भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಉರುಳೆ

(ಗ) ನೋಡಿ : ಸಿಲಿಂಡರ್

ಉರುಳೆ

(ಎಂ) ಮಣ್ಣಿನ ಮತ್ತು ರಸ್ತೆಯ ಪದರುಗಳನ್ನು ಸಮರ್ಪಕವಾಗಿ ಅಡಕಿಸಲು ಬಳಸುವ ದುಂಡು ಆಕೃತಿಯ ಉಪಕರಣ; ಇವುಗಳನ್ನೇ ಚಕ್ರಗಳಾಗಿ ಹೊಂದಿರುವ ಯಂತ್ರ ಗಳನ್ನು ಯಾಂತ್ರಿಕ ಉರುಳೆ ಎನ್ನುತ್ತಾರೆ. ಈಚೆಗೆ ಅಣೆಕಟ್ಟುಗಳ ನಿರ್ಮಾಣದಲ್ಲಿ ಕಾಂಕ್ರೀಟನ್ನು ಅಡಕಿಸಲು ಉರುಳೆಗಳನ್ನು ಬಳಸುತ್ತಾರೆ. ಇದರ ತೂಕ ಸುಮಾರು ೧೦ ಟನ್ನು

ಉರ್ಚುವಿಕೆ

(ಪ್ರಾ) ನೋಡಿ: ಪೊರೆಬಿಡುವಿಕೆ

ಉಲ್ಕಾಪಿಂಡ

(ಖ) ಗ್ರಹಗಳ ನಡುವಿನ ಆಕಾಶದಿಂದ ಬಿದ್ದು ಭೂಮಿ ತಲಪಿದ, ಅಂತರಿಕ್ಷ ಮೂಲದ, ಖನಿಜಯುತ ಸಮಷ್ಟಿ. ಇವುಗಳಲ್ಲಿ ಎರಡು ವಿಧ. ಒಂದು, ಶಿಲೆಗಳನ್ನು ರೂಪಿಸುವ ಸಿಲಿಕೇಟ್‌ಗಳನ್ನು ಒಳಗೊಂಡಿರು ವಂತಹವು. ಉದಾ : ಕಾಂಡ್ರೈಟ್, ಏರಲೈಟ್; ಇನ್ನೊಂದು, ಹೆಚ್ಚಾಗಿ ಕಬ್ಬಿಣ ಹೊಂದಿರುವವು. ಅತ್ಯಂತ ದೊಡ್ಡ ಉಲ್ಕಾಪಿಂಡ ೧೦೦ ಟನ್ ತೂಗಬಹುದು; ಪ್ರತಿ ದಿನವೂ ಸುಮಾರು ಒಂದು ಮಿಲಿಯನ್ ಉಲ್ಕಾಪಿಂಡಗಳು ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತವೆ ಮತ್ತು ಸುಮಾರು ೧೦ ಟನ್ ಉಲ್ಕಾಪಿಂಡ ಸಾಮಗ್ರಿ ಭೂಮಿಯ ಮೇಲ್ಮೈ ಮೇಲೆ ಬೀಳುತ್ತದೆ. ನೋಡಿ : ಉಲ್ಕೆ, ಬೋಲೈಡ್

