भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಅಡಕೆ

(ಸ) ಅರೆಕ ಕಟಿಚು ಮರದ ಫಲ. ತವರು ಮಲೇಷ್ಯ. ಒಣಗಿದ ಹಣ್ಣಿನ ಸಿಪ್ಪೆ ಸುಲಿದಾಗ ದೊರೆಯುವ ಗಟ್ಟಿ ತಿರುಳು. ಹೋಳುಗಳಾಗಿ, ಚೂರುಗಳಾಗಿ ಮತ್ತು ಪುಡಿಯಾಗಿ ವೀಳ್ಯದೆಲೆ ಜೊತೆ ಮೆಲ್ಲಲು ಉಪಯೋಗ. ತಾಂಬೂಲದ ಅವಶ್ಯ ಅಂಗ

ಅಂಡಜ ಸ್ತನಿ

(ಪ್ರಾ) ಮೊಟ್ಟೆ ಇಡುವ ಕೆಳವರ್ಗದ ಸ್ತನಿ. ಇವುಗಳಲ್ಲಿ ಮೂತ್ರನಾಳ, ಯೋನಿ, ಜೀರ್ಣಾಂಗ ಇವೆಲ್ಲಕ್ಕೂ ಒಂದೇ ದ್ವಾರವಿದ್ದು ಕೆಳಮಟ್ಟದ ವಿಕಾಸಕ್ಕೆ ನಿದರ್ಶನ. ಏಕದ್ವಾರಿ

ಅಂಡಜನನ

(ಪ್ರಾ) ಗರ್ಭಾದಾನಕ್ಕೆ ಸಿದ್ಧತೆಯಾಗಿ ಅಂಡ ಬೆಳೆಯುವ ಹಾಗೂ ಪಕ್ವಗೊಳ್ಳುವ ಪ್ರಕ್ರಿಯೆ

ಅಂಡನಾಳ

(ಪ್ರಾ) ಅಂಡಾಶಯದ ಒಳಗಿನಿಂದ ಹೊರಕ್ಕೆ ಅಥವಾ ಗರ್ಭಾಶಯದೊಳಕ್ಕೆ ಚಾಚಿಕೊಂಡಿರುವ ನಾಳ. ಇದರ ಮೂಲಕ ಅಂಡಗಳು ವಿಸರ್ಜನೆಯಾಗುತ್ತವೆ.

ಅಡಲು

(ಭೂ) ಕಡಲಿನಲ್ಲಿ ತೆಟ್ಟೆ ನೀರಿನ ಹರವನ್ನು (ಲಗೂನ್) ಸುತ್ತುವರಿದು ಬೆಳೆದಿರುವ ಹವಳದ ದಿಬ್ಬ

ಅಂಡಲೂಸೈಟ್

(ಭೂವಿ) ಅಲ್ಯೂಮಿನಿಯಮ್ ಸಿಲಿಕೇಟಿನ ಮೂರು ಸ್ಫಟಿಕಾತ್ಮಕ ಖನಿಜಗಳ ಪೈಕಿ ಒಂದು. Al2siO5. ಸಮಚತುರ್ಭುಜಿ, ಕಯನೈಟ್ ಮತ್ತು ಸಿಲ್ಲಿಮನೈಟ್ ಉಳಿದೆರಡು ಖನಿಜಗಳು

