भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಏರಾನಮಿ

(ಭೂ) ಊರ್ಧ್ವ ವಾಯುಮಂಡಲ ವಿಜ್ಞಾನ. ಮೇಲ್ವಾಯುಮಂಡಲದ ರಾಸಾಯನಿಕ ಸಂಯೋಜನೆ, ಭೌತಿಕ ಗುಣಗಳು ಮೊದಲಾದವನ್ನು ಕುರಿತ ವಿಜ್ಞಾನ ವಿಭಾಗ

ಏರಿ

(ತಂ) ನದಿಯ ನೀರು ತಗ್ಗು ಪ್ರದೇಶಗಳಿಗೆ ಹರಿದು ಹೋಗುವುದನ್ನು ತಪ್ಪಿಸಲು ಮತ್ತು ಪ್ರವಾಹದ ನೀರನ್ನು ಉಳಿಸಿ ಕೊಳ್ಳಲು ನದಿಗೆ ಅಡ್ಡವಾಗಿ ಶುಷ್ಕ ಭೂಮಿಯ ಮೇಲೆ ನಿರ್ಮಿಸುವ ಒಂದು ಅಡ್ಡಗಟ್ಟು. ಬದು

ಏರಿ

(ಸಾ) ಗದ್ದೆಗಳ ನಡುವೆ ಇಕ್ಕಟ್ಟಾದ ಎತ್ತರದಾರಿ. ಕಟ್ಟೆ. ಬದು

ಏರಿದ ದಂಡೆ

(ಭೂವಿ) ಸಮುದ್ರ ಮಟ್ಟ ಇಳಿದುದರ ಇಲ್ಲವೇ ತೀರಪ್ರದೇಶ ಸಾಪೇಕ್ಷವಾಗಿ ಮೇಲೆ ಏರಿದುದರ ಫಲವಾಗಿ, ಪ್ರಸಕ್ತ ಉನ್ನತ ಜಲಮಟ್ಟಕ್ಕೂ ಮೇಲಿನ ಸ್ತರಗಳಲ್ಲಿ ಕಂಡುಬರುವ ಕಡಲತೀರ

ಏರಿಯಲ್

(ತಂ) ನೋಡಿ : ಆಂಟೆನ

ಏರಿಸು

(ತಂ) ಯಾವುದೇ ವಸ್ತುವಿನ ಉತ್ಪಾದನೆಯನ್ನು, ಉತ್ಪಾದನಾ ದರವನ್ನು, ಒಟ್ಟಿನಲ್ಲಿ ಯಾವುದೇ ಪ್ರಮಾಣವನ್ನು ಹೆಚ್ಚಿಸುವುದು. ವಿದ್ಯುತ್ ಪ್ರವಾಹದ ವೋಲ್ಟೇಜ್ ಹೆಚ್ಚಿಸುವುದು (ಸ್ಟೆಪ್-ಅಪ್ ಟ್ರಾನ್ಸ್‌ಫಾರ್ಮರ್ ಮೂಲಕ). ಪ್ರವರ್ಧಿಸು

ಏರಿಳಿತ

(ಸಾ) ಕ್ರಮಬದ್ಧ ಲಯವಿಲ್ಲದೆ, ಆದರೆ ಎರಡು ಮಿತಿಗಳ ನಡುವೆ ಆಗುವ, ಸಂಪೂರ್ಣ ಆಕಸ್ಮಿಕ ಬದಲಾವಣೆ. (ವೈ) ಶರೀರದ ಯಾವುದೇ ಕುಹರದಲ್ಲಿ ಇಲ್ಲವೇ ಅಸಹಜ ಊತಕದಲ್ಲಿ ದ್ರವ ಪದಾರ್ಥದ ಅಲೆಯಂಥ ಚಲನೆ. ಆ ಭಾಗವನ್ನು ಮುಟ್ಟಿದಾಗ ಇದು ತಿಳಿದುಬರುತ್ತದೆ

