भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆನೆ

(ಪ್ರಾ) ಎಲಿಫಿಂಟಿಡೀ ಕುಟುಂಬಕ್ಕೆ ಸೇರಿದ ಸಾಮಾನ್ಯವಾಗಿ ೯ ಅಡಿ ಎತ್ತರದ ೪ ಟನ್ ತೂಗುವ ಚತುಷ್ಪಾದಿ ಸ್ತನಿ. ಮೂಗು ಮತ್ತು ಮೇಲ್ದುಟಿ ಸೇರಿ ಸೊಂಡಿಲಾಗಿ ಮಾರ್ಪಟ್ಟಿರುತ್ತದೆ. ಭಾರತೀಯ ಆನೆಗಳಲ್ಲಿ ಹಣೆಯ ಬಳಿ ಹಳ್ಳ ಇರುತ್ತದೆ. ಆಫ್ರಿಕದ ಆನೆಗಳಲ್ಲಿ ಹಣೆ ಉಬ್ಬಾಗಿದ್ದು ಕಿವಿಗಳು ಅಗಲವಾಗಿರುತ್ತವೆ. ಅಲ್ಲದೆ ಅವುಗಳಲ್ಲಿ ಹೆಣ್ಣು ಮತ್ತು ಗಂಡು ಎರಡಕ್ಕೂ ದಂತ ಇರುತ್ತದೆ

ಆನೆಕಾಲು ರೋಗ

(ವೈ) ಸೊಳ್ಳೆಯ ಕಡಿತದ ಮೂಲಕ ವೊಚೆರಿಯ ಬ್ಯಾನ್ಕ್ರಾಫ್ಟೈ ಅಥವಾ ಬ್ರೂಗಿಯ ಮಲಾಯಿ ಎಂಬ ಜಂತುಗಳು (ಸಣ್ಣ ಕ್ರಿಮಿಗಳು) ಮಾನವನ ಒಡಲನ್ನು ಪ್ರವೇಶಿಸಿ ದುಗ್ಧನಾಳಗಳಲ್ಲಿ ರಕ್ತ ಮತ್ತು ದುಗ್ಧರಸ ಚಲನೆಗೆ ಅಡಚಣೆಯನ್ನುಂಟುಮಾಡಿದಾಗ ಅಡಚಣೆಯುಂಟಾದ ಭಾಗವು ಊದಿಕೊಂಡು ಆನೆಯ ಕಾಲಿನ ಹಾಗೆ ದಪ್ಪವಾಗಿ, ಚರ್ಮ ಒರಟಾಗುವ ರೋಗ

ಆನೋಡೀಕರಿಸು

(ರ) ಅಲ್ಯೂಮಿನಿಯಮ್ ಇಲ್ಲವೇ ಲಘು ಮಿಶ್ರಲೋಹಗಳ ಮೇಲೆ ಗಡಸಾದ ಮತ್ತು ಸಂಕ್ಷಾರಣ ಶೀಲವಲ್ಲದ ಆಕ್ಸೈಡ್ ಪೊರೆಯನ್ನು ನಿಕ್ಷೇಪಿಸುವ ಪ್ರಕ್ರಿಯೆ; ಇಲ್ಲಿ ಅಲ್ಯೂಮಿನಿಯಮ್ಮೇ ಆನೋಡ್

ಆನೋಡ್

(ಭೌ) ಧನ ಎಲೆಕ್ಟ್ರೋಡ್, ವಿದ್ಯುದ್ವಿಭಜನೆಯಲ್ಲಿ ಆನಯಾನ್‌ಗಳು ಇದರತ್ತ ಆಕರ್ಷಿತವಾಗುತ್ತವೆ. ಧನ ವಿದ್ಯುದ್ದ್ವಾರ

ಆನೋವ

(ಪ್ರಾ) ಪೆಸಿಫಿಕ್ ಸಾಗರದ ಸೆಲೆಬಸ್ ದ್ವೀಪದ ಕಾಡುಗಳಲ್ಲಿರುವ ಗುಜ್ಜಾರಿ ಎಮ್ಮೆ ಜಾತಿ ಪ್ರಾಣಿ

ಆನ್‌ಹೈಡ್ರೈಟ್ ವಿಧಾನ

(ರ) ಆನ್ ಹೈಡ್ರೈಟ್ (ನಿರ್ಜಲ) ಸಲ್ಫೇಟ್‌ನಿಂದ (CaSO4) ಸಲ್ಫ್ಯೂರಿಕ್ ಆಮ್ಲ (H2SO4) ತಯಾರಿಸುವ ಬಗೆ

ಆಪತನ

(ಭೌ) ನೇರ ಗತಿಯಲ್ಲಿ ಚಲಿಸುತ್ತಿರುವ ವಸ್ತುವು (ಉದಾ: ಬೆಳಕಿನ ಕಿರಣ) ತಲದ ಮೇಲೆ ಬೀಳುವುದು. ಆಪಾತ

