भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಎರ್ಬಿಯಮ್

(ರ) ಇಟ್ರಿಯಮ್ ಉಪಗುಂಪಿನ ವಿರಳ ಧಾತುಗಳ ಪೈಕಿ ಒಂದು. ವೇಲೆನ್ಸಿ ೩. ಲೋಹರೂಪಿ. ಪ್ರತೀಕ er. ಪಸಂ ೬೮. ಪತೂ ೧೬೭.೨೬. ದ್ರಬಿಂ. ೧೪೯೭0 ಸೆ.

ಎಲಿನ್ವಾರ್

(ತಂ) ಶೇ.೩೬ ನಿಕ್ಕಲ್ ಮತ್ತು ಶೇ.೧೨ ಕ್ರೋಮಿಯಮ್ ಒಳಗೊಂಡಿರುವ ಉಕ್ಕು. ಪರಿಸರದಲ್ಲಿ ಉಂಟಾಗಬಹುದಾದ ಉಷ್ಣತಾ ಬದಲಾವಣೆಗಳು ಇದರ ಸ್ಥಿತಿಸ್ಥಾಪಕತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಗಡಿಯಾರಗಳ ಗತಿ ನಿಯಂತ್ರಕ ಚಕ್ರಗಳನ್ನು (ಹೇರ್‌ಸ್ಪ್ರಿಂಗ್ಸ್) ಮಾಡಲು ಪ್ರಶಸ್ತ

ಎಲಿವೇಟರ್

(ತಂ) ನೋಡಿ : ಎತ್ತುಗ

ಎಲುಬಿನ ಉರಿಯೂತ

(ವೈ) ಎಲುಬಿಗೆ ಪೆಟ್ಟು ಬಿದ್ದಾಗ ಅಥವಾ ಸೋಂಕು ತಗಲಿದಾಗ ಅದರಿಂದಾಗುವ ನೋವು ಉರಿಗಳಿಂದ ಕೂಡಿದ ಊತ

ಎಲುಬು

(ಪ್ರಾ) ಸಂಯೋಜಕ ಊತಕದ ಒಂದು ಬಗೆ. ಇದರ ತಿರುಳು ಮುಖ್ಯವಾಗಿ ಫಾಸ್ಫೇಟ್ ಮತ್ತು ಕಾರ್ಬೊನೇಟ್ ಎಂಬ ಲವಣಗಳಿಂದಾಗಿದೆ. ಪ್ರಾಣಿಯ ದೇಹಕ್ಕೆ ದೃಢತೆ ಒದಗಿಸುವ ಗಟ್ಟಿ ಘಟಕ. ಮೂಳೆ. ಅಸ್ಥಿ

ಎಲೆ

(ಸ) ನಾಳ ಸಸ್ಯಕಾಂಡಗಳ ಮೇಲೆ ಆಚೀಚೆ ಚಾಚಿಕೊಂಡು ಬೆಳೆಯುವ ಪ್ರಮುಖ ಸಸ್ಯಾಂಗ. ಇದರಲ್ಲಿ ಪತ್ರಹರಿತ್ತು (ಕ್ಲೋರೊಫಿಲ್) ಇರುವುದರಿಂದ ಇದರ ಬಣ್ಣ ಸಾಮಾನ್ಯವಾಗಿ ಹಸಿರು. ಎಲೆಯ ಪ್ರಧಾನ ಕಾರ್ಯ ದ್ಯುತಿ ಸಂಶ್ಲೇಷಣೆ ಮತ್ತು ಬಾಷ್ಪ ವಿಸರ್ಜನೆ. ಎಲೆಯಲ್ಲಿ ಬುಡ, ತೊಟ್ಟು ಮತ್ತು ಅಲಗು ಉಂಟು. ಅಲಗಿನಲ್ಲಿ ಎದ್ದುಕಾಣುವ ವಿನ್ಯಾಸವಿದೆ. ಕೆಲವು ಬಗೆಯ ಸಸ್ಯಗಳಲ್ಲಿ ಎಲೆಗಳ ಅಂಚುಗಳಲ್ಲಿ ಮೊಗ್ಗುಗಳು ಹುಟ್ಟಿ, ಕೆಲ ಕಾಲಾನಂತರ ಕಳಚಿ ನೆಲಕ್ಕೆ ಬಿದ್ದು ಸಂತಾನವೃದ್ಧಿಯಲ್ಲಿ ನೆರವಾಗುವುದುಂಟು.