ಉಲ್ಕಾಶ್ಮ

(ಭೂವಿ) ಶಿಲಾ ಉಲ್ಕಾಪಿಂಡಗಳ ಸಾಮಾನ್ಯ ನಾಮ, ಕಬ್ಬಿಣ ಉಲ್ಕಾಪಿಂಡಗಳಿಂದ ಭಿನ್ನ

ಉಲ್ಕೆ

(ಖ) ಅಂತರಗ್ರಹ ಸಂಚಾರಿ ಜಡಕಾಯವೊಂದು ಅಕಸ್ಮಾತ್ ಭೂಗುರುತ್ವ ಕ್ಷೇತ್ರದಿಂದ ಆಕರ್ಷಿಸಲ್ಪಟ್ಟುದಾದರೆ ಆಗ ಅದು ವೇಗೋತ್ಕರ್ಷಸಹಿತ ಭೂಮಿಯತ್ತ ಧಾವಿಸುತ್ತದೆ. ವಾಯು ಮಂಡಲದ ಅಣುಗಳೊಡನೆ ಸಂಭವಿಸುವ ತಿಕ್ಕಾಟದಿಂದ ಉಷ್ಣ ಸಂಜನಿಸಿ ಅತಿ ಶೀಘ್ರದಲ್ಲೇ ಅದು ಉರಿದು ಭಸ್ಮೀಭೂತವಾಗಿ ಹೋಗುವುದು. ಅದು ಉರಿಯುವಾಗ ರೇಖಿಸುವ ಪಥ ಬಾನಿನಡ್ಡ ಎಳೆದ ಬೆಂಕಿ ಗೆರೆಯಂತೆ ಕಾಣುವುದು. ಈ ದಹನ ವಿದ್ಯಮಾನವೇ ಉಲ್ಕೆ. ಇದಕ್ಕೆ ಮೊದಲಿನ ಸ್ಥಿತಿ ಕೇವಲ ಜಡಕಾಯ-ಉಲ್ಕಾಕಲ್ಪ. ದಹನಾನಂತರ ಶೇಷವೇನಾದರೂ ನೆಲಕ್ಕೆ ಬಡಿದು ಉಳಿದರೆ ಅದು ಉಲ್ಕಾಪಿಂಡ. ಬೀಳುವ ನಕ್ಷತ್ರ ಎನ್ನುವುದು ರೂಢಿಯ ತಪ್ಪು ಕಲ್ಪನೆ

ಉಲ್ಬ

(ವೈ) ಮಾಸು. ಉನ್ನತ ವರ್ಗದ ಕಶೇರುಕಗಳಲ್ಲಿ ಭ್ರೂಣದ ಹೊರ ಪೊರೆ. ಕೀಟದ ಮೊಟ್ಟೆಯ ಹೊರ ಪೊರೆ

ಉಲ್ಬಣತೆ

(ವೈ) ರೋಗ ತೀವ್ರತೆಯ ಹೆಚ್ಚಳ ಅಥವಾ ಅದರ ಲಕ್ಷಣಗಳು ಉಗ್ರವಾಗಿ ಕಾಣಿಸಿಕೊಳ್ಳುವುದು

ಉಷ್ಟ್ರಪಕ್ಷಿ

(ಪ್ರಾ) ಸ್ಟ್ರೂತಿಯಾನಿಫಾರ್ಮೀಸ್ ಗಣದ ಸ್ಟ್ರೂತಿ ಯಾನಿಡೀ ಕುಟುಂಬಕ್ಕೆ ಸೇರಿದ ಮಧ್ಯಜೀವಿ ಕಲ್ಪದ ಅಂತ್ಯದಲ್ಲಿ ಕಾಣಿಸಿಕೊಂಡ, ಬದುಕಿರುವ ಅತಿ ದೊಡ್ಡ, ಹಾರಲಾರದ ಆದರೆ, ವೇಗವಾಗಿ ಓಡುವ ಪಕ್ಷಿ. ಸ್ಟ್ರೂತಿಯೋ ಕಮೀಲಸ್ ವೈಜ್ಞಾನಿಕ ನಾಮ. ಅರೇಬಿಯ ಮತ್ತು ಆಫ್ರಿಕ ಮರಳುಗಾಡುಗಳಲ್ಲಿ ವಾಸ. ಮೃದುವಾದ ಗರಿಗಳು, ಬೋಡು ತಲೆ, ಕತ್ತು ಹಾಗೂ ಕಾಲುಗಳು, ಪುಟ್ಟ ರೆಕ್ಕೆಗಳು, ದಪ್ಪ ಬಲಿಷ್ಠ ಕಾಲುಗಳು, ಒಂದೊಂದು ಕಾಲಿನಲ್ಲೂ ಎರಡೆರಡು ಬೆರಳುಗಳು ಇರುವ, ಸರ್ವಭಕ್ಷಕಗಳಾದರೂ ಸಾಮಾನ್ಯ ವಾಗಿ ಗಿಡ ಗಂಟೆಗಳನ್ನೇ ತಿನ್ನುವ, ಈ ಗಣದ ಏಕೈಕ ಜೀವಂತ ಪ್ರಭೇದದ ಪಕ್ಷಿ. ಗರಿಗಳು ಅಲಂಕಾರಕ್ಕೆ ಬಳಕೆ

