Navakarnataka Vijnana Tantrajnana Padasampada (2011)
Navakarnataka Publications Private Limited
ಕಣ ವಿಕಿರಣ
(ಭೌ) ಧನಾವಿಷ್ಟ (a-ಕಣಗಳು), ಋಣಾವಿಷ್ಟ (b-ಕಣಗಳು) ಅಥವಾ ತಟಸ್ಥ (ನ್ಯೂಟ್ರಾನ್) ಎಂದು ಕರೆಯಲಾಗುವ ಪರಮಾಣವಿಕ ಅಥವಾ ಉಪಪರಮಾಣವಿಕ ಕಣಗಳ ಪ್ರವಾಹ
ಕಣ ವಿನ್ಯಾಸ
(ಭೂವಿ) ಶಿಲೆಯ ಘಟಕ ಖನಿಜಗಳ ಸಾಪೇಕ್ಷ ಗಾತ್ರ, ಸಂಯೋಜನೆ ಮತ್ತು ವಿತರಣೆ ಅನುಸರಿಸಿ ಪ್ರಕಟವಾಗುವ ಆ ಶಿಲೆಯ ಭೌತಸ್ವರೂಪ. ಮೈವಳಿಕೆ, ವ್ಯೂತಿ. ನೇಯ್ಗೆ, ಒಳರಚನೆ, ನುಣುಪು
ಕಣ ವೇಗೋತ್ಕರ್ಷಕ
(ತಂ) ಎಲೆಕ್ಟ್ರಾನ್, ಪ್ರೋಟಾನ್ ಹಾಗೂ ಅಯಾನ್ಗಳಂಥ ವಿದ್ಯುತ್ ಪೂರಿತ ಪರಮಾಣವಿಕ ಅಥವಾ ಉಪಪರಮಾಣವಿಕ ಕಣಗಳನ್ನು ಉನ್ನತ ಶಕ್ತಿಗಳಿಗೆ ಉತ್ಕರ್ಷಿಸುವ ಸಾಧನ. ಉತ್ಕರ್ಷಕ, ಪರಮಾಣುಛಿದ್ರಕ
ಕಣ ಸಂಶ್ಲೇಷ
(ರ) ದ್ರವದಲ್ಲಿಯ ಕಣಗಳು/ಕೋಶಗಳು ಒಂದುಗೂಡಿ ಮುದ್ದೆಯಾಗುವುದು. ಉದಾ: ರಕ್ತದ ವಿಭಿನ್ನ ವರ್ಗಗಳನ್ನು ಬೆರೆಸಿದಾಗ ಹೆಪ್ಪುಗಟ್ಟುವ ಕೆಂಪು ರಕ್ತಕಣಗಳ ಮುದ್ದೆ. (ವೈ) ೧. ಅಂಟಿಕೆ. ಗಾಯದ ಅಂಚುಗಳು ಕ್ರಮೇಣ ಒಂದು ಗೂಡಿ ಗಾಯ ಮಾಯುವುದು. ೨. ಇದೊಂದು ನಮೂನೆಯ ಪ್ರತಿಜನಕ ಹಾಗೂ ಪ್ರತಿಕಾಯ ವರ್ತನೆ. ಒಂದು ನಿರ್ದಿಷ್ಟ ದ್ರವದಲ್ಲಿ ಬೆರೆತಿರುವ ವಸ್ತುವೊಂದು, ಪ್ರತಿಜನಕ ಲೇಪನಕ್ಕೊಳಗಾದಾಗ, ಅದು ಆ ದ್ರವದಿಂದ ಬೇರ್ಪಡುತ್ತದೆ. ಯಾವುದೇ ಒಂದು ನಿರ್ದಿಷ್ಟ ರೋಗವೊಂದರ ಇರುವಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯದಲ್ಲಿ ಪ್ರತಿಜನಕ-ಪ್ರತಿಕಾಯ ವರ್ತನೆ ಅಧ್ಯಯನ ಮಾಡುವ ಪರೀಕ್ಷೆಗೂ ಈ ಪದವನ್ನು ಪ್ರಯೋಗಿಸುವುದುಂಟು.