ಎಲೆಕಂಕುಳು

(ಸ) ಎಲೆಗೂ ಅದು ಚಿಗುರಿರುವ ಕಾಂಡಕ್ಕೂ ನಡುವಿನ ಭಾಗ

ಎಲೆಕಿವಿ

(ಸ) ಎಲೆಯ ಅಥವಾ ಅದರ ತೊಟ್ಟಿನ ಬುಡದಲ್ಲಿ ಇರುವ ಹಸುರು ಬಣ್ಣದ ಹೊರಚಾಚು. ಎಲೆಯಂತೆ, ಹುರುಪೆ ಯಂತೆ ಇರಬಹುದು. ಇದು ದ್ಯುತಿ ಸಂಶ್ಲೇಷಣೆಯನ್ನೂ ನಿರ್ವಹಿಸ ಬಹುದು ಅಥವಾ ಕಂಕುಳು ಮೊಗ್ಗುಗಳಿಗೆ ರಕ್ಷಣೆ ಒದಗಿಸಬಹುದು

ಎಲೆಕೀಟ

(ಪ್ರಾ) ಆರ್ತಾಪ್ಟರ ಗಣದ, ಫ್ಯಾಸ್ಮಿಡೀ ಕುಟುಂಬಕ್ಕೆ ಸೇರಿದ ಸಸ್ಯಾಹಾರಿ ಕೀಟ. ಬಾಹ್ಯರೂಪದಲ್ಲಿ ಇದು ಎಲೆಯನ್ನು ನವುರಾಗಿ ಹೋಲುವುದರಿಂದ ಈ ಹೆಸರು ಬಂದಿದೆ. ಕಡ್ಡಿ ಕೀಟಕ್ಕೆ (ವಾಕಿಂಗ್ ಸ್ಟಿಕ್) ಸಮೀಪ ಸಂಬಂಧಿ

ಎಲೆಕೋಸು

(ಸ) ಬ್ರಾಸಿಕೇಸೀ ಕುಟುಂಬದ, ಬ್ರಾಸಿಕ ಓಲರೇಸಿಯ ಕ್ಯಾಪಿಟೇಟ ಎಂಬ ವೈಜ್ಞಾನಿಕ ಹೆಸರಿನ ಎಲೆ ತರಕಾರಿ ಸಸ್ಯ. ಆಹಾರ ಸಂಗ್ರಹಿಸಿದ ಬಿಳಿ ಎಲೆಗಳು ಒಂದರ ಮೇಲೊಂದು ಕವುಚಿ ಗೆಡ್ಡೆರೂಪ ತಾಳಿರುತ್ತವೆ. ಯೂರೋಪ್ ಏಷ್ಯಗಳಲ್ಲಿ ಬಲು ಹಿಂದಿನಿಂದ ವ್ಯವಸಾಯದಲ್ಲಿದೆ. ಹಸಿ ಕೋಸಿನಲ್ಲಿ ಎ, ಬಿ ಮತ್ತು ಬಿ೨ ವೈಟಮಿನ್‌ಗಳೂ ಅತ್ಯಧಿಕ ಪ್ರಮಾಣದಲ್ಲಿ ‘ಸಿ’ ವೈಟಮಿನ್ನೂ ಇವೆ. ಕ್ಯಾಬೇಜ್

ಎಲೆಕ್ಟ್ರಮ್

(ರ) ೧. ಚಿನ್ನ ಬೆಳ್ಳಿಗಳ ಮಿಶ್ರಲೋಹ. (ಶೇ. ೫೫-೮೮ರಷ್ಟು ಚಿನ್ನ). ನಿಸರ್ಗದಲ್ಲಿ ಸಹಜವಾಗಿ ಲಭಿಸುತ್ತದೆ. ೨. ನಿಕಲ್ ಬೆಳ್ಳಿ (ತಾಮ್ರ ಶೇ. ೫೨; ನಿಕಲ್ ಶೇ. ೨೬; ಸತುವು ಶೇ. ೨೨) ಜರ್ಮನ್ ಸಿಲ್ವರ್ ಎಂಬ ಹೆಸರುಂಟು

