भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆಧಾರ ಪಟ್ಟಿ

(ವೈ) ೧. ಮನೆಯ ಚಾವಣಿಗೆ ತೊಲೆ ಹೇಗೆ ಆಧಾರವೋ ಹಾಗೆ ಶರೀರದ ಒಂದು ಅಂಗಕ್ಕೆ ಆಧಾರ ನೀಡುವ ತಂತುಗಳ ಕಂತೆಯಿದು. ಇದು ಅಂಗದ ಕವಚದಿಂದ ಅಥವಾ ತಡಿಕೆಯಿಂದ ಹುಟ್ಟುತ್ತದೆ. ೨. ಸ್ಪಂಜು ರೂಪದ ಮೂಳೆಯ ಚೂರು. ಇಂತಹುದೇ ಇತರ ಚೂರುಗಳೊಡನೆ ಸೇರಿ ಮೂಳೆಯ ರಚನೆಗೆ ಆಧಾರವನ್ನು ಒದಗಿಸುತ್ತದೆ

ಆಧಾರ ಪೀಠ

(ತಂ) ಉಪಕರಣವನ್ನು – ಉದಾಹರಣೆಗೆ, ದೂರದರ್ಶಕ – ಜೋಡಿಸಿರುವ ದೃಗೇತರ ಭಾಗಗಳಿರುವ ನೆಲೆಗಟ್ಟು

ಆಧಾರ ರೇಖೆ

(ಭೂ) ಮೋಜಣಿಯಲ್ಲಿ (ಸರ್ವೇಕ್ಷಣೆ) ಸೂಕ್ಷ್ಮವಿಧಾನಗಳಿಂದ ಅತಿ ನಿಷ್ಕೃಷ್ಟವಾಗಿ ಅಳೆದು ಉದ್ದವನ್ನು ನಿರ್ಧರಿಸಲಾದ ರೇಖೆ. ತರುವಾಯದ ತ್ರಿಕೋನೀಕರಣಕ್ಕೆ (ಪ್ರದೇಶವನ್ನು ತ್ರಿಕೋನಗಳಾಗಿ ವಿಂಗಡಿಸಿ ಉದ್ದಳತೆಗಳನ್ನು ನಿರ್ಧರಿಸುವುದಕ್ಕೆ) ಇದೇ ಆಧಾರ

ಆಧಾರ ಸದಿಶಗಳು

(ಗ) ನಿರ್ದೇಶಕಾಕ್ಷಗಳ ಧನ ದಿಶೆಯಲ್ಲಿ ಆಯ್ದ ಏಕಮಾನ ಸದಿಶಗಳು. ಯಾವುದೇ ಸದಿಶವನ್ನು ಈ ಆಧಾರ ಸದಿಶಗಳ ರೇಖೀಯ ಸಂಯೋಗವಾಗಿ ನಿರೂಪಿಸ ಬಹುದು. ಮೂರು ಆಯಾಮಗಳಲ್ಲಿ ಪ್ರತೀಕ, i, j, k