ಏರಿಳಿತದ ನಿಗದಿಸಬಲ್ಲ ಕಾರಣಗಳು

(ಸಂ) ಉತ್ಪಾದಿತ ವಸ್ತುವಿನ ಗುಣಮಟ್ಟದಲ್ಲಿ ಏರಿಳಿತ ಪ್ರಚೋದಿಸುವ ನಿರ್ದಿಷ್ಟ ಕಾರಣಗಳು; ಮೂಲ ವಸ್ತುಗಳ ಗುಣ, ಕೆಲಸಗಾರರ ಕೌಶಲ, ಉಪಕರಣಗಳ ಹೊಂದಾಣಿಕೆ ಇತ್ಯಾದಿ ಉದಾಹರಣೆಗಳು. ನಿಯಂತ್ರಣ ನಕ್ಷೆಗಳ ಮೂಲಕ ಇಂಥ ಕಾರಣಗಳ ಇರುವಿಕೆಯನ್ನು ಪತ್ತೆ ಹಚ್ಚಬಹುದು

ಏರಿಳಿತದ ಯಾದೃಚ್ಛಿಕ ಕಾರಣಗಳು

(ಸಂ) ಉತ್ಪಾದಿತ ವಸ್ತುಗಳ ಗುಣದಲ್ಲಿ ಏರಿಳಿತಕ್ಕೆ ಕಾರಣಗಳನ್ನು ಎರಡಾಗಿ ವಿಂಗಡಿಸುತ್ತಾರೆ: ಒಂದು, ಮೂಲ ವಸ್ತುವಿನ ಗುಣ, ಕೆಲಸಗಾರರ ಕುಶಲತೆ ಇತ್ಯಾದಿ ನಿರ್ದಿಷ್ಟ ಕಾರಣಗಳು. ಇನ್ನೊಂದು, ನಿಯಂತ್ರಿಸಲಾಗದ, ಆದರೆ ಗುಣಮಟ್ಟದ ಮೇಲೆ ಅಷ್ಟೇನೂ ಪರಿಣಾಮ ಬೀರದ, ಯಾದೃಚ್ಛಿಕ ಕಾರಣಗಳು. ಗುಣ ನಿಯಂತ್ರಣ ವಿಧಾನಗಳಿಂದ ನಿರ್ದಿಷ್ಟ ಕಾರಣಗಳ ಇರುವಿಕೆ ಸೂಚಿಸಬಹುದು

ಏರಿಳಿತದ ಸಹಗುಣಾಂಕ

(ಸಂ) ದತ್ತಾಂಶದ ಶಿಷ್ಟ ವಿಚಲನೆಯನ್ನು ಅಂಕಗಣಿತೀಯ ಮಾಧ್ಯಕದಿಂದ ಭಾಗಿಸಿದಾಗ ಸಿಗುವ ಸಂಖ್ಯೆ. ಇದು ಅಳತೆಯ ಮಾನಗಳಿಂದ ಸ್ವತಂತ್ರವಾಗಿರುವುದರಿಂದ ಹೋಲಿಕೆಗಳಿಗೆ ಅತ್ಯಂತ ಸೂಕ್ತ ಹಾಗೂ ಉಪಯುಕ್ತ

ಏರಿಳಿಯುವ ಜ್ವರ

(ವೈ) ತರಂಗ ಜ್ವರ, ನೋಡಿ: ಬ್ರೂಸೆಲ್ಲ ವ್ಯಾಧಿ

ಏರು

(ಸಾ) ವಿಮಾನದ ಎತ್ತರದಲ್ಲಿ ಆದ ಗಳಿಕೆ. ಅಡರು. ಹತ್ತು. ಮೇಲೆ ಹೋಗು

ಏರು ಬಣ್ಣಗಳು

(ತಂ) ಕೆಂಪು-ಕಿತ್ತಳೆ- ಹಳದಿ ವಲಯದಲ್ಲಿರುವ ಈ ಬಣ್ಣಗಳನ್ನು ಲೇಪಿಸಿದ ಮೇಲ್ಮೈಗಳು ಎದ್ದುಕಾಣುತ್ತವೆ, ಇಲ್ಲವೇ ಹತ್ತಿರ ಸರಿದಿರುವಂತೆ ಭಾಸವಾಗುತ್ತವೆ