ಎಲೆಕ್ಟ್ರಾನಿಕ್ ಸಂಕೇತಗಳು

(ತಂ) ೧. ಪರ್ಯಾಯ ವಿದ್ಯುತ್. ೨. ಅರ್ತ್. ೩. ಕೋಶ. ೪. ಸ್ವಿಚ್. ೫. ಕೂಡಿಸಿದ ತಂತಿಗಳು. ೬. ಕೂಡಿಸದ ತಂತಿಗಳು. ೭. ಫ್ಯೂಸ್. ೮. ರೆಸಿಸ್ಟರ್ (ರೋಧಕ). ೯. ಚರರೋಧಕ. ೧೦. ಸುರುಳಿ ತಂತಿ. ೧೧. ಆಮ್ಮೀಟರ್. ೧೨. ವೋಲ್ಟ್ ಮೀಟರ್. ೧೩. ಅಂಪ್ಲಿಫೈಯರ್ (ಪ್ರವರ್ಧಕ). ೧೪. ಕೆಪಾಸಿಟರ್. ೧೫. ಆನೋಡ್. ೧೬. ಡಯೋಡ್. ೧೭. ಟ್ರಾನ್ಸಿಸ್ಟರ್. ೧೮. ಟ್ರಾನ್ಸ್‌ಫಾರ್ಮರ್

ಎಲೆಕ್ಟ್ರಾನಿಕ್ಸ್

(ಭೌ) ನಿರ್ದ್ರವ್ಯತೆ, ಅನಿಲ ಅಥವಾ ಅರೆವಿದ್ಯುತ್ ವಾಹಕಗಳ ಮೂಲಕ ಎಲೆಕ್ಟ್ರಾನ್‌ಗಳ ಪ್ರವಹನ ತತ್ತ್ವಗಳನ್ನು ಆಧರಿಸಿ ರೂಪುಗೊಂಡಿರುವ ವಿಜ್ಞಾನ ವಿಭಾಗ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನ ಒಂದು ವಿಶಿಷ್ಟ ವಿಭಾಗ. ನಿರ್ದ್ರವ್ಯ ನಳಿಕೆ, ಅನಿಲಪೂರಿತ ನಳಿಕೆ, ಟ್ರಾನ್ಸಿಸ್ಟರ್ ಮೊದಲಾದವು ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಸೇರುತ್ತವೆ. ವಿದ್ಯುತ್ ಮೋಟಾರ್. ಪ್ರಜ್ವಲಿತ ದೀಪ ಮೊದಲಾದವು ಸೇರುವುದಿಲ್ಲ. ಆಧುನಿಕ ತಂತ್ರವಿದ್ಯೆಯ ಆಧಾರ ಸ್ತಂಭ, ಕಂಪ್ಯೂಟರ್‌ನ ಹೂರಣ, ಆಕಾಶಯಾನದ ಬೆನ್ನೆಲುಬು. ಇಲೆಕ್ಟ್ರಾನಿಕ್ಸ್