ಉಷ್ಣ

(ಭೌ) ಯಾವುದೇ ವ್ಯವಸ್ಥೆಯಲ್ಲಿಯ ಅಸಂಖ್ಯ ಅಣುಗಳ ಚಲನೆಯ ಸಮಗ್ರ ಪರಿಣಾಮವಾಗಿ ಪ್ರಕಟವಾಗುವ ಒಂದು ಶಕ್ತಿರೂಪ. ಉಷ್ಣದ ಮಟ್ಟ (ಎಂದರೆ ಬಿಸಿತನ) ಉಷ್ಣತೆ. (temperature) ಉಷ್ಣತಾ ವ್ಯತ್ಯಾಸವಿರುವ ಎರಡು ವ್ಯವಸ್ಥೆಗಳಲ್ಲಿ ಒಂದರಿಂದ ಇನ್ನೊಂದಕ್ಕೆ ವರ್ಗವಾಗುವ ಶಕ್ತಿಯೇ ಉಷ್ಣ. ಈ ವರ್ಗಾವಣೆ ಅಧಿಕ ಉಷ್ಣತೆಯ ಆಕರದಿಂದ ಕಡಿಮೆ ಉಷ್ಣತೆಯ ಗ್ರಾಹಕದೆಡೆಗೆ ನಡೆಯುತ್ತದೆ. ವಾಸ್ತವವಾಗಿ ಉಷ್ಣ ವರ್ಗಾವಣೆ ಮೂರು ಬಗೆಗಳಲ್ಲಿ ಸಂಭವಿಸುತ್ತದೆ: ವಹನ (conduction), ಸಂವಹನ (convection), ವಿಕಿರಣ (radiation). ಮೊದಲನೆಯದು ಪರಮಾಣುಗಳ ಅಥವಾ ಅಣುಗಳ ನಿಕಟ ಅಂತರಕ್ರಿಯೆಗಳ ಪರಿಣಾಮ: ಲೋಹ ಸರಳಿನ ಒಂದು ಕೊನೆ ಕಾಸಿದಾಗ ಇನ್ನೊಂದು ಕೊನೆ ಕ್ರಮೇಣ ಬಿಸಿ ಆಗುವುದರ ಕಾರಣ ‘ವಹನ’. ಎರಡನೆಯದು ತರಲದ (fluid) ಅಣುಗಳ ಬೆರಕೆಯ ಫಲ: ನೀರು ಕಾಸಿದಾಗ, ಬೆಂಕಿಗೆ ಮೈಯೊಡ್ಡಿ ಕುಳಿತಾಗ ಇತ್ಯಾದಿ, ಬಿಸಿ ತಟ್ಟುವುದರ ಕಾರಣ ‘ಸಂವಹನ’. ಮೂರನೆಯದು, ವಹನ ಸಂವಹನಗಳಿಗಿಂತ ಭಿನ್ನವಾಗಿ, ಮಾಧ್ಯಮದ ಗೈರುಹಾಜರಿಯಲ್ಲಿ, ಉಷ್ಣ ವರ್ಗಾವಣೆ. ಸೌರ ಉಷ್ಣ ನಮಗೆ ತಟ್ಟುವುದು ‘ವಿಕಿರಣ’ದಿಂದ

