भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಉಪಸಾಮ್ರಾಜ್ಯ

(ವೈ) ಪ್ರಾಣಿ ಮತ್ತು ಸಸ್ಯ ಸಾಮ್ರಾಜ್ಯದ ವಿಂಗಡಣೆಯಲ್ಲಿಯ ಉಪವಿಭಾಗ

ಉಪಾಕ್ಷೀಯ

(ಭೌ) ದೃಕ್ ವ್ಯವಸ್ಥೆಯ ಅಕ್ಷಕ್ಕೆ ಸಮಾಂತರವಾಗಿರುವ ಕಿರಣ ಪಥ

ಉಪಾಪಚಯ

(ವೈ) ಜೀವದ್ರವ್ಯ ಪರಿಣಾಮ. ಜೀವಿಯಲ್ಲಿ ಅಥವಾ ಜೀವಕೋಶದಲ್ಲಿ ಸರಳ ಆಹಾರಾಂಶಗಳು ಜೊತೆಗೂಡಿ ಸಂಕೀರ್ಣ ಅಣುಗಳು ರೂಪುಗೊಂಡು ದೇಹ ನಿರ್ಮಾಣದಲ್ಲಿ ಪಾಲುಗೊಳ್ಳುವ ಕಾರ್ಯ. ಇದು ಅನಬಾಲಿಸಂ=ಉಪಚಯ. ಸಂಶ್ಲೇಷಣೆ. ಸಂಕೀರ್ಣ ಅಣುಗಳು ರಾಸಾಯನಿಕವಾಗಿ ಸರಳ ಅಣುಗಳಾಗಿ ಪರಿವರ್ತಿತವಾಗಿ ದೇಹದ ಅಥವಾ ಕೋಶದ ಕೆಲಸ ಕಾರ್ಯಗಳಿಗೆ ಶಕ್ತಿ ಬಿಡುಗಡೆಯಾಗುವ ಪ್ರಕ್ರಿಯೆ. ಇದು ಕೆಟಬಾಲಿಸಂ=ಅಪಚಯ. ವಿಶ್ಲೇಷಣೆ. ಈ ಕ್ರಿಯೆಗಳು ಒಟ್ಟೊಟ್ಟಿಗೆ ದೇಹದಲ್ಲಿ ನಡೆಯುತ್ತ ಇರುತ್ತವೆ. ಇವನ್ನು ಒಟ್ಟಿಗೆ ಸೂಚಿಸುವ ಪದ ಮೆಟಬಾಲಿಸಂ = ಉಪಾಪಚಯ. ನೋಡಿ: ಉಪಚಯ, ಅಪಚಯ

ಉಪಾಪಚಯ ರೋಗಗಳು

(ವೈ) ದೇಹ ನಿರ್ಮಾಣದಲ್ಲಿ ಭಾಗಿಯಾಗುವ ಆಹಾರಾಂಶಗಳೆಂದರೆ ಪ್ರೋಟೀನ್, ಕಾರ್ಬೊಹೈಡ್ರೇಟ್, ನೀರು, ನ್ಯೂಕ್ಲಿಯಿಕ್ ಆಮ್ಲಗಳು ಹಾಗೂ ಲಿಪಿಡ್ಡುಗಳು. ಇವುಗಳ ಉಪಾಪಚಯ ಕ್ರಿಯೆಗಳಲ್ಲಿ ನ್ಯೂನತೆಗಳು ತಲೆದೋರಿದಾಗ ಹಲವು ರೋಗಲಕ್ಷಣಗಳು ಕಂಡುಬರುತ್ತವೆ. ಇದಕ್ಕೆ ಒಂದು ಸಾಮಾನ್ಯ ಉದಾಹರಣೆಯೆಂದರೆ ಡಯಾಬಿಟಿಸ್ ಅಥವಾ ಮಧುಮೇಹ