ಆಧಾರಕಟ್ಟು

(ಪ್ರಾ) ಮುಂದೆ ತನ್ನ ಮೇಲೆ ಬೆಳೆಯಲಿರುವ ಭಾಗಗಳ ರೂಪರೇಖೆ ಸೂಚಿಸುವ ಪ್ರಾಣಿ ಅಂಗದ ಮೂಲ ಕಟ್ಟು

ಆಧಾರಶಿಲೆ

(ಭೂವಿ) ಖನಿಜ ನಿಕ್ಷೇಪಗಳ ತಳದಲ್ಲಿಯ ಶಿಲಾಸ್ತರ; ತಳಗಲ್ಲು

ಆಧುನಿಕ ಭೌತವಿಜ್ಞಾನ

(ಭೌ) ೧೮೯೫-೧೯೦೫ರ ನಡುವಿನ ಅವಧಿಯಲ್ಲಿ ನಡೆದ ಎಕ್ಸ್-ಕಿರಣ, ವಿಕಿರಣಪಟುತ್ವ, ಎಲೆಕ್ಟ್ರಾನ್‌ಗಳ ಆವಿಷ್ಕಾರಗಳಿಂದಲೂ ಕ್ವಾಂಟಮ್ (ಶಕಲ) ಸಿದ್ಧಾಂತ, ಸಾಪೇಕ್ಷತಾ ಸಿದ್ಧಾಂತಗಳ ಮಂಡನೆಯಿಂದಲೂ ರೂಪುಗೊಂಡು ಮುಂದುವರಿದ ಭೌತವಿಜ್ಞಾನ. ಈ ಅವಧಿಗಿಂತ ಹಿಂದಿನದು ‘ಅಭಿಜಾತ ಭೌತವಿಜ್ಞಾನ’

ಆಧುನಿಕ ವಿಜ್ಞಾನ

(ಸಾ) ಹಿಂದಿನವರ ಕಲ್ಪನೆ ಗಳನ್ನು ಪ್ರಶ್ನಿಸುವ, ಅಧ್ಯಯನಗಳಲ್ಲಿ ಮಾಪನಗಳನ್ನು ಬಳಸುವ, ಪ್ರಯೋಗಗಳನ್ನು ನಡೆಸಿ ಸಿದ್ಧಾಂತಗಳನ್ನು ದೃಢೀಕರಿಸುವ ಅಥವಾ ಹೊಸ ಹೊಳವುಗಳನ್ನು ಪಡೆಯುವ ವಿಧಾನಗಳನ್ನು ರೂಢಿಸಿಕೊಂಡ ವಿಜ್ಞಾನ. ೧೬ನೇ ಶತಮಾನದಲ್ಲಿ ಕೊಪರ್ನಿಕಸ್‌ನಿಂದ ಪ್ರಾರಂಭವಾದ ಈ ಪ್ರವೃತ್ತಿಯನ್ನು ವೆಸೇಲಿಯಸ್, ವಿಲಿಯಂ ಹಾರ್ವೆ, ಗೆಲಿಲಿಯೊ ಮುಂದುವರೆಸಿದರು. ವೀಕ್ಷಣೆ, ವೀಕ್ಷಣೆಗಳ ವರ್ಗೀಕರಣ, ಮಾಪನ ಮತ್ತು ವಿಶ್ಲೇಷಣೆ, ಅನುಮಾನ ಅಥವಾ ವಿವರಣೆ, ಸಿದ್ಧಾಂತ, ಪ್ರಯೋಗ, ಸೂಚಿತ ಸಿದ್ಧಾಂತದ ದೃಢೀಕರಣ, ಸಿದ್ಧಾಂತದಿಂದ ಹೊಮ್ಮುವ ಇತರ ಪರಿಣಾಮಗಳ ನಿರ್ಗಮನ – ಇವೆಲ್ಲ ಆಧುನಿಕ ವೈಜ್ಞಾನಿಕ ವಿಧಾನದ ಹೆಜ್ಜೆಗಳಾದುವು

ಆನಕೊಂಡ

(ಪ್ರಾ) ಬೋವಿಡೀ ಕುಟುಂಬಕ್ಕೆ ಸೇರಿದ ಹೆಬ್ಬಾವು. ಯೂನೆಕ್ಟಿಸ್ ಮುರಿನಸ್ ವೈಜ್ಞಾನಿಕ ನಾಮ. ಅಮೆಜಾನ್ ನದೀ ತೀರದ ಕಾಡುಗಳಲ್ಲಿ ಕಾಣಬರುತ್ತದೆ. ವಿಷರಹಿತ ಹಾವು. ನೀರಿನಲ್ಲೂ ಮರದ ಮೇಲೂ ವಾಸಿಸುತ್ತದೆ

