Navakarnataka Vijnana Tantrajnana Padasampada (2011)
Navakarnataka Publications Private Limited
ಅಂಕೆ
(ಗ) ಸಂಖ್ಯೆಯನ್ನು ನಿರೂಪಿಸುವ ಪ್ರತೀಕ. ಉದಾ : ೦,೧,೨,೩,೪,೫,೬,೭,೮,೯. ಅಂಕಿ
ಅಂಕೆ ಅಂಶಗಳು
(ಸಂ) ಯಾವುದೇ ವಿದ್ಯಮಾನವನ್ನು ಕುರಿತ ಸಂಖ್ಯಾರೂಪದ ಮಾಹಿತಿ. ಉದಾ: ಭಾರತದ ಆಮದು-ರಫ್ತುಗಳ ಕುರಿತು ಕಳೆದ ೧೦ ವರ್ಷಗಳ ವಿವರ. ಅಂಕಿ ಅಂಶಗಳು
ಅಕೇಂದ್ರಿತ
(ಸ) ಕ್ರೋಮೊಸೋಮ್ಗಳಿಗೂ ಕ್ರೋಮೊ ಸೋಮ್ ವಲಯಗಳಿಗೂ ಅನ್ವಯಿಸಿದಂತೆ ಸೆಂಟ್ರೊಮಿಯರ್ ಇಲ್ಲದ
ಅಕೋನಕ ರೇಖೆ
(ಭೂ) ಕಾಂತೀಯ ದಿಕ್ಪಾತ ಶೂನ್ಯ ಸ್ಥಳಗಳನ್ನು ಸೇರಿಸುವ ಕಾಲ್ಪನಿಕ ರೇಖೆ; ದಿಕ್ಸೂಚಿಯಲ್ಲಿ ಭೌಗೋಳಿಕ ಹಾಗೂ ಕಾಂತೀಯ ಉತ್ತರ ಬಿಂದುಗಳು ವಿಚಲಿಸುವ ಸ್ಥಳಗಳಿವು
ಅಕ್ಕಿ
(ಸ) ಬತ್ತದ ಹೊಟ್ಟನ್ನು ತೆಗೆದು ಪಡೆದ ಕಾಳು. ಪಿಷ್ಟ ಪದಾರ್ಥ ಹೆಚ್ಚು, ಪ್ರೋಟೀನ್ ಮತ್ತು ಜಿಡ್ಡು ಕಮ್ಮಿ. ಇದರ ತೌಡು ದನಕ್ಕೆ ಪೌಷ್ಟಿಕ ಮೇವು. ನೋಡಿ: ಬತ್ತ
ಅಕ್ಕಿ ಪತಂಗ
(ಪ್ರಾ) ಲೆಪಿಡಾಪ್ಟಿರ ಗಣ, ಪೈರಾಲಿಡೀ ಕುಟುಂಬಕ್ಕೆ ಸೇರಿದ ಕೀಟ. ಕಾರ್ಸೈರ ಕಿಫಲೋನಿಕ ವೈಜ್ಞಾನಿಕ ನಾಮ. ಆಹಾರ ಪದಾರ್ಥಗಳ ಮೇಲೆ ನೂಲು ಎಳೆಗಳಿಂದ ದಟ್ಟವಾದ ಬಲೆ ಕಟ್ಟಿ ಅವನ್ನು ನಿರುಪಯುಕ್ತಗೊಳಿಸುತ್ತದೆ
ಅಕ್ಯುಪಂಕ್ಚರ್
(ವೈ) ದೇಹದ ನಿರ್ದಿಷ್ಟ ಸಂಧಿ ಬಿಂದುಗಳಲ್ಲಿ ಚರ್ಮಕ್ಕೆ ಸೂಜಿ ಚುಚ್ಚಿ ನೋವು ನಿವಾರಣೆ ಅಥವಾ ಸಂವೇದನಹರಣ ಮಾಡುವ ರೋಗಚಿಕಿತ್ಸಾ ವಿಧಾನ. ಚೀನಾ ಮೂಲದ್ದು. ಇದರ ಕಾರ್ಯರೀತಿ ಅಸ್ಪಷ್ಟ. ಆದರೆ ಶರೀರವು ತನ್ನದೇ ಎಂಡೋರ್ಫಿನ್ (ಎಂಡೋಜೀನಸ್ ಮಾರ್ಫಿನ್ನ ಹೃಸ್ವನಾಮ)ಗಳೆಂಬ ನೋವುಶಾಮಕಗಳನ್ನು ಉತ್ಪಾದಿಸಿಕೊಳ್ಳಲು ಇದು ಉತ್ತೇಜಿಸುತ್ತದೆ ಎಂದು ಭಾವಿಸಲಾಗಿದೆ. ಸೂಜಿ ಚಿಕಿತ್ಸೆ
ಅಕ್ರಿಫ್ಲೆವಿನ್
