೆ. ಈ ಭೌತದೂರ ಮತ್ತು ಅಂತರಗಳನ್ನು ಅರಿತು ಅರ್ಥವಿಸಿ ಖಗೋಳಕಾಯಗಳ ಭವಿಷ್ಯ ವರ್ತನೆಗಳನ್ನು ಮುನ್ನುಡಿಯಲು ನಮಗಿರುವ ಏಕೈಕ ಮಾರ್ಗವೆಂದರೆ: ವೀಕ್ಷಣೆ, ಕೋನಾಂತರಗಳ ಮಾಪನೆ ಮತ್ತು ಇವುಗಳ ನಡುವೆ ಇರಬಹುದಾದ ಏನಾದರೂ ಗಣಿತ ಸಂಬಂಧದ ಅನ್ವೇಷಣೆ. ಹೀಗೆ ಖಗೋಳವಿಜ್ಞಾನದ ಅನಿವಾರ್ಯ ಮತ್ತು ಅವಿಭಾಜ್ಯ ಸಂಗಾತಿಯಾಗಿ ಗಣಿತವು ರಂಗ ಪ್ರವೇಶಿಸುತ್ತದೆ. ಖಗೋಳ ಕಾಯಗಳು ಬೆಳಕು ಮತ್ತು ಬೆಳಕಿನ ಜೊತೆಗೆ ಉಷ್ಣವನ್ನು ಉತ್ಸರ್ಜಿಸುತ್ತವೆ. ಬೆಳಕು ಗೋಚರ, ಉಷ್ಣ ಗೋಚರವಲ್ಲ. ಆದರೆ ಸ್ಪರ್ಶವೇದ್ಯ. ಈ ಬೆಳಕು ಮತ್ತು ಉಷ್ಣಶಕ್ತಿಗಳ ವ್ಯಾಪಕ ಅಧ್ಯಯನ ಭೌತ ವಿಜ್ಞಾನದ ಪ್ರಮುಖ ಅಂಗ. ಹೀಗೆ ಗಣಿತದ ಜೊತೆ ಭೌತ ವಿಜ್ಞಾನವೂ ಪಾತ್ರ ನಿರ್ವಹಿಸುತ್ತದೆ. ಮುಂದೆ ಜ್ಞಾನ ಬೆಳೆದಂತೆ ಇತರ ವಿಜ್ಞಾನ ವಿಭಾಗಗಳೂ ಸ್ಥಳೀಯವಾಗಿ (ಭೂಮಿಯಲ್ಲಿ) ಮತ್ತು ಖಗೋಳೀಯವಾಗಿ ಮೈದಳೆಯುತ್ತವೆ. ಎಂದೇ ಖಗೋಳ ವಿಜ್ಞಾನವನ್ನು ಇತರ ವಿಜ್ಞಾನಗಳ ಮಾತೃ ಎನ್ನುವುದುಂಟು. ಖಗೋಳ ವಿಜ್ಞಾನ ಮಾನವನಷ್ಟೇ ಪ್ರಾಚೀನವಾದದ್ದು. ಕಾಲಕ್ಕನುಗುಣವಾಗಿ ಇದರ ಅಭಿವರ್ಧನೆಯಲ್ಲಿ ಏಳು ಪ್ರಮುಖ ಘಟ್ಟಗಳನ್ನು ಗುರುತಿಸಬಹುದು. ಊಹಾಪೋಹಗಳು ವಿಜೃಂಭಿಸುತ್ತಿದ್ದ ಇತಿಹಾಸ ಪೂರ್ವಕಾಲ; ಕ್ರಿಸ್ತಶಕಾರಂಭದ ವೇಳೆಗೆ ಅಂಗೀಕೃತವಾದ ಭೂಕೇಂದ್ರವಾದ (ಟಾಲೆಮಿ ಸಿದ್ಧಾಂತ); ೧೬ನೆಯ ಶತಮಾನದಲ್ಲಿ ರಂಗ ಪ್ರವೇಶಿಸಿದ ಸೂರ್ಯಕೇಂದ್ರವಾದ (ಕೊಪರ್ನಿಕಸ್ ಸಿದ್ಧಾಂತ); ಯೋಹನ್ ಕೆಪ್ಲರ್ (೧೫೭೧-೧೬೩೦) ಪ್ರವರ್ತಿಸಿದ ಗ್ರಹಚಲನ ನಿಯಮಗಳು ಸೂರ್ಯಕೇಂದ್ರ ಸಿದ್ಧಾಂತಕ್ಕೆ ಒದಗಿಸಿದ ಭದ್ರ ನೆಲಗಟ್ಟು; ಈ ನೆಲಗಟ್ಟಿನ ತಳದಲ್ಲಿ ವರ್ತಿಸುವ ವಿಶ್ವ ಗುರುತ್ವಾಕರ್ಷಣ ನಿಯಮದ ಮಂಡನೆ, ಐಸಾಕ್ ನ್ಯೂಟನ್‌ನಿಂದ (೧೬೪೨-೧೭೨೭); ತರುವಾಯದ ಶೋಧನೆ ಸುಧಾರಣೆ ಹಾಗೂ ಅನ್ವೇಷಣೆ; ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಅನಾವರಣ ಗೊಂಡ ಖಭೌತವಿಜ್ಞಾನ (ನೋಡಿ)

