भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಆಸನಾಸ್ಥಿ

(ಪ್ರಾ) ಚತುಷ್ಪಾದಿಗಳಲ್ಲಿ ವಸ್ತಿಕುಹರ ಮಂಡಲದ ಹಿಂಬದಿ ಮೂಳೆ. ಪೃಷ್ಠಾಸ್ಥಿ. ನಿತಂಬಾಸ್ಥಿ

ಆಸನ್ನ

(ಗ) ನೋಡಿ: ಪಾರ್ಶ್ವ

ಆಸಪಾಕ

(ವೈ) ಕ್ಯಾಂಡಿಡಾ ಆಲ್ಬಿಕ್ಯಾನ್ಸ್ ಎಂಬ ಶಿಲೀಂಧ್ರದಿಂದ ಉಂಟಾದ ರೋಗ. ಮಕ್ಕಳ ನಾಲಗೆಯ ಮೇಲೆ ಬಿಳಿ ಮಚ್ಚೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಬಾಯಿಹುಣ್ಣು. ಬಿಳಿ ಹಕ್ಕಳೆ ರೋಗ

ಆಸರೆಕಂಬ

(ತಂ) ಪಕ್ಕಪಕ್ಕದ ಎರಡು ಸೇತುವೆ ಕಮಾನುಗಳ ಮಧ್ಯದ ಆಸರೆ. ತೀರದಿಂದ ಸಾಗರದೊಳಕ್ಕೆ ಚಾಚಿಕೊಂಡಿರುವ ಮರದ ಅಥವಾ ಉಕ್ಕಿನ ಕಟ್ಟಣೆ. ನೌಕೆಗಳನ್ನು ಲಂಗರು ಹಾಕಲು, ಸರಕು ಸಾಗಿಸಲು ಬಳಕೆ. ಬಾಗಿಲು, ಕಿಟಕಿಗಳ ನಡುವಣ ಗಟ್ಟಿ ಕಟ್ಟಡ

ಆಸವನ

(ರ) ನೋಡಿ : ಬಟ್ಟೀಕರಣ

ಆಸ್ಕಸ್

(ಸ) ಶಿಲೀಂಧ್ರದಲ್ಲಿ ಬೀಜಕಗಳು ಮೈದಳೆಯುವ ಕೊಳವಿಸದೃಶ ಕೋಶ

ಆಸ್ಕಾರ್ಬಿಕ್ ಆಮ್ಲ

(ರ) C6H8O6. ದ್ರಬಿಂ. ೧೯೨0 ಸೆ. ಅನೇಕ ಸಸ್ಯ ಪದಾರ್ಥಗಳಲ್ಲಿ, ವಿಶೇಷವಾಗಿ ಸಿಟ್ರಸ್ ಹಣ್ಣಿನಲ್ಲಿ ಲಭ್ಯವಿರುವ ಬಿಳಿ, ಸ್ಫಟಿಕೀಯ, ಜಲವಿಲೇಯ ವೈಟಮಿನ್. ವೈಟಮಿನ್ ‘ಸಿ’. ಇದರ ಕೊರತೆ ಸ್ಕರ್ವಿ ರೋಗಕ್ಕೆ ಕಾರಣವಾಗುತ್ತದೆ

ಆಸ್ಟಟೀನ್

(ರ) ಅತ್ಯಧಿಕ ಭಾರದ ಹ್ಯಾಲೋಜನ್; ವಿಕಿರಣಪಟು ಧಾತು; At; ಪಸಂ ೮೫; ರಾಶಿ ಸಂಖ್ಯೆಗಳು ೨೦೨- ೨೧೨, ೨೧೪-೨೧೯; ಅರ್ಧಾಯುಗಳು ೨´೧೦-೬ ಸೆಕೆಂಡ್‌ನಿಂದ ೮ ಗಂಟೆಗಳ ತನಕ. ಇದರ ಸಮಸ್ಥಾನಿಗಳು ಆಕ್ಟಿನಿಯಮ್, ಯುರೇನಿಯಮ್/ನೆಪ್ಚೂನಿಯಮ್ ಶ್ರೇಣಿ ಸದಸ್ಯಗಳಾಗಿ ಸಹಜ ಲಭ್ಯ, ಇಲ್ಲವೇ ಬಿಸ್ಮತ್‌ನ a ತಾಡನದಿಂದ ಉತ್ಪಾದಿತ

