भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆಕ್

(ಪ್ರಾ) ಕ್ರಾರಡ್ರಯಿ ಫಾರ್ಮೀಸ್ ಗಣದ ಅಲ್‌ಸಿಡೀ ಕುಟುಂಬಕ್ಕೆ ಸೇರಿದ, ಉತ್ತರ ಅಟ್ಲಾಂಟಿಕ್ ಕಿನಾರೆ ಉದ್ದಕ್ಕೂ ಕಂಡುಬರುವ ಹಲವಾರು ದೊಡ್ಡ ಗಾತ್ರದ, ಮೋಟು ಕತ್ತಿನ ಮುಳುಗು ಹಕ್ಕಿಗಳ ಪೈಕಿ ಒಂದು

ಆಕ್ಟೀನಿಯಮ್

(ರ) ಆವರ್ತ ಕೋಷ್ಟಕದ ಮೂರನೆಯ ಗುಂಪಿನಲ್ಲಿ ಇರುವ ವಿಕಿರಣಪಟು ಧಾತು; ರಾಸಾಯನಿಕ ಪ್ರತೀಕ ac ಪಸಂ. ೮೯, ಸಾಪರಾ ೨೨೭; ಅರ್ಧಾಯು ೨೧.೭ ವರ್ಷಗಳು

ಆಕ್ಟೀನೊಡೋನ್ ಶ್ರೇಣಿ

(ರ) ಆಕ್ಟೀನಿಯಮ್‌ನಿಂದ ಆರಂಭಗೊಂಡು ಪಸಂ ೧೦೩ನೇ ಧಾತು ವಿನೊಂದಿಗೆ ಅಂತ್ಯಗೊಳ್ಳುವ, ಭಾರಿ ತೂಕದ ಹಾಗೂ ಹೆಚ್ಚುತ್ತ ಹೋಗುವ ಪಸಂಗಳ ವಿಕಿರಣಪಟು ಲೋಹ ಧಾತುಗಳ ಶ್ರೇಣಿ. ಹೋಲಿಸಿ: ಲ್ಯಾಂಥನೈಡ್ ಶ್ರೇಣಿ

ಆಕ್ಟೀನೊಮೀಟರ್

(ಭೌ) ಸೂರ್ಯನಿಂದ ಇಲ್ಲವೇ ಇತರ ಮೂಲಗಳಿಂದ ಬರುವ ಬೆಳಕಿನ ಕಿರಣಗಳಲ್ಲಿ ಇರುವ ಉಷ್ಣ ಶಕ್ತಿಯನ್ನು ಅಥವಾ ರಾಸಾಯನಿಕ ಶಕ್ತಿಯನ್ನು ಅಳೆಯುವ ಉಪಕರಣ. ವಿಕಿರಣಶಕ್ತಿ ಮಾಪಕ

ಆಕ್ಟೇನ್

(ರ) C8H18 ಪ್ಯಾರಫೀನ್ ಶ್ರೇಣಿಯ ಹೈಡ್ರೊಕಾರ್ಬನ್. ಹಲವು ಸಮಾಂಗೀ ರೂಪಗಳಲ್ಲಿ ಪೆಟ್ರೋಲಿಯಮ್‌ನಲ್ಲಿ ಲಭ್ಯ. ನಿರ್ವರ್ಣ ದ್ರವ. ಸಾಸಾಂ ೦.೭; ದ್ರಬಿಂ -೫೬.೭೯0 ಸೆ; ಕುಬಿಂ ೧೨೫.೭0 ಸೆ; ಆಲ್ಕಹಾಲ್‌ನಲ್ಲಿ ವಿಲೇಯ, ನೀರಿನಲ್ಲಿ ಅವಿಲೇಯ. ದ್ರಾವಕವಾಗಿ ಹಾಗೂ ರಾಸಾಯನಿಕ ಮಧ್ಯವರ್ತಿಯಾಗಿ ಬಳಕೆ