ಆನತ

(ಗ) ನೋಡಿ: ಬಾಗು

ಆನಯಾನ್

(ಭೌ) ಋಣ ಅಯಾನ್. ವಿದ್ಯುದ್ವಿಭಾಜ್ಯದಲ್ಲಿ ಒಂದು ಅಥವಾ ಹೆಚ್ಚು ಎಲೆಕ್ಟ್ರಾನ್‌ಗಳನ್ನು ಗಳಿಸಿ ಆ ಕಾರಣ ದಿಂದಾಗಿ ಆನೋಡ್ (ಧನ ವಿದ್ಯುದ್ವಾರ) ಕಡೆಗೆ ಆಕರ್ಷಿತ ವಾಗುವ ಪರಮಾಣು ಅಥವಾ ಅಣು

ಆನಿಕ್ಸ್

(ಭೂವಿ) ಬೇರೆ ಬೇರೆ ಬಣ್ಣಗಳ ಪದರುಗಳುಳ್ಳ ಸಿಲಿಕದ ಒಂದು ಗುಪ್ತ ಸ್ಫಟಿಕೀಯ ಬಗೆ. ಬಿಳಿ, ಕಂದು ಹಾಗೂ ಕಪ್ಪು ಬಣ್ಣಗಳ ಪದರಗಳು ಈ ಪ್ರಶಸ್ತ ಖನಿಜದಲ್ಲಿ ಪರ್ಯಾಯವಾಗಿ ಕಂಡುಬರುತ್ತವೆ. ಕಲ್ಲುಬ್ಬು ಕೆತ್ತನೆಗಳಲ್ಲಿ ಬಳಕೆ. ಬಿಳಿ ಬಣ್ಣದ ಮೇಲ್ಪದರದಲ್ಲಿ ಉಬ್ಬು ಚಿತ್ರ ಅಥವಾ ಉಬ್ಬು ಪ್ರತಿಮೆ ಕೆತ್ತಿ ಕೆಳಗಿನ ಕಂದು, ಕಪ್ಪು ಪದರಗಳನ್ನು ಹಿನ್ನೆಲೆಯಾಗಿ ಬಿಡಲಾಗುತ್ತದೆ

ಆನಿಮೊನಿ

(ಸ) ಸ್ವಲ್ಪಮಟ್ಟಿಗೆ ಪಾಪಿ (ಗಸಗಸೆ ಜಾತಿ) ಮತ್ತು ಸೇವಂತಿಗೆ ಗಿಡಗಳಂತೆ ಅಂದದ ಹೂ (ಗಾಳಿ ಹೂವು) ಬಿಡುವ ಉದ್ಯಾನ ಸಸ್ಯ. ಇದರ ಬಿಳುಪು ನಸುಗೆಂಪು, ಕಂದು, ಕೇಸರಿ ಮತ್ತು ನೀಲಿ ಬಣ್ಣಗಳ ಹೂಗಳು ಜನರಿಗೆ ಅಚ್ಚುಮೆಚ್ಚು. ಮನೆಗಳಲ್ಲಿ ಕುಂಡಸಸ್ಯಗಳಾಗಿಯೂ ಬೆಳೆಸುವುದುಂಟು. (ಪ್ರಾ) ಕಡಲತಳದಲ್ಲಿ ಕಾಣಸಿಗುವ ಸೀಲೆಂಟರೇಟ ಗುಂಪಿನ ಜೀವಿ

ಆನಿಸೋಲ್

(ರ) ಫೀನೈಲ್ ಮೀಥೈಲ್ ಈಥರ್; ಪ್ರತೀಕ C6H5.O.CH3. ನಿರ್ವರ್ಣ ದ್ರವ. ಕುಬಿಂ ೧೫೫0 ಸೆ, ಸುಗಂಧ ತಯಾರಿಕೆಯಲ್ಲಿ ಬಳಕೆ. ಇದೊಂದು ಜಂತುನಾಶಕ