ಆಪಾತಕಿರಣ

(ಭೌ) ಆಕರದಿಂದ ಬರುವ ಬೆಳಕಿನ ಕಿರಣಕ್ಕೆ ಆಪಾತಕಿರಣವೆಂದೂ ವಸ್ತುವಿನಿಂದ (ಉದಾ: ಕನ್ನಡಿಯಿಂದ) ಹಿಂದಿರುಗಿಸಲ್ಪಟ್ಟ ಕಿರಣಕ್ಕೆ ಪ್ರತಿಫಲಿತ ಕಿರಣವೆಂದೂ ಹೆಸರು

ಆಪಾತಕೋನ

(ಭೌ) ಸಮತಲದ ಮೇಲೆ ಬೀಳುವ ಕಿರಣಕ್ಕೂ ಸ್ಪರ್ಶ ಬಿಂದುವಿನಲ್ಲಿ ಆ ಸಮತಲಕ್ಕೆಳೆದ ಲಂಬಕ್ಕೂ ನಡುವಿನ ಕೋನ

ಆಂಪೇರ್

(ಭೌ) ವಿದ್ಯುತ್ ಪ್ರವಾಹದ ಎಸ್‌ಐ ಏಕಮಾನ. ಅನಂತ ಉದ್ದ ಮತ್ತು ನಿರ್ಲಕ್ಷಿಸಬಹುದಾದ ಅಡ್ಡ ಕೊಯ್ತವಿರುವ ಎರಡು ವಾಹಕಗಳನ್ನು ನಿರ್ವಾತದಲ್ಲಿ ಸಮಾಂತರವಾಗಿ ೧ ಮೀ ಅಂತರದಲ್ಲಿಟ್ಟು ಇವುಗಳ ಮೂಲಕ ಹರಿಯಬಿಟ್ಟ ಪ್ರವಾಹ ಆ ವಾಹಕಗಳ ನಡುವೆ ಉತ್ಪಾದಿಸುವ ಬಲವು ಮೀಟರ್ ಉದ್ದಕ್ಕೆ ೨X೧೦-೭ ನ್ಯೂಟನ್ ಆಗಿದ್ದರೆ ಆ ಪ್ರವಾಹ ೧ ಆಂಪೇರ್ ಎನ್ನುತ್ತೇವೆ. ಫ್ರೆಂಚ್ ಭೌತವಿಜ್ಞಾನಿ ಆಂದ್ರೆ ಮಾರಿ ಆಂಪೇರ್ (೧೭೭೫-೧೮೩೬) ಗೌರವಾರ್ಥ ಈ ಹೆಸರು

ಆಂಪೇರ್ ಗಂಟೆ

(ಭೌ) ವಿದ್ಯುದಾವೇಶದ ಏಕಮಾನ. ೩೬೦೦ ಕೂಲಮ್‌ಗಳಿಗೆ ಸಮ. ೧ ಗಂಟೆ ಕಾಲ ೧ ಆಂಪೇರ್ ವಿದ್ಯುತ್ ಹರಿವಿನ ಅಳತೆ. ಸಂಚಯಕ ಹೊರ ಹರಿಸುವ ಶಕ್ತಿಯನ್ನು ಅಳೆಯಲು ಬಳಕೆ

ಆಂಪ್ಯೂಲ್

(ವೈ) ಮೊಹರು ಮಾಡಿದ ಸಣ್ಣ ಗಾಜಿನ ಬುರುಡೆ. ಇದರೊಳಗೆ ಕ್ರಿಮಿಶುದ್ಧ ಪೂರ್ವಕವಾಗಿ ತಯಾರಿಸಿದ ದ್ರವ ಔಷಧ, ಕ್ರಿಮಿಶುದ್ಧ ನೀರಿನಲ್ಲಿ ಬೆರೆಸಿ ಬಳಸಲು ಬರುವಂತಹ ಪುಡಿ, ಲಸಿಕೆ, ವಸೆ ಇತ್ಯಾದಿಗಳಿರುತ್ತವೆ. ಇವನ್ನು ಸಿರೆ, ಅಂತರ್ಸ್ನಾಯು ಅಥವಾ ಅಡಿಚರ್ಮದೊಳಕ್ಕೆ ಚುಚ್ಚುಮದ್ದಿನ ಮೂಲಕ ದೇಹಕ್ಕೆ ನೀಡಬಹುದು

ಆಂಫಿಪೊಡ

(ಪ್ರಾ) ವಲ್ಕವಂತ ವರ್ಗದ ಅಲ್ಪಗಾತ್ರ ಪ್ರಾಣಿಗಳ ಗಣ; ಚಪ್ಪಟೆ ದೇಹ; ಗಡಸು ಹೊದಿಕೆ ಇಲ್ಲ; ಕೆಲವು ಜಲಚರಿ, ಕೆಲವು ಭೂವಾಸಿ, ಕೆಲವು ಪರೋಪಜೀವಿ