ಕಣ ಸಂಶ್ಲೇಷಕಾರಕ
(ವೈ) ರಕ್ತದ ಕಣಸಂಶ್ಲೇಷಕ್ಕೆ ಕಾರಣವಾಗುವ ಯಾವುದೇ ಪ್ರತಿಕಾಯ. ರಕ್ತದಲ್ಲಿರುವ ಪ್ರತಿಕಾಯ. ಪ್ರತಿಕಾಯವು ಪ್ರತಿಜನಕದೊಡನೆ ವರ್ತಿಸಿ ಅದರೊಡನೆ ಉಂಡೆ ಗೂಡುತ್ತದೆ. ಅಪಾಯಕಾರಿ ಪ್ರತಿಜನಕಗಳನ್ನು ನಿಗ್ರಹಿಸುವ ದೇಹದ ಪರಿಯಿದು. ವಿರುದ್ಧ ಗುಂಪಿನ ರಕ್ತವನ್ನು ವ್ಯಕ್ತಿಯೊಬ್ಬನಿಗೆ ಪೂರಣ ಮಾಡಿದಾಗ ಪ್ರತಿಜನಕ-ಪ್ರತಿಕಾಯಗಳು ತೀವ್ರವಾಗಿ ವರ್ತಿಸಿ ಜೀವಹಾರಕವಾಗಬಹುದು. ಪ್ರತಿಕಾಯಗಳು ಜನ್ಮದತ್ತವಾದವು ಹಾಗೂ ವಂಶವಾಹಿಗಳಿಂದ ನಿಯಂತ್ರಿಸಲ್ಪಡುವಂತಹವು
ಕಣ ಸಂಸೂಚಕ
(ಭೌ) ಕ್ಷಿಪ್ರಚಲನೆಯಲ್ಲಿರುವ ಆವಿಷ್ಟ ಪರಮಾಣು ಅಥವಾ ನ್ಯೂಕ್ಲಿಯರ್ ಕಣಗಳ ಇರವನ್ನು ಪತ್ತೆಹಚ್ಚಲು ಬಳಸುವ ಸಾಧನ. ಕಣ ಈ ಸಾಧನದ ಮೂಲಕ ಹಾದುಹೋಗುವಾಗ ಉಂಟಾಗುವ ವಿದ್ಯುತ್ ಕ್ಷೋಭೆಯನ್ನು ಅವಲೋಕಿಸುವ ಮೂಲಕ ಅದರ ಇರವು ಪತ್ತೆಯಾಗುತ್ತದೆ
ಕಣ ಹಿಮ
(ಭೂವಿ) ಉನ್ನತ ಪರ್ವತ ಶಿಖರಗಳಲ್ಲಿ ಸದಾ ಕಾಣ ಬರುವ, ರಾಶಿಗೂಡಿದ ಹಿಮಕಣಗಳಂಥ ಗಡಸು ನೀರ್ಗಲ್ಲು
ಕಣಕಾರಿ
(ತಂ) ತೈಲ ಎಂಜಿನ್ನಿನ ದಹನಕೋಷ್ಠಕ್ಕೆ ತೈಲೇಂಧನವನ್ನು ತುಂತುರು ಕಣ ಗಳಾಗಿ ಸಿಂಪಡಿಸುವ ಸೂಸು ಮೂತಿ. ಇಂಧನದ ಚದರಿಕೆ ಹಾಗೂ ದಹನಕ್ರಿಯೆಯನ್ನು ಉತ್ತಮಗೊಳಿಸಲು ಇಂಧನವನ್ನು ನವುರಾದ ಆವಿರೂಪಕ್ಕೆ ವಿಭಜಿ ಸುವುದು ಇದರ ಗುರಿ. ತುಂತುರುಕಾರಿ
ಕಣಗ್ರಹ