ಆನುವಂಶಿಕ ತಪಾಸಣೆ

(ಜೀ) ಗಂಡು- ಹೆಣ್ಣುಗಳಲ್ಲಿ ರಕ್ತ ಪರೀಕ್ಷೆ, ಊತಕ ಕೃಷಿ ಇತ್ಯಾದಿ ವಿಧಾನಗಳಿಂದ ಆನುವಂಶೀಯ ಕಾಯಿಲೆಗಳನ್ನು ಪರೀಕ್ಷಿಸುವ ಕ್ರಮ. ಇದರಿಂದ ಅಪ್ರಭಾವಿ ಜೀನ್‌ಅನ್ನು ಉದಾ: ಆಫ್ರಿಕ ಜನಾಂಗಗಳಲ್ಲಿ ವ್ಯಾಪಕ ವಾಗಿ ಕಂಡುಬರುವ ಸಿಕಲ್-ಸೆಲ್ ಅನೀಮಿಯಗೆ ಕಾರಣವಾದ ಜೀನ್‌ಅನ್ನು, ಪತ್ತೆ ಹಚ್ಚಬಹುದು

ಆನುವಂಶಿಕ ಪರಿವರ್ತನೆ

(ಜೀ) ಒಂದು ಬ್ಯಾಕ್ಟೀರಿಯ/ಜೀವಕೋಶದ ಡಿಎನ್‌ಎ ತುಣುಕು ಮತ್ತೊಂದು ಬ್ಯಾಕ್ಟೀರಿಯ / ಜೀವಕೋಶದೊಳಕ್ಕೆ ಸೇರಿ ಆನುವಂಶಿಕವಾಗಿ ಜೀವಿ ಅಥವಾ ಕೋಶದಲ್ಲಿ ಪರಿವರ್ತನೆ ಉಂಟುಮಾಡುವುದು

ಆನುವಂಶಿಕ ವರ್ಗಾವಣೆ

(ಜೀ) ಒಂದು ಬ್ಯಾಕ್ಟೀರಿಯದ ಆನುವಂಶಿಕ ಗುಣಗಳನ್ನು ಬ್ಯಾಕ್ಟೀರಿಯೋ ಫೇಜ್ ಎಂಬ ವೈರಸ್‌ಗಳು ಮತ್ತೊಂದು ಬ್ಯಾಕ್ಟೀರಿಯಾಗೆ ವರ್ಗಾಯಿಸುವ ವಿಧಾನ. ಈ ವಿಧಾನದಲ್ಲಿ ಬ್ಯಾಕ್ಟೀರಿಯೋ ಫೇಜ್‌ಗಳು ಮಧ್ಯವರ್ತಿಗಳಂತೆ ಅಥವಾ ವಾಹಕಗಳಂತೆ ಕಾರ್ಯನಿರ್ವಹಿಸುತ್ತವೆ

ಆನುವಂಶಿಕ ಸಲಹೆ

(ಜೀ) ತಲೆಮಾರುಗಳ ಆನುವಂಶಿಕ ನ್ಯೂನತೆಗಳ ವಿಶ್ಲೇಷಣೆಯಿಂದ ಮುಂಬರುವ ಪೀಳಿಗೆಗಳಲ್ಲಿ ಅಂತಹ ನ್ಯೂನತೆಗಳು ತಲೆದೋರದಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸುವುದು

ಆನುವಂಶಿಕತೆ

(ವೈ) ಸ್ವಭಾವ ಮತ್ತು ಶಾರೀರಿಕ ಲಕ್ಷಣಗಳು ತಂದೆ ತಾಯಿಯರಿಂದ ಮುಂದಿನ ಸಂತತಿಗೆ ಸಾಗುವ ಗುಣ. ಪ್ರಾಣಿಯಲ್ಲಿ, ಸಸ್ಯದಲ್ಲಿ ಆನುವಂಶಿಕವಾಗಿ ಬಂದ ಗುಣಲಕ್ಷಣಗಳು

ಆನುಷಂಗಿಕ

(ಸಾ) ಅನುಭವ ನಿಂತ ಅನಂತರವೂ ಗೋಚರವಾಗುತ್ತಿರುವಂತೆ ಭಾಸವಾಗುವ ಗೌಣ ಭಾವನೆ. ಅಕಸ್ಮಾತ್ತಾಗಿ ಸಂಭವಿಸುವ ಅನುದ್ದಿಷ್ಟ ಘಟನೆ. ಅನುಗತ

Search Dictionaries

Loading Results

Follow Us :   
  Download Bharatavani App
  Bharatavani Windows App