ಆಕ್ಟೇನ್ ಸಂಖ್ಯೆ

(ರ) ಅಂತರ್ದಹನ ಎಂಜಿನ್‌ನಲ್ಲಿ ತರಲದ ಗುದ್ದುವಿಕೆ (ನಾಕಿಂಗ್) ನಿರೋಧ ಸಾಮರ್ಥ್ಯ ಸೂಚಕ ಸಂಖ್ಯೆ. ಐಸೋ ಆಕ್ಟೇನ್ (C8H18) ಹಾಗೂ ನಾರ್ಮಲ್ ಹೆಪ್ಟೇನ್‌ಗಳ (C7H16) ಮಿಶ್ರಣದಲ್ಲಿ ಗಾತ್ರರೀತ್ಯ ಐಸೊ ಆಕ್ಟೇನ್‌ನ ಶೇಕಡಾವಾರು ಪ್ರಮಾಣ. ಸಹಜ ಹೆಪ್ಟೇನ್‌ನ ಆಕ್ಟೇನ್ ಸಂಖ್ಯೆ ೦. ಐಸೊಆಕ್ಟೇನ್‌ನದು ೧೦೦

ಆಕ್ಟೇವ್

(ಭೌ) ಬೆಳಕಿನ ಅಥವಾ ಶಬ್ದದ ಅಲೆಗಳಂಥ ಯಾವುದೇ ಕಂಪನ ಶ್ರೇಣಿಯಲ್ಲಿ ೨:೧ ನಿಷ್ಪತ್ತಿಯಲ್ಲಿರುವ ಎರಡು ಮೂಲಭೂತ ಆವೃತ್ತಿಗಳ ನಡುವಿನ ಅಂತರ/ಭಾಗ. ಸ್ವರಗ್ರಾಮ. ಅಷ್ಟಕ (ರ) ಧಾತುಗಳನ್ನು ಅವುಗಳ ಪರಮಾಣು ತೂಕಗಳಿಗೆ ಅನುಗುಣವಾಗಿಯೂ ಸದೃಶ ಗುಣಗಳು ಪುನರಾವರ್ತಿಸುವಂಥ ಎಂಟೆಂಟು ಧಾತುಗಳ ಗುಂಪುಗಳಾಗಿಯೂ ವರ್ಗೀಕರಿಸುವ ನಿಯಮ. ೧೮೬೩ರಲ್ಲಿ ನ್ಯೂಲ್ಯಾಂಡ್ಸ್ ಶೋಧಿಸಿದ

ಆಕ್ಟೊಪೊಡ

(ಪ್ರಾ) ಸಿಫ್ಯಾಲೊಪೊಡ್‌ಗಳ ಒಂದು ಗಣ. ಸಾಮಾನ್ಯವಾಗಿ ಹೀರುನಳಿಕೆಗಳ ಸಾಲುಗಳಿಂದ ಕೂಡಿದ ಎಂಟು ಬಾಹುಗಳು ಇವಕ್ಕೆ ಆಹಾರವನ್ನು ಹಿಡಿದುಕೊಳ್ಳಲು, ಹಾಗೂ ಯಾವುದೇ ಆಸರೆಗೆ ಕಚ್ಚಿ ಕೊಂಡಿರಲು ಸಹಾಯಕ. ಸಮುದ್ರತಲದಲ್ಲೂ ಬಂಡೆಬಿರುಕುಗಳಲ್ಲೂ ವಾಸ ಇದ್ದು ಅವಶ್ಯಬಿದ್ದಾಗ ಹೊರಕ್ಕೆ ಈಜಿಕೊಂಡು ಬರುತ್ತವೆ

ಆಕ್ಟೋಪಸ್

(ಪ್ರಾ) ಮೊಲಸ್ಕ ವಂಶ. ಸಿಫ್ಯಾಲೊಪೊಡ ವರ್ಗ, ಆಕ್ಟೊಪೊಡ ಉಪ ಕುಟುಂಬಕ್ಕೆ ಸೇರಿದ ಜಲಚರ. ಆಕ್ಟೋಪಸ್ ವಲ್ಗಾರಿಸ್ ವೈಜ್ಞಾನಿಕ ನಾಮ. ಸಾಗರವಾಸಿ. ಎಂಟು ಉದ್ದವಾದ ಬಾಹುಗಳಿವೆ. ದೇಹ ದುಂಡಗೆ ಮಾಂಸಯುತ. ಬಾಹು ಗಳಲ್ಲಿ ಹೀರುಬಟ್ಟಲುಗಳಿವೆ. ಬಲ ವಾದ ದವಡೆ. ಜಾರುವ ದೇಹ. ಅಪಾಯಕಾರಿ ಶೀರ್ಷಪಾದಿ. ಕೆಲವು ದೇಶಗಳಲ್ಲಿ ಆಹಾರವಾಗಿ ಬಳಕೆ. ಅಷ್ಟಪಾದಿ