ಖಗೋಳ ವಿಷುವದ್ವೃತ್ತ

(ಖ) ಖಗೋಳವನ್ನು ಸಮದ್ವಿಭಾಗಿಸುವ ಮಹಾವೃತ್ತ. ವೀಕ್ಷಕನನ್ನು ಅಂದರೆ ಭೂಮಿಯನ್ನು ಧ್ರುವನಕ್ಷತ್ರಕ್ಕೆ ಸೇರಿಸುವ ರೇಖೆ ಇದರ ಅಕ್ಷ. ಖಗೋಳವಿಡೀ ಈ ಅಕ್ಷದ ಸುತ್ತ ಪೂರ್ವ-ಪಶ್ಚಿಮ ದಿಶೆಯಲ್ಲಿ ಆವರ್ತಿಸುತ್ತಿರುವ ಚಿತ್ರ ನಮಗೆ ಭಾಸವಾಗುತ್ತದೆ. ಪ್ರತಿವರ್ಷ ಮಾರ್ಚ್ ೨೧/೨೨ ಮತ್ತು ಸೆಪ್ಟೆಂಬರ್ ೨೨/೨೩ ದಿನಾಂಕಗಳಂದು ಸೂರ್ಯನ ದೈನಂದಿನ ಪಥ ವಿಷುವದ್ವೃತ್ತ. ಭೂಗೋಳದ ಸಮಭಾಜಕದ ತಲವನ್ನು ಅನಿರ್ಬಂಧಿತವಾಗಿ ವಿಸ್ತರಿಸಬೇಕು; ಇದು ಖಗೋಳವನ್ನು ಛೇದಿಸುವ ವೃತ್ತವೇ ಖಗೋಳ ವಿಷುವದ್ವೃತ್ತ. ನೋಡಿ : ಸಮಭಾಜಕ ವೃತ್ತ. ಭೂಗೋಳ ಸಮಭಾಜಕ ವೃತ್ತ

ಖಗೋಳಕಾಯ

(ಖ) ಸೂರ್ಯ, ಚಂದ್ರ, ಗ್ರಹ, ನಕ್ಷತ್ರ, ಧೂಮಕೇತು ಮುಂತಾದವು. ಆಕಾಶಕಾಯ

ಖಗೋಳಮಾನ

(ಖ) ಸೂರ್ಯನಿಂದ ಭೂಮಿಯ ಮಾಧ್ಯ ದೂರ = ೧.೪೯೬ x ೧೦೮ ಕಿಮೀ = ೦.೦೦೦೦೧೫೮ ಜ್ಯೋತಿರ್ವರ್ಷ = ಸುಮಾರು ೧೫೦ ಮಿಲಿಯನ್ ಕಿಮೀಗಳು. ಸಂಕ್ಷಿಪ್ತ ಖಮಾ. ಸೌರವ್ಯೂಹದೊಳಗೆ ದೂರದ ಏಕಮಾನವಾಗಿ ಬಳಕೆ. ೬೩೨೪೦ ಖಮಾ = ೧ ಜ್ಯೋತಿರ್ವರ್ಷ

ಖಂಡ

(ಗ) ಘನಾಕೃತಿಯನ್ನು ದತ್ತ ಸಮತಲದಿಂದ ಕೊಯ್ದಾಗ ಉಂಟಾಗುವ ಸಮತಲ ಜ್ಯಾಮಿತೀಯ ಆಕೃತಿ. ಆಕೃತಿಯ ಅಕ್ಷರೇಖೆಗೆ ಲಂಬವಾದ ಸಮತಲದಿಂದ ಕೊಯ್ದಾಗ ಉಂಟಾಗುವ ಛೇದ. ಉದಾ: ಲಂಬ ವೃತ್ತಾತ್ಮಕ ಸಿಲಿಂಡರಿನ (ಉರುಳೆಯ) ಖಂಡ ಒಂದು ವೃತ್ತ. ಅಡ್ಡ ಕೊಯ್ತ. ಛೇದ