ಎಲೆಕ್ಟ್ರಾನ್

(ಭೌ) ಋಣ ವಿದ್ಯುದಾವಿಷ್ಟ ಮೂಲಕಣ. ಆವೇಶ = ೧.೬೦೨೬೬೬೧೦-೧೯ ಕೂಲಂಬ್‌ಗಳು. ರಾಶಿ = ೯.೧೦೯ ೧೦-೩೧ ಕಿಗ್ರಾಂ. ಪರಮಾಣುವಿನ ಮೂಲ ಘಟಕಗಳಲ್ಲೊಂದು. ಪರಮಾಣು ಬೀಜದ ಸುತ್ತ ನಿರ್ದಿಷ್ಟ ಸಂಖ್ಯೆಯಲ್ಲಿದ್ದು ಎಲೆಕ್ಟ್ರಾನ್‌ಗಳು ವಿವಿಧ ಚಿಪ್ಪುಗಳನ್ನು ನೇಯುತ್ತಿರುವಂತೆ ನಿರಂತರವಾಗಿ ಸುತ್ತುತ್ತಿರುತ್ತವೆ. ಈ ಎಲೆಕ್ಟ್ರಾನ್ ವಿನ್ಯಾಸವೇ ಪರಮಾಣುವಿನ ರಾಸಾಯನಿಕ ಗುಣಗಳಿಗೆ ಕಾರಣ. ಘನವಸ್ತುಗಳಲ್ಲಿ ವಿದ್ಯುತ್ ವಾಹಕವಾಗಿ ವರ್ತಿಸುವ ಸ್ಥಿರ ಕಣ. ಇದರ ಪ್ರತಿಕಣ ಪಾಸಿಟ್ರಾನ್. ಎಲೆಕ್ಟ್ರಾನ್‌ನ ಪರ್ಯಾಯ ನಾಮ ನೆಗೆಟ್ರಾನ್. ಇಲೆಕ್ಟ್ರಾನ್. ನೋಡಿ: ಪಾಸಿಟ್ರಾನ್; ಕೂಲಂಬ್

ಎಲೆಕ್ಟ್ರಾನ್ ಒಲವು

(ಭೌ) ಕೆಲವು ವಸ್ತುಗಳಲ್ಲಿ ವಿಶೇಷತಃ ಉತ್ಕರ್ಷಣಕಾರಕ ಪದಾರ್ಥಗಳಲ್ಲಿ (ಆಕ್ಸಿಡೈಸಿಂಗ್ ಏಜೆಂಟ್ಸ್) ಕಂಡುಬರುವ ಎಲೆಕ್ಟ್ರಾನ್-ಪರಿಗ್ರಹಣ ಪ್ರವೃತ್ತಿ. (ರ) ಋಣಾವಿಷ್ಟ ಅಯಾನ್‌ನಿಂದ ಎಲೆಕ್ಟ್ರಾನನ್ನು ತೆಗೆದು ತಟಸ್ಥ ಪರಮಾಣುವನ್ನು ರೂಪಿಸಲು ಬೇಕಾಗುವ ಶಕ್ತಿ

ಎಲೆಕ್ಟ್ರಾನ್ ಟ್ಯೂಬ್

(ತಂ) ಎಲೆಕ್ಟ್ರಾನ್ ನಳಿಕೆ. ನೋಡಿ : ಟ್ರಯೋಡ್ ಕವಾಟ

ಎಲೆಕ್ಟ್ರಾನ್ ದೂಲ ಕಲ್ಲಚ್ಚು

(ತಂ) ಸ್ಕ್ಯಾನಿಂಗ್ ಎಲೆಕ್ಟ್ರಾನ್ ಸೂಕ್ಷ್ಮದರ್ಶಕದ ಎಲೆಕ್ಟ್ರಾನ್ ದೂಲವನ್ನು ಉಪಯೋಗಿಸಿ ಎಲೆಕ್ಟ್ರಾನ್ ಸಂವೇದಿ ಸಾಮಗ್ರಿಗಳ ಮೇಲೆ ನಮೂನೆಗಳನ್ನು ಸೃಷ್ಟಿಸುವ ತಂತ್ರ