ಆಸ್ಟರ್

(ಸ) ನಕ್ಷತ್ರ ಕಿರಣಗಳಂತೆ ಕಾಣುವ ಎಸಳುಗಳುಳ್ಳ ಹೂ ಬಿಡುವ ಸಸ್ಯಜಾತಿ. ಬಹುಜನಪ್ರಿಯವೂ ರಮ್ಯವೂ ಆದ ಈ ವಾರ್ಷಿಕ ಸಸ್ಯವನ್ನು ಮಡಿಗಳಲ್ಲೂ ಕುಂಡಗಳಲ್ಲೂ ಬೆಳೆಸು ತ್ತಾರೆ. ಸೇವಂತಿಗೆ ಹೂವಿನಂತೆ ಇರುವ ಇದರ ಹೂಗಳನ್ನು ಮಂಜರಿ ಕಟ್ಟಲು ಮತ್ತು ಮುಡಿಯಲು ಬಳಸುತ್ತಾರೆ. ಮೂಲತಃ ಚೀನದಿಂದ ತಂದ ಏಕದಳ ಪುಷ್ಪ ಕ್ರಮಕ್ರಮವಾಗಿ ವಿಕಾಸಗೊಂಡು ಇಂದಿನ ರೂಪ ತಾಳಿದೆ

ಆಸ್ಟಿಯೋಪತಿ

(ವೈ) ೧. ಅಸ್ಥಿವ್ಯಾಧಿ. ಮೂಳೆಗಳಿಗೆ ಬರುವ ಯಾವುದೇ ರೋಗ ಸೂಚಿಸಲು ಬಳಸಬಹುದಾದ ಪದ. ೨. ಅಲೋಪತಿ, ಹೋಮಿಯೋಪತಿಗಳಂತೆ ಬಳಕೆಯಲ್ಲಿರುವ ಆಸ್ಟಿಯೋಪತಿ ಒಂದು ವಿಶೇಷವಾದ ಚಿಕಿತ್ಸಾ ಕ್ರಮ. ದೇಹವು ತನ್ನ ಸಹಜ ಸ್ಥಿತಿಯಲ್ಲಿ, ಅದರಲ್ಲಿ ತಲೆದೋರುವ ಸೋಂಕು ಹಾಗೂ ಮೂಡುವ ವಿಷಪದಾರ್ಥಗಳನ್ನು ಅದು ಸ್ವಯಂ ನಿವಾರಿಸಿ ಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂಬ ಪ್ರಕಲ್ಪನೆ ಈ ಚಿಕಿತ್ಸಾ ವಿಧಾನದ ತಿರುಳು. ದೇಹದಲ್ಲಿರುವ ಮೂಳೆ ಮತ್ತು ಸ್ನಾಯುಗಳು ತೊಂದರೆಗೆ ಒಳಗಾದಾಗ ಅದರ ಪ್ರಭಾವ ನರ ಹಾಗೂ ರಕ್ತಪರಿಚಲನೆಯ ಮೇಲೂ ಆಗುತ್ತದೆ ಎಂಬ ಸಿದ್ಧಾಂತದ ಮೇಲೆ ಶರೀರದ ಭಾಗಗಳನ್ನು ಮರ್ದಿಸಿ ತೀಡಿ, ತಿರುಚಿ, ಉಜ್ಜಿ, ಎಳೆದು ಸರಿಪಡಿಸುವ ಚಿಕಿತ್ಸಾ ಕ್ರಮ. ಅಸ್ಥಿಚಿಕಿತ್ಸೆ

ಆಸ್ಟ್ರಲೊಪಿತಿಕಸ್

(ಪ್ರಾ) ಮಾನವ ವಿಕಾಸದ ಪಾರ್ಶ್ವಶಾಖೆ ಆಸ್ಟ್ರಲೊಪಿತಿಸಿನೀ ಉಪಕುಟುಂಬದಲ್ಲಿ ಮಾನವ ಸಮೀಪ ಜಾತಿ. ೪-೨೦ ಲಕ್ಷ ವರ್ಷಗಳ ಹಿಂದೆ ಪ್ಲಿಯಿಸ್ಟೊಸೀನ್ ಮೊದಲ ಭಾಗದಲ್ಲಿ ಆಫ್ರಿಕದ ದಕ್ಷಿಣ ಮತ್ತು ಪೂರ್ವ ಬಯಲು ಗಳಲ್ಲಿ ಹರಡಿದ್ದ ವಾನರ ಜಾತಿ. ಈ ಪ್ರದೇಶದ ಸುಣ್ಣಕಲ್ಲು ಗುಹೆಗಳಲ್ಲಿ ಪಳೆಯುಳಿಕೆಗಳು ದೊರೆತಿವೆ. ಇತರ ಕಪಿಗಳಂತೆ ಅಲ್ಲದೆ ಇದು ಮನುಷ್ಯನ ರೀತಿಯ ದ್ವಿಪಾದಚಾರಿ. ನೆಟ್ಟಗೆ ನಿಂತು ನಡೆದಾಡುತ್ತಿದ್ದಿತು. ಆಧುನಿಕ ಮಾನವನ ಹಲ್ಲುಗಳನ್ನು ಹೋಲುವ ಹಲ್ಲುಗಳಿದ್ದವು. ಮಿದುಳ ಸಾಮರ್ಥ್ಯ ಮಾನವನ ಮಿದುಳ ಸಾಮರ್ಥ್ಯದ ಅರ್ಧಕ್ಕಿಂತ ಕಡಿಮೆ ಇದ್ದಿತು. ಒರಟು ಕಲ್ಲಿನಿಂದ ಮಾಡಿದ ಆಯುಧಗಳನ್ನು ಉಪಯೋಗಿಸುತ್ತಿದ್ದಿರಬಹುದೆಂದು ಸಂಶೋಧನೆ ಗಳಿಂದ ಗೊತ್ತಾಗಿದೆ. ದಾಕ್ಷಿಣಾತ್ಯ ವಾನರ