ಆಕ್ರಮಣ

(ಜೀ) ಟ್ಯೂಮರ್ ಅಥವಾ ಕ್ಯಾನ್ಸರ್ ಕೋಶ ಗಳು ಒಂದು ನೆಲೆಯಿಂದ ಮತ್ತೊಂದು ನೆಲೆಗೆ ಹರಡುವುದು

ಆಕ್ರಮಣಶೀಲ

(ಪ್ರಾ) ಇತರ ಪ್ರಾಣಿಗಳೆದುರು ಹೋರಾಟ ನಡೆಸಿ ಅವನ್ನು ಕೊಲ್ಲುವ, ಅವುಗಳ ಆಹಾರ ನೆಲೆಗಳಿಂದ ಅವನ್ನು ಅಟ್ಟುವ ಇಲ್ಲವೇ ಇತರರ ಸಹಜ ಹಕ್ಕುಗಳನ್ನು ಉಲ್ಲಂಘಿಸಿ ಬಲಪ್ರಯೋಗದಿಂದ ತನ್ನನ್ನು ತಾನೆ ಸ್ಥಾಪಿಸಿಕೊಳ್ಳುವ ಪ್ರವೃತ್ತಿ

ಆಕ್ಸಾನ್

(ಪ್ರಾ) ನರಕೋಶದ ಹೊರಬೆಳೆತ; ಉದ್ದ ದಾರ ದಂತಿರುತ್ತದೆ; ಕೋಶದಿಂದ ಆವೇಗಗಳನ್ನು ಹೊರ ಸಾಗಿಸುತ್ತದೆ

ಆಕ್ಸಾಲಿಕ್ ಆಮ್ಲ

(ರ) (COOH)2. 2H2O ನೀರಿನ ಎರಡು ಅಣುಗಳೊಂದಿಗೆ ಸ್ಫಟಿಕೀಕರಿಸುವ ದ್ವಿಪ್ರತ್ಯಾಮ್ಲೀಯ ಆಮ್ಲ. ಸ್ಫಟಿಕೀಯ ಘನ ವಸ್ತು. ನೀರಿನಲ್ಲಿ ತುಸು ವಿಲೇಯ. ದ್ರಬಿಂ ೧೦೧0 ಸೆ ನಿರ್ಜಲವಾಗಿದ್ದಾಗ ದ್ರಬಿಂ ೧೯೦0 ಸೆ. ಬೇಗ ಉತ್ಪತನ ವಾಗುತ್ತದೆ. ಪುಳ್ಳಂಪುರ್ಚಿಯಂಥ ಅನೇಕ ಸಸ್ಯಗಳಲ್ಲಿ ಲಭ್ಯ. ಅನೇಕ ಆರ್ಗ್ಯಾನಿಕ್ ವಸ್ತುಗಳ ಆಕ್ಸಿಡೀಕರಣದಿಂದಲೂ ಪಡೆಯಬಹುದು. ಪ್ರಬಲ ಆಕ್ಸಿಡೀಕಾರಕಗಳು ಇದನ್ನು CO2 ಆಗಿ ಪರಿವರ್ತಿಸುತ್ತವೆ. ಬಣ್ಣ ಕಟ್ಟಲು, ಚೆಲುವೆ ಮಾಡಲು, ಶಾಯಿ ಮತ್ತು ಲೋಹ ಪಾಲಿಷ್ ತಯಾರಿಸಲು ಹಾಗೂ ಮಸಿ ಮಚ್ಚೆ ತೆಗೆಯಲು ಬಳಕೆ

ಆಕ್ಸಿ ಅಸಿಟಲೀನ್ ಜ್ವಾಲೆ

(ತಂ) ಆಕ್ಸಿಜನ್ ಮತ್ತು ಅಸಿಟಿಲಿನ್ (C2H2) ಮಿಶ್ರಣದ ದಹನದಿಂದ ಬರುವ ಜ್ವಾಲೆ. ಉಷ್ಣತೆ ಸುಮಾರು ೩೩೦೦0 ಸೆ. ಲೋಹಗಳಿಗೆ ಬೆಸುಗೆ ಹಾಕಲು ಅಥವಾ ಅವನ್ನು ಕತ್ತರಿಸಲು ಬಳಕೆ