ಅಂಡವಿಜ್ಞಾನ

(ಪ್ರಾ) ಮೊಟ್ಟೆಗಳ, ವಿಶೇಷವಾಗಿ ಹಕ್ಕಿ ಮೊಟ್ಟೆಗಳ, ಅಧ್ಯಯನ ಮಾಡುವ ಪ್ರಾಣಿವಿಜ್ಞಾನ ವಿಭಾಗ

ಅಂಡಾಣು ಬೀಜ ವರ್ಗಾವಣೆ

(ವೈ) ವಯೋಸಂಬಂಧಿತ ಬಂಜೆತನದಿಂದ ಅಥವಾ ಮೈಟೋಕಾಂಡ್ರಿಯಾಕ್ಕೆ ತಗಲಿದ ರೋಗಗಳಿಂದ ನರಳುತ್ತಿರುವ ಮಹಿಳೆ ಅಂಡಾಣು ಬೀಜ ವರ್ಗಾವಣೆ ವಿಧಾನದಿಂದ ಸಂತಾನವನ್ನು ಪಡೆಯಬಹುದು. ಮೊದಲ ಹಂತ, ಈ ಮಹಿಳೆಯ ಅಂಡಾಣುವಿನಲ್ಲಿರುವ ಬೀಜವನ್ನು ಹೊರ ತೆಗೆಯುವುದು. ಎರಡನೆಯ ಹಂತದಲ್ಲಿ ಆರೋಗ್ಯವಂತ ಮಹಿಳೆಯ ಅಂಡಾಣುವನ್ನು ಸಂಗ್ರಹಿಸಿ, ಅದರೊಳಗಿರುವ ಅಂಡವನ್ನು ತೆಗೆದು ಅದರ ಸ್ಥಾನದಲ್ಲಿ ಈಗಾಗಲೇ ಪ್ರತ್ಯೇಕಿಸಿಟ್ಟ ಬೀಜವನ್ನು ಸೇರಿಸುವುದು. ಮೂರನೆಯ ಹಂತದಲ್ಲಿ, ಈ ಕಸಿಗೊಂಡ ಅಂಡಾಣುವನ್ನು ಗಾಜಿನ ತಟ್ಟೆಯಲ್ಲಿಟ್ಟು ವೀರ್ಯಾಣುವಿನ ಸಂಪರ್ಕಕ್ಕೆ ಬರಿಸುವುದು. ನಾಲ್ಕನೆಯ ಹಂತದಲ್ಲಿ ಈ ನೆಡುಪೂರ್ವ ಭ್ರೂಣವನ್ನು ಬಾಡಿಗೆ-ತಾಯಿಯ ಗರ್ಭದಲ್ಲಿ ನಾಟುವುದು. ಈ ವಿಧಾನದಿಂದ ವಯಸ್ಸಾದ ಮಹಿಳೆ ಮಕ್ಕಳನ್ನು ಪಡೆಯಬಹುದು ಹಾಗೂ ಮೈಟೋಕಾಂಡ್ರಿಯಾ ರೋಗಗಳಿಂದ ನರಳುತ್ತಿರುವ ಹೆಂಗಸರೂ ಆರೋಗ್ಯವಂತ ಮಕ್ಕಳನ್ನು ಪಡೆಯಬಹುದು

ಅಡಾಪ್ಟರ್

(ತಂ) ವಿಶಿಷ್ಟ ನಮೂನೆಯ ಅಥವಾ ಅಳತೆಯ ಕೊನೆಗಳಿರುವ ವಿದ್ಯುತ್ ಸಲಕರಣೆಯನ್ನು ಇನ್ನೊಂದು ನಮೂನೆಯ ಅಥವಾ ಅಳತೆಯ ವಿದ್ಯುತ್ಪೂರಣ ಬಿಂದುವಿಗೆ ಜೋಡಿಸಲು ಬಳಸುವ ಸಹಾಯಕ ಉಪಕರಣ

ಅಂಡಾಶಯ

(ಪ್ರಾ) ಹೆಣ್ಣು ಪ್ರಾಣಿಗಳಲ್ಲಿ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುವ ಹಾಗೂ ಅಂಡಗಳಿಗೆ ಜನ್ಮ ನೀಡುವ ಗ್ರಂಥಿಗಳಿರುವ ಜನನಾಂಗ. ಕಶೇರುಕಗಳಲ್ಲಿ ಇಂಥ ಎರಡು ಜನನಾಂಗಗಳಿರುತ್ತವೆ. (ಸ) ಶಲಾಕೆಯ ತಳದಲ್ಲಿರುವ ಟೊಳ್ಳು ಭಾಗ. ಇದರಲ್ಲಿ ಅಂಡಕಗಳು ಉತ್ಪತ್ತಿಯಾಗುತ್ತವೆ. ಈ ಭಾಗ ಎರಡು ಅಥವಾ ಹೆಚ್ಚು ಶಲಾಕೆಗಳು ಕೂಡಿಯೂ ಉಂಟಾಗಿರಬಹುದು

ಅಂಡಾಶಯ ಕುಹರ

(ಪ್ರಾ) ಉನ್ನತ ಪ್ರಾಣಿ ವರ್ಗಗಳ ಅಂಡಾಶಯದಲ್ಲಿ ಅಂಡಗಳಿರುವ ಸಂಚಿಯಂಥ ನಾಳಗಳಲ್ಲೊಂದು

ಅಂಡಾಶ್ಮ

(ಭೂವಿ) ಸಣ್ಣ ಸಣ್ಣ ದುಂಡು ಕಣಗಳು ಒಟ್ಟುಗೂಡಿ ಆಗಿರುವ ಒಂದು ಬಗೆಯ ಜಲಜಶಿಲೆ/ಸುಣ್ಣ ಕಲ್ಲು. ಇಂಗ್ಲೆಂಡಿನ ಹಾಗೂ ಯೂರೋಪಿನ ಕೆಲವು ಭಾಗಗಳಲ್ಲಿ ಇರುವ ಜುರಾಸಿಕ್ ಭೂಸ್ತರದ ಉನ್ನತ ಭಾಗಗಳಲ್ಲಿ ವಿಶೇಷವಾಗಿ ಲಭ್ಯ