ಖಂಡ

(ಗ) ಸರಳ ಅಥವಾ ವಕ್ರರೇಖೆಯ ಎರಡು ಬಿಂದು ಗಳ ನಡುವಿನ ಭಾಗ. ಸರಳರೇಖೆ ಕತ್ತರಿಸಿದ ಸಮತಲಾಕೃತಿಯ ಒಂದು ಭಾಗ. ಸಮತಲ ಕತ್ತರಿಸಿದ ಘನಾಕೃತಿಯ ಒಂದು ಭಾಗ

ಖಂಡಯುಕ್ತ

(ಪ್ರಾ) ಪ್ರತ್ಯೇಕಗೊಳಿಸಬಹುದಾದ ಕೀಲುಗಳಿಂದ/ಭಾಗಗಳಿಂದ ಕೂಡಿರುವ

ಖಂಡಯುಕ್ತ ನಾಳ

(ವೈ) ಕಶೇರುಕದ ಭ್ರೂಣದಲ್ಲಿ ಖಂಡಯುಕ್ತ ಅಂಗವೊಂದರ ನಾಳ. ತರುವಾಯ ಇದು ವೋಲಿಯನ್ ಅಥವಾ ಮುಲ್ಲೇರಿಯನ್ ನಾಳವಾಗಿ ಅಭಿವರ್ಧನೆಗೊಳ್ಳುತ್ತದೆ

ಖಂಡಾಂತರ ಉತ್ಕ್ಷೇಪಿತ ಕ್ಷಿಪಣಿ

(ತಂ) ಒಂದು ಖಂಡದಿಂದ ಬೇರೊಂದು ಖಂಡದ ಉದ್ದಿಷ್ಟ ಗುರಿ ತಲಪಲು ಬಳಸುವ ಸಮರಾಸ್ತ್ರ. ಇದು ಕ್ರಮಿಸುವ ದೂರ ೬೫೦೦ ಕಿಮೀಗೂ ಹೆಚ್ಚು ಇರಬೇಕು. ಚಲನೆ ಭಾಗಶಃ ನಿರ್ದೇಶಿತ. ಸಂಕ್ಷಿಪ್ತ : ಐಬಿಎಮ್

ಖಂಡಾಂತರ ಪಿಡುಗು

(ವೈ) ದೇಶ ಅಥವಾ ಖಂಡದಂಥ ವಿಶಾಲ ಪ್ರದೇಶದಲ್ಲಿ ಸಂಭವಿಸುವ ಅಂಟುರೋಗ. ಉದಾ : ಪ್ಲೇಗ್, ಕಾಲರಾ

ಖಡ್ಗ ಜೀರುಂಡೆ

(ಪ್ರಾ) ಸ್ಕರಾಬಿಡೀ ಕುಟುಂಬ, ಡೈನಾಸ್ಟಿನೀ ಉಪಕುಟುಂಬಕ್ಕೆ ಸೇರಿದ ಕೀಟ. ತಲೆಯ ಮೇಲೆ ಕೊಂಬಿನಂಥ ಅಂಗವಿರುವುದರಿಂದ ಇದಕ್ಕೆ ಈ ಹೆಸರು

ಖಡ್ಗಬಾಲ ಮೀನು

(ಪ್ರಾ) ಸಿಪ್ರಿನೊಡಾಂಟೀ ಗುಂಪು ಪೋಸಿಲಿಡೀ ಕುಟುಂಬಕ್ಕೆ ಸೇರಿದ ಅಸ್ಥಿಮೀನು. ಸಿಪೊಪೊರಸ್ ಹಲೇರಿ ವೈಜ್ಞಾನಿಕ ನಾಮ. ಕತ್ತಿಯನ್ನು ಹೋಲುವ ಬಾಲ ಇದರ ವೈಶಿಷ್ಟ್ಯ. ಮೆಕ್ಸಿಕೊ ಮೂಲವಾಸಿ. ಪ್ಲಾಟಿ ಮೀನುಗಳೊಂದಿಗೆ ಅಡ್ಡ ಹಾಯಿಸಿ ಅನೇಕ ಅಂದವಾದ ಬಣ್ಣ ಬಣ್ಣದ ಮಿಶ್ರತಳಿಗಳನ್ನು ಪಡೆಯಲಾಗಿದೆ