ಆಕ್ಸಿಕ್ರೊಮ್ಯಾಟಿನ್

(ಸ) ಗಾಢ ಕಲೆ ತೋರದ ಮತ್ತು ಕಡಿಮೆ ಪ್ರಮಾಣದಲ್ಲಿ ನ್ಯೂಕ್ಲಿಯಿಕ್ ಆಮ್ಲ ಇರುವ ಕ್ರೊಮ್ಯಾಟಿನ್‌ನ ಒಂದು ರೂಪ

ಆಕ್ಸಿಕ್ಲೋರೈಡ್

(ರ) ClO ಗುಂಪು ಇರುವ ಸಂಯುಕ್ತಗಳ ಸಾಮಾನ್ಯ ಹೆಸರು. ಯಾವುದೇ ರ‍್ಯಾಡಿಕಲ್ ಅಥವಾ ಧಾತುವಿನೊಡನೆ ಆಕ್ಸಿಜನ್ ಮತ್ತು ಕ್ಲೋರೀನ್‌ಗಳೆರಡೂ ಸೇರಿ ಉತ್ಪತ್ತಿ ಮಾಡುವ ಸಂಯುಕ್ತ. ಉದಾ: ಕಾರ್ಬನ್ ಆಕ್ಸಿಕ್ಲೋರೈಡ್

ಆಕ್ಸಿಜನ್

(ರ) ರಾಸಾಯನಿಕ ಪ್ರತೀಕ O. ಆವರ್ತ ಕೋಷ್ಟಕದ ೬ನೇ ಗುಂಪಿಗೆ ಸೇರಿದ ನಿರ್ವರ್ಣ, ನಿರ್ಗಂಧ ಅಲೋಹ ಅನಿಲಧಾತು. ಪಸಂ ೮, ಸಾಪರಾ ೧೫.೯೯೯೪, ವೇಲೆನ್ಸಿ ೨, ದ್ರಬಿಂ -೨೧೮.೪0 ಸೆ. ಕುಬಿಂ -೧೮೩0 ಸೆ. ದಹನ ಕ್ರಿಯೆಗೆ ಬೆಂಬಲ ನೀಡುತ್ತದೆ. ಜೀವಿಜಾತಿಗಳ ಉಸಿರಾಟಕ್ಕೆ ಅತ್ಯವಶ್ಯ. ಸಮೃದ್ಧವಾಗಿ ಲಭಿಸುವ ಧಾತು. ಗಾತ್ರರೀತ್ಯ ವಾತಾವರಣದಲ್ಲಿ ಶೇ. ೨೧ರಷ್ಟು. ತೂಕ ರೀತ್ಯ ನೀರಿನಲ್ಲಿ ಶೇ. ೮೯ ಹಾಗೂ ಭೂಮಿಯ ಹೊರಚಿಪ್ಪಿನ ಬಂಡೆಗಳಲ್ಲಿ ತೂಕರೀತ್ಯ ಶೇ. ಸುಮಾರು ೫೦ರಷ್ಟು ಇದೆ. ದ್ರವ ವಾಯುವಿನಿಂದ ಉತ್ಪಾದನೆ. ಹೆಚ್ಚಿನ ಇತರ ಧಾತುಗಳೊಂದಿಗೆ ರಾಸಾಯನಿಕವಾಗಿ ವರ್ತಿಸಿ ಅವುಗಳ ಆಕ್ಸೈಡ್‌ಗಳನ್ನು ರೂಪಿಸುತ್ತದೆ. ಶಾಖ ಬೆಸುಗೆ ಜ್ವಾಲೆಗಳಲ್ಲಿ, ಉಕ್ಕಿನ ತಯಾರಿಕೆಯಲ್ಲಿ, ವೈದ್ಯಕೀಯ ಚಿಕಿತ್ಸೆಯಲ್ಲಿ ಹಾಗೂ ಅರಿವಳಿಕಗಳಲ್ಲಿ ಬಳಕೆ. ದ್ರವ ಆಕ್ಸಿಜನ್ ರಾಕೆಟ್ ಇಂಧನವಾಗಿ ಬಳಕೆ. ಪ್ರೀಸ್ಟ್ಲೆ ೧೭೭೪ರಲ್ಲಿ ಆವಿಷ್ಕರಿಸಿದುದು. ಆಮ್ಲ ಉಂಟುಮಾಡುವ ಅನಿಲಧಾತುವೆಂದು -ಆಮ್ಲಜನಕ ಎಂದು ಒಮ್ಮೆ (ತಪ್ಪಾಗಿ) ಭಾವಿಸಲಾಗಿತ್ತು. ಆಕ್ಸಿಜನ್ ಇಲ್ಲದ ಆಮ್ಲಗಳೂ ಉಂಟು – ಉದಾ: ಹೈಡ್ರೊಕ್ಲೋರಿಕ್ ಆಮ್ಲ ಮುಂತಾದ ಹೈಡ್ರಾಸಿಲ್‌ಗಳು. ಪ್ರಾಣವಾಯು