ಉಷ್ಣ ಆಘಾತ

(ವೈ) ವ್ಯಕ್ತಿಯು ಅತಿ ಉಷ್ಣ ಪರಿಸರ ದಲ್ಲಿದ್ದಾಗ ಅಥವಾ ಆ ಪರಿಸರಕ್ಕೆ ಒಡ್ಡಿಕೊಂಡನಂತರ, ಅವನ ದೇಹದ ಉಷ್ಣ ನಿಯಂತ್ರಣ ವ್ಯವಸ್ಥೆಯ ವೈಫಲ್ಯದ ಕಾರಣ ತಲೆದೋರುವ ವೈಪರೀತ್ಯಗಳು. ದೇಹದ ಉಷ್ಣತೆಯು ೪೦0 ಸೆಲ್ಸಿಯಸ್‌ಗಿಂತ ಹೆಚ್ಚಾದಾಗ, ತಲೆನೋವು ಕಂಡುಬರುತ್ತದೆ. ಹೃದಯಮಿಡಿತ ತೀವ್ರವಾಗಿ, ಉಸಿರಾಟದ ವೇಗ ಹೆಚ್ಚಿ, ರಕ್ತದೊತ್ತಡ ಅಧಿಕವಾಗಿ ಅವಯವಗಳು ಜಡ್ಡುಗಟ್ಟಿ, ಸ್ಪರ್ಶ ಸಂವೇದನೆ ಏರುಪೇರಾಗುತ್ತದೆ. ಮಾನಸಿಕ ಗೊಂದಲದ ನಂತರ, ಸನ್ನಿ ಹಿಡಿದವರಂತೆ ಆಗಿ ಕೋಮಾಕ್ಕೆ ಒಳಗಾಗಬಹುದು. ತುರ್ತು ಚಿಕಿತ್ಸೆಯನ್ನು ನೀಡದಿದ್ದಲ್ಲಿ ಜೀವಾಪಾಯದ ಸಾಧ್ಯತೆಗಳಿರುತ್ತವೆ. ಕಾವು ಹೊಡೆತ, ತಾಪಾಘಾತ, ಶಾಖಾಘಾತ

ಉಷ್ಣ ಒತ್ತಡ

(ಭೌ) ಉಷ್ಣದ ಫಲವಾಗಿ ಪರಮಾಣುಗಳ, ಅಣುಗಳ, ಎಲೆಕ್ಟ್ರಾನ್ ಮುಂತಾದ ಕಣಗಳ ಗೊತ್ತು ಗುರಿಯಿಲ್ಲದ ಚಲನೆಯು ಸೃಷ್ಟಿಸಿದ ಒತ್ತಡ

ಉಷ್ಣ ದಕ್ಷತೆ

(ಭೌ) ಉಷ್ಣ ಎಂಜಿನ್‌ನಲ್ಲಿ ಆ ಎಂಜಿನ್ ಮಾಡಿದ ಕಾರ್ಯಕ್ಕೂ ಅದಕ್ಕೆ ಉಗಿ/ಇಂಧನದ ಮೂಲಕ ಊಡಿದ ಉಷ್ಣದ ಯಾಂತ್ರಿಕ ಸಮಾನಕ್ಕೂ ನಡುವಿನ ದಾಮಾಷಾ

ಉಷ್ಣ ಪರಿವರ್ತನೆ

(ಭೌ) ಯಾವುದೇ ಪದಾರ್ಥಕ್ಕೆ ಉಷ್ಣ ಒದಗಿಸಿ ಅದನ್ನು ಬೇರೆ ಪದಾರ್ಥವಾಗಿ ಇಲ್ಲವೆ ಪದಾರ್ಥಗಳಾಗಿ ಬೇರ್ಪಡಿಸುವ ಅಥವಾ ಮಾರ್ಪಡಿಸುವ ಪ್ರಕ್ರಿಯೆ. ಉಷ್ಣದ ಜೊತೆ ಬೇರೆ ಒಂದು ಪದಾರ್ಥವನ್ನೂ ಒದಗಿಸಿ ರಾಸಾಯನಿಕ ಪರಿವರ್ತನೆ ಮಾಡಿದರೆ ಅದು ಉಷ್ಣ ಪರಿವರ್ತನೆ ಎನ್ನಿಸದು. ದಹನ (combustion) ಮತ್ತು ಹೈಡ್ರೊಜನೀಕರಣ (hydrogenation) ಉಷ್ಣ ಪರಿವರ್ತನೆಗಳಲ್ಲ. ಕಲ್ಲಿದ್ದಲನ್ನು ವಿವಿಧ ಉಷ್ಣತೆಗಳಲ್ಲಿ ಕಾಸಿ ಪಡೆಯುವ ವಿವಿಧ ಉತ್ಪನ್ನಗಳಿವೆ: ಕೋಕ್, ಕಲ್ಲಿದ್ದಲ ಅನಿಲ, ಕಲ್ಲಿದ್ದಲು ಡಾಮರು ಇತ್ಯಾದಿ. ಈ ಪ್ರಕ್ರಿಯೆಗಳಲ್ಲಿ ಬಳಕೆಯಾಗು ವುದನ್ನು ಉಷ್ಣಪರಿವರ್ತನೆ ಎನ್ನಲಾಗುತ್ತದೆ