ಅಂಡಾಶ್ಮ

(ಭೂವಿ) ಕ್ಯಾಲ್ಸಿಯಮ್ ಕಾರ್ಬನೇಟ್, ಕಾಮೊಸೈಟ್ ಅಥವಾ ಡೊಲೊಮೈಟ್‌ನಿಂದ ಕೂಡಿದ, ಹೆಚ್ಚು ಕಡಿಮೆ ಗೋಳೀಯವಾದ, ಮೀನಿನ ಮೊಟ್ಟೆಯನ್ನು ಹೋಲುವ, ವ್ಯಾಸ ೨ ಮಿಮೀಗಿಂತ ಹೆಚ್ಚು ಇರದ, ಸಾಮಾನ್ಯವಾಗಿ ಏಕಕೇಂದ್ರೀಯ ಸ್ತರಗಳಿಂದ ಮತ್ತು/ಅಥವಾ ಅರೀಯ ತಂತುಗಳಿಂದ ರಚಿತವಾದ ಜಲಜಶಿಲೆಯ ಮುದ್ದೆ ಅಥವಾ ಗಟ್ಟಿ. ಸಮುದ್ರ ತಲದಲ್ಲಿ ಅಥವಾ ಸುಣ್ಣಕಲ್ಲು ರಾಶಿಯ ಮಧ್ಯೆ ಕಂಡುಬರುತ್ತದೆ

ಅಡಿ

(ಗ) ಬ್ರಿಟಿಷ್ ಮಾನಕ ವ್ಯವಸ್ಥೆಯಲ್ಲಿ ಉದ್ದದ ಏಕಮಾನ=೧/೩ ಗಜ=೧೨ ಇಂಚುಗಳು = ೦.೩೦೪೮ ಮೀ. ಆರಂಭದಲ್ಲಿ ಮನುಷ್ಯ ಪಾದದ ಅಳತೆಯನ್ನು ಆಧಾರವಾಗಿ ಇಟ್ಟುಕೊಂಡಿದ್ದುದರಿಂದ ಈ ಹೆಸರು

ಅಡಿಗಟ್ಟು

(ತಂ) ಹಡಗಿನ ಅಥವಾ ದೋಣಿಯ ಕಟ್ಟಣೆಗೆ ಆಧಾರವಾಗಿ, ತಳಭಾಗದಲ್ಲಿ ಉದ್ದಕ್ಕೂ ಹಾಕಿರುವ ಮರದ ದಿಮ್ಮಿ

ಅಡಿನಾಯ್ಡ್

(ವೈ) ಮೂಗಿನ ಒಳ ಹೊರಳೆ ಮತ್ತು ಗಂಟಲಿನ ನಡುವಿನ ಪ್ರದೇಶದ ಮಾಳಿಗೆಯಲ್ಲಿ ಇರುವ ಗ್ರಂಥಿರೂಪಿ ರಚನೆ. ಇದಕ್ಕೆ ಲುಷ್ಕಾ ಟಾನ್ಸಿಲ್ ಎಂಬ ಮತ್ತೊಂದು ಹೆಸರಿದೆ. ಮಕ್ಕಳಲ್ಲಿ ಇದು ಅತಿವೃದ್ಧಿಯಾದಾಗ ಉಸಿರಾಟಕ್ಕೆ ಹಾಗೂ ಮಾತನಾಡುವುದಕ್ಕೆ ತೊಂದರೆ ಉಂಟುಮಾಡುತ್ತದೆ

ಅಡಿಪಾಯ

(ತಂ) ಕಟ್ಟಡ ಭದ್ರವಾಗಿ ನಿಲ್ಲಲು ನೆಲದಲ್ಲಿ ಅಗೆದು ನಿರ್ಮಿಸಿದ ಗಟ್ಟಿನೆಲ. ಅಸ್ತಿಭಾರ

ಅಡಿಪಿಕ್ ಆಮ್ಲ

(ರ) ಬ್ಯೂಟೇನ್ ಡೈಕಾರ್ಬಾಕ್ಸಿಲಿಕ್ ಆಮ್ಲ. ವರ್ಣರಹಿತ, ಸೂಜಿರೂಪ. HOOC. (CH2)4.COOH ದ್ರಬಿಂ ೧೫೨೦ಸೆ. ಕುಬಿಂ ೨೬೫೦ಸೆ. ನೈಲಾನ್ ತಯಾರಿಕೆಯಲ್ಲಿ ಬಳಕೆ

ಅಂಡಿಸೈಟ್

(ಭೂವಿ) ಮಧ್ಯಸ್ಥ ಸಂಯೋಜನೆ ಇದ್ದು ಪ್ಲೇಜಿಯೊಕ್ಲೇಸ್ ಪ್ರಧಾನ ಫೆಲ್ಡ್‌ಸ್ಪಾರ್ ಆಗಿರುವ ಸೂಕ್ಷ್ಮ ಕಣಿಕ ಅಗ್ನಿಶಿಲೆ (ಸಾಧಾರಣವಾಗಿ ಲಾವ)

ಅಡುಗೆ ಸೋಡ

(ರ) ಬಿಳಿ ವಿಲೇಯ ಪುಡಿ. ಬೇಕಿಂಗ್ ಪುಡಿಗಳು, ಅಗ್ನಿಶಾಮಕಗಳು ಮತ್ತು ಜಠರಾಮ್ಲ ನಿರೋಧಕಗಳಲ್ಲಿ ಬಳಕೆ. NaHCO3

Search Dictionaries

Loading Results

Follow Us :   
  Download Bharatavani App
  Bharatavani Windows App