ಆಸ್ಟ್ರೋಬ್ಲೀಮ್

(ಖ) ಬಾಹ್ಯಾಕಾಶದಿಂದ ಬಂದ ಉಲ್ಕಾಪಿಂಡ ಬಡಿದುದರ ಪರಿಣಾಮವಾಗಿ ಭೂ ತೊಗಟೆ ಯಲ್ಲಾದ ಕಲೆ ಅಥವಾ ಹಳ್ಳ

ಆಸ್ತಮ

(ವೈ) ನಾವು ಉಸಿರಾಡುವ ಗಾಳಿಯಲ್ಲಿರುವ ಕೆಲವು ಒಗ್ಗದಿರುವ ಪದಾರ್ಥಗಳು ನಮ್ಮ ವಾಯುನಾಳವನ್ನು ಪ್ರವೇಶಿಸಿದಾಗ ವಾಯುನಾಳಗಳು ಹಠಾತ್ತನೆ ಸಂಕುಚಿಸಿ ವಾಯು ಸಂಚಾರಕ್ಕೆ ತಡೆ ಉಂಟಾಗುತ್ತದೆ. ಆಗ ಹಲವು ವಿಶಿಷ್ಟ ಲಕ್ಷಣಗಳು ತಲೆದೋರುತ್ತವೆ. ಉಸಿರಾಡುವಾಗ ತೀವ್ರಬಾಧೆ ಸುಂಯ್ ಸುಂಯ್ ಶಬ್ದ, ಕೆಮ್ಮು ಇತ್ಯಾದಿ. ಗೂರಲು. ಉಬ್ಬಸ, ದಮ್ಮು, ನೇವಸ, ಶ್ವಾಸಕಾಸ

ಆಸ್ಪಿರಿನ್

(ರ) ಅಸೆಟಿಲ್‌ಸ್ಯಾಲಿಸಿಲಿಕ್ ಆಮ್ಲದ ರೂಢನಾಮ. ನೋವುಶಾಮಕ. ಜ್ವರ ನಿವಾರಕ ಔಷಧ. CH3COO C6H4COOH. ಬಿಳಿ ಬಣ್ಣದ ಘನ ಪದಾರ್ಥ. ದ್ರಬಿಂ. ೧೩೩0 ಸೆ

ಆಸ್ಪಿರೇಷನ್

(ವೈ) ೧. ಹೊರ ಅಥವಾ ಒಳ ಸೇದುವಿಕೆಯ ಪರಿಣಾಮವಾಗಿ ಗಾಳಿ ಒಳಹೋಗುವಿಕೆ ಅಥವಾ ಹೊರಬರುವಿಕೆ. ೨. ಚೂಷಣೆ: ಒಂದು ಕುಹರದಲ್ಲಿರುವ ದ್ರವವನ್ನು ಚೂಷಕ ಎಂಬ ಸಾಧನದ ನೆರವಿನಿಂದ ಹೀರಿ ಹೊರ ತೆಗೆಯುವಿಕೆ. ಶ್ವಾಸಕೋಶದಲ್ಲಿ ಕೆಲವು ಸಲ ಅನಗತ್ಯ ಗಾಳಿ ಸಂಚಯವಾಗಬಹುದು. ಉದರದಲ್ಲಿ ನೀರು ತುಂಬಿಕೊಳ್ಳಬಹುದು. ಕೆಲವು ಭಾಗಗಳಲ್ಲಿ ಕೀವು ಸಂಗ್ರಹವಾಗಬಹುದು. ಇವನ್ನು ಚೂಷಕದ ನೆರವಿನಿಂದ ಹೀರಿ ತೆಗೆಯಬಹುದು. ಪರೀಕ್ಷಾರ್ಥವಾಗಿ ರಕ್ತನಾಳದಿಂದ ರಕ್ತವನ್ನು ಹೊರತೆಗೆಯುವ ಅಥವಾ ಬಳ್ಳಿ ಕಾಲುವೆಯಿಂದ ಮಿದುಳು ಏರುದ್ರವವನ್ನು ಹೀರಿ ತೆಗೆಯುವ ಕ್ರಿಯೆಗೂ ಇದೇ ಶಬ್ದ ಪ್ರಯೋಗವಾಗುತ್ತದೆ