ಎಲೆಕ್ಟ್ರಾನ್ ಪರಿಗ್ರಹಣ

(ಭೌ) ೧. ಇದೊಂದು ವಿಕಿರಣಪಟು ಪರಿವರ್ತನೆಯ ಪರಿಣಾಮ. ಪರಮಾಣು ಬೀಜವು ಒಳಕಕ್ಷೆಯಲ್ಲಿ ಇರುವ ಒಂದು ಎಲೆಕ್ಟ್ರಾನನ್ನು ಕಬಳಿಸುವ ವಿದ್ಯಮಾನ. ಪರಿಣಾಮವಾಗಿ ಆ ಪರಮಾಣುವಿನ ರಾಶಿ ಬದಲಾಗದು. ಆದರೆ ಪರಮಾಣು ಸಂಖ್ಯೆ ಹಿಂದಿದ್ದುದಕ್ಕಿಂತ ೧ ಕಡಿಮೆಯಾಗುತ್ತದೆ. (ಎಲೆಕ್ಟ್ರಾನ್ ಪರಿಗ್ರಹಣವು ಬೀಜದಲ್ಲಿಯ ಪ್ರೋಟಾನನ್ನು ನ್ಯೂಟ್ರಾನ್ ಆಗಿ ಪರಿವರ್ತಿಸುತ್ತದೆ). ಈ ಬಗೆಯ ಪರಿಗ್ರಹಣ ದೊಂದಿಗೆ ಎಕ್ಸ್-ಕಿರಣ ಫೋಟಾನ್‌ನ ಉತ್ಸರ್ಜನೆಯೂ ಸಂಭವಿಸುತ್ತದೆ. ಏಕೆಂದರೆ ಆಂತರಿಕ ಕಕ್ಷೆಯಲ್ಲಿಯ ತೆರಪಿಗೆ ಬಾಹ್ಯ ಎಲೆಕ್ಟ್ರಾನೊಂದು ಜಿಗಿದು ಬಂದು ಸೇರಿಕೊಳ್ಳುತ್ತದೆ. ೨. ಯಾವುದೇ ದ್ರವ್ಯ ಮಾಧ್ಯಮದ ಮೂಲಕ ಪರಮಾಣುವಾಗಲೀ ಅಯಾನ್ ಆಗಲೀ ಹಾಯುವಾಗ ಅದು ಒಂದು ಅಥವಾ ಹೆಚ್ಚು ಕಕ್ಷಾ ಎಲೆಕ್ಟ್ರಾನ್ ಗಳನ್ನು ಕಳೆದುಕೊಳ್ಳುವ ಅಥವಾ ಗಳಿಸುವ ಪ್ರಕ್ರಿಯೆ. ೩. ಬಂಧಿತ ಎಲೆಕ್ಟ್ರಾನೊಂದು ಬೀಜದಲ್ಲಿ ಐಕ್ಯವಾಗುವುದರಿಂದ ಆ ಬೀಜ ದಲ್ಲಾಗುವ ವಿಕಿರಣಪಟು ಪರಿವರ್ತನೆ.

ಎಲೆಕ್ಟ್ರಾನ್ ಭ್ರಮಣ ಅನುರಣನ

(ಭೌ) ಸೂಕ್ಷ್ಮತರಂಗ ರೋಹಿತದರ್ಶಕ ವಿಜ್ಞಾನದ ಒಂದು ಶಾಖೆ. ಸ್ಫಟಿಕಗಳಲ್ಲಿ ಅಶುದ್ಧತೆಯ ಕೇಂದ್ರಗಳ ಬಗ್ಗೆ, ರಾಸಾಯನಿಕ ಬಂಧದ ಸ್ವರೂಪ ಮತ್ತು ವಿಕಿರಣ ಹಾನಿಯ ಪರಿಣಾಮಗಳ ಬಗ್ಗೆ ಮಾಹಿತಿ ಪಡೆಯಲು ಉಪಯೋಗ

ಎಲೆಕ್ಟ್ರಾನ್ ವಿವರ್ತನೆ

(ಭೌ) ಪರಮಾಣು ಗಳಿಂದ ಇಲ್ಲವೇ ಅಣುಗಳಿಂದ ಎಲೆಕ್ಟ್ರಾನ್ ದೂಲ ಹರಡಲ್ಪಡುವುದು ಇಲ್ಲವೇ ಬಗ್ಗಿಸಲ್ಪಡುವುದು. ಬೆಳಕು ಮತ್ತು ಎಕ್ಸ್-ಕಿರಣಗಳಂತೆಯೇ ಎಲೆಕ್ಟ್ರಾನ್‌ಗಳನ್ನೂ ವಿವರ್ತನೆಗೊಳಿಸಬಹುದು ಎಂಬ ಸಂಗತಿ ಈ ಕಣಗಳು ತರಂಗಗಳೋಪಾದಿಯಲ್ಲಿ ಕೂಡ ವರ್ತಿಸಬಲ್ಲವು ಎಂಬುದನ್ನು ತೋರಿಸುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App