(ಖ) ಸೌರವ್ಯೂಹ ವಿಕಾಸದ ಆರಂಭದಲ್ಲಿ ಸಣ್ಣ ಗಾತ್ರದ ಶೀತಲ ಮೋಡದ ಕಣಗಳ ದಟ್ಟಣೆಯಿಂದ ರೂಪಿತವೆಂದು ನಂಬಲಾದ ಸೂಕ್ಷ್ಮಗ್ರಹ. ಪ್ಲಾನೆಟಿಸಿಮಲ್
ಕಣಜ
(ಪ್ರಾ) ಆರ್ತ್ರಾಪೊಡ ವಿಭಾಗದ ಇನ್ಸೆಕ್ಟ ವರ್ಗದ ಹೈಮೆನಾಪ್ಟರ ಗಣಕ್ಕೆ ಸೇರಿದ ಕೀಟ. ಕುಟುಕಲು ಅಥವಾ ಹೀರಲು ಅನುವಾದ ವದನಾಂಗಗಳು, ನಾಲ್ಕು ನಯಪಾರಕ ರೆಕ್ಕೆಗಳು, ಡಿಂಭಗಳಿಗೆ ಕಾಲುಗಳಿಲ್ಲದಿರುವುದು, ೧೨-೧೩ ಕುಡಿ ಮೀಸೆಗಳು, ಉದರಕ್ಕೂ ಎದೆಗೂ ನಡುವೆ ತೊಟ್ಟಿನಂತಿರುವ ನಡು – ಇವು ಕಣಜದ ಮುಖ್ಯ ಲಕ್ಷಣಗಳು. ಮಾಂಸಾಹಾರಿ
ಕಣತಲೆ
(ವೈ) ಹಣೆಗೂ ಕಿವಿಗೂ ನಡುವೆ ತಲೆಯ ಎರಡೂ ಪಕ್ಕಗಳ ಚಪ್ಪಟೆ ಭಾಗ. ಕಪೋಲ, ಗಂಡಸ್ಥಲ
ಕಣಸಂಶ್ಲೇಷಜನಕ
(ವೈ) ೧. ರಕ್ತದಲ್ಲಿ/ಬ್ಯಾಕ್ಟೀರಿಯಾ ದಲ್ಲಿ ಇರುವ ಈ ಪದಾರ್ಥದ ಜೊತೆ ರಕ್ತ ವರ್ತಿಸಿ ಕಣ ಸಂಶ್ಲೇಷಕಾರಕ ಉತ್ಪತ್ತಿಯಾಗುತ್ತದೆ. ೨. ಈ ಕಾರಕದ ಕ್ರಿಯೆಯಿಂದ ಕಣ ಸಂಶ್ಲೇಷ ಜರಗುತ್ತದೆ. ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೆ ಅದರದೇ ಆದ ಒಂದು “ಪಾಸ್ಪೋರ್ಟ್” ಇರುತ್ತದೆ. ಇದೇ “ಎಚ್.ಎಲ್.ಎ. ವ್ಯವಸ್ಥೆ”. ನಮ್ಮ ದೇಹದ ಬಿಳಿಯ ರಕ್ತ ಕಣಗಳು ಈ ವ್ಯವಸ್ಥೆ ಇರದ ಜೀವಕೋಶ/ಕಣ/ವಸ್ತು ಗಳನ್ನು ಪರವಸ್ತುಗಳೆಂದು ಬಗೆಯುತ್ತವೆ ಹಾಗೂ ಅವನ್ನು ನಿರ್ಮೂಲ ಗೊಳಿಸುತ್ತವೆ. ಈ ಪರವಸ್ತುಗಳೇ ಪ್ರತಿಜನಕಗಳು. ಅಂಟಿಕೆಯ ಮೂಲಕ ಪ್ರತಿಕಾಯಗಳು ಪ್ರತಿಜನಕಗಳನ್ನು ನಿವಾರಿಸುತ್ತವೆ
ಕಣಿವೆ