ಉಪಾಪಚಯಜ

(ವೈ) ಉಪಾಪಚಯ ಪ್ರಕ್ರಿಯೆಯಲ್ಲಿ ಭಾಗವಹಿಸುವ, ಅದರಿಂದ ಉತ್ಪಾದಿತವಾದ ವಸ್ತು. ಉಪಾಪಚಯಕ

ಉಪಾಶ್ರಯಿ

(ಸ) ಬೀಜದಳದ ಹಿಂಬದಿಯ ಮೇಲೆ ಆಶ್ರಯಿಸಿರುವಂತೆ ಅಥವಾ ಸ್ಪರ್ಶಿಸುತ್ತಿರುವಂತೆ ಮಡಿಚಿಕೊಂಡಿರುವ ಬೀಜದಳಗಳ ಕೆಳಗಿರುವ (ಕಾಂಡ ಭಾಗ). (ಪ್ರಾ) (ಕೂದಲು ಇತ್ಯಾದಿಗಳ ವಿಷಯದಲ್ಲಿ) ಏನನ್ನಾದರೂ ಸ್ಪರ್ಶಿಸುತ್ತಿರುವಂತೆ ಅಥವಾ ಆಧರಿಸಿರುವಂತೆ ಹಿಂದಕ್ಕೆ ಬಾಗಿರುವ. (ಹಕ್ಕಿಯ ಹಿಂಬದಿ ಬೆರಳಿನ ವಿಷಯದಲ್ಲಿ) ನೆಲದ ಮೇಲೆ ಚಪ್ಪಟೆಯಾಗಿ ಆಶ್ರಯಿಸಿರುವ

ಉಪೋತ್ಪನ್ನ

(ಸಾ) ಆನುಷಂಗಿಕ ಪದಾರ್ಥ. ಕೈಗಾರಿಕೆಯಲ್ಲಿ ಅಥವಾ ಕಾರ್ಖಾನೆಯಲ್ಲಿ ಪ್ರಧಾನೋತ್ಪನ್ನದ ಜೊತೆ ಉತ್ಪತ್ತಿಯಾಗುವ ಉಪಪದಾರ್ಥ

ಉಪೋಷ್ಣ ವಲಯ

(ಭೂ) ಎರಡೂ ಗೋಳಾರ್ಧ ಗಳಲ್ಲಿ ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳ ನಡುವೆ ಹರಡಿರುವ ಅನಿರ್ದಿಷ್ಟ ವ್ಯಾಪ್ತಿಯ ಪಟ್ಟಿ. ಇದರ ಧ್ರುವೀಯ ಎಲ್ಲೆಗಳು ಸುಮಾರು ೩೫0-೪೦0 ಉತ್ತರ ಹಾಗೂ ದಕ್ಷಿಣ ಅಕ್ಷಾಂಶಗಳೆಂದು ಭಾವಿಸಲಾಗಿದೆ. ಆದರೆ ಇದು ಭೂಖಂಡದ ಪ್ರಭಾವಕ್ಕೆ ಅನುಗುಣವಾಗಿ ಬಹುವಾಗಿ ವ್ಯತ್ಯಯವಾಗುತ್ತದೆ- ಭೂಖಂಡಗಳ ಪಾಶ್ಚಾತ್ಯ ಸಮುದ್ರತೀರ ಪ್ರದೇಶಗಳಲ್ಲಿ ಧ್ರುವಕ್ಕೆ ಹೆಚ್ಚು ಸಮೀಪವಾಗಿಯೂ ಪೌರಸ್ತ್ಯ ತೀರ ಪ್ರದೇಶಗಳಲ್ಲಿ ಭೂಮಧ್ಯರೇಖೆಗೆ ಹೆಚ್ಚು ಸಮೀಪವಾಗಿಯೂ ಇದೆ

ಉಪ್ಪು ಕಾಗದ

(ತಂ) ನಯಗೊಳಿಸಲು ಅಥವಾ ಮೆರುಗು ನೀಡಲು ಬಳಸುವ, ಒಂದು ಪಾರ್ಶ್ವದ ಮೇಲೆ ಕುರಂದ ಅಥವಾ ಗಾರ್ನೆಟ್ ಪುಡಿ ಅಥವಾ ಸಣ್ಣ ಮರಳನ್ನು ತೆಳು ಪದರ ವಾಗಿ ಅಂಟಿಸಿರುವ, ದಪ್ಪ ಕಾಗದ ಯಾ ಬಟ್ಟೆ. ಮರಳು ಕಾಗದ

ಉಪ್ಪು ಜೌಗು

(ಸಾವಿ) ನದೀ ಮುಖಜ ಭೂಮಿಗಳಲ್ಲಿ ಮತ್ತು ಸಾಗರ ತೀರಗಳಲ್ಲಿ ಉಪ್ಪಿನ ನೀರು ನುಗ್ಗಿ ಉಂಟಾದ ಉಪ್ಪು ನೀರಿನ ಜೌಗು ಪ್ರದೇಶ. ಒಣಗಿದಾಗ ಉಪ್ಪಿನ ಬಿಳಿ ಹರಳುಗಳು ಎದ್ದು ಕಾಣುತ್ತವೆ