ಖಡ್ಗಮೃಗ

(ಪ್ರಾ) ಮ್ಯಾಮೇಲಿಯ ವರ್ಗದ ಪೆರಿಸೋಡ್ಯಾಕ್ಟಿಲ ಗಣದ ರೈನೊ ಸೆರಾಟಿಡೀ ಕುಟುಂಬಕ್ಕೆ ಸೇರಿದ ಬೃಹತ್ ಗಾತ್ರದ ಸ್ತನಿ. ಬೆಸಸಂಖ್ಯೆ ಬೆರಳುಗಳ ಗೊರಸುಗಳು, ಮೂತಿ ಮೇಲೆ ಒಂದು ಅಥವಾ ಎರಡು ಕೊಂಬು ಇದರ ವಿಶಿಷ್ಟ ಲಕ್ಷಣ. ಕುದುರೆ, ಜೀಬ್ರ ಪ್ರಾಣಿಗಳಿಗೆ ಹತ್ತಿರ ಸಂಬಂಧಿ. ಭಾರತದ ಅಸ್ಸಾಮಿನ ಕಾಡುಗಳಲ್ಲಿ ಅಂತೆಯೇ ಆಫ್ರಿಕದಲ್ಲಿ ಕೂಡ ಕಂಡುಬರುತ್ತದೆ. ಸಂಪೂರ್ಣ ಸಸ್ಯಾಹಾರಿ. ಘೇಂಡಾಮೃಗ

ಖದ್ದರ್

(ಸಾ) ಚರಕದಲ್ಲಿ ಕೈಯಿಂದ ನೂತ ನೂಲಿನಿಂದ ಕೈಮಗ್ಗದಲ್ಲಿ ನೇಯ್ದ ಹತ್ತಿ ಬಟ್ಟೆ. ಖಾದಿ

ಖನಿಜ

(ಭೂವಿ) ನಿರ್ದಿಷ್ಟವಾದ ರಾಸಾಯನಿಕ ಸಂಯೋಜನೆ ಹಾಗೂ ಭೌತಿಕ ಗುಣಗಳುಳ್ಳ, ಸಹಜಲಭ್ಯ, ಅಜೈವಿಕ ಪದಾರ್ಥ. ವಿಶಿಷ್ಟ ಪರಮಾಣು ರಚನೆಯುಳ್ಳದ್ದು. ಖನಿಜಗಳು ಪ್ರಮುಖವಾಗಿ ಆರು ವ್ಯವಸ್ಥೆಗಳಲ್ಲಿ ಸ್ಫಟಿಕೀಕರಣ ಗೊಳ್ಳುತ್ತವೆ. ಕಾಠಿಣ್ಯ (ಮೋಹ್ ಮಾಪಕದಲ್ಲಿ), ಸಾಪೇಕ್ಷ ಸಾಂದ್ರತೆ, ಕಾಂತಿ, ಬಣ್ಣ, ಸೀಳ್ಕೆ ಹಾಗೂ ಮುರಿತ ಇವುಗಳಿಂದ ಭಿನ್ನ ಭಿನ್ನ ಖನಿಜಗಳನ್ನು ಗುರುತಿಸಲಾಗುತ್ತದೆ. ಹೆಚ್ಚಿನ ಖನಿಜಗಳ ಹೆಸರುಗಳು ‘ಐಟ್’ನಿಂದ (ite)ಕೊನೆಗೊಳ್ಳುತ್ತವೆ

ಖನಿಜ ತೈಲಗಳು

(ರ) ಖನಿಜೀಯ ಆಕರಗಳಿಂದ ಪಡೆದ ಪೆಟ್ರೋಲಿಯಮ್ ಮತ್ತಿತರ ಹೈಡ್ರೊಕಾರ್ಬನ್ ತೈಲಗಳು. ವೈದ್ಯಕೀಯದಲ್ಲಿ ಆಂತರಿಕ ತೈಲ ಲೇಪನಕ್ಕಾಗಿಯೂ, ಮುಲಾಮುಗಳ ತಯಾರಿಕೆಯಲ್ಲೂ ಬಳಸುವ, ಉನ್ನತವಾಗಿ ಶುದ್ಧೀಕರಿಸಿದ, ರುಚಿ, ವಾಸನೆ, ವರ್ಣಗಳಿಲ್ಲದ ಪೆಟ್ರೋಲಿಯಮ್ ತೈಲ. ಇದನ್ನು ಔಷಧಿ ತೈಲ, ಪ್ಯಾರಾಫಿನ್ ತೈಲ ಎಂದೂ ಕರೆಯುವುದುಂಟು
< previous12Next >

Search Dictionaries

Loading Results

Follow Us :   
  Download Bharatavani App
  Bharatavani Windows App