ಆಂಫಿಬೊಲೈಟ್

(ಭೂವಿ) ಆಂಫಿಬೋಲ್ ಅಗತ್ಯ ಘಟಕವಾಗಿದ್ದು, ಫೆಲ್ಡ್‌ಸ್ಪಾರ್ ಜೊತೆಗೆ ಅನೇಕ ವೇಳೆ ಗಾರ್ನೆಟ್ ಬೆರೆತಿರುವ, ಒರಟು ಕಣಗಳಿಂದಾದ ಸ್ಫಟಿಕಾತ್ಮಕ ಶಿಲೆ

ಆಂಫಿಬೋಲ್‌ಗಳು

(ಭೂವಿ) ಶಿಲಾರೂಪಣೆಗೆ ಕಾರಣವಾದ ಕಪ್ಪು ಬಣ್ಣದ ಸಿಲಿಕೇಟ್‌ಗಳ ಪ್ರಮುಖ ಗುಂಪು. ಉದಾ: ಹಾರ್ನ್‌ಬ್ಲೆಂಡ್

ಆಂಫಿಯಾಸ್ಟರ್

(ಪ್ರಾ) ಮಯಾಸಿಸ್‌ನಿಂದ/ಮೈಟೊಸಿಸ್‌ನಿಂದ ಕೋಶ ವಿಭಜನೆ ಆಗುವ ವೇಳೆ ಪ್ರಕಟವಾಗುವ ಎರಡು ನಕ್ಷತ್ರ ಸದೃಶ ಕಾಯಗಳು, ಇವನ್ನು ಜೋಡಿಸುವ ಕದಿರು

ಆಫ್‌ಸೆಟ್

(ತಂ) ೧. ಗೋಡೆ ಮೊದಲಾದವುಗಳಲ್ಲಿ ಮೇಲ್ಭಾಗದ ದಪ್ಪ ಕಡಿಮೆಯಾಗಲು ಆರಂಭ ಸ್ಥಳದಲ್ಲಿ ಮಾಡಿದ ಇಳಿಜಾರು ಅಂಚು. ೨. ನಾಳದ (ಕೊಳವೆಯ) ಮಾರ್ಗಕ್ಕೆ ಅಡ್ಡ ಬರುವ ತಡೆಯನ್ನು ದಾಟಿ ಹೋಗಲು ಅದರಲ್ಲಿ ಮಾಡಿದ ಬಾಗು

ಆಫ್‌ಸೆಟ್ ಮುದ್ರಣ

(ತಂ) ರಬ್ಬರಿನ ಸಮತಲದ ಮೇಲೆ ಅಥವಾ ಉರುಳೆಯ ಮೇಲೆ ಚಿತ್ರವನ್ನೋ ನಕಾಸೆ ಯನ್ನೋ ಮೂಡಿಸಿ ತಕ್ಕಂತೆ ಒತ್ತಿ ಇದರ ಮೇಲೆ ರೂಪು ಗೊಂಡಂಥ ಚಿತ್ರ ಇತ್ಯಾದಿಗಳ ಪ್ರತಿಗಳನ್ನು ಅನಂತರ ಕಾಗದದ ಮೇಲೆ ಒತ್ತಿ ಪ್ರತಿ ಅಥವಾ ನಕಲು ತೆಗೆಯುವ ವಿಧಾನ

ಆಂಬರ್‌ಗ್ರಿಸ್

(ಪ್ರಾ) ವಿಶಿಷ್ಟ ಜಾತಿಯ ಮೃತ ತಿಮಿಂಗಲದ ಕರುಳಿನಿಂದ ಪಡೆಯುವ ಬೂದು ಬಿಳಿ ಬಣ್ಣದ ಸುಗಂಧಯುಕ್ತ ಕೊಬ್ಬು ಪದಾರ್ಥ. ಪರಿಮಳ ದ್ರವ್ಯಗಳ ತಯಾರಿಕೆಯಲ್ಲಿ ಸ್ಥಾಯಿಕಾರಿಯಾಗಿ ಬಳಕೆ. ಪನ್ನಂಬರ

ಆಬಲೋನೆ

(ಪ್ರಾ) ಗ್ಯಾಸ್ಟ್ರಾಪೊಡ ವರ್ಗ, ಪ್ರೊಸೊ ಬ್ರಾಂಕಿಯೇಟ ಗಣಕ್ಕೆ ಸೇರಿದ ಹ್ಯಾಲಿಯೋಟಿಸ್ ಕ್ರಚಿರೊಡೀ ಎಂಬ ಮೃದ್ವಂಗಿ. ಅಮೆರಿಕದ ಪಶ್ಚಿಮತೀರ ನಿವಾಸಿಗಳ ಭಾಷೆಯಲ್ಲಿ ಇದು ಆಬಲೋನೆ. ಇದರಲ್ಲಿ ನಾನಾ ಪ್ರಭೇದಗಳು ಉಂಟು. ಆಹಾರ, ವಾಣಿಜ್ಯ ದೃಷ್ಟಿಯಿಂದ ಮುಖ್ಯ. ಶೈವಲಾಹಾರಿ. ಆಕರ್ಷಕ ಚಿಪ್ಪು ಇದೆ. ಮುತ್ತಿನ ತಾಯಿ

Search Dictionaries

Loading Results

Follow Us :   
  Download Bharatavani App
  Bharatavani Windows App