ಉಪ್ಪುನೀರು

(ರ) ರೆಫ್ರಿಜರೇಷನ್ ವ್ಯವಸ್ಥೆಯಲ್ಲಿ ಬಳಸುವ ದ್ರವ. ಸಾಮಾನ್ಯವಾಗಿ ಕ್ಯಾಲ್ಸಿಯಮ್ ಕ್ಲೋರೈಡ್ ಹಾಗೂ ಸೋಡಿಯಮ್ ಕ್ಲೋರೈಡ್‌ಗಳ ಜಲೀಯ ದ್ರಾವಣ. ಇದು ಆವಿಕಾರಕ ಮೇಲ್ಮೈಯೊಂದಿಗೆ ಸಂಪರ್ಕಕ್ಕೆ ಬಂದಾಗ ಶೀತಲ ಗೊಂಡು ಅನಂತರ ರೆಫ್ರಿಜರೇಟರ್‌ನ ಶೀತಲಗೊಳಿಸಬೇಕಾದ ಭಾಗಕ್ಕೆ ಹೋಗುತ್ತದೆ. ಸೋಡಿಯಮ್ ಕಾರ್ಬೊನೇಟ್ ಮತ್ತು ಸೋಡಿಯಮ್ ಹೈಡ್ರಾಕ್ಸೈಡ್‌ಗಳ ಉತ್ಪಾದನೆಯಲ್ಲಿ ಉಪ್ಪುನೀರಿನ ಬಳಕೆ ಇದೆ. (ಸಾವಿ) ಸಾಮಾನ್ಯ ಸಾಗರದ ನೀರಿನಲ್ಲಿರುವುದಕ್ಕಿಂತ ಹೆಚ್ಚು ಸಾರವರ್ಧಿತ ಉಪ್ಪಿನ ಅಂಶವಿರುವ ಕಡಲನೀರು. ಲವಣ ಜಲ. ಸಮುದ್ರ ಜಲ

ಉಬ್ಬಚ್ಚು

(ತಂ) ಅಚ್ಚನ್ನು ಬಳಸಿ ಮರ, ಕಾಗದ ಅಥವಾ ಲೋಹದ ಮೇಲೆ ಉಬ್ಬು ಚಿತ್ರಗಳ ರಚನೆ

ಉಬ್ಬರವಿಳಿತಗಳು

(ಸಾವಿ) ಕಡಲುಗಳಲ್ಲಿ ಎದ್ದುಕಾಣುವ ಏರು ನೀರು ಉಬ್ಬರ (ಭರತ), ಇಳಿನೀರು-ಇಳಿತ. ಸೂರ್ಯ ಚಂದ್ರರ ಗುರುತ್ವಾಕರ್ಷಣ ಬಲಗಳು ಭೂಮಿಯ ಮೇಲೆ, ವಿಶಿಷ್ಟವಾಗಿ ಸಾಗರಗಳ ಮೇಲೆ, ವರ್ತಿಸುವುದರ ಪರಿಣಾಮಗಳಿವು. ಇಲ್ಲಿಯೂ ದೂರದ ದೊಡ್ಡಕಾಯ ಸೂರ್ಯನಿಗಿಂತ ಸಮೀಪದ ಚಿಕ್ಕಕಾಯ ಚಂದ್ರನ ಪ್ರಭಾವವೇ ಗಮನಾರ್ಹವಾಗಿ ಅಧಿಕ. ಯಾವುದೇ ಸ್ಥಳದಲ್ಲಿ ಚಂದ್ರ ದಕ್ಷಿಣೋತ್ತರ ತಲಪುವ ಕಾಲಕ್ಕೂ ಉಬ್ಬರ ಗರಿಷ್ಠ ಮಟ್ಟ ತಲಪುವ ಕಾಲಕ್ಕೂ ನಡುವೆ ತುಸು ಅಂತರವಿದೆ. ಇದು ಚಾಂದ್ರ ಏರುನೀರಿನ ಅವಧಿ (ಲ್ಯೂನಿ ಹೈ ಟೈಡಲ್ ಇಂಟರ್ವಲ್). ಇದೇ ರೀತಿ ಉಬ್ಬರ ಕನಿಷ್ಠ ಮಟ್ಟ ತಲಪುವ ಅಂತರ ಕುರಿತಂತೆ ಚಾಂದ್ರ ಇಳಿನೀರಿನ ಅವಧಿ (ಲ್ಯೂನಿ ಲೋ ಟೈಡಲ್ ಇಂಟರ್ವಲ್) ಇದೆ. ಹುಣ್ಣಿಮೆ ಅಥವಾ ಅಮಾವಾಸ್ಯೆ ಕಳೆದ ಮೂರನೆಯ ದಿವಸ ಉಬ್ಬರ ಅತಿ ತೀವ್ರವಾಗುವುದು. ಇದು ಗರಿಷ್ಠ ಭರತ (ಸ್ಪ್ರಿಂಗ್ ಟೈಡ್). ಪಂಚಮಿಯ ಹೊತ್ತಿಗೆ ಉಬ್ಬರ ಕ್ಷೀಣಿಸುವುದು. ಇದು ಕನಿಷ್ಠ ಭರತ (ನೀಪ್ ಟೈಡ್). ಮೇಷ ಮತ್ತು ತುಲಾ ಸಂಕ್ರಮಣಗಳಂದು ಉಬ್ಬರ ಹೆಚ್ಚು. ಮಕರ ಮತ್ತು ಕರ್ಕಾಟಕ ಸಂಕ್ರಮಣಗಳಂದು ಉಬ್ಬರ ಕಡಿಮೆ