(ವೈ) ಗಾಢ ಕಿತ್ತಳೆ ಬಣ್ಣದ ಸ್ಫಟಿಕ ಪದಾರ್ಥ; ಪೂತಿರೋಧಕ, ಗಾಯಪಟ್ಟಿಗಳಲ್ಲಿ ಬಳಸಲಾಗುತ್ತದೆ. ೩,೬-ಡೈ ಅಮೀನೋ-೧೦ ಮೀಥೈಲ್ ಅಕ್ರಿಡಿನಿಯಮ್ ಕ್ಲೋರೈಡ್. C14H14N3Cl
ಅಕ್ರಿಲಿಕ್ ಆಮ್ಲ
(ರ) CH2=CH.COOH, ಅಸೆಟಿಕ್ ಆಮ್ಲದ ವಾಸನೆ ಇರುವ ಸುಲಭ ಕ್ರಿಯಾಪಟು ಪದಾರ್ಥ. ದ್ರಬಿಂ ೧೩0ಸೆ; ಕುಬಿಂ ೧೪೧0ಸೆ
ಅಕ್ರಿಲಿಕ್ ರಾಳಗಳು
(ರ) ಅಕ್ರಿಲಿಕ್ ಆಮ್ಲ ಎಸ್ಟರ್ ಅಥವಾ ಅಮೈಡ್ಗಳ ಪಾಲಿಮರೀಕರಣದಿಂದ ರೂಪುಗೊಂಡ ರಾಳಗಳು ಅಥವಾ ಪ್ಲಾಸ್ಟಿಕ್ಗಳು. ಪಾರಕ; ನಿರ್ವರ್ಣ; ಥರ್ಮೊಪ್ಲಾಸ್ಟಿಕ್; ಗಾಜಿಗೆ ಪರ್ಯಾಯವಾಗಿ ಬಳಕೆ
ಅಕ್ರೊಲೀನ್
(ರ) CH2=CH.CHO. ಕ್ರಿಯಾವರ್ಧಕದ ಜೊತೆ ಗ್ಲಿಸರೀನನ್ನು ನಿರ್ಜಲೀಕರಿಸಿದಾಗ ದೊರೆಯುವ ಕಟು ವಾಸನೆಯ ನಿರ್ವರ್ಣ ದ್ರವ. ಕುಬಿಂ. ೫೨.೫0ಸೆ. ಔಷಧಗಳ ತಯಾರಿಕೆಯಲ್ಲಿ ಬಳಕೆ
ಅಕ್ಲೂಷನ್
(ರ) ರಾಸಾಯನಿಕವಾಗಿ ಸಂಯೋಜನೆ ಗೊಂಡು ಅಥವಾ ಘನ ದ್ರಾವಣವಾಗಿ ಅಥವಾ ಮೇಲ್ಮೈನಲ್ಲಿ ಸಂಗ್ರಹಿಸಿಕೊಂಡು ಕೆಲವು ಘನಗಳು ಅನಿಲಗಳನ್ನು ಹೀರುವ ವಿದ್ಯಮಾನ. ಉದಾ: ಪೆಲ್ಲೇಡಿಯಮ್ ಹೀಗೆ ಹೈಡ್ರೊಜನ್ ಅನಿಲ ವನ್ನು ಹೀರಿಕೊಳ್ಳುತ್ತದೆ. ನಿಚೂಷಣ. ಸ್ಫಟಿಕೀಕರಣ ಸಮಯದಲ್ಲಿ ಪುಟ್ಟ ದ್ರವಗುಳ್ಳೆಗಳು ಸ್ಫಟಿಕದಲ್ಲಿ ಬಂಧಿತವಾಗುವ ಕ್ರಿಯೆ
ಅಕ್ಷ
(ಗ) ಆವರ್ತಿಸುವ ವಸ್ತುವಿಗೆ ಸಾಪೇಕ್ಷವಾಗಿ ನಿಶ್ಚಲವಾಗಿ ಇರುವ ಕಾಲ್ಪನಿಕ ರೇಖೆ. ಉದಾ: ಬುಗರಿಯಲ್ಲಿ ನೆತ್ತಿ ಮತ್ತು ಮೊಳೆಯ ಕೊನೆ, ಅಂತೆಯೇ ಭೂಮಿಯಲ್ಲಿ ಧ್ರುವ ಬಿಂದುಗಳನ್ನು ಜೋಡಿಸುವ ರೇಖೆ. (ಜೀ) ಜೀವಿಯಲ್ಲಿ ಕೇಂದ್ರೀಯ ಸಮಮಿತಿ ರೇಖೆ
ಅಕ್ಷ ವಿಚಲನೆ