ಉಷ್ಣ ಬಲವಿಜ್ಞಾನ

(ಭೌ) ಉಷ್ಣಕ್ಕೂ ಶಕ್ತಿಯ ಇತರ ರೂಪಗಳಾದ ವಿದ್ಯುಚ್ಛಕ್ತಿ, ಯಾಂತ್ರಿಕ ಶಕ್ತಿ ಮೊದಲಾದವು ಗಳಿಗೂ ಇರುವ ಸಂಬಂಧವನ್ನು ಕುರಿತ ವಿಜ್ಞಾನ ಶಾಖೆ. ಎರಡು ವ್ಯವಸ್ಥೆಗಳಲ್ಲಿ ಒಂದೊಂದೂ ಮೂರನೆಯ ಒಂದು ವ್ಯವಸ್ಥೆ ಯೊಂದಿಗೆ ಉಷ್ಣ ಸಮತೋಲನ ಸ್ಥಿತಿಯಲ್ಲಿದ್ದರೆ ಆಗ ಅವು ಪರಸ್ಪರ ಉಷ್ಣ ಸಮತೋಲನ ಸ್ಥಿತಿಯಲ್ಲಿರುತ್ತವೆ ಎಂಬುದು ಇದರಲ್ಲಿ ಬರುವ ಜೀರೋತ್ ನಿಯಮ. ಉಷ್ಣ ಮತ್ತು ಕಾಯಗಳ ನಡುವಿನ ಪರಸ್ಪರ ಸಂಬಂಧ, ವಿವಿಧ ಪರಿಸ್ಥಿತಿಗಳಲ್ಲಿ ಉಷ್ಣ ಪ್ರವಾಹದಿಂದ ಆಗುವ ಪರಿಣಾಮ ಮುಂತಾದವುಗಳ ಶಾಸ್ತ್ರೀಯ ಅಧ್ಯಯನ. ಅವಿಪರ್ಯಯಶೀಲವೆಂಬ ವಾಸ್ತವಿಕ ಕ್ರಿಯೆಗಳಿಗೂ ವಿಪರ್ಯಯ ಶೀಲವೆಂಬ ಆದರ್ಶೀಕೃತ ಕ್ರಿಯೆಗಳಿಗೂ ನಡುವೆ ಸ್ಪಷ್ಟ ಮತ್ತು ವ್ಯವಸ್ಥಿತ ವ್ಯತ್ಯಾಸವನ್ನು ಉಷ್ಣಬಲ ವಿಜ್ಞಾನ ಗುರುತಿಸುತ್ತದೆ. ಇದರ ಅಡಿಯಲ್ಲಿ ಕೆಲವು ಮೂಲಭೂತ ನಿಯಮಗಳಿವೆ: ಮೊದಲನೆಯದು, ಶಕ್ತಿ ಸಂರಕ್ಷಣೆಗೆ ಸಂಬಂಧಿಸಿದುದು. ಎರಡನೆಯದು, ನಿಮ್ನ ಉಷ್ಣತೆಯಲ್ಲಿರುವ ಒಂದು ವಸ್ತುವಿನಿಂದ ಉಚ್ಚ ಉಷ್ಣತೆಯಲ್ಲಿರುವ ಇನ್ನೊಂದಕ್ಕೆ ಉಷ್ಣ ತನ್ನಷ್ಟಕ್ಕೇ ಎಂದೂ ಹರಿಯಲಾರದೆಂದು ಹೇಳುತ್ತದೆ. ವಸ್ತುವೊಂದರ ಉಷ್ಣತೆಯು ನಿರಪೇಕ್ಷ ಶೂನ್ಯ ಸಮೀಪಿಸಿದಂತೆ ಅದರ ಎಂಟ್ರಪಿ (ನೋಡಿ)ಯು ಶೂನ್ಯ ಸಮೀಪಿಸುತ್ತದೆ ಎಂದು ಮೂರನೆಯ ನಿಯಮ ತಿಳಿಸುತ್ತದೆ