(ಭೂವಿ) ಎರಡು ಉನ್ನತ ಪ್ರದೇಶಗಳ ನಡುವಿನ ನಿಮ್ನ ಭಾಗ. ನದಿ ಕೊರೆತ ಇತ್ಯಾದಿಗಳಿಂದಾದುದು
ಕಣ್ಕಾಪು
(ಸಾ) ಕುದುರೆಗೆ ಪಕ್ಕ ನೋಟಕ್ಕೆ ಅವಕಾಶ ಇಲ್ಲದಿರುವಂತೆ ಕಟ್ಟುವ ಕಪ್ಪಡಿ. (ವೈ) ಕಣ್ಣಿನ ರಕ್ಷಣೆಗಾಗಲಿ, ಮೆಳ್ಳೆಗಣ್ಣನ್ನು ನೇರ್ಪಡಿಸಲು ದೃಷ್ಟಿ ಒಂದೇ ಕಡೆಗೆ ಹರಿಯುವಂತೆ ಮಾಡುವುದಕ್ಕಾಗಲೀ ಹಾಕುವ ಕನ್ನಡಕ. ಮೆಳ್ಳೆ ಕನ್ನಡಕ, ಧೂಳು ಝಳಗಳಿಂದ ಕಣ್ಣನ್ನು ರಕ್ಷಿಸುತ್ತದೆ
ಕಣ್ಗತ್ತಲೆ
(ವೈ) ಮಿದುಳಿಗೆ ಹರಿಯುವ ರಕ್ತದ ಮೊತ್ತ ಹಠಾತ್ತನೆ ಕುಸಿದಾಗ ತಾತ್ಕಾಲಿಕವಾಗಿ ಸಂಭವಿಸುವ ದೃಷ್ಟಿನಷ್ಟ ಮತ್ತು ಪ್ರಾಯಶಃ ಪ್ರಜ್ಞಾಶೂನ್ಯತೆ, ಕಣ್ಗುರುಡು
ಕಣ್ಣಿನ ಕರಿಗುಡ್ಡೆ
(ಪ್ರಾ) ನೋಡಿ : ಕಾರ್ನಿಯ
ಕಣ್ಣು
(ಪ್ರಾ) ಬಾಹ್ಯವಸ್ತುಗಳ ರೂಪವನ್ನು ಮನಸ್ಸಿನ ಮೇಲೆ ಮೂಡಿಸುವ ದೃಶ್ಯೇಂದ್ರಿಯ. ಪಂಚೇಂದ್ರಿಯಗಳಲ್ಲೊಂದು. (ಪವಿ) ಚಂಡಮಾರುತದ ಮಧ್ಯದಲ್ಲಿರುವ ಸ್ತಬ್ಧ ಪ್ರದೇಶ. (ತಂ) ಗುಮ್ಮಟದ ಮೇಲಿನ ವೃತ್ತಾಕಾರದ ಕಿಂಡಿ. ಕುಂಡದಂಥ ಕುಲುಮೆಯ ತಳಗಡೆ ಮಧ್ಯದಲ್ಲಿ ಇಲ್ಲವೇ ಬೇರೆಲ್ಲಾದರೂ ಇರುವ ಕಿಂಡಿ. ಇದರ ಮೂಲಕ ದಹ್ಯಾನಿಲಗಳು ಜ್ವಾಲೆಯಾಗಿ ಹೊರಹೊಮ್ಮಿ ಕುಲುಮೆಯನ್ನು ಕಾಯಿಸುತ್ತವೆ
ಕಣ್ಣು ಮಿಟುಕಿಸುವ ಗ್ರಹಾತ್ಮಕ ನೀಹಾರಿಕೆ
(ಖ) ರಾಜಹಂಸ ಪುಂಜದಲ್ಲಿರುವ ನೀಹಾರಿಕೆ. ಆಗಾಗ ಉಜ್ವಲಿಸಿ ನಂದುತ್ತ ಮಿಟುಕುತ್ತಿರುವುದರಿಂದ ಇದಕ್ಕೆ ಈ ಹೆಸರು
ಕಣ್ಣು ರವೆರೋಗ
(ವೈ) ನೋಡಿ : ರವೆಗಣ್ಣು
ಕಣ್ಪರೆ