ಏರೊತ್ತಡ

(ವೈ) ನೋಡಿ: ರಕ್ತದ ಏರೊತ್ತಡ

ಏರೊಸಾಲ್

(ತಂ) ಕೀಟನಾಶಕ, ಸುಗಂಧದ್ರವ್ಯ, ಬಣ್ಣ ಮುಂತಾದವನ್ನು ತುಂಬುವ, ಸಿಂಪರಣೆ ಏರ್ಪಾಡೂ ಇರುವ ಧಾರಕ. (ರ) ಮಂಜು ಅಥವಾ ಕಾವಳದಂಥ ಯಾವುದೇ ಕಲಿಲ ವ್ಯವಸ್ಥೆ; ಇದರಲ್ಲಿಯ ಪ್ರಸರಣ ಮಾಧ್ಯಮ ಒಂದು ಅನಿಲ

ಏರ್

(ಗ) ನೆಲದ ವಿಸ್ತೀರ್ಣ ಅಳೆಯಲು ಬಳಸುವ ಮೆಟ್ರಿಕ್ ಮಾನ. ೧ ಏರ್=೧೦೦ ಚಮೀ=೧೧೯.೬ ಚಗ. ನೋಡಿ: ಹೆಕ್ಟೇರ್

ಏಲಕ್ಕಿ

(ಸ) ಜಿಂಜಿಬರೇಸೀ ಕುಟುಂಬಕ್ಕೆ ಸೇರಿದ ಏಕದಳ ಪಂಗಡದ ಬಹು ವಾರ್ಷಿಕ ಸಸ್ಯ. ಎಲಿಟೇರಿಯ ಕಾರ್ಡಮೋಮಮ್ ವೈಜ್ಞಾನಿಕ ನಾಮ. ಮುಖ್ಯವಾಗಿ ಭಾರತ, ಮಲಯ ಪರ್ಯಾಯ ದ್ವೀಪಗಳಲ್ಲಿ ಬೆಳೆಯುತ್ತದೆ. ಘಮಘಮಿಸುವ ಬೀಜಗಳುಳ್ಳ ಇದರ ಕಾಯಿಗಳನ್ನು ಸಂಬಾರ ಪದಾರ್ಥವಾಗಿ ಉಪಯೋಗಿಸಲಾಗುವುದು. ತೈಲಾಂಶದಲ್ಲಿ ಔಷಧೀಯ ಗುಣಗಳುಂಟು

ಏಲಿರಾನ್

(ತಂ) ವಿಮಾನದ ರೆಕ್ಕೆಯ ಹಿಂಜೋಲು ಅಂಚುಭಾಗ. ಇದನ್ನು ಕೀಲಿನಿಂದ ರೆಕ್ಕೆಗೆ ಜೋಡಿಸಲಾಗಿರುತ್ತದೆ. ಚಾಲಕ ಇದನ್ನು ನಿಯಂತ್ರಿಸಿ ವಿಮಾನದ ಅನುದೀರ್ಘಾಕ್ಷ ಕುರಿತಂತೆ ವಿಮಾನಕ್ಕೆ ಉರುಳು ಚಲನೆ ಒದಗಿಸಿ ಅದರ ಸಮತೋಲ ಕಾಪಾಡ ಬಲ್ಲ. ಪಾರ್ಶ್ವ ಸಮತೋಲ ನಿಯಂತ್ರಕ

ಏಲ್

(ರ) ಮೊಳೆತ ಜವೆಗೋದಿಯನ್ನು ನೀರಿನಲ್ಲಿ ಕೊಳೆಸಿ, ಹುಳಿ ಬರಿಸಿದ ಬಳಿಕ ಈ ದ್ರವಕ್ಕೆ ಹಾಪ್ಸ್ ಎಂಬ ಕಹಿ ಸಸ್ಯ ಪದಾರ್ಥ ಬೆರೆಸಿ ತಯಾರಿಸಿದ ಸೌಮ್ಯ ಮದ್ಯ

ಏವೀಸ್

(ಪ್ರಾ) ವಾಯು ಮಂಡಲದಲ್ಲಿ ಬಾಳಲು ಬೇಕಾಗುವ ಯುಕ್ತ ದೈಹಿಕ ಮಾರ್ಪಾಟು ಪಡೆದಿರುವ ಅಸ್ಥಿ ಪಟ್ಟೆ ಪ್ರಾಣಿವರ್ಗ. ಪಕ್ಷಿವರ್ಗ

Search Dictionaries

Loading Results

Follow Us :   
  Download Bharatavani App
  Bharatavani Windows App