Navakarnataka Vijnana Tantrajnana Padasampada (2011)
Navakarnataka Publications Private Limited
ಔಟ್ಪುಟ್
(ತಂ) ೧. ಯಾವುದೇ ಯಂತ್ರದಲ್ಲಿ (ವಿಶೇಷವಾಗಿ ಕಂಪ್ಯೂಟರ್ನಲ್ಲಿ) ಅನೇಕ ಸಂಸ್ಕರಣೆಗಳ ಫಲವಾಗಿ ದೊರೆತ ಹಾಗೂ ಆ ಯಂತ್ರದಿಂದ ಮತ್ತೊಂದು ಬಾಹ್ಯ ಸಾಧನಕ್ಕೆ ಅಥವಾ ಶಾಶ್ವತ ದಾಖಲೆ ಮಾಧ್ಯಮಕ್ಕೆ (ಕಾಗದ, ಮೈಕ್ರೊಫಿಲ್ಮ್ ಇತ್ಯಾದಿಗಳಿಗೆ) ವರ್ಗಾಯಿತವಾಗುವ ಮಾಹಿತಿ. ೨. ಮಂಡಲ ಅಥವಾ ಸಾಧನವೊಂದು ನೀಡುವ ವಿದ್ಯುಚ್ಛಕ್ತಿ, ವೋಲ್ಟೇಜ್, ಚಾಲಕ ಬಲಗಳ ಪ್ರಮಾಣ ಅಥವಾ ಸುದ್ದಿ ಸಮಾಚಾರ. ಪ್ರದಾನ. ನಿರ್ಗಮ. ನೋಡಿ: ಇನ್ಪುಟ್
ಔನ್ಸ್
(ಪ್ರಾ) ಚಿರತೆಗಿಂತ ಚಿಕ್ಕದಾದ, ಆದರೆ ಅದೇ ಬಗೆಯ ಚುಕ್ಕೆಗಳುಳ್ಳ ಒಂದು ತರಹದ ಸಣ್ಣ ಚಿರತೆ. ಪ್ಯಾಂತರಅನ್ಸಿ ಕುಲದ ಬೆಕ್ಕಿನ ಬಳಗದ ಪ್ರಾಣಿ ಹಿಮಚಿರತೆ. (ತಂ) ತೂಕದ ಹಾಗೂ ಗಾತ್ರದ ಒಂದು ಮಾನ. ತೂಕ ೧ ಔನ್ಸ್ = ೨೮.೩೫ ಗ್ರಾಂ; ಗಾತ್ರ ೧ ಔನ್ಸ್ = ೨೩.೪೧ ಮಿಲೀ.
ಔಷಧ ಪ್ರಭಾವ ವಿಜ್ಞಾನ
(ವೈ) ಔಷಧದ ಹುಟ್ಟು, ಸ್ವಭಾವ, ಲಕ್ಷಣ ಹಾಗೂ ಜೀವಂತ ದೇಹದ ಮೇಲೆ ಅದರ ಪರಿಣಾಮ ಅಭ್ಯಸಿಸುವ ವಿಜ್ಞಾನ
ಔಷಧ ವಿನಿಯೋಗ ವಿಜ್ಞಾನ
(ವೈ) ಔಷಧ ತಯಾರಿಕೆಯ ಮತ್ತು ವಿನಿಯೋಗದ ರೀತಿ ನೀತಿಗಳನ್ನು ಅಧ್ಯಯನ ಮಾಡುವ ಶಾಸ್ತ್ರ
ಔಷಧ ವ್ಯಾಪಾರಿ
(ವೈ) ರೋಗಿಗಳಿಗೆ ವೈದ್ಯರು ಬರೆದುಕೊಟ್ಟ ಚೀಟಿಗನುಗುಣವಾಗಿ ಔಷಧಗಳನ್ನು ಸಿದ್ಧಪಡಿಸಿ ಕೊಡುವ ಅಥವಾ ಸಿದ್ಧಪಡಿಸಿದ ಔಷಧಗಳನ್ನು ನೀಡುವ ತಜ್ಞ
ಔಷಧ ಸಸ್ಯಗಳು
(ಸ) ಮಾನವನ ಹಾಗೂ ಪಶುಪಕ್ಷಿಗಳ ರೋಗ ಶಮನಕಾರಕ ಉತ್ಪನ್ನ ನೀಡುವ ಗಿಡ. ಬಳ್ಳಿ, ಮರ, ಮೂಲಿಕೆ, ನಿಸರ್ಗದಲ್ಲಿ ಸ್ವೇಚ್ಛೆಯಾಗಿ ಬೆಳೆಯುತ್ತವೆ. ಕೆಲವನ್ನು ಪ್ರಯತ್ನ ಪೂರ್ವಕವಾಗಿ ಬೆಳೆಸುವುದು ಉಂಟು. ಇವುಗಳ ಬೇರು, ಕಾಂಡ, ಎಲೆ, ಹೂ, ಹಣ್ಣು, ಕಾಯಿ, ಬೀಜ, ತೊಗಟೆ ಇತ್ಯಾದಿಗಳೆಲ್ಲ ಔಷಧ ತಯಾರಿಕೆಯಲ್ಲಿ ಉಪಯುಕ್ತ. ಇವುಗಳಲ್ಲಿರುವ ನಿರ್ದಿಷ್ಟ ರಾಸಾಯನಿಕ ಘಟಕಗಳಿಂದ ಇವುಗಳಿಗೆ ರೋಗ ಪರಿಹಾರಕ ಗುಣ ಒದಗುತ್ತದೆ. ಕೆಳವರ್ಗದ ಸಸ್ಯಗಳಿಂದ (ಅಂದರೆ ಬೂಷ್ಟು, ಪಾಚಿ ಇತ್ಯಾದಿ) ತಯಾರಾಗುವ ಔಷಧಗಳು: ಪೆನಿಸಿಲಿನ್, ಸ್ಟ್ರೆಪ್ಟೊಮೈಸಿನ್, ಎರ್ಗಟ್, ಅಯೊಡೀನ್ ಇತ್ಯಾದಿ. ಮೇಲ್ವರ್ಗದ ಸಸ್ಯಗಳಿಂದ ಆದವು: ಅಕೊನಿಟಮ್, ಪೊಡೊ ಫಿಲ್ಲಮ್, ಜಲಪ್, ಕ್ವಿನೈನ್, ಕೊಕೇನ್ ಇತ್ಯಾದಿ. ಅರಿಶಿನ, ಇಂಗು, ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ದಾಲ್ಚಿನ್ನಿ, ತುಳಸಿ, ವೀಳಯದೆಲೆ, ಬಾಲ ಮೆಣಸು, ಅಳಲೆಕಾಯಿ, ಬಿಲ್ವಪತ್ರೆ, ಮೆಂತ್ಯ, ಪರಂಗಿ ಇವು ಉಪಯುಕ್ತ ಔಷಧ ಸಸ್ಯಗಳಲ್ಲಿ ಕೆಲವು
ಔಷಧಭೀತಿ
(ವೈ) ಔಷಧಗಳ ಬಗೆಗೆ ಅಪಸಾಮಾನ್ಯ ಅಂಜಿಕೆ
ಔಷಧಮಂಜರಿ
(ವೈ) ಪ್ರಯೋಗ ಕ್ರಮ ಸಹಿತವಾದ ಔಷಧ ವಸ್ತುಗಳ ಪಟ್ಟಿಯುಳ್ಳ ಅಧಿಕೃತ ಪ್ರಕಟಣೆ
ಔಷಧವಸ್ತು ವಿಜ್ಞಾನ