ಉಬ್ಬಿಸು

(ಭೌ) ಯಾವುದೇ ಸ್ಥಿತಿಸ್ಥಾಪಕ ಧಾರಕವನ್ನು ಅದರ ಭಿತ್ತಿಗಳು ಬಿಗಿಯಾಗಿ ಚಾಚಿಕೊಳ್ಳುವಂತೆ ಗಾಳಿ, ಅನಿಲ ಅಥವಾ ದ್ರವದಿಂದ ತುಂಬು. ವಾಯುಪೂರಣ ಮಾಡು

ಉಬ್ಬುನಕ್ಷೆ

(ಭೂವಿ) ಯಾವುದೇ ದೇಶ ಅಥವಾ ಪ್ರದೇಶದ ಏರು ತಗ್ಗುಗಳನ್ನು ತೋರಿಸುವ ನಕ್ಷೆ; ಬೆಟ್ಟಗಳನ್ನೂ ಕಣಿವೆಗಳನ್ನೂ ಆಕೃತಿ ರೇಖೆಗಳಿಂದ ಮಾತ್ರವೇ ತೋರಿಸದೆ ಛಾಯೆ ಬಣ್ಣ ಮೊದಲಾದವುಗಳನ್ನು ಬಳಸಿಕೊಂಡು ಆ ಏರು ತಗ್ಗುಗಳನ್ನು ತೋರಿಸುವ ಸಾಧಾರಣ ನಕ್ಷೆ

ಉಬ್ಬುಮೀನು

(ಪ್ರಾ) ನೋಡಿ : ಉಂಡೆಮೀನು

ಉಬ್ಬುಶಿಲ್ಪ

(ತಂ) ಅನುಕರಿಸಲಾದ ವಸ್ತುವಿಗಿರುವಂತೆಯೇ ಉಬ್ಬುಗಳಿದ್ದು ಸಮತಲ ಅಥವಾ ವಕ್ರ ಕ್ಷೇತ್ರದಿಂದ ಎದ್ದು ಕಾಣುವಂತೆ ಅಚ್ಚೊತ್ತಿದ, ಕೊರೆದ ಅಥವಾ ಛಾಪಿಸಿದ ಮಾದರಿ

ಉಭಯಕ್ಷೇಪನ

(ಗ) ಒಂದು ಗಣ Aಗೂ ಇನ್ನೊಂದು ಗಣ bಗೂ ನಡುವೆ ಇರುವ ಒಂದು-ಒಂದು ಸಂವಾದಿತ್ವ

ಉಭಯಚರಿ

(ಪ್ರಾ) ನೀರಿನಲ್ಲೂ ನೆಲದ ಮೇಲೂ ಜೀವಿಸಬಲ್ಲ ಜೀವಿ. ನೆಲಜಲಚರಿ. (ತಂ) ನೆಲಜಲ ಎರಡರಿಂದಲೂ ಮೇಲಕ್ಕೆ ಹಾರಬಲ್ಲ ಅಂತೆಯೇ ಎರಡರ ಮೇಲೆಯೂ ಇಳಿಯಬಲ್ಲ ವಿಶೇಷ ವಿಮಾನ. ಹಾರುದೋಣಿ

ಉಭಯಜೀವಿಗಳು

(ಪ್ರಾ) ಬೆನ್ನು ಮೂಳೆ ಇದ್ದು ನೆಲ ಜಲ ಎರಡರಲ್ಲೂ ಬಾಳಬಲ್ಲ ಮತ್ತು ಸರೀಸೃಪಗಳಿಗೂ ಮೀನು ಗಳಿಗೂ ನಡುವಿನ ಕೊಂಡಿಗಳೆಂದು ಭಾವಿಸಲಾಗಿರುವ ಅನಿಯತ ತಾಪಿಗಳ ವರ್ಗ. ಉದಾ: ಕಪ್ಪೆ, ಕಾಡು ಕಪ್ಪೆ, ನೀರೋತಿ

Search Dictionaries

Loading Results

Follow Us :   
  Download Bharatavani App
  Bharatavani Windows App