ಆಕ್ಸಿಜನ್‌ಶೂನ್ಯ ಉಕ್ಕು

(ರ) ಎರಕ ಹೊಯ್ಯುವುದಕ್ಕೆ ಮುನ್ನ ಮ್ಯಾಂಗನೀಸ್, ಸಿಲಿಕಾನ್ ಮತ್ತು ಕೆಲವು ವೇಳೆ ಅಲ್ಯೂಮಿನಿಯಮ್ ಸೇರಿಸುವ ಮೂಲಕ ಸಂಪೂರ್ಣವಾಗಿ ಆಕ್ಸಿಜನ್ ಶೂನ್ಯಗೊಳಿಸಿದ ಉಕ್ಕು. ಘನೀಕರಣ ಸಮಯದಲ್ಲಿ ಕಾರ್ಬನ್ ಹಾಗೂ ಕಬ್ಬಿಣದ ಆಕ್ಸೈಡ್‌ಗಳ ನಡುವಿನ ಕ್ರಿಯೆಯಿಂದ ಅನಿಲ ಎಷ್ಟು ಮಾತ್ರವೂ ಉತ್ಪತ್ತಿಯಾಗುವುದಿಲ್ಲ. ಇದರಿಂದ ಸುಸ್ಥಿತಿಯ ಲೋಹದ ಗಟ್ಟಿ ದೊರೆಯುತ್ತದೆ

ಆಕ್ಸಿಟೋಸಿನ್

(ವೈ) ಪಿಟ್ಯುಟರಿ ಗ್ರಂಥಿಯ ಹಿಂಬದಿ ಹಾಲೆಯಿಂದ ಸ್ರಾವವಾಗುವ ಎರಡು ಹಾರ್ಮೋನ್‌ಗಳ ಪೈಕಿ ಒಂದು. ಇದು ಪ್ರಸವ ಕಾಲದಲ್ಲಿ ಗರ್ಭಾಶಯದ ಸ್ನಾಯುಗಳನ್ನು ಸಂಕುಚಿಸಿ ಸುಲಭ ಪ್ರಸವಕ್ಕೆ ಕಾರಣವಾಗುತ್ತದೆ. ಅಲ್ಲದೆ ಸ್ತನ್ಯ ಸ್ರವನಕ್ಕೂ ನೆರವಾಗುತ್ತದೆ. ಪ್ರಸವೋತ್ಕರ್ಷಕ ಹಾರ್ಮೋನು

ಆಕ್ಸಿಟ್ರಾಪಿಸಮ್

(ಸ) ಆಕ್ಸಿಜನ್‌ಗೆ ಪ್ರತಿಕ್ರಿಯೆಯಾಗಿ ಸಸ್ಯವೊಂದು ಸಾಮಾನ್ಯವಾಗಿ ಆಕ್ಸಿಜನ್ನಿನ ದಿಶೆಯಲ್ಲಿ, ತನ್ನ ಬೆಳವಣಿಗೆಯನ್ನು ರೂಪಿಸಿಕೊಳ್ಳುವುದು

Search Dictionaries

Loading Results

Follow Us :   
  Download Bharatavani App
  Bharatavani Windows App