(ಖ) ಅಯನದಲ್ಲಿ ಪ್ರಕಟವಾಗುವ ನಿಧಾನ ಗತಿಯ ಅತ್ಯಲ್ಪ ವ್ಯತ್ಯಯ. ಚಾಂದ್ರ ಕಕ್ಷೆ ಕ್ರಾಂತಿವೃತ್ತಕ್ಕೆ ಸು.೫0ಯಷ್ಟು ಬಾಗಿರುವುದರ ಫಲವಾಗಿ ಭೂಮ್ಯಕ್ಷ ಅಯನದ ವೇಳೆ ತುಸು ಕಂಪಿಸುತ್ತದೆ ಅಥವಾ ತಲೆದೂಗುತ್ತದೆ: ಅಕ್ಷದ ಮಧ್ಯಸ್ಥಾನ ಕುರಿತು ಉಭಯ ಪಾರ್ಶ್ವಗಳಿಗೆ ೯” ತೊನೆತ. ಈ ತೊನೆತದ ಅವಧಿ ೧೮ ವ. ೨೨೦ ದಿ. ಜೆ. ಬ್ರ್ಯಾಡ್ಲೀ ಈ ವಿದ್ಯಮಾನವನ್ನು ೧೭೪೭ರಲ್ಲಿ ಆವಿಷ್ಕರಿಸಿದ. ಆವರ್ತಿಸುತ್ತಿರುವ ಬುಗುರಿಯ ಅಕ್ಷ ಸುತ್ತುತ್ತಿರುವಾಗ ತುಸು ತೊನೆಯುವುದನ್ನು ಕಾಣಬಹುದು
ಅಕ್ಷಗಳ ಬದಲಾವಣೆ
(ಗ) ಒಂದು ಅಕ್ಷ ವ್ಯವಸ್ಥೆಯನ್ನು ಇನ್ನೊಂದಕ್ಕೆ ಪರಿವರ್ತಿಸುವುದು
ಅಕ್ಷಸಂಧಿ
(ಭೂವಿ) ಖನಿಜಕಣದಲ್ಲಿಯೂ ಅದರ ಅಭಿವೃದ್ಧಿ ಯಲ್ಲಿಯೂ ಪ್ರಕಟವಾಗುವ ಸದೃಶ ಸ್ಫಟಿಕೀಯ ವಿನ್ಯಾಸ
ಅಕ್ಷಾಂಶ ಮತ್ತು ರೇಖಾಂಶ
(ಖ) ೧. ಖಗೋಳದಲ್ಲಿ : ಕ್ರಾಂತಿವೃತ್ತವನ್ನು ಆಧರಿಸಿ ಆಕಾಶ ಕಾಯಗಳ ಸ್ಥಾನ ನಿರ್ದೇಶಕಗಳು. ಕ್ರಾಂತಿವೃತ್ತದ ಧ್ರುವಗಳನ್ನೂ ದತ್ತ ಆಕಾಶಕಾಯವನ್ನೂ ಸೇರಿಸುವ ಮಹಾವೃತ್ತವನ್ನು ಎಳೆಯಬೇಕು. ಕ್ರಾಂತಿವೃತ್ತದ ಮೇಲಿನ ಇದರ ಪಾದಕ್ಕೆ ಮೇಷ ಬಿಂದುವಿನಿಂದ ಪಶ್ಚಿಮ-ಪೂರ್ವ ದಿಶೆಯಲ್ಲಿ ಅಳೆದ ದೂರಕ್ಕೆ ಖಗೋಳೀಯ ರೇಖಾಂಶವೆಂದೂ ಈ ಪಾದದಿಂದ ಕಾಯಕ್ಕೆ ಮಹಾವೃತ್ತದ ನೇರ ಅಳೆದ ದೂರಕ್ಕೆ ಉತ್ತರ ಅಥವಾ ದಕ್ಷಿಣ ಖಗೋಳೀಯ ಅಕ್ಷಾಂಶವೆಂದೂ ಹೆಸರು. ರೇಖಾಂಶ ೦-೩೬೦0 ವರೆಗೂ ಅಕ್ಷಾಂಶ ೦0-ಉ/ದ ೯೦0ವರೆಗೂ ಇರುವುವು
ಅಕ್ಷಾಂಶ ವೃತ್ತ
(ಗ) ಗೋಲಾಕ್ಷಕ್ಕೆ ಲಂಬವಾಗಿ ರಚಿಸಿದ ಸಮತಲ ಗೋಲದ ಮೇಲ್ಮೈಯನ್ನು ಛೇದಿಸುವ ವೃತ್ತ. ಇದರ ಮೇಲಿನ ಯಾವುದೇ ಬಿಂದುವಿಗೆ ಗೋಲ ಕೇಂದ್ರದಿಂದ ಎಳೆದ ತ್ರಿಜ್ಯವು ಸಮಭಾಜಕ ತಲದ ಜೊತೆ ರಚಿಸುವ ಕೋನ ಒಂದೇ. ಇದೇ ವೃತ್ತದ ಅಕ್ಷಾಂಶ
ಅಕ್ಷಾಂಶಪೂರಕ
(ಖ) ಅಕ್ಷಾಂಶದ ಲಂಬ ಪೂರಕ; ೯೦0ಯಿಂದ ಅಕ್ಷಾಂಶವನ್ನು ಕಳೆದಾಗ ದೊರೆಯುವ ಬೆಲೆ. ಖಗೋಳದಲ್ಲಿ ಧ್ರುವದಿಂದ ವೀಕ್ಷಕನ ಖಮಧ್ಯದ ಕೋನದೂರ
ಅಕ್ಷಿಪಟ