ಆಸ್ಫೋಟಕ

(ತಂ) ನೋಡಿ: ವಿಸ್ಫೋಟಕ

ಆಸ್ಫೋಟನೆ

(ತಂ) ಉಚ್ಚ ಉಷ್ಣತೆ, ಒತ್ತಡ ಮತ್ತು ಅಪಾರ ಪ್ರಮಾಣದ ಅನಿಲ ಉತ್ಪಾದನೆಯೊಂದಿಗೆ ತತ್‌ಕ್ಷಣ ಉಂಟಾಗುವ ರಾಸಾಯನಿಕ ಕ್ರಿಯೆ ಅಥವಾ ಸ್ಥಿತ್ಯಂತರ

ಆಸ್ಮಿಯಮ್

(ರ) ಪ್ಲಾಟಿನಮ್ ಗುಂಪಿಗೆ ಸೇರಿದ ಲೋಹ ಧಾತು. os. ಪಸಂ ೭೬, ಸಾಪರಾ ೧೯೦.೨, ದ್ರಬಿಂ ೨೭೦೦0 ಸೆ. ಅತ್ಯಂತ ಸಾಂದ್ರ ಧಾತು. ೨೦0 ಸೆನಲ್ಲಿ ಸಾಸಾಂ ೨೨.೪೮. ಪ್ಲಾಟಿನಮ್‌ನಂತೆ ಇದೂ ಅನಿಲ ಕ್ರಿಯೆಗಳಿಗೆ ಪ್ರಬಲ ಕ್ರಿಯಾವರ್ಧಕ. ರಾಜಾಮ್ಲದಲ್ಲಿ ವಿಲೇಯ. ಇರಿಡಿಯಮ್ ನೊಂದಿಗೆ ಕೂಡಿ ಅತ್ಯಂತ ಪ್ರಬಲ ಮಿಶ್ರಲೋಹ ನೀಡುತ್ತದೆ

ಆಸ್ಮಿರ್ಡಿಯಮ್

(ಭೂವಿ) ಸಹಜವಾಗಿ ದೊರೆ ಯುವ ಆಸ್ಮಿಯಮ್ (೧೭-೪೮%) ಹಾಗೂ ಇರಿಡಿಯಮ್‌ಗಳ (೪೯%) ಅತ್ಯಂತ ಕಠಿಣ ಬಿಳಿ ಮಿಶ್ರಲೋಹ. ಪ್ಲಾಟಿನಮ್, ರುಥೇನಿಯಮ್ ಹಾಗೂ ರ‍್ಹೋಡಿಯಮ್‌ಗಳನ್ನೂ ಅಲ್ಪ ಪ್ರಮಾಣಗಳಲ್ಲಿ ಒಳಗೊಂಡಿ ರುತ್ತದೆ, ಪೆನ್ನಿನ ನಿಬ್‌ಗಳ ತುದಿಗಳ ತಯಾರಿಕೆಯಲ್ಲಿ ಬಳಕೆ

ಆಹರಣ

(ರ) ಯಾವುದೇ ಮಿಶ್ರಣದಿಂದ ಒಂದು ಘಟಕವನ್ನು ಆ ಘಟಕವನ್ನಷ್ಟೆ ವಿಲೀನಿಸುವಂಥ ದ್ರಾವಕವನ್ನು ಉಪಯೋಗಿಸಿ ಪ್ರತ್ಯೇಕಿಸುವುದು. ಉದಾ: ಬಟ್ಟೆ ಮೇಲಿನ ಕೊಬ್ಬಿನ/ಜಿಡ್ಡಿನ ಕರೆಯನ್ನು ಪೆಟ್ರೋಲ್ ಉಪಯೋಗಿಸಿ ನಿವಾರಿಸುವುದು

Search Dictionaries

Loading Results

Follow Us :   
  Download Bharatavani App
  Bharatavani Windows App