ಉಷ್ಣ ರಸಾಯನವಿಜ್ಞಾನ

(ರ) ರಾಸಾಯನಿಕ ಕ್ರಿಯೆಗಳಲ್ಲಿಯೂ ಸ್ಥಿತಿ ವ್ಯತ್ಯಯಗಳಲ್ಲಿಯೂ ಪ್ರಕಟವಾಗುವ ಉಷ್ಣ ವ್ಯತ್ಯಯಗಳ ಮಾಪನೆ, ವ್ಯಾಖ್ಯಾನ ಮತ್ತು ವಿಶ್ಲೇಷಣೆ ಮಾಡುವ ರಸಾಯನ ವಿಜ್ಞಾನ ಶಾಖೆ

ಉಷ್ಣ ವಿಭಜನೆ

(ರ) ನಿರ್ದಿಷ್ಟ ರಾಸಾಯನಿಕ ಸಂಯುಕ್ತವನ್ನು ಕಾಸಿ ಅದರಿಂದ ಎರಡು ಅಥವಾ ಅನೇಕ ಧಾತು ಅಥವಾ ಸಂಯುಕ್ತಗಳನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆ

ಉಷ್ಣ ವಿಯೋಜನೆ

(ರ) ಉಷ್ಣತೆಯ ಪ್ರಭಾವದಡಿ ಕೆಲವೊಂದು ಅಣುಗಳು ವಿಯೋಜನೆಗೊಳ್ಳುವುವು. ವಿಪರ್ಯಯವಾಗಿ ವಿಭಜನೆಯಲ್ಲಿ ಉತ್ಪನ್ನವಾದ ಪದಾರ್ಥಗಳು ಕಡಿಮೆ ಉಷ್ಣತೆಯಲ್ಲಿ ಸಂಯೋಗಗೊಂಡು ಮೂಲ ಪದಾರ್ಥ ವನ್ನು ಉತ್ಪತ್ತಿ ಮಾಡುತ್ತವೆ

ಉಷ್ಣ ವಿಶ್ಲೇಷಣೆ

(ರ) ಲೋಹಗಳಿಗೆ ಉಷ್ಣವನ್ನು ಕ್ರಮಬದ್ಧವಾಗಿ ಊಡಿದಾಗ ಇಲ್ಲವೇ ಅವುಗಳಿಂದ ಉಷ್ಣವನ್ನು ಕ್ರಮಬದ್ಧವಾಗಿ ಬಸಿದಾಗ ಅವುಗಳ ಉಷ್ಣತೆಗೂ ಅವುಗಳಲ್ಲಾಗುವ ರಾಚನಿಕ ವ್ಯತ್ಯಯಗಳಿಗೂ ನಡುವಿನ ಸಂಬಂಧದ ಅಧ್ಯಯನ

ಉಷ್ಣ ಸಂಕ್ರಮಣ ಸ್ತರ

(ಸಾವಿ) ಸರೋವರದಲ್ಲಿ ಆಧಿಸ್ತರ ಮತ್ತು ಕೆಳಸ್ತರಗಳ ನಡುವಿನ ಮಧ್ಯಸ್ತರ. ಇಲ್ಲಿ ಉಷ್ಣತೆ ಯಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ. ೧ ಮೀ ಆಳ ಹೆಚ್ಚಾದಂತೆ ೧0 ಸೆ ಉಷ್ಣತೆ ಕಡಿಮೆಯಾಗುತ್ತಾ ಹೋಗುತ್ತದೆ.

Search Dictionaries

Loading Results

Follow Us :   
  Download Bharatavani App
  Bharatavani Windows App